Monday, May 25, 2015

ಗೊಂಚಲು - ನೂರೈವತ್ತಾರು.....

ಹೀಗೆಲ್ಲ ಅನ್ನಿಸಿ.....

ಓಡಿದರೆ ಅಟ್ಟಾಡಿಸೋ, ಹೊರಳಿ ನಿಂತು ಗುರಾಯಿಸಿದರೆ ಮಳ್ಳು ಮಳ್ಳಾಗಿ ಹಲ್ಕಿರಿಯೋ ತಿರುಬೋಕಿ ಕಂತ್ರಿ ಕುನ್ನಿಯಂಥ ಸಮಾಜವೆಂಬ ಅಸ್ವಸ್ಥರ ಗುಂಪಿನ ಮನ್ನಣೆಗಾಗಿ ಪ್ರೀತಿ, ಸ್ನೇಹಗಳಂಥ ಮಧುರ ಬಾಂಧವ್ಯಗಳೊಡನೆಯ ಆಪ್ತ ಒಡನಾಟಗಳನ್ನೂ ಇಂಚಿಂಚಾಗಿ ಕೊಲ್ಲುವ ಆರೋಪಿತ ಒಳ್ಳೆಯ ಮನಸುಗಳೆಡೆಗೆ ಸದಾ ಕೋಪ ಮಿಶ್ರಿತ ಮರುಕ ನನ್ನದು...
ಚಂದನೆಯ ಬಂಧ ಬೆಸೆಯುವ, ಯಾವ ಮಗ್ಗುಲಿಂದಲೂ ಸಮಾಜದ ಸ್ವಾಸ್ತ್ಯ ಕೆಡಿಸದ ಪ್ರೀತಿ, ಸ್ನೇಹ ಭಾವಗಳ ಪುಟ್ಟ ಪುಟ್ಟ ಅಭಿವ್ಯಕ್ತಿಗಳೆಡೆಗೂ ಕುಹಕದ ಮಾತಾಡೋ ಅಸ್ವಸ್ಥ ಮನಸುಗಳಿಗೆ ತಣ್ಣನೆಯ ನಿರ್ಲಕ್ಷವೇ ಮದ್ದು...
ನಾವು ಬೆಸೆದುಕೊಂಡ ಬಂಧಗಳೆಡೆಗೆ ಪ್ರಾಮಾಣಿಕ ಗೌರವ, ನಿಷ್ಠೆ ಮತ್ತು ನಮ್ಮ ಕ್ರಿಯೆಗಳೆಡೆಗೆ ಸ್ಪಷ್ಟತೆ ಇದ್ದಾಗ ಸಮಾಜದೆಡೆಗಿನ ನಮ್ಮ ನೋಟ ಬದಲಿಸಿಕೊಳ್ಳುವುದೊಳಿತಲ್ಲವಾ...
ಆಗ ಬೇರೆಯದೇ ನಗೆಯ ವಲಯ ದಕ್ಕೀತಲ್ಲವಾ...
ನಮ್ಮಂತೆ ನಾವು ಬದುಕಲಾದೀತು ಕೊಂಚ...
ಇನ್ನು ಸಮಾಜದ ಹೆಸರಲ್ಲಿ, ಅಂತರ್ಮುಖಿ ಎಂಬ ಅಜೆಂಡಾದಡಿಯಲ್ಲಿ ತಮ್ಮ ಮೊಂಡುತನಗಳಿಂದ ಆಪ್ತ ಬಾಂಧವ್ಯಗಳನ್ನು ದೂರ ನಿಲ್ಲಿಸಿಕೊಂಡು ನಂತರ ತಾನು ಒಂಟಿ ಎಂದಳುವ ಮುಗ್ಧ ಒಳ್ಳೇ ಜೀವಿಗಳಿಗೆ ಏನೆನ್ನಲಿ...
ಪ್ರೀತಿ ಇರುವ ಕಾರಣಕ್ಕೆ ಅವರೆಡೆಗೆ ಭರ್ತಿ ಮರುಕ ಹುಟ್ಟುತ್ತೆ ಅಷ್ಟೇ...
***
ಮದುವೆ, ಸಂಸಾರದ ಕನಸಿನ ಅಪೇಕ್ಷೆಯಲ್ಲಿ ಪ್ರೇಮಿಸುವುದಾದಲ್ಲಿ ಪ್ರೇಮದ ಹೊಸತರಲ್ಲಿಯೇ ಮದುವೆಯಾಗುವುದೊಳಿತು. ಯಾಕಂದ್ರೆ ಹೆಚ್ಚಿನ ಪ್ರೇಮಿಗಳು ಪ್ರೇಮವನ್ನಲ್ಲದೇ ಪ್ರೇಮಿಸ್ತೀನೆನ್ನೋ ಭಾವವ ಪ್ರೇಮಿಸೋದ್ರಿಂದ ಅವರ ಪ್ರೇಮ ಹಳತಾದಂತೆ ಹಳಸುವುದೇ ಜಾಸ್ತಿ..!! ಆಗದನ್ನು ಕಾಯಲು ಮದುವೆ ಎಂಬೋ ಬೇಲಿಯಾದರೂ ಇರುತ್ತೆ.
ಮನದ ಮಾತೇನು ಗೊತ್ತಾ -
ಶರಧಿಯ ಸೇರೋ ತೀವ್ರ ಹಂಬಲವಿದ್ದೂ, ಆದರೆ ಅದೊಂದೇ ಗುರಿಯಾಗದೇ ತನ್ನ ಹರಿವಿನಿಕ್ಕೆಲಗಳಲಿ ಅಲ್ಲಲ್ಲಿ ಇಷ್ಟಿಷ್ಟೇ ಇಂಗುತ್ತಾ ಹಸಿರಿಗುಸಿರಾಗುತ್ತಾ ಹರಿವಿಗೆ ಸಾರ್ಥಕ್ಯ ತಂದುಕೊಳ್ಳೋ ತೊರೆಯಂಥ ಪ್ರೇಮ ಕೆಲವರಲ್ಲಾದರೂ ಸ್ಫುರಿಸಲಿ. ಬೇಲಿಯ ಹಂಗಿಲ್ಲದೇ ಪ್ರೇಮವೇ ಪ್ರೇಮವ ಸಲಹಿಕೊಳ್ಳುವಂತಾಗಲಿ. ಹರಿಯುತ್ತ ಹರಿಯುತ್ತ ಶರಧಿ ದಕ್ಕಿದರೆ ಅದರೊಡಲ ತೆರೆಯಾಗಿ - ದಕ್ಕದಿರೆ ಹಸಿರ ಬೇರಿನ ಉಸಿರಾಗಿ ನಗುವ ಜೀವಿಸಲಿ ಪ್ರೇಮ. ಪ್ರೇಮಿ ಅಳಿದಲ್ಲೂ ಬದುಕ ಸೆಲೆಯಾಗಿ ಪ್ರೇಮ ಉಳಿದು ನಗುವುಳಿಯಬೇಕು. ಅದಕೆ ಬೇಲಿಯ ಆಸೆಯಾಚೆಯ ಪ್ರೇಮ ನಮ್ಮೊಳಗೆ ನಗಬೇಕು.
***
ಹೇ ಸಂಜೆ ಮಳೆಯೇ -
ಸುರಿದು ಹೋಗು ಎದೆಯ ಬೊಗಸೆಯೊಳಗೊಂದಿಷ್ಟು ಕಾಷ್ಠ ಮೌನವ...
ಅಲ್ಲಿನೆಲ್ಲ ಭಾವಗಳ ವ್ಯಕ್ತತೆಯಾಚೆ ನಿಂತು ನನ್ನ ನಾ ಸಲಹಿಕೊಳ್ಳಬೇಕಿದೆ - ಅವರಿವರಂತೆ...
ಬೇಸರಗಳನೆಲ್ಲ ಒಳಕೋಣೆಯಲಿ ಬಿಗಿದಿಟ್ಟು, ಬಾಗಿಲಿಗೆ ನಗೆಯ ತೋರಣವಿಟ್ಟು, ಸುತ್ತ ಸುಳಿವ ಬಂಧಗಳಿಗೆಲ್ಲ ಹೊರ ಬಾಗಿಲಲೇ ಮಂದಹಾಸವನುಣಿಸಿ ಕಳುಹುವುದ ಕಲಿಯಬೇಕಿದೆ...
ಅಂಟಿಯೂ ಅಂಟದ, ಅಂಟದೆಯೂ ಅಂಟಿದಂತೆ ತೋರುವ ನಂಟಿನ ನೆಂಟಸ್ತಿಕೆಯ ಸಾಧಿಸಬೇಕಿದೆ - ಮತ್ತೆ ಅವರಿವರಂತೆ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

No comments:

Post a Comment