Wednesday, March 2, 2016

ಗೊಂಚಲು - ನೂರಾ ಎಂಬತ್ತೈದು.....

ಅಸಹಾಯ ಆಕ್ರೋಶದಲ್ಲಿ ಉಳಿವುದು ಕಣ್ಣ ಹನಿಯ ಕರೆಯೊಂದೆ.....

ಪ್ರೇಮ, ಪ್ರಣಯ ಅಷ್ಟೇ ಅಲ್ಲ ಕೊನೆಗೆ ಪ್ರೀತಿ, ಸ್ನೇಹ, ಕಾಳಜಿಗಳು ಕೂಡ ಕತ್ತಲಲ್ಲೇ ಪ್ರಕಟವಾಗಬೇಕು, ಬಾಗಿಲ ಮರೆಯಲ್ಲಿಯೇ ವ್ಯಕ್ತವಾಗಬೇಕು - ಕತ್ತಲೆಯ ತೊತ್ತಾಗಬೇಕು...

ಬೆಳಕಲ್ಲಿ ಬಿಚ್ಚಿಟ್ಟಿರೋ ಅಸ್ಪ್ರಶ್ಯರಾಗುತ್ತೀರಿ - ಬಾಗಿಲ ಮರೆಯ ಕ್ರೌರ್ಯವೂ ಸಮ್ಮತ ಪ್ರೇಮ ಅನ್ನಿಸಿಕೊಳ್ಳುತ್ತದೆ; ಬಾಗಿಲಾಚೆ ಹೆಗಲು ತಬ್ಬಿದ ಕಾಳಜಿಯೂ ಅನೈತಿಕ ಕಾಮ ಇಲ್ಲಿ...

ಬಾಗಿಲಾಚೆಯ ಸ್ವಚ್ಛ ಬೆಳಕಲ್ಲೂ ತೋರುವುದಾದರೆ ಅದಕೆ ಗಾಢ ಬಣ್ಣದ ಮುಖವಾಡ ತೊಡಿಸಿ ತೋರಬೇಕು – ಪ್ರತಿ ಬಂಧಕ್ಕೂ ಸಂಬಂಧದ ಹೆಸರು ಬೇಕು – ಪ್ರತಿ ಭಾವಕ್ಕೂ ನಕಲಿ ಮುಖವೊಂದು ಬೇಕು...

ತರಹೇವಾರಿ ಮುಖವಾಡಗಳು ಸಿಕ್ಕುತ್ತವೆ ಈ ಸಾಮಾಜವೆಂಬೋ ಜಾತ್ರೆಯ ಬಯಲಲ್ಲಿ...

ನೀ ನಿನ್ನಂತೆ ಬಾಳು ಎನ್ನುತ್ತಲೇ ನೀನೆಂದರೆ ಇದು ಎಂದು ನನದೊಂದು ಚಿತ್ರವನ್ನೂ ಅವರೇ ಕಟ್ಟಿಕೊಡುತ್ತಾರೆ - ಅದರಾಚೆ ನನ್ನ ದಾರಿಯ ನಾ ಕಂಡುಕೊಳ್ಳುವುದು ಅಪರಾಧ ಇಲ್ಲಿ... 

ಎಂಬಲ್ಲಿಗೆ ಅಪ್ರಾಮಾಣಿಕನಾಗುವುದನ್ನು ನಮ್ಮವರೇ ನಮಗೆ ಕಲಿಸುತ್ತಾರೆ...

ಉಹುಂ – ಅಪ್ರಾಮಾಣಿಕ ಆಗಲಾರೆ ಅಂತ ಹೊರಟೆನೋ, ಮುಖವಾಡಗಳ ತೊಡದೇ ಓಡಾಡುವ ಧೈರ್ಯ ತೋರಿದೆನೋ ಅಲ್ಲಿಗೆ ಮುಗಿಯಿತು; ಅಲ್ಲಿಂದಾಚೆ ನನ್ನ ನಗು, ನನ್ನ ಖುಷಿಗಳೆಲ್ಲ ಅನೈತಿಕತೆಯ ಬಣ್ಣದ ಕೂಸಾಗಿ ಬದುಕಬೇಕು ತಲೆ ತಗ್ಗಿಸಿ...

ಬದುಕ ಮಡಿಲಿಗೆ ಕಿಂಚಿತ್ತಾದರೂ ನಗೆಯ ಸುರಿಯದವರೂ, ನನ್ನೊಳಗಣ ಒಳಿತುಗಳನೆನಿತು ಗುರುತಿಸದವರೂ ನನ್ನದೊಂದು ಕೆಡುಕನ್ನ ಹುಡುಹುಡುಕಿ ನಡು ಬೀದಿಯಲ್ಲಿ ಪಾರಾಯಣ ಮಾಡುತ್ತಾರೆ...

ಇಡುವ ಪ್ರತಿ ಹೆಜ್ಜೆಗೂ ಸಾವಿರ ಕಣ್ಣುಗಳ ಅನುಮಾನದ ಕಾವಲು...

ಉಸಿರಾಟಕ್ಕೂ ಪ್ರಶ್ನೆಗಳಿವೆ ಇಲ್ಲಿ; ಉತ್ತರಕೂ ಇಂಥದ್ದೇ ಇರಬೇಕೆಂಬ ಆರೋಪಿತ ನಿರೀಕ್ಷೆಗಳಿರುತ್ತವೆ - ನೇರ ಉತ್ತರಕ್ಕೆ ಮತ್ತೆ ಅನುಮಾನದ ಹೊಗೆಯ ವಾದಗಳ ಬೇಗೆ...

ಯಾರವರು ಅಂತರಂಗ ಶುದ್ಧಿ ಶ್ರೇಷ್ಠ ಅಂದವರು – ಇಲ್ಲಿ ಬಹಿರಂಗಕ್ಕೆ ಮಾತ್ರ ಹಾರ ತುರಾಯಿ...

ಯಾವುದೇ ಹಂಗುಗಳ ಮೀರಿದ ಸ್ವತಂತ್ರ ಭಾವಗಳು ಬೆಳೆದು ನಿಲ್ಲುತ್ತವೆ ಅಂತರಂಗದಲ್ಲಿ; ಆ ಭಾವಗಳಿಗೂ ಹೊಸ ಬೇಲಿಗಳು ಸೃಷ್ಟಿಯಾಗುತ್ತವೆ ಬಹಿರಂಗದಲ್ಲಿ...

ಅಂತರಂಗ ಕೊಳೆತು ನಾರಿದರೂ ಯಾರಿಗೂ ಬೇಸರವಿಲ್ಲ – ಬಹಿರಂಗ ಘಮಘಮಿಸುತಿದ್ದರಾಯಿತು...

ಆತ್ಮಶುದ್ಧಿಯ ಪ್ರವರವೇನಿದ್ದರೂ ಪುರೋಹಿತನ ಬಾಯಿ ಚಪಲ ಮತ್ತು ಗರುಡ ಪುರಾಣದ ಅಧ್ಯಾಯವಷ್ಟೇ...

ನೇರವಂತಿಕೆಯ ಧೈರ್ಯ ಎನ್ನುವುದು ವಿಪರೀತದ ಸ್ವೇಚ್ಛೆಯಂತೆ ಕಾಣುತ್ತೆ ಮಡಿವಂತ (?) ಕಣ್ಣುಗಳಿಗೆ – ಅಂತೆಯೇ ನನ್ನಾತ್ಮದ ಪ್ರಾಮಾಣಿಕತೆ ಮೊಂಡುವಾದ...

ಹಂಚಿಕೊಂಡ ಯಾವುದೋ ನೋವು ಆಪ್ತತೆಯ ಬಾಗಿಲ ನಂಬಿಕೆಯ ಕೀಲಿಯಾಗಲ್ಲದೇ ಸಹಾನುಭೂತಿಯ (ಸಹಾನುಭೂತಿ: ಈ ಶಬ್ದವೇ ಹಿಂಸಾತ್ಮಕ ಸ್ವಸ್ಥ ಮನಸಿಗೆ) ನಿರೀಕ್ಷೆಯ ಹಂಬಲವಾಗಿ ಗೋಚರಿಸುವಲ್ಲಿ; ಬಂಧವೊಂದರ ಪ್ರೀತಿಯ ಮೂಲ ಪ್ರೀತಿ ಆಗಿರದೇ ಯಾವುದೋ ನೋವಿನೆಡೆಗಿನ ಸಹಾನುಭೂತಿ ಎಂದಾದಲ್ಲಿ ಕನಸಿನುಸಿರ ಕರುಳಿಗೆ ಕತ್ತರಿಯಾಡಿಸಿದಂತ ಭಾವ ಎದೆಯಲ್ಲಿ...

ಮಹಾ ಹುಂಬ ಧೈರ್ಯದ ಭಂಡ ಪ್ರಾಣಿ ನಾನು – ಆದರೂ ಕೊನೆಗೆ ಗೆಲ್ಲುವುದು ಸಮಾಜವೇ...

ಯಾಕೆಂದರೆ ನಾನಿರುವುದೂ ಅದೇ ಸಮಾಜದಲ್ಲಿ – ಅದರ ಒಂದು ಭಾಗವಾಗಿ; ಅಷ್ಟೇ ಅಲ್ಲ ಅದೇ ಸ್ವಸ್ಥ (?) ಸಮಾಜದ (ಈ ಶಬ್ದದ ಬಗೆಗೇ ಮಹಾ ಗೊಂದಲವಿದೆ ನಂಗೆ) ಮುಖ್ಯ ಭೂಮಿಕೆಯಲ್ಲಿ ನಾ ಎದೆಯಲಿಟ್ಟುಕೊಂಡ ನನ್ನದೂ ಎಂದುಕೊಂಡ ಜೀವಗಳೂ ಇವೆ...

ಅಲ್ಲಿಗೆ ತೊಟ್ಟು ನೆಮ್ಮದಿಯಿಲ್ಲ – ಬಿಟ್ಟು ಬದುಕಿಲ್ಲ...

ನನ್ನಂತೆ ನನ್ನ ಇರಗೊಡದ ಶ್ರೇಷ್ಠ ಸಮಾಜವೇ ನಿನ್ನೊಡನೆ ಏಗುವುದಕಿಂತ ಸಾವಿನೊಡನೆ ಸರಸ ಹಿತವೆನಿಸುತ್ತೆ – ಹಾಗಂತ ನಾ ಹೇಳಿದರೆ ಕಿಂಚಿತ್ತೂ ಅತಿಶಯೋಕ್ತಿ ಇಲ್ಲ...

ತುಂಬಾನೇ ಸುಸ್ತೆನಿಸುತ್ತೆ ಈ ನಡೆಗಳು; ಆಯ್ದುಕೊಂಡ ದಾರಿ ತಪ್ಪೋ ಸರಿಯೋ ಎಂಬಲ್ಲಿ ಗೊಂದಲಗಳಿಗಿಂತ ಇಲ್ಲೀಗ ಅದೆಷ್ಟೋ ಪ್ರಶ್ನೆಗಳಿಗೆ ಸಾವಿಗಿಂತ ಸಮರ್ಥ ಉತ್ತರ ಬೇರಿಲ್ಲ ಎಂಬುದು ಸತ್ಯ ಅನ್ನಿಸಿಬಿಡುತ್ತೆ – ಪಕ್ಕನೆ ನಿಂತುಬಿಡಬೇಕು ಉಸಿರು ಯಾರದೇ ಹಂಗಿಗೂ ಅರೆಕ್ಷಣವೂ ಸಿಗದೇ...

ಉರುಳಿಬಿದ್ದ ಮಾಂತ್ರಿಕನ ಶಕ್ತಿ ಕೇಂದ್ರವೀಗ ಭಾವಗಳ ರುದ್ರಭೂಮಿ; ಮುರಿದ ನಗೆಯ ಮಂತ್ರದಂಡವೇ ವ್ಯಾಸಪೀಠವಾಗಿ ಅದರ ಮೇಲೀಗ ಗರುಡ ಪುರಾಣ – ಅದನ್ನೂ ಮುಖ ಅರಳಿಸಿಕೊಂಡೇ ಕೇಳಬೇಕು; ಸ್ವಂತಿಕೆಗೆ ಎಳ್ಳು ನೀರು...

ಸ್ವಂತಿಕೆ ಸತ್ತ ಬದುಕಲ್ಲಿ ಮಾತಿಗೇನು ಕೆಲಸ - ನಗೆಯೂ ಕ್ರುದ್ಧ ಮೌನದ ಗುಲಾಮ ಅಲ್ಲಿ - ಬದುಕು ಅಗತ್ಯಕಿಂತ ಅಧಿಕ ದೀರ್ಘವಾಗುತಿರುವ ಭಾವ ಈಗಿಲ್ಲಿ...

No comments:

Post a Comment