ಬೆನ್ನ ಹಿಂದಿನ ಶಕ್ತಿ ಸುಧೆಗೆ.....
ನಳಪಾಕ, ಭೀಮಪಾಕಗಳೂ ಪಾಠವಾದದ್ದು ಮತ್ತು ಹೆಚ್ಚಿನ ಸಲ ಪಕ್ವವಾದದ್ದೂ ಅಮ್ಮನ ಪಾಕಶಾಲೆಯಲ್ಲೇ...
ಅದೇನು ಹಿಕ್ಮತ್ತಿದೆಯೋ ಅವಳ ಕೈಲಿ ಗೊತ್ತಿಲ್ಲವಾಗಲೀ, ಹಸಿದ ಹೊಟ್ಟೆಗಳೆದುರು ಅವಳ ಪಾತ್ರೆಯ ಅನ್ನವೆಂದೂ ಹಳಸುವುದಿಲ್ಲ - ಬೊಮ್ಮನಿಗೂ ಅನ್ನವಿಕ್ಕಿದವಳಿಗೆ ಅನ್ನವೇ ಬ್ರಹ್ಮ...
ಅವಳ ಮಮತೆಯ ಮೊದಲ ನುಡಿ ಮತ್ತು ಒಡಲಿನ ಬ್ರಹ್ಮವಾಕ್ಯ ಅಂದ್ರೆ ಅದೊಂದೇ - "ಉಂಡ್ಯಾss" ಎಂಬ ಕರುಳ ಪ್ರಶ್ನೆ...
#ಕರುಳಿಂದ_ಹೃದಯವ_ಬೆಳೆದವಳು_ಬೆಸೆದವಳು...
#ಆಯಿ... 💞😘
👩👩👩
ಲೆಕ್ಕಾಧಿಕಾರಿ ಸಾವಿತ್ರಿ... 😅 |
ಸೆರಗು ಸುತ್ತಿ ಸೊಂಟಕೆ ಬಿಗಿದು, ಹಲ್ಮೊಟ್ಟೆ ಕಚ್ಚಿ ಎದ್ದು ನಿಂತಳೆಂದರೆ ಅವಳ ಬದುಕಿನ ಬಡಿವಾರದ ಲೆಕ್ಕವೆಲ್ಲ ಅವಳದೇ ಶ್ರಮದಿಂದ ಅಂದಿಂದಂದಿಗೇ ಚುಕ್ತಾ...
ಇಷ್ಟಾಗಿಯೂ -
ಮುಸ್ಸಂಜೆ ಬಾಗಿಲಿಗೆ ದೀಪ ಹಚ್ಚಿಕೊಂಡು ಕೂತು ನಾ ದುಡಿದು ಕೊಡಬಹುದಾದದ್ದರ ಕೂಡಿ ಕಳೆಯುವ ಲೆಕ್ಕ ಅವಳೂ ಪಕ್ಕಾ ಬರೆಯುತ್ತಾಳೆ...
ಆದ್ರೆ -
ಅವಳು ದಿನವಹೀ ಬುಲಚೂಕಿಲ್ಲದೆ ಹಂಚೋ ಪ್ರೀತಿ ಮೂಟೆಯ ಲೆಕ್ಕ ಹಚ್ಚಿಡಲು ಲೆಕ್ಕಪಟ್ಟಿಯ ನಾ ಎಲ್ಲಿಂದ ತರಲಿ ಹೇಳಿ...
ನಾ ಗೆದ್ದ ಯುದ್ಧಗಳ ಶಕ್ತಿ ಸೂತ್ರ - ಪ್ರೀತಿಯೊಂದೇ ಅಲ್ಲಿ ಕರುಳ ಮಂತ್ರ...
ಕಣ್ಣು ಮಂಜಾದರೂ ಕರುಳು ಮಂಜಾಗದು...
ಬಿಡಿ, ಅದು ಯಾದಿ ಪುಸ್ತಕದಲಿ ಬರೆದಿಟ್ಟು ಮರಳಿಸಲಾಗದ ಲೆಕ್ಕ...
#ಉರಿವ_ಕೆಂಡವೇ_ಅವಳು_ಎಪ್ಪತ್ಮೂರರ_ಹುಡುಗಿ...
👩👩👩
ಆಯಿ ಮತ್ತವಳ ಕರುಳ ಕೊಂಡಿಗಳು... 😍 |
ಅವಳು ದೇವರಲ್ಲ ಗುಡಿ ಕಟ್ಟಿ ಪೂಜಿಸಿ ಬಾಗಿಲೆಳೆದುಕೊಳ್ಳಲು - ಹಾಲೂಡಿದ ಕರುಳಿಗೆ ನನ್ನ ಭಕ್ತಿಯಲ್ಲ ಪ್ರೀತಿಯ ಅಭಯ ಬೇಕು...
ಆದರೋ ನನ್ನೀ ಕೈಯ್ಯಲ್ಲಿ ಜಗವ ಓಲೈಸೋ ಆರತಿ ಬಟ್ಟಲು...
ಅವಳು ಹಠ ಹೂಡಿ ಊರಿದ ಹೆಜ್ಜೆಗಳೆಡೆಯಿಂದ ಹಾರಿದ ಧೂಳ ಹುಡಿಗಳನೇ ವರ್ಣಿಸಿ ಅವುಗಳನೇ ಅವಳೆಂದು ಬಗೆದು ಹಾಡಿದೆ - ಗಂಧವನಲ್ಲವೇ ಗಾಳಿ ಊರೆಲ್ಲಾ ಹರಡಿ ಹಂಚುವುದು; ತೇಯ್ದು ಹೋದ ಕೊರಡೇನಿದ್ದರೂ ನಾಗಂದಿಗೆಯದೋ, ಇಲ್ಲಾ ಗೋಡೆ ಮೂಲೆಯ ಮುದಿ ಜೇಡನ ಸಂಗಾತಿ ಅಷ್ಟೇ...
ಎಪ್ಪತ್ಮೂರರ ಈ ಹುಡುಗಿ ಇಪ್ಪತ್ಮೂರರ ಹುಡುಗು ನಾಚುವಂಗೆ ಜೀವಿಸುತ್ತಾಳೆ - ಚೂರು ತುಂಟತನದಿ ಕಾಡಿಸಿ ನೋಡಿ ಇಪ್ಪತ್ಮೂರರ ಬೆಡಗಿಗಿಂತ ಚಂದ ನಾಚುತ್ತಾಳೆ ಕೂಡಾ...
ಅವಳ ಬಾಡಿದ ರೆಪ್ಪೆಗಳ ಮಂಜುಗಣ್ಣಲ್ಲೂ ತರಹೇವಾರಿ ಕನಸುಗಳು ಅರಳುತ್ತವೆ, ಮತ್ತವೆಲ್ಲಾ ಬಣ್ಣಬಣ್ಣವೇ - ಆದರೆ ಆ ನಾಕಲೋಕದಲಿ ಅವಳೊಂದು ಪಾತ್ರವೇ ಅಲ್ಲ, ಬದಲಾಗಿ ಅವಳೆದೆಯ ಕನಸುಗಳ ಕಿರ್ದಿಪಟ್ಟಿಯಲ್ಲಿ ಮಕ್ಕಳು, ಮೊಮ್ಮಕ್ಕಳದೇ ಹೆಸರು ಹಾಗೂ ಕಾರುಬಾರು...
ಈ ಪರಿ ಕೂಗ್ತಾ ಇದ್ದೆ ಕೇಳ್ತಾ ಇಲ್ಯಾ, ಕಿವಿ ಮಂದ ಆಯ್ತೇನೆ ಅಂದ್ರೆ - ಇಲ್ಲೇ ಈ ನಿನ್ ಫೋನೇ ಸರೀ ಇಲ್ಲೆ, ಏನ್ ಹೇಳಿದ್ದೂ ಸಮಾ ಕೇಳ್ತ್ಲೆ ಅಂತ ನಗ್ತಾ ಅಬ್ಬರಿಸ್ತಾಳೆ...
ಬಲು ಮೋಜಿನ ಸತ್ಯ ಏನ್ಗೊತ್ತಾ -
ಅವಳೊಬ್ಬಳೇ ಇರುವಾಗ ಅನುಕ್ಷಣ ಪಿರಿಪಿರಿ ಕಾಡುವ ವಯೋಸಹಜ ಬಾಧೆಗಳೆಲ್ಲ ಮಕ್ಕಳು ಮರಿ ಅಥವಾ ತನ್ನದೆಂಬ ಬಂಧಗಳು ಅವಳ ಸುತ್ತ ನೆರೆದ ಮರು ಘಳಿಗೆ ಅಂಗಳದಾಚೆ ಹೋಗಿ ಮಂಡಿ ನಡುವೆ ತಲೆ ತೂರಿಸಿ ಕಿವಿ ಹಿಡ್ಕೊಂಡು ಕುಕ್ಕರಗಾಲಲ್ಲಿ ಡೊಗ್ಗಿ ನಿಲ್ತಾವೆ...
ಜೀವನ್ಮೋಹ ಅಂದ್ರೇನು ಅಂತ ಒಣ ಒಣ ಭಾಷಣ ಬಿಗೀತಿರ್ತೀನಿ - ಅವಳ ಪರಿಚಯಿಸಿದ್ದರೆ ಸಾಕಿತ್ತು...
ಬರೀ ಹೆಸರ್ಹೇಳಿ ಸುಮ್ನಾದರೆ ಜಗಕೇನು ತಿಳಿದೀತು - ಆದ್ರೇನ್ಮಾಡ್ಲೀ ಗುಣವಿಶೇಷಣಗಳ ಹಿಡಿದಿಡಲು ನನ್ನ ವರ್ಣಮಾಲೆಯ ಬಾಯಿಪಾಠ ಸಾಕಾಗಲ್ಲವೇ...
ನಾನೋ ಬದುಕ ಸ್ಪೂರ್ತಿಯ ಆಕರಗಳ ಎಲ್ಲೆಲ್ಲೋ ಹುಡುಕಿ ಸಾಯುತ್ತೇನೆ - ಅವಳ ಒಳಮನೆಗೆ ಇಣುಕಿದ್ದರೆ ಬೇಕಷ್ಟಾಗ್ತಿತ್ತು...
ಎಲ್ಲೋ ಸಂವತ್ಸರಕೊಮ್ಮೆ ಒಂದ್ನಾಕು ಬಿಡಿ ಸಾಲುಗಳ ಅವಳ ಹೆಸರಿಗೆ ಬರೆದರೆ ಅದನೋದಿಯೇ ನನ್ನ ಅಕ್ಷರ ಸಂಗಾತಗಳು ನಿನ್ನಮ್ಮನನ್ನೊಮ್ಮೆ ನೋಡ್ಬೇಕು ಕಣೋ, ಒಂದು ಪುಟ್ಟ ಸನ್ನಿಧಿ ಅವಳೊಟ್ಟಿಗೆ ಅಂತಾರೆ - ಇನ್ನು ನನ್ನತ್ರ ಅವಳನು ಬರಹದಲಿ ಪೂರ್ತಿ ಹಿಡಿದಿಡಲಾಗಿದ್ದಿದ್ದರೆ...!!
ಮತ್ತು ಊರಿಗೆ ಅವಳ ಬಗ್ಗೆ ಹೇಳುವಾಗಲೂ ನಾ ನನ್ನ ಸ್ವಾರ್ಥವನೇ ಕಾಯುತ್ತೇನೆ - ಅವಳೋ ಒಳಗುಡಿಯ ಕರುಣ ಚಿಲುಮೆ...
ನನ್ನ ಬರೆದವಳು - ಶಾಯಿಯ ಬಣ್ಣಕೆ ಸಿಗದ ಸಂಕೀರ್ಣವ ಬಾಳಿ ಬದುಕಿದವಳು...
ಓಯ್, ಸುಂದ್ರೀ ನಿಂಗೆ ಇಂದಿಗೆ ಎಪ್ಪತ್ಮೂರು ತುಂಬಿತ್ತು, ಸಾಕಾಗ್ದಾ ಅಂದ್ರೆ - ಯೇಹೇ, ನಿನ್ ಲೆಕ್ಕಾಚಾರ್ದಲ್ಲಿ ಎಪ್ಪತ್ತು ಮುಗೀತೇಲೆ ಕಣೆ, ಎಷ್ಟ್ ಕಾಲ ಆತು ಈ ಹುಳ್ಕುಟೆ ಬದ್ಕಿಂಗೆ, ಚಿತ್ರಗುಪ್ತಂಗೆ ಎನ್ ಮರ್ತೇ ಹೋಯ್ದರ್ಗೆ ಅಂತಾಳೆ - ಅವಳ ಆ ಆರ್ಭಟದ ಮಾತಲ್ಲಿ ಒಂದು ಸುಸ್ತನ್ನು ಹುಡುಕಿ ಸೋಲ್ತೇನೆ - ಆದ್ರೆ ಅವಳಲ್ಲಿ ಸುಸ್ತೂ ಅಲ್ಲದ, ಒಣ ಜಂಭವೂ ಇಲ್ಲದ ಒಂದು ವಿಚಿತ್ರ ನಿಸೂರು ಭಾವ ಕಾಣುತ್ತೆ...
ಅಂಥದೊಂದು ನಿಸೂರಾದ, ನಿರಾಳ ನಗುವ ಕೈಗೋಲನು ಹಿಡಿದೇ ಅವಳು ಅಷ್ಟುದ್ದ ಹಾದಿಯ ಅನಾಯಾಸದಲಿ ಎಂಬಂತೆ ದಾಟಿಬಿಟ್ಟದ್ದಾದರೂ ಹೇಗೆ...? ಬದುಕನ್ನು ಗೆಲ್ಲುವುದೇ ಹಾಗಾ...?? ಕೊನೆಗೆ ತಾನೇ ನಂಬಿ ತಲೆಬಾಗೋ ಆ ದೇವರನೂ ಆ ನಗೆಯಲೇ ಸೋಲಿಸಿ ಬಂಧಿಸಿರಬಹುದಾ...?!! (ಅವಳು ದೇವರ ಬೈಯ್ಯುವಾಗ ಅವನ ನಂಬದ ನಾನೂ ಬೆಚ್ಚುತ್ತೇನೆ)
ಸಾಕಿನ್ನು ಕಾಣುವುದೇನೂ ಬಾಕಿ ಉಳಿದಿಲ್ಲ ಅಂತಂದು ಎದ್ದು ಹೊರಡುವ ಮಾತಿನ ಬೆನ್ನಿಗೇ ಹೊರಡಲು ಬಿಡದ, ಇಷ್ಟು ಕಾಲ ಬದುಕುವ ಉದ್ದೇಶಕ್ಕಾಗಿ ಎದೆಯಾರೆ ಸಾಕಿ ಸಲಹಿಕೊಂಡು ಬಂದ ಜೀವನ್ಮುಖೀ ರೂಢಿ ಭಾವಗಳ ಮಾತು ಹೊರಡುತ್ತೆ - ಅಲ್ಲಿಗೆ ಆಗೀಗ ಚಿತ್ರಗುಪ್ತನ ಬೈಯ್ಯುವುದೂ ಕೂಡ ಅವಳು ಬದುಕನ್ನು ಪ್ರೀತಿಸಲು ಎತ್ತಿಕೊಂಡ ಒಂದು ಮಂದಹಾಸವೇನೋ ಅನ್ಸುತ್ತೆ...
ಏಳು ದಶಕಗಳು ಮಿಂದದ್ದು, ಉಟ್ಟದ್ದು, ಉಂಡದ್ದು ಎಲ್ಲಾ ನೋವಿನ ನಾನಾ ರೂಪದ ಆವೇಶವನ್ನೇ ಆದರೂ ಅವಳ ಆತ್ಮಬಲದ ಕೋಟೆ ಗೋಡೆಗೆ ಇಂದಿಗೂ ಸಣ್ಣ ಬಿರುಕೂ ಮೂಡದೇ ಹೋದದ್ದು ನನ್ನ ಯಾವತ್ತಿನ ಬೆರಗು ಮತ್ತು ನನ್ನ ನಂಗೆ ಕಾಯ್ದು ಕೊಡೋ ಬೆನ್ನ ಹಿಂದಿನ ಶಕ್ತಿ ಸುಧೆ...
ಸಾವು ತಲೆ ತರಿಯಬಹುದು - ಬದುಕು ಮಂಡಿ ಊರುವ ಮಾತೇ ಇಲ್ಲ; ಅವಳು ಬದುಕಿದ್ದು ಹಾಗೂ ಬದುಕಲು ಕಲಿಸಿದ್ದು ಹಾಗೆ ಮತ್ತು ಅಷ್ಟೇ...
ಅವಳೆಂದರೆ ಜೀವ ಬಳ್ಳಿಯ ಕತ್ತರಿಸಿದ ಮೇಲೂ ಹಾಲಾಗಿ ಹರಿದು ಭಾವ ತಂತುವ ಉಳಿಸಿಕೊಂಡ ಕರುಳ ಸಂವಾದ, ಅಕ್ಷತ ಮಮತೆ ಸಂಭಾಷಣೆ, ಮುಗಿಯಬಾರದ ಆಪ್ತ ಗೆಳೆತನ - ಇದು ನನ್ನೊಡನೆ ಅವಳ ಸೀಮಾಂತ ನಡಿಗೆ...
ಅಂತೆಯೇ,
ಈ ನೆಲದೊಡನೆ ಅವಳ ಸಂಗಾತ ಶುರುವಾಗಿ ಇಂದಿಗೆ ಪೂರಾ ಎಪ್ಪತ್ಮೂರು ಗ್ರೀಷ್ಮ, ವಸಂತಗಳು ತುಂಬಿ ಸಂದವು...
ಸಾಗಿದ್ದು, ಏಗಿದ್ದು ಎಷ್ಟು ಸುದೀರ್ಘ ಅನುಭವ ಅನುಭಾವದ ಹಾದಿ...!!!
ತನ್ನ ಹುಟ್ಟಿನ ತೇದಿಯ ಲೆಕ್ಕವಿಲ್ಲ ಅವಳಲ್ಲಿ - ನಾನು ಕರೆ ಮಾಡಿ ಹ್ಯಾಪಿ ಹುಟ್ದಬ್ಬಾನೇ ಕೂಸೇ ಅಂದ್ರೆ, ‘ನಂದಾ? ಇಂದಾ?’ ಅಂತ ಬಾಯ್ಬಿಡ್ತಾಳೆ ಪಾಪದ ಹುಡುಗಿ - ಮಾತು ಮುಗಿಸೋ ಮುನ್ನ ‘ಊಟದ ಸಂತೀಗೆ ಏನಾರೂ ಸಿಹಿ ತಿನ್ನು, ಜೊತೆಗಿದ್ದವರಿಗೂ ಕೊಡು’ ಅನ್ನೋ ಮುಗ್ಧತೆ ಅವಳಲಿನ್ನೂ...
ವಾರದೆರಡು ದಿನ ಅವಳು ಕಾಯಿಸುವ ತುಪ್ಪದ ಬಿಸಿ ಪಾತ್ರೆಯ ತಳದಲ್ಲಿರುವ ತುಪ್ಪದ ಗಸಿಯ ಜೊತೆ ಆವೆ ಬೆಲ್ಲ ಬೆರೆಸಿ ತಿನ್ನುವಾಗ ನಾಲಿಗೆ ಚಪ್ಪರಿಸೋ ವಿಶಿಷ್ಟ ರುಚಿಯೊಂದು ದಕ್ಕುತ್ತಿತ್ತು, ಬಾಲ್ಯದ ಅಂತದ್ಧೇ ಸವಿ ಇಂದಿಗೂ ಅವಳ ಸಾಂಗತ್ಯ - ಇಂದಿಗೂ ಜಾರಿಯಲ್ಲೇ ಇರೋ ಬೆವರು ಕೆಸರಿನ ಜೊತೆಗವಳ ನಂಟು ಹೇಳೋ ಹಾಗೂ ಅವಳ ಕೈಕಾಲಿನ ಕೊಳೆ ಮಣ್ಣು, ಸಗಣಿಯಲ್ಲಿ ಅರಿವಾಗೋ ಸ್ವಾಭಿಮಾನದ ಗಟ್ಟಿ ಪಾಠ...
ಲಾಲಿ ಹಾಡಲೂ ಪುರುಸೊತ್ತಿಲ್ಲದಂಗೆ ಹೊಟ್ಟೆ ಬಟ್ಟೆಗೆಂದು ದುಡಿದು ಹೈರಾಣಾದವಳು ಪ್ರೀತಿಯನ್ನು ಬಾಯಲ್ಲಿ ಒಮ್ಮೆಯೂ ಆಡಿ ತೋರಿಲ್ಲ, ಬದಲಾಗಿ ಬದುಕಿನ ಮತ್ತು ಈ ಸಮಾಜದ ಎಲ್ಲಾ ಕ್ರೌರ್ಯ, ವೈರುಧ್ಯಗಳ ನಡುವೆಯೇ ಪ್ರೀತಿ ಅಂಟುವಂಗೆ, ಪ್ರೀತಿ ಕಾಯುವಂತೆ ವ್ಯಕ್ತಿತ್ವವ ಪ್ರೀತಿಯಿಂದ ಕಟ್ಟಿಕೊಳ್ಳಿ, ಬದುಕನು ಬೇಶರತ್ ಪ್ರೀತಿಸಿ ಅಷ್ಟೇ ಅನ್ನೋ ಹಂಗೆ ಕಾಲವೂ ಕಣ್ಣೆದುರು ಬದುಕಿಬಿಟ್ಟಳು - ಅವಳ ಹಾದಿಯ ಅರಿತರೆ ನಾನೂ ಚೂರು ಉಳಿದೇನು ಅಲ್ಲಲ್ಲಿ, ನಿಮ್ಮಲ್ಲಿ...
ಇದ್ದೀತು ಅವಳಲ್ಲೂ ಚೂರುಪಾರು ಸಣ್ಣತನ, ಕಟಿಪಿಟಿ, ಅಸಹನೆಗಳಂತ ಮನುಜ ಜಾಡ್ಯಗಳು; ಆದರೆ ಅವನೆಲ್ಲ ಮೀರಿ ನಿಲ್ಲೋ ಸ್ವಚ್ಛಂದ ಅಂತಃಕರಣದ ಮೂಲ ಹೆಸರು ಅವಳೇ ಇರಬೇಕು - ಆಯಿ...
ಹೇಳಬೇಕಾದದ್ದನ್ನು ಹೇಳಲಾಗದೆಯೇ ಉಳಿಸಿಕೊಂಡು ಮಾತು ಸೋಲೊಪ್ಪಿಕೊಳ್ಳುವಾಗ ಗೋಣು ಬಗ್ಗಿಸಿ ಸುಮ್ಮಗಾಗುತ್ತೇನೆ - ಎಂದಿನಂತೆ...
ಶಬ್ದಾಡಂಬರದಾಚೆಯ ಅಗ್ನಿ ದಿವ್ಯವೇ -
ಹುಟ್ದ್‌ಬ್ಬದ್ ಪೀತಿ ಪೀತಿ ಪೀತಿ ಶುಭಾಶಯ ಕಣೇ ನನ್ನ ಸುಂದ್ರೀ... 😘😘
🙏🙏
ReplyDelete