Saturday, May 8, 2021

ಗೊಂಚಲು - ಮುನ್ನೂರರ‍್ವತ್ತೆಂಟು.....

ಬದುಕಿರುವ ಕಾರಣಕ್ಕೆ.....

ಎದೆಗೂಡಿನ ಹೆಬ್ಬಾಗಿಲ ನಂದಾದೀಪದುರಿಯಂಗೆ 'ನನ್ನೊಳಗೆ' ನಾನು ನನ್ನೊಡನೆ ನಿನ್ನನೂ ನನ್ನಂತೆಯೇ ಬೆಚ್ಚಗೆ ತುಂಬಿಟ್ಟುಕೊಳ್ಳಬಹುದು, ಸುಖವಾದ ಸಣ್ಣ ತಳ್ಳಿಯೂ ಇಲ್ಲದೇ ನನ್ನ ಭಾವ ಕೋಶದಿಂದ ನಿನ್ನ ಹೆಸರು ಅಳಿಸಿ ಹೋಗದಂಗೆ ಮುಚ್ಚಟೆಯಿಂದ ಕಾಯ್ದುಕೊಳ್ಳಬಹುದು - ಅದು ನನ್ನ ಪ್ರೀತಿ, ನನ್ನ ಬೇಶರತ್ ಆಯ್ಕೆ, ಅಲ್ಲಿಯದೆಲ್ಲ ಹೊಡ್ಪಡೆಗಳಿಗೆ ನನ್ನದೇ ಹೊಣೆಗಾರಿಕೆ...
ಆದರೆ,
ಹಂಗಂಗೇ ಆತ್ಮ ಸಾನ್ನಿಧ್ಯ‌ವಾಗಿ 'ನಿನ್ನೊಳಗೂ' ನನ್ನನ್ನು ತುಂಬಿಡಬೇಕು/ತುಂಬಿಬಿಡಬೇಕೂ ಅಂತ ಹಠಕ್ಕೆ ಬೀಳ್ತೇನೆ ನೋಡು, ಆಗ ಮತ್ತೆ ಮತ್ತೆ ನಿನ್ನೊಳಗೆ ಇಣುಕಲೆಳಸುತ್ತೇನೆ; ಒಂದು ಪಕ್ಷ ನಿನ್ನಾ ಒಳಗಲ್ಲಿ ನೀನೊಬ್ಬನೇ ಕಂಡುಬಿಟ್ಟರೆ ಅಲ್ಲಿಗೆಲ್ಲ ಮುಗೀತು - ಗರಬಡಿದ ಮನಸಿನ ಅಡಸಂಬಡಸಾ ಹಡಾಹುಡಿಗಳಿಗೆ ಸಿಕ್ಕಿ, ಬುದ್ಧಿಯೆಂಬೋದು ಮಂಕುದಿಣ್ಣೆಯಾಗಿ ಬಾಂಧವ್ಯವೊಂದು ಮುರಿದುಬೀಳೋ ಸದ್ದಿದೆಯಲ್ಲ; ಉಫ್ - ಅಲ್ಲಿಂದಾಚೆಗೆ ಮಾತು ಮಗುಚಿಕೊಂಡಷ್ಟೂ ನೆನಪು ಮೊರೆಯುವಂತಾಗಿ ನನ್ನೊಳಗೆ ನಾನೂ ಇರದಂತಾ ಅಯೋಮಯ...
___ಒಡನಾಡಿ/ಟ...
🔰🕀🔰

ಭ್ರಮೆಗಳು ಕೊಂಡೊಯ್ದು ನಿಲ್ಲಿಸೋ ಎತ್ತರವೂ ಭ್ರಮೆಯದ್ದೇ ಅಲ್ಲದಾ.‌‌..
ಅಪಾಯ ತಾರದೇ ತುಂಟ/ಕಳ್ಳ ಖುಷಿ ತುಂಬುವುದಾದರೆ ಅಂತವಿಷ್ಟು ಭ್ರಮೆಗಳೂ ಜೊತೆಗಿರಲಿ ಬಿಡು...
_____ ನರಕ ಸುಖ...
🔰🕀🔰

ಪಾಠ ಮಾಡೀ ಮಾಡಿ ಬದುಕಿಗೂ ಸುಸ್ತಾದಂಗಿದೆ...
ಅರ್ಹತೆ ಇಲ್ಲದೇ ಮಾನ್ಯತೆ ಬಯಸಿ ಕಳೆದುಕೊಂಡವುಗಳ ಯಾದಿಯ ಕಂಡರೆ ಭಯವಾಗುವಂತಿದೆ...
ಕನಸು ಎದೆ ಸುಟ್ಟಾಗ ಭಾವಬರಹ ಕೈಹಿಡಿದಿತ್ತು - ಏನೋ ಒಂಚೂರು ಹಗೂರ...
ಅಕ್ಷರಗಳೂ ಪದಗಳಾಗಲು ಮುನಿಸಿಕೊಂಡರೆ ಸಾವೂ ಖುಷಿಕೊಡಲಿಕ್ಕಿಲ್ಲ - ನಗೆಯೂ ಭಾರ ಭಾರ...
____ಖಾಲಿ ಖಾಲಿ ಸಂಜೆಗಳು ಮತ್ತು ಹುರುಳಿಲ್ಲದಾ ಹಪಹಪಿ...
🔰🕀🔰

ಅವ್ರು ನಂಬ್ಸೋಕೆ ಒದ್ದಾಡೋದೂ, ನಾನು ನಂಬೋಕೆ ಹೆಣಗಾಡೋದೂ - ನಂಬಿಸಿಬಿಟ್ಟೆ ಅಂತ ಅವ್ರು ಸುಳ್ಳೇ ಬೀಗುತ್ತಾ ಬೆನ್ನಾಗೋದೂ - ನಾನೋ ನನ್ನೇ ನಂಬ್ಸೋಕೆ ಬರ್ತಾರಲ್ಲಾ, ನಂಬಿ ಬಿಡ್ತೀನಾ ಅಂತ ಹುಳ್ಳಗೆ ಬೆನ್ಹಿಂದೆ ನಗೋದು - ಈ ಇಂಥ ಅಪದ್ಧ, ಅಪ್ರಬುದ್ಧ ಮೇಲಾಟಗಳಲ್ಲಿ ಸತ್ಯ ಮತ್ತು ಸುಳ್ಳು ಎರಡೂ ಪ್ರಸ್ತುತತೆಯ ಅರಿವಿಲ್ಲದೆಯೇ ಹರಕೆಯ ಬಯಲಾಟದ ಕೋಡಂಗಿ ವೇಷಗಳಾಗುತ್ತವೆ...
____ಗಾಳಿಗಂಟಿದ ಗಂಧವನ್ನ ಮುಟಿಗೆಮೌನದಲಿ ಗುಟ್ಟುಮಾಡುವುದಂತೆ...
🔰🕀🔰

ಜಗಳದಾಳದ ಸಲಿಗೆಯ ಸಲಿಲ ಎದೆಗಿಳಿಯದಿದ್ದರೆ ಪ್ರೀತಿ ಶರಧಿಯ ಆಳ ವಿಸ್ತಾರ ಬದುಕ ಬಳಸೀತು ಹೇಗೆ... ?!!
____ನೀನು ನಾನು ಮತ್ತು ನೇಹ...
🔰🕀🔰

ಮೈಲಿಗಲ್ಲು ಚಲನೆ ಕಲಿತಿಲ್ಲ...
ದೂರಗಳ ಹೇಳೋ ಕಲ್ಲೊಂದು ದಾಟಿ ಹೋಗುವವರ ಎದೆಗೆ ಹತ್ತಿರಾಗುವ ಕನಸ ಕಾಣಬಹುದೇ...?!
ಎಲ್ಲಿಗೂ ಖಾಸಾ ಆಗದ ಮೈಲಿಗಲ್ಲು ಮಾಸಮಾಸಕೂ ಹಕ್ಕಳೆದ್ದು ಮಾಸಬಹುದಷ್ಟೇ...
#ನಾನು...
🔰🕀🔰

ಅಬ್ಬೆ ಗರ್ಭದಿಂದ ಬಯಲಿಗೆ ಬಿದ್ದಾಕ್ಷಣ ಜೋರು ಅತ್ತೆ - ಉಸಿರ ನಾಳ ಚೊಕ್ಕವಾಗಿ ಉಸಿರಾಟ ಹಗೂರವಾಯ್ತು - ಪೂರಾ ಪೂರಾ ನಿಸರ್ಗ ಸಂಸರ್ಗದ ಜೀವಂತ ಹಾಡು ಅದು...
ದಿನಗಳೆದಂತೆ ನಗುವುದ ಕಲಿತೆ - ಉಹೂಂ, ಕಣ್ಣ ತೀರಕೆ ಕಟ್ಟೆ ಕಟ್ಟಿ ನಗುವುದ ಕಲಿತೆ - ಬದುಕೇ ಕರುಳ ಕೊರಳ ಹಿಂಡುವಾಗಲೂ ನಗೆಯ ಆಳುವುದ ಕಲಿತೆನೆಂಬ ಕಾರಣಕೇ ಬಲಿತೆನೆಂದು ಬೀಗಿದೆ; ಈಗಲೋ ಚಂದ ನಗುವಿನ ಡೋಲಿಯಲ್ಲಿ ಉಸಿರು ಜೀವ ಹೊರಲಾರದಷ್ಟು ಭಾರಾ ಭಾರ...
ಬೆಳೀತಿರೋದಾ - ಬೆಳೆಯೋ ಹಪಹಪೀಲಿ ಬಳಲ್ತಿರೋದಾ...?
ಬಂದದ್ದೆಲ್ಲಿಂದ - ಹೊರಟದ್ದೆಲ್ಲಿಗೆ - ನಡುವೆ ಇದೇನು ಬಡಿವಾರ...!!
ನಗುವಿಗೂ, ಅಳುವಿಗೂ ಬೇರೆಬೇರೆಯದೇ ಕಂದಾಯ...
ನಾನೇ ಪ್ರಶ್ನೆ - ನಾನೇ ಉತ್ತರ - ಮತ್ತೇss 'ಮತ್ತೆ ಮಗುವಾಗಬೇಕು' ಎಂಬೋ ದೊಡ್ಡ ದೊಡ್ಡ ಮಾತು...
____ಏನಹೇಳಲಿ ಬಡ ಭೋಗಿಯ ಗೋಳು...
🔰🕀🔰

ಖಾಲಿತನದ ಹೊಗೆಯಲ್ಲಿ ಉಸಿರುಗಟ್ಟುವ ಸಂಜೆಗಳಲೂ ಕಣ್ಣುಜ್ಜಿಕೊಂಡು ನಗೆಯೊಂದ ಹುಡುಕುತ್ತೇನೆ...
___ ಬದುಕಿರುವ ಕಾರಣಕ್ಕೆ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

No comments:

Post a Comment