Wednesday, May 1, 2024

ಗೊಂಚಲು - ನಾಕ್ನೂರ್ಮೂವತ್ತೊಂದು.....

ನೀನಿರು ಸಾಕು.....

ಕೇಳಿಲ್ಲಿ -
ದೇಹದ ವಾಂಛೆಗಾಗಿ ಪ್ರೇಮಾಲಾಪಗಳ ಸುಳಿಗಳನು ದಾಳವಾಗಿ ಉರುಳಿಸುವುದಕಿಂತ (ಕೊನೆಕೊನೆಗೆ ನೆನಪೂ ಹೇವರಿಕೆ); ಮೈಯ್ಯ ಬಿಗಿ, ಬಿಸಿ, ಬೆವರಿನಮಲಲ್ಲಿ ಪ್ರೇಮವ ಹುಡುಕುವುದೇ ಹೆಚ್ಚು ಸಾಧುವೆನಿಸುತ್ತೆ (ಕಡೇಪಕ್ಷ ಕನಸೂ, ಕಸುವೂ ಆಪ್ತತೆಯ ಕಡೆಗೆ)...
___ ನನ್ನ ಸಮರ್ಥನೆಗಳೆಲ್ಲ ಇಂಥವೇ...
&&&

ಕೇಳಿಲ್ಲಿ -
ಕಾಡಂಚಿನ ಕಲ್ಲಿಗೆ ಬಣ್ಣದ ಬೆಡಗಿತ್ತ ನವಿಲುಗರಿಯ ಹೆಕ್ಕಿ ತಂದೆ - ನೆನಪುಗಳ ಕಾಯುತ್ತಾ ಬತ್ತಿದ ಕಣ್ಣು...
ಯಮುನೆಯ ಕಣಕು ನೀರ ಸೆರಗಲ್ಲಿ ಕಣ್ಣೊರೆಸಿಕೊಂಡು ನಿಟ್ಟುಸಿರಲಿ ಬಿರಿದ ಗೋಪಿಯೆದೆಯ ಗಾಯ - ಕನಸುಗಳ ಕೆಣಕುತ್ತಾ ಕಣ್ಣ ಹನಿಗಳ ಬಿತ್ತಿದ ಕಾವ್ಯ... 
ನೀನು ಪ್ರೀತಿಯ ನೂರು ನೂರಾರು ಭಾಷ್ಯಗಳ ಸುಮ್ಮನೆ ಬದುಕಿದ ಕವಿ...
ನಾನೋ ನನ್ನನೇ ಪ್ರೀತಿಯಾಗಿಸಿಕೊಂಡು ನಿನಗೊಲಿದು ಕೂತ ಸಾಮಾನ್ಯ ಜೀವಿ...
____ ಪಯಣ ನಗುವಿನ ಕಡೆಗೆ - ಅದು ನಿನ್ನ ಸೇರುವ ತವಕ...
&&&

ತುಂಬಾ ಇಷ್ಟಪಡುವಲ್ಲಿಂದ ಎದ್ದು ಹೋಗೋದು, ಇಷ್ಟದ ತಂತು ಕಣ್ಣೆದುರೇ ಕಡಿದು ಹೋಗೋದನ್ನ ಒಪ್ಪಿಕೊಳ್ಳೋದು ತುಂಬಾನೇ ಕಷ್ಟ; ಅದಕೇ ಸಾವೆಂದರೆ ಅಷ್ಟು ಭಯ ಜೀವಕ್ಕೆ...
ಬದುಕಿ ಉಳಿದರಲ್ಲವಾ ಬದುಕು ಉಳಿಯುವುದು - ಜೀವವಾಗಲೀ, ಭಾವವಾಗಲೀ...
ನಮ್ಮ ಸಾವಿಗೆ ನಾವೇ ಸಾಕ್ಷಿ ಆಗಬಾರದು...
___ ಇರು ಉಸಿರೇ...
&&&

ನೀನು ನೆನಪಾದ ನೆಲದಲ್ಲಿ
ಅವಳು ಕನಸಾದ ಬಾನಡಿಗೆ
ನಾನಿನ್ನೂ ಬದುಕಿರುವ ಮೋಸ
ಯಾವ ಬಾಕಿಯ ಬಾಬತ್ತು...
ಇದೆಲ್ಲಾ 
ಸಾವಿನ ಸೊಕ್ಕಿನ ಸೋಲಾ...?
ಬಾಳಿನ ಬೋಳೇತನದ ಗೆಲುವಾ...??
ಏನಿದೆಂತ ಸಾಬೀತಿನ ಕಸರತ್ತು...
___ ಎದೆಯಲ್ಲಿ ಬೆಳಕಿಲ್ಲದವನು ಜೀವಿಸಲಾಗುವುದು ನಿಜವಾ...!!?
&&&

ಜೊತೆ ಬರ್ತೀಯಾ...?
ಕಣಿ ಕೇಳೋದೇನದ್ರಲ್ಲಿ, ಹೊರಡೋಣ ನಡಿ ಅಂತ್ಹೇಳು...
ಎಲ್ಗೆ ಅಂತ ಕೇಳ್ಲೇ ಇಲ್ಲ...?!
ಎಲ್ಗಾದ್ರೇನು, ನೀನಿದೀಯಲ್ಲ ಮತ್ತೇನು...
ಆದ್ರೂಽಽ...?!
ನಿನ್ನ ಮೇಲೆ ನಿನಗಿರಬಹುದೇನೋ ಅನುಮಾನ, ನನ್ನದೇನಿದ್ದರೂ ಅನುಭಾವದ ಅಭಿಮಾನ...
ಅರ್ಹನಾ...?!!
ನೋಡೂ, ನಿನ್ನ ಇರುವಿಕೆಯೇ ನನ್ನ ನೆಮ್ಮದಿಯಾಗಿರುವಾಗ ಬೇರೆ ಮಾನದಂಡಗಳ ಮಾತೇನಲ್ಲಿ...
ಎಷ್ಟು ಚಂದ...!!!
ಭಾವಭಾವದ ಅನುಸಂಧಾನದಲ್ಲಿ, ಜೀವಾಜೀವದ ಸಂಗಮಾನಂದದಲ್ಲಿ, ಪ್ರೀತಿಗೆ ಪ್ರೀತಿಯಿಂದ ಪ್ರೀತಿಗಾಗಿ ಪ್ರೀತಿಯದೇ ಉಪಾಸನೆ...
____ ನೀನಿರು ಸಾಕು...
&&&

ಕೇಳಿದೆ, ಯಾಕಿಷ್ಟು ಚಂದ ನೀನು...?
ನನ್ನ ಚಂದವೆಂದರೆ ನಿನ್ನ ಕಂಗಳಿಗೆ ನಿನ್ನೆದೆಯ ಭಾವ ತುಂಬಿದ ಬಣ್ಣ ಅದು ಅಂದಳು...
ನಗೆಯ ನೂರು ಬಣ್ಣಗಳನು ಮೊಗೆದು ಮೊಗೆದು ನಿಂದ್ ನಿಂದೇ ಇದೆಲ್ಲಾ ಅಂತಂದು ಎನ್ನೆದೆಗೆ ಸುರಿವ ಪ್ರೀತಿ ಕಿಡಿ ಅವಳು...
___ ಸೋತು ಬೀಗಿದ ಖುಷಿ ನಂದೀಗ...
&&&

ನಂಗೆ ಕೊಡುವ ಮನಸು ತೀವ್ರವಿದ್ದಾಗ ನಿನ್ನ ಕೇಳುವುದು, ನಿನ್ನೇ ಕೇಳುವುದೂ ನನ್ನ ಪ್ರೀತಿ - ಅದಂತೂ ಬಲು ಚೆಂದ...
ನಂಗೆ ಕೊಡುವ ಅರ್ಹತೆ ಹೋಗಲಿ ಯೋಚನೆಯೂ ಇಲ್ಲದೇ ಹೋದಾಗ ನಿನ್ನ ಆಗ್ರಹಿಸುವ, ನಿನ್ನೇ ಆಗ್ರಹಿಸಿ ಆರೋಪಿಸುವ ನನ್ನ ರೀತಿ - ಅದೂ, ಅದನ ಏನಂತ ಕರೆಯುವುದು...
____ 'ನಾನು' - ನಾನೆಂಬ ಬರೀ ಖಾಲಿ ಕರಡಿಗೆಯೊಳಗಣ ಒಂಟಿ ಕಲ್ಲಂತ ನಾನು...
&&&

ಸಾಕು ಬಿಡು, ನೀನಿದೀಯಲ್ಲ ಜೊತೆಗೆ; ಈ ಬದುಕಿಗೆ ಬೇಕಷ್ಟಾಯ್ತು...
ನೀನಿದೀಯ ಅನ್ನುವ ಭಾವ ದಿವ್ಯವೇ ನೂರು ಪ್ರಾರ್ಥನೆಗಳ ಫಲದಷ್ಟಾಯಿತು...
___ ಪ್ರೀತಿ ಭರವಸೆ...
&&&

ಶ್ರೀ -
"ನಿನ್ನ ಅನುಭವವೇ ನಿನಗೆ ಸ್ಪೂರ್ತಿಯಾಗಲಿ" - ನೋವನ್ನು ನುರಿದು ನಗುವಾಗಿಸಿಕೊಂಬಲ್ಲಿ ಹಾಗೂ ನಗುವಿಂದ ದುಗುಣ ನಗುವನೇ ದುಡಿದುಕೊಳ್ಳುವಲ್ಲಿ...
"ನಿನ್ನ ಮೇಲೇ ನಿನಗಿನ್ನಷ್ಟು ಪ್ರೀತಿಯಾಗಲಿ" - ನಿನ್ನನರಿಯದೇ ನಿನ್ನನಲ್ಲಗಳೆದು ಇಲ್ಲವಾಗುವವರ ಎದುರಲ್ಲಿ ಹಾಂಗೇ ಏಕಾಂಗಿ ನಿಂತು ನಿನ್ನ ನೀ ತೋರಬೇಕಾದ ಖಾಲಿ ಅಂಕದಲ್ಲಿ...
____ ಭಾವ - ಬಂಧ - ಬಾಳ್ಮೆ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು... :)

No comments:

Post a Comment