Monday, September 16, 2024

ಗೊಂಚಲು - ನಾಕ್ನೂರ್ನಲ್ವತ್ತರಮೇಲೆರಡು.....

ಒಂದು ಇನ್ನೊಂದು ಮುಂಜಾವು.....

ನಿನ್ನ ಕಾಣುವ ಎನ್ನ ಕನಸಿನ ನೂರು ಹಾದಿಗೂ ಬೆಡಗೂ, ಬೆರಗೂ, ಒಲವ ಭಾವ ಸೊಬಗೂ ತುಂಬುವ ತುಂಬು ಬೆಳಕು - ಇದು ನನ್ನ ಬೆಳಗು...
ನಲುಮೆ ಪಂಚಾಂಗ...
ಶುಭೋದಯ... 🧚🥀

ರಂಗೋಲಿ ತುಳಿದು ಹುಳ್ಳಗೆ ನಗುವ ಹಸುಳೆಯ ತರದಿ ನಿದ್ದೆಯನಳಿಸಿ ಕಣ್ಣ ಕರಿ ಗೋಳದಲಿ ಬೆಳಕನು ತುಂಬಿ ಕೇಕೆಯ ಹಾಕುವ ಮಂಗಳ ಬೆಳಗು...
ಶುಭದಿನ... 🧚🦸

'ನಾನು' 'ನಂದೂ' ಎಂಬೆಲ್ಲಾ ನೂರು ನಖರೆಗಳ ನಡುವೆಯೇ ನೀನು ನನ್ನವನೆಂಬ ಹಾಗೆ ಅನಾಯಾಸದಿ ಚಿಮ್ಮುವ ಒಂದು ಚಿಟಿಕೆ ನಗುವಿನ ವಿನಿಮಯ - ಎದೆಯಿಂದ ಎದೆಗೆ...
ಸ್ನೇಹಮಯೀ ಬೆಳಗು... 🤝

ಮರುಬೆಳಗು ಎನ್ನದೆಂಬ ಕಳೆದಿರುಳ ಪ್ರೇಮ
ಮತ್ತೆ ಎನ್ನೆದೆಯಲಿ ನಿನ್ನ ಬಿತ್ತಿ ಬೆಳೆಯುವುದು...
ನಾನೆಂಬ ಬಡವನ ಭಂಡ ಭರವಸೆಯ ತುಂಟ ಹಗಲು...
ಶುಭದಿನ... 🫂🤸

ಮತ್ತೊಂದು ಹಗಲು - ಮತ್ತಿನ್ನೊಂದು ಅವಕಾಶ ಬೆಳಕ ಕಾಣಲು...
ಶುಭದಿನ... 🍬

ಇರುಳಿಡೀ ಸುರಿದೂ ತೃಪ್ತವಾಗದ ಬಾನು - ಮಬ್ಬು ಮಬ್ಬು ಬೆಳಗು... 🌧️

ಸುಡುವ ಸೂರ್ಯನ ಒಡಲು ಎಂಥಾ ತಂಪು ಪ್ರೇಮದ ತಾಣ - ಬೆಳಕೆಂದರೆ ಅನುಗಾಲವೂ ಜಗವ ಹರಸಿ ಕಾಯುವ ಪ್ರಾಣ...
ಶುಭ ಮುಂಜಾವು... 🌞🌦️🏝️

ಎದೆಯಿಂದ ಎದೆಗೆ ಪ್ರೀತಿ ಬೆಳಕನು ದಾಟಿಸಲಿ ಹಬ್ಬದ ಹುಗ್ಗಿ...
ಬೆಳಕಿಗಿಷ್ಟು ಎದೆಯ ಸಿರಿಯ ಬಳಿದರೆ ಸಂಭ್ರಮವೀ ಬೆಳಗು...
ಶುಭದಿನ... 🤝💞🫂

ಬೆಳಕಿನ ಕಣ್ಣೆದುರು ಹರವಿಟ್ಟ ಎದೆಯ ಕನಸುಗಳಿಗೆಲ್ಲ ಬಿಳಿ ಬಿಳಿಯ ಬಣ್ಣ...
ಶುಭದಿನ... 🧚🦸

ಬೆಳಕಿನ ಭರವಸೆಯ ಎಳೆ ಪಾದ ಎದೆಯ ಹೊಸಿಲ ತುಳಿದು ನಗೆಯ ರಂಗೋಲಿಯಿಟ್ಟು ಪ್ರೀತಿ ಹೇಳುವಲ್ಲಿ ನಂದ್ ನಂದೇ ಅನ್ನಿಸುವ ಚಂದ ಬೆಳಗು...
ಶುಭದಿನ... 🎉🍬

ಬೆಳಗೆಂಬ ನಿನ್ನ ಪ್ರೀತಿಯ ಬಣ್ಣ... 💞🍬

ಬೆಳಕೆಂದರೂ ಬೆಳಗೆಂದರೂ ನಗು ನಗು ಮತ್ತು ನಗು ಅಷ್ಟೇ - ಬೆಳಕೇ ಅಲ್ಲವಾ ನಿನ್ನ ನಗು... 
ಶುಭದಿನ... ☺️🤗

ಶುಭವನೇ ಅರಸುತ್ತಾ, ಹಾರೈಸುತ್ತಾ ಮತ್ತೂ ಒಂದು ಹಗಲು...
ಶುಭದಿನ... 🫂

ಬೆಳಕು ಶುಭ ನುಡಿದರೆ ಬದುಕು ಬೆಳಕಾದಂಗೆ, ಹಂಗೇ ಶುಭದ ಮಿಡಿತಗಳ ಉಡುಗೆ, ಉಡುಗೊರೆಗಳಿಷ್ಟು ಮುಫತ್ತು ಸಿಕ್ಕಂಗೇ ಲೆಕ್ಕ...
ಶುಭದ/ಶುಭವೇ ಬೆಳಗು... 🧚🦸

ಮಾತು ಮಾತಿನ ನಡುವೆ ಸುಳಿವ ತಿಳಿ ಉಸಿರಲ್ಲಿ ಬೆಳಕು ಮೈದಳೆಯಲಿ - ನುಡಿದ ನುಡಿಯೆಲ್ಲಾ ಲಯಬದ್ಧ ಶುಭದ ಮನೋಮಿಡಿತವಾಗಲಿ...
ಬೆಳಗೆಂಬ ಶುಭ ಶುಭದ ಸ್ವರ ಸಂಯೋಜನೆ... 🍬

ಮತ್ತದೇ ಹಗಲು - ಮುಗಿದು ಹೋಗುವ ಮುನ್ನ ಶುಭದ ಕಿಡಿಯೊಂದ ಎದೆಗೆ ಮುಡಿಸಿ ಹೋಗಲಿ...
ಮತ್ತದೋ ಬೆಳಗು...
ಶುಭದಿನ... 🧚

ಬೆಳಗೆಂಬ ಭರವಸೆಯ ಸಾರಥಿ... 🦋

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು... :)

ಗೊಂಚಲು - ನಾಕ್ನೂರ್ನಲ್ವತ್ತು ಮೇಲೊಂದು.....

ಬೆಳಗೆಂಬ ಶುಭವಾರ್ತೆ - ಬೆಳಗೆಂಬುದೇ ಶುಭವಾರ್ತೆ.....

ಸೋಬಾನೆಯ ಸೋಪಾನದಿ ಮಲಗಿದ್ದ ಶುಭದ ಕುಡಿಗಳೆಲ್ಲ ಗಡಬಡಿಸಿ ಎದ್ದು ಬೆಳಕಲ್ಲಿ ಮುಖ ತೊಳೆದು, ಬೆಳಕನೇ ಅಲಂಕರಿಸಿಕೊಂಡು ನಮ್ಮೆಲ್ಲ ಬೆಳಗ ಹಾದಿಯಲಿ ಮುಂದಾಗಿ ನಡೆವಾಗ - ಆಹಾ! ಈ ಬೆಳಗಿನ ಸೊಬಗೇನು...
ಶುಭದಿನ... 🧚🪻

ಹೂವಿನೆದೆಗೆ ಕಿವಿಯಿಟ್ಟ ಬೆಳಕು
ಪ್ರೀತಿ ಅರಳುವ ಸದ್ದಿಗೆ ರೋಮಾಂಚ ಬೆಳಗು...
ಗಾಳಿ ಹಾದಿಯ ತುಂಬಾ ಸೃಷ್ಟಿ ಗಂಧ
ಉಸಿರುಸಿರ ತಿತ್ತಿಗಳಲಿ ಒಲುಮೆ ಹರಿವು...
ಶುಭದಿನ... 🪻🦋

ಅಲ್ಲೆಲ್ಲೋ ಉರಿದುರಿದು ಬೆಳಕನುಣಿಸುತಾನೆ
ಇಲ್ಲಿವಳು ಮೈದುಂಬಿ ಅರಳರಳಿ ಹಸಿರ ಹಡೆಯುತಾಳೆ...
ನೋಡು 
ಜ್ಯೋತಿರ್ವರ್ಷಗಳ ದಾಟಿ ಪ್ರೀತಿ ಎದೆಯ ಸೋಕುವ ರೀತಿ... 
ಪ್ರೇಮವೇ ಬೆಳಗು...
ಶುಭದಿನ... 🌦️

ಬೆಳಕೇ ಹರಿಯಲಿ ಎದೆಯಿಂದ ಎದೆಗೆ - ಪ್ರೀತಿ ಸಂಯೋಜನೆ...
ಶುಭದಿನ... 🍬🪻

ಬೆಳಕು ಬರೆದ ಕವಿತೆಯ 
ಹಕ್ಕಿಗೊರಳು ದನಿಯೆತ್ತಿ ಹಾಡಿ 
ಹೂವೆದೆಯ ಚಲುವರಳಿ 
ಅಲ್ಲಿಂದಿಲ್ಲಿಗೆ ಇಲ್ಲಿಂದಲ್ಲಿಗೆ ಓಡಿಯಾಡುವ ಪ್ರೀತಿ... 
ಬೆಳಗೆಂದರೆ ಜಗವೆಲ್ಲ ಒಲವ ಸಂಭ್ರಮ... 🪻🦋
ಶುಭದಿನ... 🍬

ಮತ್ತೊಂದು ಕಿರು ಪಯಣ - ಬೆಳಕಿನೊಂದಿಗೆ, ಬೆಳಕಿನೆಡೆಗೆ...
ಬೆಳಗಾಯಿತು... 🍬🪻

ಬೆಳಕು ಎನ್ನೆದೆಯ ಹಲಗೆಯ ಮೇಲೆ ಪ್ರೀತಿ ಅಕ್ಷರ ಬರೆದು ಅರಿವಿನ ಹರಿವು ಇನ್ನಷ್ಟು ಹಿರಿದಾಗಲಿ...
ಬೆಳಗಾಯಿತು - ಬೆಳಕಾಗಲಿ...
ಶುಭದಿನ... 💞🪻

ಹಂಚಿ ತಿನ್ನುವ ಪ್ರೀತಿಯಲಿ ಹಬ್ಬವಾಗುವ ಬೆಳಗು...
ಶುಭಾಶಯ - ಶುಭದಿನ... 🍬💞

ಬಗೆ ಬಗೆಯ ರೂಪ ರಾಗಗಳಲಿ ನೈವೇದ್ಯವಾಗಲಿ ಎದೆಯಿಂದ ಎದೆಗೆ "ಪ್ರೀತಿ" ಕಜ್ಜಾಯ...
ಪ್ರೀತಿಯ ಶುಭಾಶಯ - ಶುಭದಿನ... 🍬🍫🍭

ಉತ್ಸವದ ಮರು ಹಗಲು
ಹಾಗೇ ಉಳಿದ ಖುಷಿಯ ಅಮಲು...
ಬದುಕು ಹಿತದಲ್ಲಿ ಮೈಮುರಿದಾಗಲೆಲ್ಲ ಪ್ರೀತಿ ಪ್ರೀತಿಯಿಂದ ತೇಗುತ್ತದೆ...
ಶುಭದ ಸುಖದ ಬೆಚ್ಚನೆ ಹರಿವು...
ಶುಭದಿನ... 💞

ಹಬ್ಬದ ರಜೆ ಮುಗಿದು ಶಾಲೆಗೆ ಹೊಂಟ ಕೂಸಿನ ಪಾಟೀಚೀಲದಲ್ಲಿ ಮುದುಡಿ ಕುಳಿತ ಖಾಲಿ ಕೇಪಿನ ಡಬ್ಬದಲಿ ಹಬ್ಬದ ಖುಷಿ, ಕೇಕೆ, ಕಥೆ, ಸುದ್ದಿಗಳು ಊರಿಗೆಲ್ಲ ಹಂಚಿಯೂ ಮಿಗುವಷ್ಟು ಬಾಕೀ ಇದೆ - ಮಗುವ ನಿದ್ದೆಗಣ್ಣಲ್ಲಿ ಹಬ್ಬವಿನ್ನೂ ಚಾಲ್ತಿ ಇದೆ...
ಎದೆಯೊಳಗಿನ ಮಗುವ ಮಾತಾಡಿಸಿ...
ಶುಭದಿನ... 🍫💞

ದುಂಬಿ ಕಣ್ಣ ತುಂಟ ಆಸೆ ನೋಟ
ಹೂವಿನೆದೆಯ ಶೃಂಗಾರದ ಢವಢವ
ಪ್ರೀತಿ ಅರಳುವ ಕಲರವ...
ಬೆಳಗಾಯಿತು... 🪻🦋

ಬೆಳಕು ಜಗದೆಲ್ಲರೆದೆಯ ಭರವಸೆಯ ಅಮೃತ ಗಿಂಡಿಯ ತಿಕ್ಕಿ ತೊಳೆದು ಒಪ್ಪ ಮಾಡಿ ನಗುವ ಚೆಲ್ಲಿ ನಿಂತಂತೆ ಬೆಳಗಾಯಿತು - ಬೆಳಕೇ ಬಯಲಾಯಿತು...
ಶುಭದಿನ... 🧚

ನಗೆಯ ಪನ್ನೀರಲ್ಲಿ ಬೆಳಕ ಪಾದವ ತೊಳೆದು ಕಣ್ಣಿಗೊತ್ತಿಕೊಂಡರೆ ದಿನವಿಡೀ ಊರೆಲ್ಲ ಪ್ರೀತಿ ಪಯಣ...
ಬೆಳಗಾಯಿತು... 🤝

ಬೇಡನ ಬಾಣಕ್ಕಿನ್ನೂ ಜೀವ ಬಂದಿಲ್ಲ, 
ಬೆಳಕಿನ ಋಣವಿಷ್ಟು ಇನ್ನೂನು ಬಾಕಿ ಇದೆ, 
ಹಕ್ಕಿಯ ರೆಕ್ಕೆಯ ಅನುನಯದಿ ಸವರುವ ಪ್ರೀತಿ ಬೆಳಗು...
ಶುಭದಿನ... 💞🪴

ಇರುಳ ದಾಂಟಿ ಬಂದವರ ಕೆನ್ನೆ ಸವರುವ ಬೆಳಕು - ನಗೆ ಮುಗುಳ ಅರಳಿಸೋ ಬೆಳಗು...
ಶುಭದಿನ... 🪻🍬

ಸಾಕು,
ನಿದ್ದೆಯ ಗುದ್ದಿ ಬೆಳಕಿಂಗೆ ಎದೆ ತೆರೆದು ಎಚ್ಚರಾಗೆನುವ ಬೆಳಗು...
ಶುಭದಿನ... 🤗

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು... :)

ಗೊಂಚಲು - ನಾಕ್ನೂರ್ನಲ್ವತ್ತು.....

ನಗುವನ್ನು ಸುಮ್ಮನೆ ನಂಬಿಬಿಡುವುದೇ ಸುಖವು.....

ಯಮುನೆಯ ತಣ್ಣನೆ ಹರಿವು, ಬೃಂದಾವನದ ಉನ್ಮತ್ತ ಹಸಿರು, ಗೋವಳದ ಮಂಗಳಮಯ ಉಸಿರು; ಕೊಳಲ ದನಿಯಾಗಿ, ನವಿಲ ಗರಿಯಾಗಿ, ರಾಸರಾಗದ ಸವಿಯಾಗಿ ಅವನ ಸಹಯೋಗದಲಿ ಮಿಂದ ಪ್ರೇಮಾಲಾಪದ ಹೆಸರಲೂ ಎಷ್ಟೊಂದು ನವಿರು...
ಅವನು ಹುಟ್ಟುವ ಮೊದಲೂ ಪ್ರೇಮವಿತ್ತೇನೋ, 
ಅವನ ಕಾಲಾಹುತಿಯ ನಂತರವೂ ಪ್ರೇಮ ಇದೆ ಅಂತಾರೆ,
ಆದರೆ
ಅವನಂತೆ ಪ್ರೇಮಿಯ ನೀಗಿಕೊಂಡು, ಪ್ರೇಮವ ಜೀವಿಸಿ, ಪ್ರೇಮವೇ ಆಗಿ ಹೋಗಲು ಅವನೇ ಆಗಬೇಕೇನೋ...
ಊಹೂಂ 
ಸುಲಭವಿಲ್ಲ - ಅವನಾಗುವುದು, ಅವನಾಗುವುದ ಬಿಡಿ ಒಂದು ರಜ ಅವನಂತಾಗುವುದೂ...
___ "ಕೃಷ್ಣಾ" ಎಂಬ ಚಿರ ಯೌವನ...
&&&

'ನೀ ನನ್ನ ಇಷ್ಟ, ನೀ ನನಗೆ ನಂಗಿಂತಾ ಇಷ್ಟ' ಹಂಗಂತ ದಿನಕೆ ನೂರು ಬಾರಿ ಹೇಳಿಬಿಡಬಹುದು - ಪ್ರೀತಿಯಾಗಲೀ, ನೇಹವಾಗಲೀ ಅದಷ್ಟೇ ಆದರೆ...
ಆದರೆ,
ನಾನು ನಾನಾಗಿಯೇ ಉಳಿದು ನಿನ್ನೊಡನಾಡುವ ಜವಾಬ್ದಾರಿಯಾಗಿ, ಕಾಳಜಿಯಾಗಿ, ಅನುಸರಣೆಯಾಗಿ, ಬದುಕೆಂಬ ಬದುಕಿನ ನೆರಳು ಬೆಳಕಿನಾಟದಲೆಲ್ಲಾ ಆತ್ಮಸ್ಥ ಭರವಸೆಯ ಹೆಗಲಾಗಿ ಸಖ್ಯವ ನಿಭಾಯಿಸುವ ನಡತೆಯಲ್ಲಿ ನಾ ನನ್ನ ಪ್ರೀತಿ ಹೇಳ್ತೀನಿ ಅಂತ ಹೊರಟರೆ ಮಾತ್ರ ತುಂಬಾನೇ ಗಟ್ಟಿ ಇರಬೇಕು ಗುಂಡಿಗೆ...
____ ವ್ಯಕ್ತಪಡಿಸಬೇಕೆಂಬ ಗಡಿಬಿಡಿ ಮತ್ತು ವ್ಯಕ್ತಪಡಿಸುವ ಚಂದ...
&&&

ಎದೆಯ ಬಾಗಿಲಿಗೆ ಹಿಂಗೆ ಬಂದು ಹಂಗೆ ಹೋಗುವ ಸಂಚಾರೀ ಭಾವಗಳಿಗೇ ಸ್ಥಿರ ಭಾವದ ಪಟ್ಟ ಕಟ್ಟಿಕೊಂಡು 'ನೀನು' ಅಥವಾ 'ನೀನು ಮಾತ್ರ' ಅಂತೆಲ್ಲಾ ಆಪ್ತತೆಯ ಆಣೆ ಪ್ರಮಾಣದಂಗೆ ಮಾತಾಡಿಬಿಡ್ತೇನಲ್ಲ, ಮತ್ತದನ್ನು ನೀನು ಅಥವಾ ನಿನ್ನಂಥವರು ಸುಖಾಸುಮ್ಮನೆ ನಂಬಿ ಬಿಡ್ತೀರಲ್ಲ - ಎಂಥಾ ದುರಂತ ಅದು...
ಅಲ್ಲಿಗೆ,
ನಾಕು ದಿನ ಒಡನಾಡುವ ಹೊತ್ತಿಗೆ ಭಾವವೂ, ಬಂಧವೂ ಹೊತ್ತು ನಡೆಯಲಾರದಷ್ಟು ಭಾರ ಭಾರ; ಅಲ್ಲಿಂದ ಮುಂದೆ ಶುರು: 'ಇಷ್ಟೇನಾ ನನ್ನ ಅರ್ಥ ಮಾಡ್ಕೊಂಡಿದ್ದೂ, ವ್ಯಕ್ತಪಡಿಸಿದರೆ ಮಾತ್ರವೇ ಆಪ್ತ ಅಂತಲಾ, ನನ್ನ ಮೌನವೂ ಅರ್ಥವಾಗಬೇಕು ಆಪ್ತತೆ ಅಂದ್ರೆ' - ಸುರಕ್ಷಿತ ಅಂತರ ಕಾಯ್ದುಕೊಳ್ಳಲು ನೂರು ಸಬೂಬುಗಳ ಮಾತಿನ ವ್ಯಾಪಾರ...
ನನ್ನೊಳಗೇ ಇನ್ನೂ ಗಟ್ಟಿಯಾಗಿರದ ಭಾವವನ್ನು ಯಾವುದೋ ಹುಕಿಗೆ ಬಿದ್ದು ನಿನಗೆ ದಾಟಿಸಿರುವಾಗ, ಮೊದಲಾಗಿ ನುಡಿಯುವಾಗಲೇ ನನ್ನಲ್ಲಿ ಸ್ಪಷ್ಟತೆ ಮತ್ತು ಸ್ಥಿರತೆ ಇಲ್ಲದಾಗ, ಜಾಳು ಭಾವ ಜೊಳ್ಳು ಮಾತುಗಳನು ಜೊತೆಗಿಟ್ಟುಕೊಂಡು ಗಟ್ಟಿ ಬಂಧವ ಬಯಸುವಾಗ, ಬಾಂಧವ್ಯವೊಂದನು ನಿಭಾಯಿಸುವಲ್ಲಿ ನವಿರು ಚಂದವಾಗಲೀ, ಮುಕ್ತ ನಗುವಾಗಲೀ ಹೇಗೆ ಉಳಿದೀತು ಹೇಳು...
ಕೊನೆಗೆ,
ಪ್ರಾರ್ಥನೆಯ ಹೆಸರಲ್ಲಿ ಬೇಡಿಕೆಗಳ ಪಟ್ಟಿ ಹಿಡಿದು ದೇವರನ್ನೇ ಮಾತಿಗೆಳೆಯುವ ನಾವು ಮನುಷ್ಯಮಾತ್ರರ ಸಂಬಂಧಗಳಲಿ ಮೌನದ ಎತ್ತರವ ಸಾಬೀತುಪಡಿಸಲು ಹೊರಡುತ್ತೇವೆ...
___ ಬುದ್ಧಿವಂತಂಗೆ ಮೂರ್ಕಡೆ... 
&&&

ಎಷ್ಟೆಲ್ಲಾ, ಏನೇನೆಲ್ಲಾ ಸಂಪಾದಿಸುವ ಹುಚ್ಚಿನಲ್ಲಿ, ಹರಸಾಹಸ ಗೈದೂ ಗಳಿಕೆಯಾಗಿ ಸಿಗುವ ಶೂನ್ಯ ಅಥವಾ ಎಷ್ಟೆಷ್ಟೆಲ್ಲಾ, ಏನೇನೋ ಸಾಧಿಸಿ, ಸಂಪಾದಿಸಿ ಗುಡ್ಡೆ ಹಾಕಿಕೊಂಡು ಹಮ್ಮಿನಲಿ ಎದುರು ಕೂತಾಗಲೂ ಇವಕ್ಕೇನಾ ಇಷ್ಟೊಂದು ಹೆಣ್ಮಿರಿ ಬಡಿದಾಡಿದ್ದೂ ಅನ್ನಿಸಿ ಒಮ್ಮೆಲೇ ಕಾಡುವ ಶೂನ್ಯ...
ಉಫ್...
ಈ 'ಶೂನ್ಯ'ವೆಂಬೋ 'ಗುರುವು' ಮಾಡುವ ಪಾಠವು ಕಾಡುವ, ಕೂಡುವ, ಕಲಿಸುವ ಪರಿಗೆ ಬದುಕಿನದು ನಮೋನ್ನಮಃ...
___ ಶೂನ್ಯದಿಂದ ಶೂನ್ಯದೆಡೆಗೆ ಗಡಿಬಿಡಿಯ ನಡಿಗೆ - ನಾನು ಶೂನ್ಯನೂ...
&&&

'ಸಾವು' ಅಂದ್ರೆ ಚಿರ ನಿದ್ರೆ...
ಸತ್ಯವೇ ಅದು...
ಆದ್ರೂ,
ಬದುಕ ಬಾಗಿಲಲಿ ನಿಂತು ಅಂಗಳದಲಿ ಸರಿದಾಡುವ ಸಾವನು ನೋಡಿದೆನಾದರೆ 'ಸಾವು' ಎಚ್ಚರವೂ ಹೌದು...
ಕೆಲವೆಲ್ಲಾ ದಿನಗಳಲಿ ಸತ್ತಂತೆ ಬದುಕ್ತಿರ್ತೇನೆ - ಜಡ ಜಡವಾಗಿ...
ಆಗೆಲ್ಲೋ,
ಒಂದು ಸಿಡಿದ ಚಿತೆಯ ನೆನಪಾಗಿ, ಕಳ್ಳ ಬೀಳುವ ಈ ಎದೆಬಡಿತದಲ್ಲಿ ಹೊಂಚಿ ಕೂತಿರುವ ಅಭಯವಿಲ್ಲದ ನನ್ನ ದಿನಗಳ ಲೆಕ್ಕ ಶುರುವಾಗಿ, ಈಗಿಲ್ಲಿ ನಿಂತಿರುವ ನಾನು ಒಂದು ಕನಸೂ ಅನ್ನಿಸಿ, ಯಾವುದೋ ಅಚ್ಚರಿಯ ಇನಾಮು ಎಂಬುದರಿವಾಗಿ, ಸರಕ್ಕನೆ ಕಣ್ಣು ಬಿರಿಯುತ್ತದೆ... 
ಅಲ್ಲಿಂದಾಚೆ, 
ಕಣ್ಣೆದುರಿನ ಮೋಹಗಳಲಿ ಕರಡಿ ಮುದ್ದು ಉಕ್ಕುತ್ತದೆ...
ತೋಳ ಹರಹಿಗೆ ಸಿಕ್ಕ ಏನೆಂದರೆ ಏನನೂ ಬಿಡದೇ ಹಪಹಪಿಸಿ ಬಾಚಿ ತಬ್ಬಿ ಸರಸಕಿಳೀತೇನೆ...
ಪರಮ ಕಂಜೂಸು ಬದುಕನೂ ಪರಮೋಚ್ಛ ತೀವ್ರತೆಯಲಿ ಜೀವಿಸಲೆಳಸ್ತೇನೆ...
ಎಲ್ಲಾ ಹಗಲಲೂ ಬೆಳಕ ಬಯಲ ಸೌಂದರ್ಯದಲ್ಲಿ, ಪ್ರತಿ ಇರುಳಲೂ ಬೆತ್ತಲನು ಅಪ್ಪುವ ಮಾಧುರ್ಯದಲ್ಲಿ ಕರಗಿ ಕರಗಿ ನನ್ನ ನಾನು ನೀಗಿಕೊಳ್ಳಲು ಹವಣಿಸ್ತೇನೆ...
ಇಡೀ ಬದುಕಿಗೇ ಹಿಡಿ ಹಿಡಿಯಾಗಿ ಮಿಲನೋತ್ತುಂಗದ ಹಗುರತೆಯ ತುಂಬಿಕೊಳ್ಳಲು / ತುಂಬಿಕೊಡಲೂ ತುದಿಗಾಲಲ್ಲಿ ತಯಾರಾಗ್ತೇನೆ...
ಅದಕೇ - 
ಸಾವೆಂದರೆ ನನ್ನ ಅಂತಿಮ ಯಾತ್ರೆ ಹೆಂಗೋ ಹಂಗೇ ಸಾವೂ ಅಂದರೆ ನನ್ನೀ ಬದುಕಿನೆಚ್ಚರದ ಆರಂಭ ಸೈತಾ...
____ ಮಸಣವಾಸಿಯ ಕಳ್ಳು ಕಾವ್ಯ...
&&&

ನಿನ್ನಾ ಅನುಗಾಲದ ಅನುರೂಪ ನಗುವಿನ ಗುಟ್ಟೇನು...?
......ಹಹ್ಹಾ.....
...... ಎಲ್ಲೂ ತಾವಿಲ್ಲದಂಗೆ ಈ ಎದೆ ಗೂಡನೇ ತಬ್ಬಿ ಹಬ್ಬಿರುವ ನೋವ ಬಳ್ಳಿ, ಮತ್ತದರ ಬೆನ್ನಿಗಂಟಿ ಬರುವ ಸಂವಾದಿ ಬಳಗ...
ಹಂಗೇ 
ಬದುಕ ಬಾಗಿಲಿಂಗೆ (ಪಾಲಿಗೆ) ಬಂದ ಎಂಥದ್ದೇ ಅತಿಥಿಗಳನು ಆದರದಿ ಆದರಿಸುವ ಜನ್ಮ ಸಂಸ್ಕಾರ...
____ ನೋವು ನಗುವಿನ ಮೆಟ್ಟಿಲು...

ಹಾಗಲ್ಲ
ನಾ ಹೇಳಿದಷ್ಟು ಸುಲಭವಾ ನೀ ಸುಖಾಸುಮ್ಮನೆ ನಂಬುವುದು...
ನೋವೆಂದರೆ
ನಗುವವನ ಎದೆಯ ನೋವಿಗೆ ಸಾಕ್ಷಿ ಬೇಕೆಂದರೆ ಆ ನಗುವಲ್ಲೇ ಹುಡುಕಬೇಕಿರುವುದು...
___ ನಗುವನ್ನು ಸುಮ್ಮನೆ ನಂಬಿಬಿಡುವುದೇ ಸುಖವು...
&&&

ವತ್ಸಾ -
ಹೆಗಲೇರುವ ನೋವುಗಳಲ್ಲಿ ಇರುವ ಒಗ್ಗಟ್ಟಿನಲ್ಲಿ ಒಂದಂಶದಷ್ಟಾದರೂ ಗಲ್ಲ ತಿವಿಯುವ ನಲಿವುಗಳಲ್ಲಿದ್ದಿದ್ದಾದರೆ ಸಾಕಿತ್ತು, ನಗೆಯ ಆಯುಷ್ಯವ ಗೆಲ್ಲುವ / ಮೆಲ್ಲುವ ಹಾದಿ ಇಷ್ಟು ಸಿಕ್ಕುಸಿಕ್ಕಾಗಿರುತಿರಲಿಲ್ಲ ನೋಡು...
____ ಒಡೆದ ಕಾಲ್ಬೆರಳಿಗೇ ಎಡವಲೆಂದೇ ಕಾಯುತ್ತಾ ಕೂತಂತಿರುತಾವೆ ಕಲ್ಲುಗಳು...
&&&

ಇಷ್ಟಕ್ಕೂ ಎಲ್ಲಾ ಹೇಳ್ಕೊಂಡು ನಗಬಹುದಾದ ದೇವರಿಂದಲೂ ಒಂದಿಷ್ಟೇನನಾದರೂ ಮುಚ್ಚಿಟ್ಟುಕೊಳ್ಳಲು ಹವಣಿಸುವ ಮನುಷ್ಯರು ನಾವು...
ಬಯಲ ಬೇವರ್ಸಿಯಂತಾಡುವ ನನ್ನೊಳಗೂ ಗುಟ್ಟುಗಳಿಷ್ಟು ಉಳಿದಿರಬಹುದು - ಎನಗೆ ಆನೇ ಹೇಳಿಕೊಳ್ಳಬೇಕಿರುವುದೂ ಎಷ್ಟೋ ಬಾಕಿ ಇರಬಹುದು...
ಇಷ್ಟಾಗಿಯೂ - ನೀ ಮಾತಿಗೆ ಸಿಕ್ಕಾಗ, ಮೌನಕೆ ಹೆಗಲಾಗುವಾಗ ನನ್ನದೆನುವ ಎಲ್ಲಾ ಖುಲ್ಲಂಖುಲ್ಲಾ ಎಂಬಷ್ಟು ಆಪ್ತತೆ ನೋಡು ನೀನೆಂದರೆ ನೇಹವೇ...
___ ನಿಂಗೂ ನಾ ಹಂಗೇನಾ..? ಹಂಗೆಂದಾದರೂ ಆದೇನಾ...??

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು... :)

ಗೊಂಚಲು - ನಾಕ್ನೂರ್ಮೂವತ್ತೊಂಭತ್ತು.....

ಪ್ರಣಯ ಕಾವ್ಯದ ಕಾಲ್ಸಂಕ.....

ಪರಿಚಿತ ಹಾದಿಯಲಿ ಅಪರಿಚಿತ ಕವಿ ಬರೆದೆಸೆದ ಅಪೂರ್ಣ(ರ್ವ) ಭಾವಗೀತೆಯೊಂದು ನನಗೇ ಕಾದು ಎದೆಯ ಹೊಕ್ಕಂಗೆ - ನೀ ಸಿಗುವ ಎಲ್ಲಾ ಸಂಜೆಗಳು... 🥰
____ ಪ್ರಣಯ ಕಾವ್ಯದ ಕಾಲ್ಸಂಕ...
&&&

ವತ್ಸಾ -
"ನೀ ನನ್ನ ಇಷ್ಟ ಅನ್ನೋದರ ಅರ್ಥ ನೀ ನನ್ನ ದೌರ್ಬಲ್ಯ ಅಂತ ಅಲ್ಲ..."
ನಿನ್ನ ನೆನೆವವರ ನೆನೆಯುತ್ತಿರು, ನೆನೆನೆನೆದು ಒಡನಾಡುತ್ತಿರು ಭಾವವೇ - ಆಗ ನಿನ್ನನೇ ತೊರೆದವರ ನೆನೆದೂ, ನೆನಪುಗಳು ಸೆಳೆದೂ, ತುಳಿದೂ ನಗಬಹುದು ಜೀವವೇ...
____ ನನ್ನ ಧ್ಯಾನ - ನನ್ನ ಆಧ್ಯಾತ್ಮ...
&&&

ಇಲ್ಲಿ ಮೋಡ ಮುಸುಕಿದ ವಾತಾವರಣ, ಯಾವ ಕ್ಷಣದಲ್ಲೂ ಹುಚ್ಚು ಮಳೆಯಾಗಬಹುದು ಅಂತ ಸಂದೇಶ ಬಂತು - ಆಹಾ!! ಎಂಥ ಚಂದ ಪೋಲಿ ಕಾವ್ಯ ಎಂದು ನಲಿದೆ...
ಸದಾಶಿವಂಗೆ ಅದೇ ಧ್ಯಾನ ಅಂತಂದು ಮೂಗು ಮುರಿದವಳ ಹೊಳೆದ ಮೂಗುತಿಯಲ್ಲಿ ಕಳ್ಳ ಆಸೆಯ ಸೆಳಕು... 
ಬೆಳ್ಳಂಬೆಳಗಲಿ ಮೈ ಮನಕೆ ತುಟಿ ಕೊಂಕಲೇ ಕಡು ರೋಮಾಂಚವ ಸುರಿದು "ಹೋಗೋ, ಕೆಲ್ಸ ನೋಡು ಹೋಗು" ಅಂತ ಹಿತವಾಗಿ ತಿವಿದರೆ ಹೆಂಗೆ ತಡೆದೀತು ಪೋಲಿ ಜೀವ ಆ ಸವಿ ಸುಖವಾ...
____ ಕರಿ ಮೋಡ ಬಿತ್ತಿದ ಛಳಿಯ ಛವಿ ಮತ್ತು ಕಪ್ಪು ಹುಡುಗಿಯ ವಲವ ವಯ್ಯಾರದ ಬಿಸಿ...
&&&

ಉರಿದುರಿದು ಘಮಿಸಲು ಇರುಳಿಗಾಗಿ ತಪಿಸುವ ನಾ ನಿನ್ನ ಮೋಹದ ಧೂಪ...
ಮಳೆ ಛಳಿಯ ಮಡುಹಿನಲಿ ನಾಭಿ ಕೋಡಿಯಿದು ಮದನನ ಮಧುರ ಶಾಪ...
ಕೇಳೇ -
ಮೊದಲ ಮಳೆಯಲಿನ ಮೃದ್ಗಂಧದಂಗೇ ಕಾಡುತ್ತದೆ, ಮರಳಿ ಹೊರಳಿ ಕರೆಯುತ್ತದೆ, ಪ್ರತೀ ಮಿಲನೋತ್ಸವದ ಉತ್ತರಾರ್ಧದದಲೂ ಹೊಮ್ಮುವ ನಿನ್ನ ಮೈತಿರುವುಗಳ ಮತ್ತ ಘಮ...
____ ಮಳೆ‌ ನುಡಿಸುವ ಹೂ ಹಕ್ಕಿ ಹಾಡಿನ ಧರ್ಮ...
&&&

ಹೇ ದೇವಾ,
ಅವಳ ಭಕ್ತಿಗೆ ಒಲಿದೆಯಾದರೆ ನನ್ನನೇ ಕರುಣಿಸು...
ನಿಂಗೆ ಸೋತೇ ಅಂದಳು - ಮತ್ತೀಗ ನನ್ನ ಬದುಕನೇ ನಿರ್ದೇಶಿಸುತ್ತಾಳೆ...
"ಸೋತವರು/ರೇ ಆಳುವುದು ಒಲವಲ್ಲಿ ಮಾತ್ರವೇ ಇರಬೇಕು..."
___ ಮಧುರ ಪಾಪದ (ಹುಚ್ಚು) ಕಿಚ್ಚು... 
&&&

ಇದಿರು ಹಾಯುವ ಪ್ರತಿ ನಡೆ ನುಡಿಗಳಲೂ ಮಧುರ ಸ್ವರ ವಿನ್ಯಾಸವ(ನಷ್ಟೇ) ಹುಡುಕುವ ತುಂಬು ಎದೆ ಭಾವಕೆ ಅವಳದೇ ಹೆಸರಿಡುವೆ...
___ ಅವಳೆಂದರೆ - ಎನ್ನ ಹಾದಿಯ ಕರಿ ಕಾನು / ಕಾರ್ಮುಗಿಲು / ಪಾಳು ಗುಡಿಯ ಕಪ್ಪು ಕಲ್ಲು ದೇವರೆದುರಿನ ಕಿರು ಘಂಟೆ...
&&&

ಕಾಲನೇ, ಒಂದೇ ಒಂದು ಕೊನೆಯಾಸೆ / ಪ್ರಾರ್ಥನೆ:
ಬರೀ ಕಲ್ಲಲ್ಲ ನೀನೆಂದು ನಂಬಿದವಳ ರುದಯದ ಕನಸುಗಳೆದುರು ಕಲ್ಲಾಗಬೇಡ...
ಸುಳ್ಳೇ ಆದರೂ ಮುನಿದು ಅವಳ ನಗೆಯ ಹಾದಿಗೆ ಮುಳ್ಳು ಸುರಿಯಬೇಡ...
ಯುದ್ಧವೇನಿದ್ದರೂ ಸಮ ಬಲರ ನಡುವೆ ಇರಬೇಕು - ನಾನಿಲ್ಲದಲ್ಲಿ ಅವಳನು ಕಾಡದಲೇ ನೀನೇ ಕಾಯಬೇಕು...
___ ಭಾವುಕತೆ... 
&&&

ನಂಗೆ ಮಾತ್ರ ಕೊಡೂ ಅಂದ್ರೆ ನಾನು ಓಡೋಗ್ತೀನಿ - ನಂಗ್ನಂಗೂ ಮಾತ್ರ ಕೊಡೋ ಅಂದಲ್ಲಿ ಭರಪೂರ ಸುರೀತೀನಿ...
____ ಪ್ರೀತಿ ಪಲ್ಲಂಗ ಪುರಾಣ...
&&&

ಎಷ್ಟೊಂದು ಶಬ್ದಗಳ ಕೂಡಿಸಿ, ಕಳೆದು, ಭಾಗಿಸಿ ಶೇಷವಾಗಿಯೇ ಉಳಿಯಿತು ಭಾವ...
ನಿನ್ನದೊಂದು ಸುನೀತ ಸ್ಪರ್ಷದಿಂದ ಕವಿತೆಯಾಯಿತು ಜೀವ...
ನೋಡು
ಕವಿತೆ ಅಂದರೆ ಅದೇ ಅಂತೆ - ಶಬ್ದಾಲಂಕಾರಗಳ ಕೊಡವಿ ನೇರ ಎದೆಯನೇ ಮುಟ್ಟುವ ಸಂಪ್ರೀತ ಸನ್ನಿಧಿಯ ಶ್ವಾಸ...
___ ಪ್ರೀತಿಯೆಂದರೂ......

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು... :)