Monday, September 16, 2024

ಗೊಂಚಲು - ನಾಕ್ನೂರ್ನಲ್ವತ್ತು.....

ನಗುವನ್ನು ಸುಮ್ಮನೆ ನಂಬಿಬಿಡುವುದೇ ಸುಖವು.....

ಯಮುನೆಯ ತಣ್ಣನೆ ಹರಿವು, ಬೃಂದಾವನದ ಉನ್ಮತ್ತ ಹಸಿರು, ಗೋವಳದ ಮಂಗಳಮಯ ಉಸಿರು; ಕೊಳಲ ದನಿಯಾಗಿ, ನವಿಲ ಗರಿಯಾಗಿ, ರಾಸರಾಗದ ಸವಿಯಾಗಿ ಅವನ ಸಹಯೋಗದಲಿ ಮಿಂದ ಪ್ರೇಮಾಲಾಪದ ಹೆಸರಲೂ ಎಷ್ಟೊಂದು ನವಿರು...
ಅವನು ಹುಟ್ಟುವ ಮೊದಲೂ ಪ್ರೇಮವಿತ್ತೇನೋ, 
ಅವನ ಕಾಲಾಹುತಿಯ ನಂತರವೂ ಪ್ರೇಮ ಇದೆ ಅಂತಾರೆ,
ಆದರೆ
ಅವನಂತೆ ಪ್ರೇಮಿಯ ನೀಗಿಕೊಂಡು, ಪ್ರೇಮವ ಜೀವಿಸಿ, ಪ್ರೇಮವೇ ಆಗಿ ಹೋಗಲು ಅವನೇ ಆಗಬೇಕೇನೋ...
ಊಹೂಂ 
ಸುಲಭವಿಲ್ಲ - ಅವನಾಗುವುದು, ಅವನಾಗುವುದ ಬಿಡಿ ಒಂದು ರಜ ಅವನಂತಾಗುವುದೂ...
___ "ಕೃಷ್ಣಾ" ಎಂಬ ಚಿರ ಯೌವನ...
&&&

'ನೀ ನನ್ನ ಇಷ್ಟ, ನೀ ನನಗೆ ನಂಗಿಂತಾ ಇಷ್ಟ' ಹಂಗಂತ ದಿನಕೆ ನೂರು ಬಾರಿ ಹೇಳಿಬಿಡಬಹುದು - ಪ್ರೀತಿಯಾಗಲೀ, ನೇಹವಾಗಲೀ ಅದಷ್ಟೇ ಆದರೆ...
ಆದರೆ,
ನಾನು ನಾನಾಗಿಯೇ ಉಳಿದು ನಿನ್ನೊಡನಾಡುವ ಜವಾಬ್ದಾರಿಯಾಗಿ, ಕಾಳಜಿಯಾಗಿ, ಅನುಸರಣೆಯಾಗಿ, ಬದುಕೆಂಬ ಬದುಕಿನ ನೆರಳು ಬೆಳಕಿನಾಟದಲೆಲ್ಲಾ ಆತ್ಮಸ್ಥ ಭರವಸೆಯ ಹೆಗಲಾಗಿ ಸಖ್ಯವ ನಿಭಾಯಿಸುವ ನಡತೆಯಲ್ಲಿ ನಾ ನನ್ನ ಪ್ರೀತಿ ಹೇಳ್ತೀನಿ ಅಂತ ಹೊರಟರೆ ಮಾತ್ರ ತುಂಬಾನೇ ಗಟ್ಟಿ ಇರಬೇಕು ಗುಂಡಿಗೆ...
____ ವ್ಯಕ್ತಪಡಿಸಬೇಕೆಂಬ ಗಡಿಬಿಡಿ ಮತ್ತು ವ್ಯಕ್ತಪಡಿಸುವ ಚಂದ...
&&&

ಎದೆಯ ಬಾಗಿಲಿಗೆ ಹಿಂಗೆ ಬಂದು ಹಂಗೆ ಹೋಗುವ ಸಂಚಾರೀ ಭಾವಗಳಿಗೇ ಸ್ಥಿರ ಭಾವದ ಪಟ್ಟ ಕಟ್ಟಿಕೊಂಡು 'ನೀನು' ಅಥವಾ 'ನೀನು ಮಾತ್ರ' ಅಂತೆಲ್ಲಾ ಆಪ್ತತೆಯ ಆಣೆ ಪ್ರಮಾಣದಂಗೆ ಮಾತಾಡಿಬಿಡ್ತೇನಲ್ಲ, ಮತ್ತದನ್ನು ನೀನು ಅಥವಾ ನಿನ್ನಂಥವರು ಸುಖಾಸುಮ್ಮನೆ ನಂಬಿ ಬಿಡ್ತೀರಲ್ಲ - ಎಂಥಾ ದುರಂತ ಅದು...
ಅಲ್ಲಿಗೆ,
ನಾಕು ದಿನ ಒಡನಾಡುವ ಹೊತ್ತಿಗೆ ಭಾವವೂ, ಬಂಧವೂ ಹೊತ್ತು ನಡೆಯಲಾರದಷ್ಟು ಭಾರ ಭಾರ; ಅಲ್ಲಿಂದ ಮುಂದೆ ಶುರು: 'ಇಷ್ಟೇನಾ ನನ್ನ ಅರ್ಥ ಮಾಡ್ಕೊಂಡಿದ್ದೂ, ವ್ಯಕ್ತಪಡಿಸಿದರೆ ಮಾತ್ರವೇ ಆಪ್ತ ಅಂತಲಾ, ನನ್ನ ಮೌನವೂ ಅರ್ಥವಾಗಬೇಕು ಆಪ್ತತೆ ಅಂದ್ರೆ' - ಸುರಕ್ಷಿತ ಅಂತರ ಕಾಯ್ದುಕೊಳ್ಳಲು ನೂರು ಸಬೂಬುಗಳ ಮಾತಿನ ವ್ಯಾಪಾರ...
ನನ್ನೊಳಗೇ ಇನ್ನೂ ಗಟ್ಟಿಯಾಗಿರದ ಭಾವವನ್ನು ಯಾವುದೋ ಹುಕಿಗೆ ಬಿದ್ದು ನಿನಗೆ ದಾಟಿಸಿರುವಾಗ, ಮೊದಲಾಗಿ ನುಡಿಯುವಾಗಲೇ ನನ್ನಲ್ಲಿ ಸ್ಪಷ್ಟತೆ ಮತ್ತು ಸ್ಥಿರತೆ ಇಲ್ಲದಾಗ, ಜಾಳು ಭಾವ ಜೊಳ್ಳು ಮಾತುಗಳನು ಜೊತೆಗಿಟ್ಟುಕೊಂಡು ಗಟ್ಟಿ ಬಂಧವ ಬಯಸುವಾಗ, ಬಾಂಧವ್ಯವೊಂದನು ನಿಭಾಯಿಸುವಲ್ಲಿ ನವಿರು ಚಂದವಾಗಲೀ, ಮುಕ್ತ ನಗುವಾಗಲೀ ಹೇಗೆ ಉಳಿದೀತು ಹೇಳು...
ಕೊನೆಗೆ,
ಪ್ರಾರ್ಥನೆಯ ಹೆಸರಲ್ಲಿ ಬೇಡಿಕೆಗಳ ಪಟ್ಟಿ ಹಿಡಿದು ದೇವರನ್ನೇ ಮಾತಿಗೆಳೆಯುವ ನಾವು ಮನುಷ್ಯಮಾತ್ರರ ಸಂಬಂಧಗಳಲಿ ಮೌನದ ಎತ್ತರವ ಸಾಬೀತುಪಡಿಸಲು ಹೊರಡುತ್ತೇವೆ...
___ ಬುದ್ಧಿವಂತಂಗೆ ಮೂರ್ಕಡೆ... 
&&&

ಎಷ್ಟೆಲ್ಲಾ, ಏನೇನೆಲ್ಲಾ ಸಂಪಾದಿಸುವ ಹುಚ್ಚಿನಲ್ಲಿ, ಹರಸಾಹಸ ಗೈದೂ ಗಳಿಕೆಯಾಗಿ ಸಿಗುವ ಶೂನ್ಯ ಅಥವಾ ಎಷ್ಟೆಷ್ಟೆಲ್ಲಾ, ಏನೇನೋ ಸಾಧಿಸಿ, ಸಂಪಾದಿಸಿ ಗುಡ್ಡೆ ಹಾಕಿಕೊಂಡು ಹಮ್ಮಿನಲಿ ಎದುರು ಕೂತಾಗಲೂ ಇವಕ್ಕೇನಾ ಇಷ್ಟೊಂದು ಹೆಣ್ಮಿರಿ ಬಡಿದಾಡಿದ್ದೂ ಅನ್ನಿಸಿ ಒಮ್ಮೆಲೇ ಕಾಡುವ ಶೂನ್ಯ...
ಉಫ್...
ಈ 'ಶೂನ್ಯ'ವೆಂಬೋ 'ಗುರುವು' ಮಾಡುವ ಪಾಠವು ಕಾಡುವ, ಕೂಡುವ, ಕಲಿಸುವ ಪರಿಗೆ ಬದುಕಿನದು ನಮೋನ್ನಮಃ...
___ ಶೂನ್ಯದಿಂದ ಶೂನ್ಯದೆಡೆಗೆ ಗಡಿಬಿಡಿಯ ನಡಿಗೆ - ನಾನು ಶೂನ್ಯನೂ...
&&&

'ಸಾವು' ಅಂದ್ರೆ ಚಿರ ನಿದ್ರೆ...
ಸತ್ಯವೇ ಅದು...
ಆದ್ರೂ,
ಬದುಕ ಬಾಗಿಲಲಿ ನಿಂತು ಅಂಗಳದಲಿ ಸರಿದಾಡುವ ಸಾವನು ನೋಡಿದೆನಾದರೆ 'ಸಾವು' ಎಚ್ಚರವೂ ಹೌದು...
ಕೆಲವೆಲ್ಲಾ ದಿನಗಳಲಿ ಸತ್ತಂತೆ ಬದುಕ್ತಿರ್ತೇನೆ - ಜಡ ಜಡವಾಗಿ...
ಆಗೆಲ್ಲೋ,
ಒಂದು ಸಿಡಿದ ಚಿತೆಯ ನೆನಪಾಗಿ, ಕಳ್ಳ ಬೀಳುವ ಈ ಎದೆಬಡಿತದಲ್ಲಿ ಹೊಂಚಿ ಕೂತಿರುವ ಅಭಯವಿಲ್ಲದ ನನ್ನ ದಿನಗಳ ಲೆಕ್ಕ ಶುರುವಾಗಿ, ಈಗಿಲ್ಲಿ ನಿಂತಿರುವ ನಾನು ಒಂದು ಕನಸೂ ಅನ್ನಿಸಿ, ಯಾವುದೋ ಅಚ್ಚರಿಯ ಇನಾಮು ಎಂಬುದರಿವಾಗಿ, ಸರಕ್ಕನೆ ಕಣ್ಣು ಬಿರಿಯುತ್ತದೆ... 
ಅಲ್ಲಿಂದಾಚೆ, 
ಕಣ್ಣೆದುರಿನ ಮೋಹಗಳಲಿ ಕರಡಿ ಮುದ್ದು ಉಕ್ಕುತ್ತದೆ...
ತೋಳ ಹರಹಿಗೆ ಸಿಕ್ಕ ಏನೆಂದರೆ ಏನನೂ ಬಿಡದೇ ಹಪಹಪಿಸಿ ಬಾಚಿ ತಬ್ಬಿ ಸರಸಕಿಳೀತೇನೆ...
ಪರಮ ಕಂಜೂಸು ಬದುಕನೂ ಪರಮೋಚ್ಛ ತೀವ್ರತೆಯಲಿ ಜೀವಿಸಲೆಳಸ್ತೇನೆ...
ಎಲ್ಲಾ ಹಗಲಲೂ ಬೆಳಕ ಬಯಲ ಸೌಂದರ್ಯದಲ್ಲಿ, ಪ್ರತಿ ಇರುಳಲೂ ಬೆತ್ತಲನು ಅಪ್ಪುವ ಮಾಧುರ್ಯದಲ್ಲಿ ಕರಗಿ ಕರಗಿ ನನ್ನ ನಾನು ನೀಗಿಕೊಳ್ಳಲು ಹವಣಿಸ್ತೇನೆ...
ಇಡೀ ಬದುಕಿಗೇ ಹಿಡಿ ಹಿಡಿಯಾಗಿ ಮಿಲನೋತ್ತುಂಗದ ಹಗುರತೆಯ ತುಂಬಿಕೊಳ್ಳಲು / ತುಂಬಿಕೊಡಲೂ ತುದಿಗಾಲಲ್ಲಿ ತಯಾರಾಗ್ತೇನೆ...
ಅದಕೇ - 
ಸಾವೆಂದರೆ ನನ್ನ ಅಂತಿಮ ಯಾತ್ರೆ ಹೆಂಗೋ ಹಂಗೇ ಸಾವೂ ಅಂದರೆ ನನ್ನೀ ಬದುಕಿನೆಚ್ಚರದ ಆರಂಭ ಸೈತಾ...
____ ಮಸಣವಾಸಿಯ ಕಳ್ಳು ಕಾವ್ಯ...
&&&

ನಿನ್ನಾ ಅನುಗಾಲದ ಅನುರೂಪ ನಗುವಿನ ಗುಟ್ಟೇನು...?
......ಹಹ್ಹಾ.....
...... ಎಲ್ಲೂ ತಾವಿಲ್ಲದಂಗೆ ಈ ಎದೆ ಗೂಡನೇ ತಬ್ಬಿ ಹಬ್ಬಿರುವ ನೋವ ಬಳ್ಳಿ, ಮತ್ತದರ ಬೆನ್ನಿಗಂಟಿ ಬರುವ ಸಂವಾದಿ ಬಳಗ...
ಹಂಗೇ 
ಬದುಕ ಬಾಗಿಲಿಂಗೆ (ಪಾಲಿಗೆ) ಬಂದ ಎಂಥದ್ದೇ ಅತಿಥಿಗಳನು ಆದರದಿ ಆದರಿಸುವ ಜನ್ಮ ಸಂಸ್ಕಾರ...
____ ನೋವು ನಗುವಿನ ಮೆಟ್ಟಿಲು...

ಹಾಗಲ್ಲ
ನಾ ಹೇಳಿದಷ್ಟು ಸುಲಭವಾ ನೀ ಸುಖಾಸುಮ್ಮನೆ ನಂಬುವುದು...
ನೋವೆಂದರೆ
ನಗುವವನ ಎದೆಯ ನೋವಿಗೆ ಸಾಕ್ಷಿ ಬೇಕೆಂದರೆ ಆ ನಗುವಲ್ಲೇ ಹುಡುಕಬೇಕಿರುವುದು...
___ ನಗುವನ್ನು ಸುಮ್ಮನೆ ನಂಬಿಬಿಡುವುದೇ ಸುಖವು...
&&&

ವತ್ಸಾ -
ಹೆಗಲೇರುವ ನೋವುಗಳಲ್ಲಿ ಇರುವ ಒಗ್ಗಟ್ಟಿನಲ್ಲಿ ಒಂದಂಶದಷ್ಟಾದರೂ ಗಲ್ಲ ತಿವಿಯುವ ನಲಿವುಗಳಲ್ಲಿದ್ದಿದ್ದಾದರೆ ಸಾಕಿತ್ತು, ನಗೆಯ ಆಯುಷ್ಯವ ಗೆಲ್ಲುವ / ಮೆಲ್ಲುವ ಹಾದಿ ಇಷ್ಟು ಸಿಕ್ಕುಸಿಕ್ಕಾಗಿರುತಿರಲಿಲ್ಲ ನೋಡು...
____ ಒಡೆದ ಕಾಲ್ಬೆರಳಿಗೇ ಎಡವಲೆಂದೇ ಕಾಯುತ್ತಾ ಕೂತಂತಿರುತಾವೆ ಕಲ್ಲುಗಳು...
&&&

ಇಷ್ಟಕ್ಕೂ ಎಲ್ಲಾ ಹೇಳ್ಕೊಂಡು ನಗಬಹುದಾದ ದೇವರಿಂದಲೂ ಒಂದಿಷ್ಟೇನನಾದರೂ ಮುಚ್ಚಿಟ್ಟುಕೊಳ್ಳಲು ಹವಣಿಸುವ ಮನುಷ್ಯರು ನಾವು...
ಬಯಲ ಬೇವರ್ಸಿಯಂತಾಡುವ ನನ್ನೊಳಗೂ ಗುಟ್ಟುಗಳಿಷ್ಟು ಉಳಿದಿರಬಹುದು - ಎನಗೆ ಆನೇ ಹೇಳಿಕೊಳ್ಳಬೇಕಿರುವುದೂ ಎಷ್ಟೋ ಬಾಕಿ ಇರಬಹುದು...
ಇಷ್ಟಾಗಿಯೂ - ನೀ ಮಾತಿಗೆ ಸಿಕ್ಕಾಗ, ಮೌನಕೆ ಹೆಗಲಾಗುವಾಗ ನನ್ನದೆನುವ ಎಲ್ಲಾ ಖುಲ್ಲಂಖುಲ್ಲಾ ಎಂಬಷ್ಟು ಆಪ್ತತೆ ನೋಡು ನೀನೆಂದರೆ ನೇಹವೇ...
___ ನಿಂಗೂ ನಾ ಹಂಗೇನಾ..? ಹಂಗೆಂದಾದರೂ ಆದೇನಾ...??

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು... :)

No comments:

Post a Comment