Saturday, January 25, 2025

ಗೊಂಚಲು - ನಾಕ್ನೂರಾ ಐವತ್ತು ಮತ್ಮೂರು.....

ನೆನಪುಗಳ ಹೊತ್ತು ಊರೆಲ್ಲ ತಿರುಗುತ್ತಿದ್ದೇನೆ.....
(ಭರ್ತಿ ಹದಿನಾಲ್ಕು ತುಂಬಿದ ಭಾವಾಕ್ಷರ ಗುಚ್ಛ.....)  

ಮುಟ್ಟಿದ್ದೆಲ್ಲಾ ಮಣ್ಣಾಗೋದೊಂದು ಕಾಲ
ಮೆಟ್ಟಿದ ಮಣ್ಣೂ ಚಿನ್ನವಾಗೋದೊಂದು ಕಾಲ...

ಭಾವ ಕೋಶ ಖಾಲಿಯಾಗಿದೆ ಅಂದ್ರೆ ಹೊಸತು ತುಂಬಿಕೊಳ್ಳೋಕೆ ಅನುವಾಯ್ತಲ್ಲಾ ಅಂತಾರೆ...
ಆದ್ರೆ,
ನಿದ್ದಂಡಿ ಮುದುಕ ಶೂನ್ಯವ ದಿಟ್ಟಿಸಿ ನಿದ್ದೆಯ ತುಂಬಿಕೊಳ್ಳಬಹುದಷ್ಟೇ...
ಬಣ್ಣದ ಸಾಮ್ಯತೆಯ ಮೇಲೆ ಗುಣವ ಆರೋಪಿಸಿ
ಗದ್ದಲವನೇ ನಾದ ಎಂದು ನಂಬಿಸಲು ಹೆಣಗುತ್ತಾ ನನ್ನ ಬೆನ್ನು ನಾನೇ ತಟ್ಟಿಕೊಂಡು ಬೀಗಬೇಕಷ್ಟೇ...

ಎಷ್ಟೆಲ್ಲಾ ಗೀಚಿಬಿಟ್ಟೆ 
ಒಳಗೆಲ್ಲಾ ಬಣಗುಡುವಾಗ,

ಒಳಹೊರಗು ತುಂಬಿ ತುಳುಕುವಾಗ,
ನುಡಿದದ್ದೆಷ್ಟು, ನುಂಗಿದ್ದೆಷ್ಟು,
ಇರುವುದೆಷ್ಟು, ವೈಭವೀಕರಿಸಿದ್ದೆಷ್ಟು,
ಬರೆದದ್ದೆಲ್ಲಾ ಬರೀ ಭಾವಗಳೇ ಆಗಿರುವಾಗ
ಹಿಂಗೂ ಸತ್ಯ, ಹಂಗೂ ಸತ್ಯ,
ಬರೆವಾಗ ಇದ್ದ ಭಾವ ಓದುವಷ್ಟೊತ್ತಿಗೆ ಇನ್ನೇನೋ ಆಗಿ
ಹೆಂಗೆಂಗೋ ಅನ್ನಿಸುವಾಗ ಯೆಲ್ಲಾನೂ ಮಿಥ್ಯ...
ಸುಳ್ಳು ಪಳ್ಳೆಂದು ಏನನೂ ಗಾಳಿಸದೇ ಬರೆ(ರಿ)ದೇ ಬರ್ದದ್ದು...
ಅಂತಿದ್ದೂ ಓದಿ ಒಲವಿತ್ತವರ ಈ ತಂಪು ಹೊತ್ತಲ್ಲಿ ನೆನೆಯಬೇಕು ನಾನು...

ಮೊಗವ ತೋರುವ ಕನ್ನಡಿ ಅಂತರಂಗವ ಬಿಂಬಿಸುವುದಿಲ್ಲ...
ಎದೆಯ ಓದಲು ಬರೀ ಬೆಳಕು ಸಾಲುವುದಿಲ್ಲ...
ಕನ್ನಡಿಗೂ ಬೇಲಿಯುಂಟು, ಬೆಳಕಿಗೂ ಸೋಲುಂಟು - ನಾ ತೂರಿದ್ದಷ್ಟನ್ನೇ ಅವು ತೋರುವುದು...
ಅಲ್ಲಿಗೆ,
ಎದೆಯ ಒಗಟು ಒಡೆಯಲು ಎದೆ ಎದೆಗಳ ಭಾವ ಬಿಳಲು ಬೆಸೆಯಬೇಕು...
ಈ ಹೊತ್ತು 
ಇಲ್ಲಿಯ ಈ ಅಕ್ಷರ ಆರಾಧನೆಯಿಂದ ಬೆಸೆದ ಭಾವ ಬಂಧಗಳ ಮನಸಾ ನೆನೆಯುತ್ತೇನೆ...
ಅಂಥ ನೀವುಗಳೇ,
ಈ ಎದೆಯ ಸಂದೂಕದ ಕರಗಲಾರದ ಆಸ್ತಿ - 
ಗಳಿಕೆ, ಉಳಿಕೆಯ ನಿಧಿಗಳಲ್ಲಿ ಹೊಳಪು ಮಾಸದ ಪ್ರೀತಿ ಸ್ನೇಹದ ನಗೆಯು...

ಇಬ್ಬರೂ ಒಬ್ಬರ ಒಳಿತಿಗೊಬ್ಬರು ಮನಸಾರೆ ಕಾಯುವ, ಬೇಯುವ ಆಪ್ತ ಒಡನಾಟದ ಬಂಧಗಳೆಲ್ಲವೂ ಗೆಳೆತನವೇ...
___ ಇನ್ನಷ್ಟು ಮತ್ತಷ್ಟು ಹಬ್ಬಿ ತಬ್ಬಲಿ ರುದಯ ರುದಯಗಳ ಭಾವಾನುಬಂಧ - ಅಕ್ಷರ ದಾಸೋಹದ ನುಡಿ ಬಂಧದಿಂದ........ 🤝

&&&

ಮೂರು ವರುಷದ ಹಿಂದೆ 
ಆ ಸಂಕ್ರಾಂತಿಯ ಸಂಜೆ
ಅವಳು ಕೊಡಿಸಿ ಹೋದ ಬಂಡಿ... "🛵"
___ ನೆನಪುಗಳ ಹೊತ್ತು ಊರೆಲ್ಲ ತಿರುಗುತ್ತಿದ್ದೇನೆ...


&&&

ತುಂಬಾ ಸಭ್ಯನಾದ ದೇವರ ಸಂಘ ರುಚಿಸದೂ ಎಂದೆ
ಆ ಮಾತ್ರಕ್ಕೆ 
ದೆವ್ವದ ಸಾಂಗತ್ಯಕೆ ಮೀಸಲಾದವನೂ ಅಂತೇನಲ್ಲ...
"ಮನುಷ್ಯನಾಗುವ ಹಂಬಲವಿದೆ - ಆ ಹಾದಿಯ ಹುಡುಕಾಟವೂ ಇದೆ..."
___ ಜೊತೆಗಿರು...
&&&

ನಿನ್ನೆದುರು, ನನಗೆ ನಾನೇ ಚಂದ ಕಾಣುವಷ್ಟು / ಕಾಣುವಂತೆ ನಗಬಲ್ಲೆನಾದರೆ / ನಗಬಲ್ಲಷ್ಟು ಕಾಲ ಎಂಥಾ ಚಂದ ನಿನ್ನಾss ನೇಹಾನುಬಂಧ...

ಕೊಡುವ ಕೈಯ್ಯ ಔದಾರ್ಯದಲ್ಲಿಯಷ್ಟೇ ಅಥವಾ ಚೂರು ಮಿಗಿಲೇ ಇರಬಹುದು ಕೊಟ್ಟಂತೆಯೇ ಪಡೆವ, ಪಡೆದು ಸಲಹುವ ಯೆದೆ ಪಾತ್ರೆಯ ಸಂಯಮದಲ್ಲಿ ಪ್ರೀತಿ ಜೀವಂತ...
&&&

ವತ್ಸಾ -
ಎಲ್ಲವೂ ನೀನೇ ಅಂದವರದ್ದೂ ಎಲ್ಲವನ್ನೂ ಆವರಿಸುವ ಹಠಕ್ಕೆ/ಚಟಕ್ಕೆ ಬೀಳಬಾರದು...
ಅವರೆಂದಾದರೂ ಲೋಕಾಭಿರಾಮದಲಿ "ಎಲ್ಲ ಸಾಕಾಗಿದೆ" ಅಂದರೂ "ನಾನೂನಾ" ಅನ್ನೋ ಪ್ರಶ್ನೆ ನಮ್ಮೊಳಗೆ ಹುಟ್ಟಿಬಿಡುತ್ತೆ...
___ ಅಲ್ಲಿಗಾಕಥೆ ಮುಗಿಯಿತು...
&&&

ಕರುಳ ಪ್ರೀತಿ ಕಾರುಣ್ಯವೇ -
ಜೀವ ಅನಾಥವಾದರೆ ಉಸಿರೇನೋ ಉಳಿದೀತು - ಭಾವ ನಿಸ್ತಂತುವಾದರೆ ರುದಯ ಹೇಗೆ ತಡೆದೀತು...
ಸುಡು ಸುಡುವ ಶಾಪದಂತಾ ಕತ್ತಲನ್ನಾದರೂ ಕಣ್ಣ ಹನಿಯ ಬಸಿದಾದರೂ ದಾಟಿಬಿಟ್ಟೇನು - ಕಾರಣವಿಲ್ಲದೆಯೂ ಕಾರಣ ಕೇಳುವ, ತುಂಬಿದ ಕಂಗಳಿಗೂ ನಗೆಯ ಒಡ್ಡು ಕಟ್ಟಬೇಕಾದ ಅಚ್ಚ ಬೆಳಕಲ್ಲಿ ನೀ ಕೈಕೊಡವಿಬಿಟ್ಟರೆ ಉಳಿದೆನಾದರೂ ಹೇಗೆ ನಾನು...
___ ಅರಿವೆಲ್ಲ ಮರುಳೂ ಅನ್ನಿಸುವಾಗ...
&&&

ವತ್ಸಾ -
ಎಲ್ಲೆಡೆಯೂ ಕೈಲಾದಷ್ಟು ಒಳಿತನ್ನೇ ಮಾಡು / ಆಡು...
ಆದ್ರೆ,
ಒಳ್ಳೆಯವನಾಗೋ ಹಪಹಪಿ ಬೇಡ ಕಣೋ - ಅವರಿವರ ಕಣ್ಣಲ್ಲಿ...
ಯಾಕೇಂದ್ರೆ,
ಚಂದವ ಕಾಣುವ ಕಂಗಳಲಿ ನಿನ್ನೆದೆಯ ಪ್ರೀತಿ, ಕಾಳಜಿಯ ಮಾಧುರ್ಯವಷ್ಟೇ ಹೊಳೆಯುತ್ತೆ - ಹುಳುಕನ್ನು ಹುಡುಕುವ ಕಣ್ಣಿಗೆ ನೀನೆಂದಿಗೂ ಹಾದಿಗೆದುರಾದ ಅಪಶಕುನವೇ...
ಹಾಗೆಂದೇ,
ನಿನ್ನಂತರಂಗದ ಕನ್ನಡಿಗಷ್ಟೇ ನೀ ಉತ್ತರದಾಯಿಯಾದರೆ ಸಾಕು ನೋಡು...
ಕೊಟ್ಟ, ಕೊಡುವ ಪ್ರೀತಿಯಿಂದ ನಿರೀಕ್ಷೆ ಸಲ್ಲದು - ಪಡೆದ, ಸಿಗುವ ಪ್ರೀತಿಯೆಡೆಗೆ ನಿರ್ಲಕ್ಷ್ಯ ಕೂಡದು...
___ ನಿನ್ನಿಂದ ನಿನ್ನ ಒಳಿತೆಂದರೆ ಅಷ್ಟೇ...
&&&

ಅದೆಲ್ಲಾ ಗೊತ್ತಿಲ್ಲ ನಂಗೆ........
ಕಳೆದು ಹೋದ ಅವಳು, ಹುಟ್ಟನೇ ಅಣಕಿಸುವ ಎದೆಯ ಬಾವು, ಇಷ್ಟು ದೂರ ನಡೆದು ಬಂದ ಅದರ ಕಾವು, ಜೊತೆಯಾಗಿ ಜೊತೆಗುಳಿವ ನೆನಪುಗಳು, ಹಿತವಾದ ಕನಸುಗಳ ರುದಯ ಸ್ಪರ್ಷ, ಇರುವಿಕೆಯೊಂದರಿಂದಲೇ ಇಹದೆಲ್ಲ ಆಗುಹೋಗುಗಳಿಗೆ ಹೆಗಲ ಸಾಂತ್ವನವಾಗೋ ಜೀವ-ಭಾವಗಳ ಜೀವಂತ ರೂಹುಗಳಾದ ನೀವುಗಳು...
ಆಹ್...!!! 
ಈ ಬದುಕಿನ ಕಾರುಣ್ಯ ಬಲು ದೊಡ್ಡದು ಹಾಗೂ ಎಷ್ಟು ವಿಚಿತ್ರ...!! 
ಅಂಗಳದ ಚರಮಗೀತೆಗೆ ಒಳಮನೆಯ ತೊಟ್ಟಿಲ ಲಾಲಿ ಉತ್ತರವಾಗುತ್ತದೆ ಅಥವಾ ಸಮಾ ಉಲ್ಟಾ...
ವೈರುಧ್ಯಗಳನುಂಡು ಅನುಭವಗಳ ಗೊರಸು ತುಳಿದು ತುಳಿದೇ ಕರುಳೀಗ ಹೂಡಿಟ್ಟ ಹಸಿ ನೆಲ - ಎಂತ ಬಿತ್ತಿದರೂ ಫಲವಾಗಿ ಪ್ರೀತಿ ಪೈರು - ನಗೆ ಕಾಳು ತುಂಬಿ ತುಳುಕೋ ಯೆದೆಯ ಹಗೇವು...
ಹಾಗೆಂದೇ, 
ಈ ಹುಟ್ಟು-ಸಾವಿನ ಹಾದಿ ನಂಗೇಂತ ಎತ್ತಿ ಕೊಟ್ಟ ಎಲ್ಲವನ್ನೂ ಅಪಾರ ಪ್ರೀತಿಯಿಂದ ಎದೆಯ ಬಗಲ ಚೀಲದಲಿ ತುಂಬಿಕೊಂಬುದ ಕಲಿತಿದ್ದೇನೆ ಮತ್ತು ಅದಾಗಿ ಹಾದಿ ಹಾಯುವಾಗಿನ ಎಲ್ಲಾ ಸುಂಕಗಳನೂ ಕಟ್ಟಿಯೂ ಈ ತೊಗಲ ಘಟದಲಿನ್ನೂ ಉಸಿರ ಘಟ್ಟಿ ಬಾಕಿಯಿದೆ...
ಅಡಿಗಡಿಗೆ ಮತ್ತದೇ ಮಾತು ಪಕ್ಕಾ ಆಗುತ್ತದೆ - ಇರುವಿಕೆಯೊಂದರಿಂದಲೇ ಇಹದೆಲ್ಲ ಆಗುಹೋಗುಗಳಿಗೆ ಹೆಗಲ ಸಾಂತ್ವನವಾಗೋ ಜೀವ-ಭಾವಗಳ ಜೀವಂತ ರೂಹುಗಳಾದ ನೀವುಗಳು; ಮೂರುತಿಯ ಪೂಜಿಸಿ ದೇವರ ಕಂಡಂತೆ - ನೇಹಿ ಮಡಿಲುಗಳಿಗೆ ಧನ್ಯವಾದವ ಹೇಳಿದರೆ ಇಡೀ ಬದುಕಿಗೇ ಹೇಳಿದಂಗೆ ಲೆಕ್ಕ...
___ ಪ್ರೀತಿಯಿರಲಿ ಬದುಕೇ - ವಿಶ್ವಾಸ ವೃದ್ಧಿಸಲಿ.....

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು... :)

No comments:

Post a Comment