ಪ್ರೀತಿಯ ರೀತಿಯೇ ಬೆಳಗು.....
ಯಾವ ವಾಗ್ದಾನ, ವಾಗ್ದಾಳಿ ಇಲ್ಲ, ನೂರು ಹೇಳಿಕೆ, ಕೇಳಿಕೆಗಳಿಲ್ಲ - ಸುಮ್ಮನೇ 'ಪ್ರೀತಿ ಕೊಡುವುದು' ಕೊಟ್ಟು ಕೊಟ್ಟು ತುಂಬಿ ತೊನೆಯುವುದು ನಿಯತಿಯ ತೀರಾ ಸರಳ, ಸಹಜ ನೀತಿ - ಹೂ ಚಿಟ್ಟೆ ಚಿತ್ತಾರ ಬೆಳಕು...
'ಪ್ರೀತಿ ಪಡೆವ' ಆಶೆಯ ಆನು, ನೀನು - ಕೊನೆತನಕ ಹುಡುಕಿ ಹುಡುಕಿ, ಖಾಲಿಯುಳಿದೇ ಸಾಯುತ್ತೇವೆ ಸಿಗದೇನೇ ಪ್ರೀತಿ ದುಕಾನು...
ಭಾಷೆ, ಭಾಷ್ಯಗಳಲಿಲ್ಲ ಪ್ರೀತಿ ಬೆಳಕು - ಅರಿವ ಸುರಿಯಲಿ ಬೆಳಗು...
ಶುಭದಿನ... 🤝🫂
ಆಲಸ್ಯದ ಸುಖ, ಸುಖದ ಆಲಸ್ಯ ಯಾವುದು ಮೇಲೆಂಬುದನು ತೂಗಲಾಗದ ರಜೆಯ ಮುಂಜಾವು ಮತ್ತು ರಜೆಯೇ ಸುಖ ಅಂತ ಷರಾ ಬರೆದು ಮುಸುಕೆಳೆದುಕೊಳ್ಳುವ ನಾನು...
ಹೊಟ್ಟೇಲಿ ಲವಲವ ಶುರುವಾಗಿ ಬೆಳಕಿಗೆ ಹಾಯ್ ಅನ್ನುವ ಹೊತ್ತಿಗೆ ಹೊತ್ತು ನೆತ್ತಿಗೇರಿ ನಡು ಮಧ್ಯಾಹ್ನ ಬಾಗಿಲಲ್ಲಿರುತ್ತೆ... 🤪
ಶುಭದಿನ... 🙈
ಪ್ರೇಮ ಬೆಳಕನ್ನು ಮಿಂದಲ್ಲಿ ಬನಕೆಲ್ಲ ವಸಂತೋತ್ಸವ - ಬಯಲ ಮೂಲೆಯ ಒಂಟಿ ಹೂವಿಗೂ ಹರೆಯ...
ಆ ಸಂಭ್ರಮಕೆ ಕುಣಿವ ಗಾಳಿಯ ಮೈನವಿರಿಂದ ಊರ ಉಸಿರಲೆಲ್ಲ ಪ್ರೇಮದ ಘಮ...
ಪ್ರೇಮಿಯ ಕುರುಡನ್ನು ಪ್ರೇಮಕಂಟಿಸದೇ ನೋಡುವಲ್ಲಿ ಪ್ರೇಮ ಬೆಳಕು...
ಶುಭದಿನ... 🤝🫂
ಮಳೆಯ ಮಿಂದ ಹೊಳೆಯಲಿ ತುಂಬಿ ಹರಿವ ಬೆಳಕು...
ಬಯಲೇನು ಬೇಲಿ ಗೂಟದಲೂ ಹಸಿರ ಹೊನ್ನ ಬಸಿರು...
ಮಳೆಕಾಡಿನ ಊರು ನನ್ನದು, ಹಸಿ ಮಣ್ಣ ಘಮ ಮೆತ್ತಿದ ಉಸಿರು...
ಬಾನು ಭುವಿ ಪ್ರೇಮ ಪಾಕ - ಅರಳಿದ ಹಸಿ ಹಸಿರ ಬೃಂದಾವನ - ಬೆಳಕಿನುತ್ಸವ...
ಬೆಳಗಾಯಿತು... 🫂🤝
ಹೂವೆದೆಯ ಪಾಡನು ಕೊರಳೆತ್ತಿ ಹಾಡುವ ಹಕ್ಕಿಗೊರಳಿನ ಇಂಚರ...
ಚಿಟ್ಟೆ ಪಾದಕಂಟಿದ ಹೂವ ಘಮಲಿಂದ ಬಯಲಿನೊಡಲ ತುಂಬಿ ಬೆವರುವ ಯೌವನ...
ಯೆದೆ ಕದವ ತೆರೆದು ಮೌನವನಾಲಿಸೆ ಮಧುರ ಸಂಭಾಷಣೆಯ ಪ್ರೀತಿ ಸಂಯೋಜನೆ ಈ ಬೆಳಗು...
ಧ್ಯಾನವೆಂದರೂ ಇಷ್ಟೇ, ಬೆವರುವ ಯೆದೆಯ ಹಾಡು ಕೇಳುವುದು - ಎನ್ನದು, ನಿನ್ನದೂ...
ಶುಭದಿನ... 🫂🤝
ಬೆಳಕಿನ ಸ್ಪರ್ಷಕೆ ಅರಳಿದ ಹೂವಿನ ಮೈ ಗಂಧವನ್ನು ಗಾಳಿಯೂ, ಪರಾಗವನ್ನು ಚಿಟ್ಟೆ ಪಾದವೂ ಊರಿಗೆಲ್ಲಾ ಹಂಚಿ ಸಂಭ್ರಮಿಸುವುದ ಕಾಂಬಾಗ, ಮಗುವಿನೆದೆಯ ಶುದ್ಧ ಬೆರಗಿನಂಥಾ ಪ್ರೇಮಕ್ಕೆ ನಿಷ್ಠೆಯ, ಪಾವಿತ್ರ್ಯದ ಪರಿಭಾಷೆಯ ವ್ಯಾಖ್ಯಾನ ಮಾಡಲು ನನ್ನಲ್ಲಿ ಸಣ್ಣಗಾದರೂ ಮುಜುಗರವಾಗಬೇಕೇನೋ...
ಶುಭದಿನ... 🫂🤝
ಬೆಳಕು ಚೂರು ಮುಖ ತಿರುವಿದರೂ ಕತ್ತಲು ಕದ ಹಾಕಿಕೊಳ್ಳುತ್ತದೆ...
ಎಲ್ಲ ಒಡೆದು ತೋರುವ ಬೆಳಕೂ ತನ್ನ ಬೆನ್ನ ಮೇಲೆ ಕತ್ತಲು ಬರೆದಿಟ್ಟ ಗುಟ್ಟನು ಅರಿಯಲಾಗದೇ ಅದನು ತನ್ನದೇ ನೆರಳು ಅಂತ ಕರೆದು ಸುಮ್ಮನಾಗುತ್ತದೆ...
ನಾನು ಇರುಳ ಎದೆಯ ಮೇಲೆ ಬರೆದ ನಮ್ಮ ಜೋಡಿ ಹೆಸರನು ಓದಲು ಬೆಳಗಿಗಾಗಿ ಕಾಯುತ್ತೇನೆ...
ಪ್ರೀತಿಯಿಂದ ಕಾದಿಡುವ ಕೆಲವು ಗಪ್‌ಚುಪ್ (ಮಾತು)ಘಳಿಗೆಗಳಿಗೂ ಪ್ರೀತಿ ಎಂದೇ ಹೆಸರು...
ಶುಭದಿನ... 🫂🤝
ಕೋಳಿ ಕೂಗಿ ಬೆಳಗಾಗುವುದಿಲ್ಲ...
ಆದರೆ,
ಅರುಣೋದಯದ ಮೊದಲ ಕಿರಣಕ್ಕೆ ಸರಿಯಾಗಿ ಎದ್ದು ಕೂರುವ ಕೋಳಿ ಯೆದೆಯಲ್ಲಿ ಬೆಳಕಿನ ಅಲಾರಾಂ ಇರಬಹುದು ನೋಡು...
ಇರುವೆಗಳ ಕೇಳಿ ಋತುಮಾನ ಬದಲಾಗುವುದಿಲ್ಲ...
ಆದರೂ,
ಸದಾ ಗಡಿಬಿಡಿಯಲೇ ಓಡಾಡೋ ಇರುವೆಗಳ ಕೊರಳಲ್ಲಿ ಋತುಗಳ ದಿನದರ್ಷಿಕೆ ಇರಲಿಕ್ಕೆ ಸಾಕು...
ಕಾಣುವ ಮನಸಿದ್ದರೆ ಇಂಥದು ಪ್ರತಿ ಹೆಜ್ಜೆಗೂ ನೂರಾರಿದೆ ನೋಡು...
ಅದಕೇ,
ನನ್ನ ದೊಡ್ಡಸ್ತಿಕೆ ಕಳೆಯಲು ಸುತ್ತಣ ಸೃಷ್ಟಿಯ ಬೆಳಕಿಗಿಷ್ಟು ಬೆರಗಿನ ಕಣ್ಬಿಟ್ಟು ಕೂರಬೇಕು...
ಅರಿವು - ಬೆಳಗು... 🤝🫂
ಪ್ರೀತಿಯಲ್ಲಿ ಸೋಲೇ ಇರಲಿ;
ಆದರೆ,
ಪ್ರೀತಿ ಸೋಲದಿರಲಿ...
'ನಾನು' ಎಂಬ ಧಾಡಸಿ ಭಾವ ನನಗೆ ನನ್ನ ಕಾಯ್ದುಕೊಡುವಷ್ಟಿರಲಿ;
ಆದರದು
ನಿನ್ನ ಕಳೆದುಕೊಳ್ಳುವಷ್ಟು ಅಹಂಭಾವವಾಗಿ ಬೆಳೆಯದಿರಲಿ...
ನೋಡಲ್ಲಿ,
ಗಗನದ ತಾರೆಯ ಬೆಳಕು ಭುವಿಯ ಹುಳವ ತಾಕಿ ಉಸಿರು ಹರಿದಲ್ಲೆಲ್ಲ ಪ್ರೀತಿ ಸಂಚಾ(ಸಾ)ರ...
ಪ್ರೀತಿ ಪ್ರೀತಿ ಬೆಳಗು - ಪ್ರೀತಿಯ ರೀತಿಯೇ ಬೆಳಗು...
ಶುಭದಿನ... 🫂🤝
ನೇಹವೇ -
ನನ್ನೆದೆಯಲಿ ನಾ ಹಡೆದು ನಿನ್ನುಡಿಯಲಿಟ್ಟ ಶುಭ ನುಡಿಯೊಂದ ನೀ ಮೆಚ್ಚಿ ಧರಿಸಿ ನಿನ್ನ ತುಟಿಯಂಚಲಿ ಸಣ್ಣ ನಗೆ ಮುಗುಳು ಅರಳಿದರೆ ಶುಭವು ಪಡಿನುಡಿದು ನನ್ನಾ ದಿನವೆಲ್ಲಾ ಶುಭವೇ ಶುಭ...
ನಿನ್ನ ತಾಗಿ ಮರುನುಡಿದು ನನ್ನ ತೂಗುವ ಶುಭದ ಸಂಗೀತ - ಶುಭದಿನ... 🤝🫂
ನಮ್ಮ ಬಾಳ ಯಜ್ಞದ ಕೊಟ್ಟ ಕೊನೆಯ ಹವಿಸ್ಸಾಗಿ ನಮ್ಮದೇ ಉಸಿರನು ಪಡೆವ ಕಾಲ...
ಅದೇ ಕಾಲವು ಅದಕೂ ಮೊದಲು ಉದ್ದಕೂ ರಾತ್ರಿಯೆದುರು ಹಗಲು, ಬೆಳಗಿನಾಚೆ ಇರಳನು ವಿಚಿತ್ರ ಸಚಿತ್ರ ಭರವಸೆಯಾಗಿ ನಮ್ಮೆದುರು ಸಮಾಽಽ ಹಂಚುತ್ತದೆ...
ಹಳೆಯದನು ತೊಳೆದು ಹೊಸದನಾಗಿಸಿ ಕೊಡುವ ಪ್ರತಿ ದಿನವೂ ಕಾಲ ನಮಗೆಂದೇ ಎತ್ತಿಕೊಟ್ಟ ಪ್ರೀತಿಯ ಹೊಸ ದಿನವೇ ಅನಿಸುತ್ತದೆ...
ಇಂತಿಪ್ಪಲ್ಲಿ -
ಮುಗಿದುಹೋಗುವುದು ಕೂಡಾ ಒಂಥರಾ ನೆಮ್ಮದಿಯೆನಿಸಿ...
ಶುಭದಿನ... 🤝🫂
ಬೆಳಕಿನ ಕಿಡಿಯೊಂದಿಗೆ ಶುಭದ ಹುಡಿಯೊಂದು ನಿನ್ನ ಒಳಮನೆಯ ಸೇರಲಿ...
ನಿತ್ಯಾಲಾಪಕೆ ಲಾಸ್ಯದಲಿ ಮೈಮುರಿವ ನಿನ್ನ ಕಂಣ್ಣಂಚಲಿ ನಗುವೊಂದು ಅರಳಲಿ...
ಪ್ರೀತಿ ದುಂಬಿಗೆ ನಗೆಯ ಔತಣ ಸಿಕ್ಕರೆ ದಿನವೆಲ್ಲ ಹಾಡು ಹಬ್ಬ...
ಶುಭದಿನ... 🤝🫂
ನೂರು ಮಾತಿಗೆ ಬರಾಬರಿ ಒಂದು ಸ್ಪರ್ಶ ಅಂತಾರೆ ಅಥವಾ ಮಿಗಿಲೇ ಇರಬಹುದು...
ಹಾಗಿದ್ದರೆ,
ನಿತ್ಯ ನಿರಂತರ ಅನಂತವ ತಬ್ಬುವ, ಹಬ್ಬುವ ಬೆಳಕಿನೊಡಲಿನ ಪ್ರೀತಿಯ ತೂಕವೆಷ್ಟಿರಬಹುದು...!!
ಬೆಳಕು ಹಬ್ಬಿ ಪ್ರೀತಿಯಾ...? ಪ್ರೀತಿ ತಬ್ಬಿ ಬೆಳಕಾ...? ಚರ್ಚೆಯೇ ಬೇಡ ಬಿಡು - ಒಂದರೊಳಗೊಂದು ತಳಕಂಬಳಕ...
ತಬ್ಬಿದರೆ ಬೆಳಕನೇ ತಬ್ಬು - ಹಬ್ಬಿದರೆ ಪ್ರೀತಿಯಾಗಿ ಹಬ್ಬು...
ತನ್ನೊಂದು ಕಿರುಬೆರಳ ಸ್ಪರ್ಶದಲಿ ಜಡವನೆಲ್ಲ ತೊಳೆದು, ಜಗವನೆಲ್ಲ ಅರಳಿಸುವ ಹಂಚಿ ಖಾಲಿಯಾಗದ ರಾಶಿ ರಾಶಿ ಪ್ರೀತಿ ಪ್ರೀತಿ ಬಣ್ಣಾ ಬಣ್ಣ ಬೆಳಗು...
ಶುಭದಿನ... 🤝🫂
*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು... :)
ಜಗುಲಿಗೆ ಇಣುಕಿದ ಚಂದಿರ; ಮನಮಂದಿರದಿ ಮೂಡಿಸುವ ಭಾವಗಳೆ ಸುಂದರ... ಕ್ಷಣ ಕ್ಷಣಕೂ ಅದಲುಬದಲಾಗುವ ನನ್ನೊಳಗಿನ ನನ್ನದೇ ಭಾವಗಳು ನನ್ನನೇ ಬೆಚ್ಚಿಬೀಳಿಸುತ್ತವೆ ಹಲವೊಮ್ಮೆ...
Saturday, October 4, 2025
ಗೊಂಚಲು - ನಾಕ್ನೂರಾ ಎಪ್ಪತ್ತು ಮತ್ತೊಂದು.....
Subscribe to:
Post Comments (Atom)
No comments:
Post a Comment