ಬೆಳಗು ಜೀವನ್ಮುಖಿ.....
ಶುಭಕೋರಲು ಪದಗಳಿಲ್ಲಾ ಎಂದು ತಲೆಕೆರ್ಕೊಂಡು ಹಾಸಿಗೆಯಲೇ ಕೂತಿದ್ದೆ...
ಬಾಗಿಲಲಿ ಬೆಳಕು ಎಂದಿನಂತೆ ನಕ್ಕಿತ್ತು - ಶುಭವು ನನ್ನ ಪದಗಳಲಿಲ್ಲ ಅಂದಂತಾಯ್ತು...
ತನಗಿಂತ ಶುಭವಿನ್ನಿಲ್ಲ ಎಂಬಂತೆ ಮೈದಾಳಿದ ಬೆಳಗಿನ ಪ್ರೀತಿಯ ಎಳೆ ಬೆಳಕು ಎಲ್ಲೆಲ್ಲೂ ಮುಗುಳ್ನಗುವಾಗಿ ಅರಳಿತ್ತು...
ನಾನಿಷ್ಟು ಹೆಕ್ಕಿಕೊಂಡು ನಿನ್ನೊಡನಿಷ್ಟು ಹರವಿಕೊಂಡು ಬೆಳಗು ನಗುವಾಗಿ, ಒಲವಾಗಿ, ಶುಭದ ಹಾಡಾಗಿ ಯೆದೆಯಿಂದಲೆದೆಗೆ ಹರಿಯಿತು...
ಶುಭದಿನ... 🤝🫂
ನಿನ್ನೆ ಉಂಡ ಪ್ರೀತಿಯ ನೆನಪು,
ನಾಳೆ ಉಡಬಹುದಾದ ಸುಖದ ಕನಸು,
ಇಂದೀಗ ಮನದುಂಬಿ ಬೀರಿದ ನಗೆಯ ಹೊನಲು,
ಇಂತೆಲ್ಲಾ ಒಳನಾಡಿ/ಒಡನಾಡೀ ಶುಭದ ಬೀಜ ಮಂತ್ರ - ಎದೆಯ ಬೆಳಕು...
ಯೆದೆಯೆದೆಗಳ ಗೂಡು ಹೆಣೆಯಲು ಎಳೆ ಎಳೆ ಒಲವ ಸುರಿದು ಯೆದೆಯ ಬೆಳಗಲಿ ಬೆಳಗು...
ಶುಭದಿನ... 🤝🫂
ಪ್ರೀತಿಯನು ಪ್ರೀತಿಯಿಂದ ಕಾಣುವುದಾದರೆ, ಆಸ್ಥೆಯಿಂದ ಪ್ರೀತಿಯನೇ ಜೀವಿಸುವುದಾದರೆ ಪ್ರತಿ ವಾರ, ತಿಥಿ, ನಕ್ಷತ್ರ ಎಲ್ಲವೂ ಪ್ರೀತಿಯನೇ ಹೇಳುತ್ತವೇನೋ...
ಪ್ರತಿ ಚರಣವೂ, ಪ್ರತಿ ಕರಣವೂ ಪ್ರೀತಿಯನೇ ಹರಿಸುತ್ತದೇನೋ...
ಯೆನ್ನೆದೆಯಲೊಂದು ಬೆಳಗಿನ ಕಣ್ಣಿದ್ದರೆ - ಈ ಕ್ಷಣ, ಆ ಕ್ಷಣ, ಕ್ಷಣ ಕ್ಷಣವೂ ಪ್ರೀತಿಯ ಕರುಳ ಕಿರಣಗಳ ಕುಡಿಗಳಾಗೇ ತೋರುವುದೇನೋ...
ಶುಭದಿನ... 🤝🫂
ಯೆದೆಯ ನೂರು ನಲ್ಮೆ ಭಾವಗಳ ತಟ್ಟಿ ಎಬ್ಬಿಸೋ ಬೆಳಗೆಂಬ ಭಾವಗೀತೆ...
ಬೊಡ್ಡು ಬುರುಡೆಯ ಕತ್ತಲ ಮುಸುಕು ಸರಿಸಿ ಪ್ರೀತಿಗೆ ಕಣ್ಬಿಟ್ಟರೆ ಹೂ, ಹಕ್ಕಿ, ಹಗುರ ಮನಸು...
ಶುಭದಿನ... 🤝🫂
ನಿನ್ನೆಗಳಲಿ ಅದೆಷ್ಟೇ ಸೋಲೂ, ನೋವುಗಳೂ ಗುಮಿಗೂಡಿದ್ದರೂ, ಇಂದು ಎಲ್ಲಾ ಒಳಿತಾಗುವುದು ಯೆಂಬ ಭರವಸೆಯನು, ನಾಳೆಗಳಲಿ ಶುಭವೇ ತುಂಬಿರುವುದೆಂಬ ಕನಸನೂ, ಕಸರಿಲ್ಲದೇ ಹುಟ್ಟುಹಾಕಿ ಪ್ರತಿ ಬೆಳಗೂ ಎದೆ ಬಡಿತಕೊಂದು ಹೊಸತೇ ಕಸುವ ತುಂಬಿಕೊಡುತ್ತದಲ್ಲ - ಅದಕೇ ಹೊಸ ಬೆಳಗೆಂದರೆ ಹೊಸಾ ಬೆಳಕಿನ ಪ್ರೀತಿ ಪಯಣ ಎಂಬುವುದು...
ಶುಭದಿನ... 🤝🫂
ಬೆಳಕಿನ ಕಿಡಿ ಹೂವ ಕಣ್ಣನು ಮುದ್ದಿಸಿ ದಿನದ ಬಾಗಿಲಿಗೆ ಬಣ್ಣಾಬಣ್ಣದ ಸಿಂಗಾರ...
ಹೂವರಳಿ ಬೆಳಕಿನ ಪ್ರೀತಿಗೆ ಪ್ರೀತಿ ಹೇಳಿ ಊರೆಲ್ಲಾ ಸುಗಂಧಮಯ...
ಕೇಸರವನುಂಡು ಹಿಗ್ಗಿ ತೇಗಿದ ದುಂಬಿ ಕೊರಳಿಂದ ಜೀವರಾಗ ಸುಪ್ರಭಾತ...
ಶುಭೋದಯ... ಶುಭದಿನ... 🤝🫂
ಬೆಳಕಿನ ಬಳ್ಳೀಲಿ
ಪ್ರೀತಿಯ ಹೂವರಳಿ
ಜಗದ ಯೆದೆಯಲ್ಲಿ
ಕಣ್ಣಿಟ್ಟು ನಗುವಾಗ
ಬೆಳಗಾಯಿತೆಂಬರು...
ಜೀವದ ಜಡ ಹರಿದು
ಬೆಳಕಾಯಿತೆಂಬರು...
ಶುಭದಿನ... 🤝🫂
ಬೆಳ್ಳಾನೆ ಬೆಳಗೆದ್ದು
ಬೆಳಕಿನ ಗಣಿ ಬಗೆದು
ನಗೆಯ ಬಂಗಾರವ ಹೆಕ್ಕಿ ತಂದು
ಯೆದೆಯ ಬಳ್ಳವ ತುಂಬಿಕೊಳ್ಳುವಾ...
ಅದನೇ ಹಂಚಿ ಹರಡಿ ನಲಿಯುವಾ...
ಅಲ್ಲಿಗೀ ದಿನವು ಶ್ರೀಮಂತ...
ಶುಭದಿನ... 🤝🫂
ಕಣ್ಣರಳಿಸಿ ಬೆಳಕನು ಪ್ರಾರ್ಥಿಸಿ
ಯೆದೆ ಭಾಂಡವ ಪ್ರೀತಿಯಲಿ ತುಂಬಿಕೊಂಡು
ಸುತ್ತೆಲ್ಲ ನಗೆಯ ಬಣ್ಣಗಳ ಹಂಚಿದರೆ
ಶುಭದಿ ಸಂಪನ್ನ ಮುಂಜಾವು...
ಪ್ರೀತಿ ನಗೆ ಹೊನಲು ಬೆಳಗು...
ಶುಭದಿನ... 🤝🫂
ಬೆಳಕನು ಗುಣಿಗುಣಿಸಿ ಬಂದ ಪ್ರೀತಿ ಉತ್ತರಕೆ ನಿನ್ನ ಹೆಸರು...
ಅದಕೇ,
ಬೆಳಗೆಂದರೆ ನಿನ್ನ ನೆನಪು, ಕನಸುಗಳ ಬಿಸಿ ಉಸಿರು...
ಪ್ರೀತಿ ಬೆಳಗು...
ಶುಭದಿನ... 🤝🫂
ಬೆಳಕಿನ ಬಯಲಲಿ
ಪ್ರೀತಿಯ ಬೀಜ ಬಿತ್ತಿ
ನಗೆಯ ಬೆಳೆ ಬೆಳೆದು
ಅದನೆ ಉಂಡು, ಅದನೇ ಹಂಚಿ
ರುದಯಗಳ ಬೆಳಗಿಕೊಳ್ಳುವಾ...
ಬೆಳಗಾಯಿತು... 🤝🫂
ಬಿದ್ದ ಮರದ ಗೆಲ್ಲುಗಳಲಿ ಯಾವ ಹಕ್ಕಿಯ ಗೂಡಿತ್ತೋ...!!
ಉದುರಿದ ಚಿಗುರೆಲೆಗಳಿಗೆ ಯಾರು ಹೇಳಿಯಾರು ಸಂತಾಪ...!!
ಈ ಹೊತ್ತು ಕೋಗಿಲೆ ಅದೇ ರಾಗದಲಿ ಚರಮಗೀತೆಯ ಹಾಡುತಿರಬಹುದಾ...!!
ಚಿತ್ರಗುಪ್ತನ ಲೆಕ್ಕದ ಪಟ್ಟಿಯಲೂ ಇದೆಲ್ಲಾ ಲೆಕ್ಕಕ್ಕಿಲ್ಲದ ಚಿಲ್ಲರೆ ಬಾಬ್ತಿರಬಹುದಾ...!!
ಇಂತೆಲ್ಲ ಹುಚ್ಚು ಜಿಜ್ಞಾಸೆ ಸರಿಯಾ......!!
ರಣ ಗಾಳಿಯ ಕೈಹಿಡಿದು ಸುರಿದ ಮಳೆಯ ಮರು ಹಗಲು ಎಂದಿನಂತೆಯೇ ಬೆಳಗಾಗಿದೆ...
ಎಲ್ಲ ಅವಗಡಗಳ ಮಗ್ಗುಲಲೇ ಎಲ್ಲಾ ಎಂದಿನಂತೆಯೇ ಮುಂದೋಡುವುದನೇ ಶುಭವೆನ್ನುವುದೇನೋ...!!
ಎಂದಿನಂತೆ ಶುಭದಾಶಯ - ಶುಭದಿನ... 🤝🫂
ಕರುಣದಲಿ ದುಡಿದುಡಿದು ಪ್ರೀತಿಯ ಹಂಚುವ ಯೆದೆಗಳಾಳದ ಬೆಳಕು ಜಗದಗಲ ಪಸರಿಸಲಿ...
ಗೊಬ್ಬರದ ಪ್ರೀತಿ ಹೂವಾಗಿ ನಕ್ಕು, ಹಣ್ಣಾಗಿ ಮಿಕ್ಕು, ಬೆಳಗು ಪ್ರೀತಿಯ ನಾಂದಿ ಗೀತೆ...
ಶುಭದಿನ... 🤝🫂🫂
ಭುವಿಯೊಡಲ ಗುಡಿ ನೆತ್ತಿಗೆ ಮುಡಿ ಬಾಗಿ ಮುದ್ದಿಟ್ಟು ಪ್ರೇಮ ವರ್ಷದ ಉಡಿ ತುಂಬಿದ ಮಡಿ ಮಡಿ ಎಳೆ ಹಗಲು - ಆಡ್ಮಳೆಯ ಬೆಳಗು...
ಪ್ರೀತಿ ಹುಡಿಯ ಘಮದ ಶುಭದಿನ... 🤝🫂
ಬಾನುಡಿಯ ಬೆಳಕು
ಭುವಿಯೊಡಲ ಮೊಳಕೆ
ಜಗದಗಲ ಪ್ರೀತಿ ಸಂಚರಣ...
ಬೆಳಗು ಪ್ರೀತಿಯ ಹೆಸರು/ಉಸಿರು...
ಶುಭದಿನ... 🤝🫂
ಸುಮನಸುಗಳ ನೂರು ನೂರಾರು ಒಳಿತಿನ ಪ್ರಾರ್ಥನೆಗಳು ಫಲಿತು
ಪ್ರೀತಿ ಬೀಜ ಮೊಳೆತು
ನಗೆಯ ಫಲ ಕಳಿತು
ಸುಶಾಂತ ದಿನದ ಶುಭಾರಂಭ ಬೆಳಗು...
ಶುಭೋದಯ... 🤝🫂
ಹೂವಿನ ಅರಳುವ ಹಂಬಲಕೆ ಇಂಬು ಕೊಟ್ಟ ಬೆಳಕೇ ಜೇನಿನಾಸೆಯ ದುಂಬಿಗೆ ಹೂವಿನ ದಾರಿಯನೂ ತೋರುತ್ತದೆ...
ಚಿಗುರಿ ಬೆಳಗುವುದೆಲ್ಲ ಪ್ರೀತಿಯ ಫಲವಾದರೆ, ಬೆಳಕು ಪ್ರೀತಿಯ ಮೂಲ...
ಅವಿರತ ಪ್ರೀತಿಯ ಪಡ್ಚಾಕ್ರಿ ಮಾಡೋ ಬೆಳಕು ತನ್ನ ಹಾದಿಯಲಿ ನನಗೊಮ್ಮೆ ನಿನ್ನ/ನಗೆಯ ಪರಿಚಯಿಸಬಹುದು...
ಚಂದ ಬೆಳಗಿನ ಶುಭಕಾಮನೆ... 🤝🫂
*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು... :)

No comments:
Post a Comment