Wednesday, October 28, 2026

ಗೊಂಚಲು - ನಾಕ್ನೂರ್ತೊಂಭತ್ತೈದು.....

ನಡುರಾತ್ರಿಯ ಜ್ಞಾನೋದಯ.....

ಶಾಶ್ವತ ಸುಖವೆಂಬೋದು ಶಾಶ್ವತ ಹುಡುಕಾಟವಷ್ಟೇ; ಅದು ಶಾಶ್ವತವಾ ಗೊತ್ತಿಲ್ಲ - ಯಾರಿಗೋ ಸಿಕ್ಕಿದ್ದು, ಯಾರೋ ಯಾರಿಗಾದರೂ ತೋರಿಸಿದ್ದಂತೂ ವಿರಳ ಸತ್ಯವಲ್ವಾ... 
ಅದಕೇ,  
ಎನ್ನಂತಾ ಸಾಮಾನ್ಯರಲಿ ಸಾಮಾನ್ಯನಿಗೂ ಅನುಭವವೇದ್ಯವಾಗಿ ದಕ್ಕುವ ಕ್ಷಣ ಕ್ಷಣಗಳ ಕಣ ಕಣವನೂ ಹೀರಿ ಕ್ಷಣಿಕಗಳ ಒಟ್ಟು ಮೊತ್ತದಿ ಬದುಕಿನ ಒಟ್ಟಂದವ ಕಾಣವುದೇ ವಿಹಿತ ಅಂತೀನಿ... 
ಬೆಳಗಿನಷ್ಟೇ ಇರುಳೂ ಪಕ್ಕಾ ಅಂದಮೇಲೆ, ಬೆಳಕು ಕರುಣಿಸುವ ಸಚ್ಚಿದಾನಂದ ಸತ್ಯವಾದರೆ ಕತ್ತಲು ತೋರುವ ಕ್ವಚಿತ್ ಆನಂದವೂ ಸತ್ಯವೇ ಅಲ್ಲವಾ... 
___ ಈ ಕ್ಷಣದಂದದ ಆನಂದದ ನಶೆ ಏರಿಸಿಕೊಂಡ ಸಾಮಾನ್ಯನು ನಾನು... 
&&&

'ನನ್ನಿರವನು ಸಂಭ್ರಮಿಸದವರ ಜೊತೆ ನಾನೇಕಿರಲೀ' ಅಂದ್ಲು; ಅವರ ಮೇಲಿನ ಕೋಪ ಕಣ್ಣಲ್ಲಿ ರವರವ ಅಂತಿತ್ತು... 
'ನಿನ್ನನ್ನು ನಾವಿಬ್ಬರೂ ಸೇರಿ ಸಂಭ್ರಮಿಸ್ವಾ', ಗೋಧೂಳಿ ಹೊತ್ತಿದು ಹೂಂ ಅಂದುಬಿಡು ಆಗದಾ ಅಂದೆ...
ರಣ ಕೋಪವೀಗ ನನ್ನ ಮೇಲೆ ತಿರುಗಿತು... 
ಥೂ... ಅಸಹ್ಯ ನುಡಿಬೇಡ...
ಸಲಹಿಕೊಳ್ಬೇಕು ಕಣೋ ಶ್ರೀ, ಪ್ರೀತೀನ; ಸಹಿಸಿಕೊಳ್ಳೋದಲ್ಲ...
ಹಾಂ... ಸತ್ಯಸ್ಯ ಸತ್ಯ‌.. ಆದ್ರೆ ಪ್ರೀತಿಯನು ಸಲಹಿಕೊಳ್ಳೋದಂದ್ರೆ ಅವರು 'ನಿನ್ನಿರವನ್ನ' ಸಂಭ್ರಮಿಸೋದಾ ಅಥವಾ 'ನಿಮ್ಮಿರವು' ನಿನ್ನ ಆತ್ಮಸ್ತ ಸಂಭ್ರಮದ ತಾಯ್ಬೇರಾಗುವುದಾ? ಕೇಳಿ ಸುಮ್ನಾದೆ...
ಒಂದು ಕ್ಷಣ ಅವಳ ಬಿಡುಗಣ್ಣಲ್ಲಿ ಅಲೆಗಳು ಸ್ಥಬ್ದ ಚಿತ್ರ...
ನಿನ್ನನ್ನು ನೀನು ಸಂಭ್ರಮಿಸಲೂ ಅವರೇ ಬೇಕಿರುವಲ್ಲಿ ನಿನ್ನಿರವು ಹೇಗೆ ಬೇರೆ ಮೆರವಣಿಗೆಯಾಯಿತು ಅಂತಂದು ಮಾತು ಮುಗಿಸಿದೆ...
ಕರೆ ಅವರದ್ದೇ ಇರಬೇಕು - ಕೋಳಿ ಜಗಳ ಮುಂದುವರಿದಿದೆ... 
___ ಪಾಪ ನಾನು - ಒಂಟಿ ನಡಿಗೆ ಮುಂದುವರಿಸಿದೆ...
&&&

ಪ್ರೇಮ ಬೆಳಕು ಅಂತಾರೆ - ಬೆಳಕಲ್ಲಿ ಪ್ರೇಮಿಸಲು ಹೆದರುತಾರೆ...!!
ಕಾಮ ಕೂಪ ಅಂತ ಹಳಿಯುತಾರೆ - ಕಾಮವಿಲ್ಲದೇ ಪ್ರೇಮವ ಅದ್ಹೇಗೆ ಹಡೆಯುತಾರೆ...!! ಬೆಳೆಯುತಾರೆ...!!!
ದೇವನು ಅಮೂರ್ತ ಅನ್ನುತ್ತಲೇ ಅವನ ಚಂದ ಚಂದ ಮೂರ್ತಿಗಳ ಕಡೆದವರು ನಾವು... 
ಗೋಪುರಕೆ ಶ್ರೇಷ್ಠತೆಯ ಮೆತ್ತಿ, ಮೆಟ್ಟಿ ನಿಂತ ಮೆಟ್ಟಿಲನು ಮರೆಯುವುದಾ...
ನೆಲವ ತಬ್ಬಿ, ಮುಗಿಲ ಹಬ್ಬಿ ಮೋಹಕ ಮಾಯೆಗಳಲಿ ಸಹಜವಾಗಿ ಸಂವಾದಿಸುವುದು ಅಷ್ಟು ಕಷ್ಟವಾ...?!
___ ಪ್ರೇಮ - ಕಾಮ - ಪೊಳ್ಳು ಪಾವಿತ್ರ್ಯ... 
&&&

ವತ್ಸಾ -
ಹೊರಗಿಂದ ಒಂದಿಷ್ಟು ಭಾವನಾತ್ಮಕ ಸಂವೇದನೆಗಳ ಅಪೇಕ್ಷೆ ಪ್ರತಿ ಜೀವಿಯಲೂ ಸಹಜವಾಗಿ ಇದ್ದೇ ಇದೆ - ಅದು ತಪ್ಪಲ್ಲವೇ ಅಲ್ಲ... 
ಆದ್ರೆ ನಾವು ಮನುಷ್ಯ ಪ್ರಾಣಿಗಳು "ಇಂಥದ್ದೇ ವ್ಯಕ್ತಿಯಿಂದ ಇಂತೆಲ್ಲಾ ಸಂವೇದನೆಗಳು ಸಿಗಬೇಕು, ಆ ವ್ಯಕ್ತಿ ಮತ್ತು ಅವರ ಸಂವೇದನೆಯೂ ಇಂಥದ್ದೇ, ಇಂತಿಷ್ಟೇ ಸಂಯೋಜನೆಗಳಲಿ ಬೇಕು" ಅಂತ ಬಯಸಿ ಬೇಟೆಗೆ ಹೊರಡ್ತೀವಲ್ಲ, ಅಲ್ಲೇ ನಮ್ಮ ಭಾವ, ಬಂಧ, ಸಂಬಂಧಗಳ ಸೋಲು ಮತ್ತು ನೋವಿನ ಮೂಲವಿರೋದು... 
ನಮ್ಗೆಲ್ಲಾ, ತರಹೇವಾರಿ ಹೆಸರುಗಳ ಅಲಂಕಾರ, ಅಹಂಕಾರಗಳಿಲ್ಲದ ಭಾವ, ಬಂಧಗಳ ಸಹಜ ಸೌಂದರ್ಯದ ಬಗೆಗೆ ಏನಂಥಾ ಭಯವೋ ಕಾಣೆ...
___ ಅಲ್ಲಲ್ಲಿ ಸಿಕ್ಕ ಇನಿತು ನೇಹವನು ಅಂತಂತೇ ಅನುಭಾವಿಸಲರಿಯದೇ, ಇಲ್ಲೇಲ್ಲೋ ಬೇಕಾದಂತೆ ಸಿಗದ ಪ್ರೇಮದ ಅನುಭವಕಾಗಿ ಅನವರತ ಎದೆಯ ಗೆಬರ್ತಾ ಕೂತಿರ್ತೀವಿ... 
&&&

ಕೆಲವರೆಲ್ಲಾ
ಪಡೆದದ್ದು ನೆನಪಾಗಿ ಕಾಡಬಾರದೂ ಅಂತಲೇ ಕೊಡುವುದನ್ನು ಮರೀತಾರೇನೋ... 
___ ದುಡ್ಡು, ಸಮಯ, ಪ್ರೀತಿ ಎಲ್ಲವಕ್ಕೂ ಒಂದೇ ತೂಕ ಅಂತವರಲ್ಲಿ...
&&&

ವಿನಿಮಯವಾಗಲು 
ಕಣ್ಣಲ್ಲಿನ ಮುಗುಳುನಗೆಯೊಂದು ಸಾಕು 'ಕುಶಲೋಪರಿಗೆ...'
ಚರ್ಚೆ ವಿಚರ್ಚೆ ಕೂಡಲು
ಪ್ರಜ್ಞೆಯ ಸಮಾನ ಸಂಗತಿಗಳಿದ್ದರೆ ಸಾಕು 'ಅಭಿರುಚಿಗೆ...'
ಹರಿದು ಹಗುರಾಗಲು 
ನೀ ಕೇಳದೆಯೂ ನನಗೆ ನನ್ನೊಳಗನೆಲ್ಲ ಹೇಳಿಕೊಳ್ಳಬೇಕು ಅನ್ನಿಸುವ ಆಪ್ತತೆಯ ಜೀವ ಸೆಲೆ ಯೆದೆಯಾಳದಲಿ ಒಡಮೂಡಬೇಕು/ಪಡಿಮೂಡಬೇಕು "ಪ್ರೀತಿಗೆ, ನೋವಿಗೆ..." 
___ ಸಹಜ / ಗಂಭೀರ / ತೀವ್ರ ಒಡನಾಟ... 
&&&

ನಿಜಾ ಹೇಳ್ಲಾ -
ಮನಸು ಮಾತು ಕೇಳದೇ ನಿನ್ನ ಮಾತಾಡ್ಸದ್ದೇ, ಕಣ್ಣು ಚಡಪಡಿಸಿ ನಿನ್ನ ಹುಡ್ಕದ್ದೇ ನಿನ್ನ ಭವನದ ಬೀದಿಯಲೊಮ್ಮೆ ಓಡಾಡಬೇಕು - ಹಚ್ಚಿಕೊಂಡ ತಪ್ಪಿಗೊಂದು ಹರಕು ಪ್ರಾಯಶ್ಚಿತ್ತ (?) ಮಾಡಿಕೊಳ್ಳಬೇಕು... 
ಹಳತಾಗದ ಅಥವಾ ಹೊಸ ಹೊಸದಾಗಿ ಹಸಿಯಾಗಿ ಒಳಗೇ ಮಿಸುಗುವ ಹುಸಿಯಲ್ಲದ ಒಂದು ಮುನಿಸಿನ ಮುಯ್ಯಿ ತೀರಿಸಿಕೊಳ್ಳಬೇಕು... 
___ ತುಂಬು ಚಂದಿರನಲ್ಲೊಂದು (ನೇಹ) ಕಲೆಯಿದೆ... 
&&&

ವತ್ಸಾ -
ಇಷ್ಟೇ ಇಷ್ಟು ಬಳಕೊಂಡರೂ ಅಷ್ಟು ದೂರದತಂಕಾ ಘಮಗುಡುವ 'ವಿಕ್ಸ್‌ನ' ಪರಿಮಳ ಕಣ್ಣ ಹನಿಗಳ ಬಚ್ಚಿಡುವ ಎಷ್ಟೊಳ್ಳೆ ಮುಖವಾಡ...!! 
____ ಯಾರಿಗೂ ಹೇಳೋದು ಬ್ಯಾಡ, ಇದು ನಡುರಾತ್ರಿಯ ಜ್ಞಾನೋದಯ....... 🫣

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು... :)

No comments:

Post a Comment