Sunday, July 31, 2022

ಗೊಂಚಲು - ಮುನ್ನೂರೆಂಬತ್ತೊಂಭತ್ತು.....

ಅಮ್ಮನಳಿದ ಜೀವಗಳೆಲ್ಲಾ ಅನಾಥವೇ..... 

ಬದುಕು ನೀರಿನಂಥಾ ಭಾವದ ಗುರುವಾದರೆ,
ಸಾವು ನಿರ್ಭಾವದ ಮಹಾಗುರು...
____ ಎರಡರ ಅರಿವನ್ನೂ ಕೊಟ್ಟು ಸಲಹಿದ ಆಯಿ ಎನ್ನ ಜೀವಾಭಾವದ ದೇವಗುರು... 

ಬದುಕು ಕೈಬಿಟ್ಟಾಗಲೂ ಗಟ್ಟಿ ನಿಂತು ನಕ್ಕದ್ದಿದೆ, ಬಡಿದಾಡಿ ಗೆದ್ದದ್ದಿದೆ - ಇವಳು ಬೆನ್ನಿಗಿದ್ದಳಲ್ಲ...
ಅವಳೂ ಹೊರಟು ನಿಂತಾಗ ಬೆನ್ನ ಹುರಿಯಾಳದಲ್ಲಿನ ಅನಾಥ ಭಾವದ ನಿಶ್ಯಕ್ತಿಯ ಮೀರಿ ನಿಲ್ಲುವ ಶಕ್ತಿ‌ಯನೂ ಅವಳೇ ಆಶೀರ್ವದಿಸಬೇಕಲ್ಲ...

ಅವಳ ಬದುಕ ಭಾರ ಅವಳೇ ಹೊತ್ತು ಗೆದ್ದಳು - ನಾ ಅವಳ ಮೃತ ದೇಹ ಹೊತ್ತು ಸಮಾಧಾನಿಸಿಕೊಂಡೆ...

ಪ್ರೀತಿ ಕೊಡೋಕೆ ಸಾವಿರ ಜೀವಗಳು ಸಿಗಬಹುದು...
ಆದ್ರೆ
ಭಯವಿಲ್ಲದೆ ಕಿತ್ತಾಡೋಕೆ ಆಯಿಯಂತೋಳು ಮತ್ತೆ‌ಲ್ಲಿ ಸಿಕ್ಕಾಳು...

ಬದುಕಿನಷ್ಟೇ ಸ್ವಾಭಿಮಾನವ ಸಾವಲ್ಲೂ ಉಳಿಸಿಕೊಂಡು ಗತ್ತಿನಲ್ಲೇ ನಡೆದು ಹೋದಳು...
ಬದುಕಿನ ಯಾವ ಸೂತಕಗಳೂ ಅವಳ ಸೋಕುವುದಿಲ್ಲ ಇನ್ನು - ಸಾವು ಅವಳದ್ದು, ಶ್ರಾದ್ಧ ನನ್ನದು...

ಹಿಂದೆ ನೋಡದೆ ಹೊರಟಳು - ಹಿಂದೆ ಹೋಗುವ ಶಕ್ತಿ ಇಲ್ಲದವನು ಇಲ್ಲೇ ನಿಂತಿದ್ದೇನೆ...
ನಿಲ್ಲದ ಕಾಲ ಅದಾಗಿ ಇಂದಿಗೆ ಇಷ್ಟು ದಿನವೆಂದು ಲೆಕ್ಕ ತೋರುತ್ತದೆ...

ಇಲ್ಲಿ ಎಲ್ಲವೂ ಸುಳ್ಳೂ ಅನ್ನಿಸತ್ತೆ... 
ಈ ಬದುಕು, ಬವಣೆ, ನಗು, ನೋವು ಎಲ್ಲಾ ಅಂದರೆ ಎಲ್ಲಾ ಸುಳ್ಳೇ ಇರಬೇಕು... 
ಅವಳು ಉಸಿರು ಚೆಲ್ಲಿದ್ದು ಕೂಡಾ ಸುಳ್ಳೇ ಆಗಿದ್ದಿದ್ದರೆ...
ಅವಳ ಅಸ್ಥಿಗೆ ಬೆಂಕಿ ಇಟ್ಟ ಕೈಗಳ ನೋಡಿಕೊಳ್ಳುತ್ತೇನೆ... 
ನನ್ನ ಅಸ್ತಿತ್ವವೇ ಇನ್ನು ಸುಳ್ಳೂ ಅನ್ನಿಸತ್ತೆ...

ನಂಗಿಂತ ಮುಂಚೆ ಹೋಗಬೇಕಿತ್ತವಳಿಗೆ, ಹೊರಟಳು ಅಷ್ಟೇ...
ಬದುಕಲ್ಲಷ್ಟೇ ಅಲ್ಲ ಸಾವಲ್ಲೂ ಅವಳೇ ಗೆದ್ದಳು...
ಇನ್ನು,
ತಾ ಹೊರಟಲ್ಲಿಗೆ ಎನ್ನ ಅವಳೇ ಕರೆದುಕೊಳ್ಳಬೇಕು...
ದೇವರ ನಂಬದ ನಾನು ಅವಳನೇ ಬೇಡಬೇಕು...
____ಪ್ರಾರ್ಥನೆ...

ಬೆಂಕಿಗೆ ಅಷ್ಟೂ, ಗಾಳಿಗಿಷ್ಟು, ಮಣ್ಣಿಗಿನ್ನಷ್ಟು, ನೀರಲ್ಲಷ್ಟು, ಅನಂತಕ್ಕುಳಿದಷ್ಟು - 
ಹೀಗೆ
ಬಯಲಿಗೆ ಹಂಚುತ್ತಾ ಹಂಚುತ್ತಾ ಅವಳ ರೂಪ, ಗಂಧ, ಸಾಕಾರ ಆಕಾರದ ಗುರುತುಗಳ ಅಳಿಸುತ್ತಾ ಬಂದೆ...
ಎದೆಯ ಗೂಡಿನ ನೆನಪ ನಿತ್ಯಾಗ್ನಿಯಾಗಿ ಬೆಳೆಯುತ್ತಲೇ ಇದ್ದಾಳೆ...
ಕರುಳ ಬಳ್ಳಿ ಕತ್ತರಿಸಿ ಜಗಕೆ ಬಿಟ್ಟು ಕರುಳ ಮಮತೆಯಿಂದ ಎನ್ನ ಜಗವ ತೂಗಿದವಳ ದೇಹವ ಕರಗಿಸಿದಂಗೆ ಉಸಿರ ಹಬ್ಬಿ ನಿಂತ ಭಾವವ ಕರಗಿಸಲಾದೀತೇ...
ಅವಳ ಉಂಡು ತೇಗಿದ ಇದೇ ಪಂಚಭೂತಗಳು ಅವಳ ನೆನಪ ನೂಕುತ್ತಾವೆ ಎನ್ನೆಡೆಗೆ...
___ ಅಸ್ಥಿ ವಿಸರ್ಜನೆ...

ತಾನು ಶರಂಪರ ಬಡಿದಾಡಿ ಕಟ್ಟಿಕೊಂಡ ತನ್ನ ಬದುಕಿಗೆ ಅವಳು ಅವನ ಭಿಕ್ಷೆ ಎಂದು ಕೈಮುಗಿಯುತಿದ್ದಳು...
ಅವನು ಅನಾಯಾಸ ಎತ್ತಿ ಕೊಟ್ಟ ಸಾವಿಗೆ ನಾನು ಸುಖ ಮರಣ ಎಂದು ಶರಾ ಬರೆಯುತ್ತೇನೆ...
____ ಅವಳ(ಳೇ) ಭಗವಂತ...

ದಣಪೆಯಾಚೆಯ ಬಯಲಲ್ಲಿ ಉರಿದು ಹೋದ ಅವಳನ್ನು ಅಡುಗೆ ಮನೆಯ ನಸುಗತ್ತಲ ಮೂಲೆಯಲ್ಲಿ ಹುಡುಕುತ್ತೇನೆ...
ಗೋಡೆಗಂಟಿದ ಯಾವುದೋ ಮಶಿ ಕಲೆಯಲ್ಲಿ ಅವಳ ಕಿರುಬೆರಳ ಕನಸೊಂದು ಇನ್ನೂ ಉಸಿರಾಡುತಿರಬಹುದಾ...?!
____ ಕತ್ತಲೂ ಕಟ್ಟಿಕೊಡಲಾಗದ ಸಾಂತ್ವನ...

ಎಂದಿನಂತೆ ಬೆಳಗಾಗುತ್ತದೆ - ಅವಳ ನಗೆಯ ಬೆಳಕಿಲ್ಲ ಅಷ್ಟೇ...

ಈ ಊರು, ಆಷಾಡದ ಧೋss ಮಳೆ, ಅವಳ ವಿದಾಯದುಬ್ಬರದ ಮೌನ...
ಹೇಗಿದ್ದೀಯಾ ಶ್ರೀ...?
ನೋವೂ ನೋಯಿಸದಷ್ಟು ಗಟ್ಟಿಯಾಗಿ, ಅವಳ ನಿಂತ ಉಸಿರಿನಷ್ಟೇ ನಿರ್ಲಿಪ್ತ‌ವಾಗಿ.......ಹಾಯಾಗಿದ್ದೇನೆ......

"ಅಮ್ಮನಳಿದ ಜೀವಗಳೆಲ್ಲಾ ಅನಾಥವೇ..."

ಉಳಿದದ್ದು ಮಣ್ಣ ಮಡಿಲೊಂದೇ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

Saturday, April 2, 2022

ಗೊಂಚಲು - ಮುನ್ನೂರೆಂಬತ್ತೆಂಟು.....

ಕಪ್ಪು ಹುಡುಗಿ.....

ನೀ ನಿನ್ನ ನೆನಪಾಯಿತು ಅಂದಾಗ ಸಣ್ಣಗೆ ಭಯವಾಯಿತು - ಕಳೆದದ್ದೇ ಅಲ್ಲವಾ ನೆನಪಾಗುವುದು...
_______ ಹಿಂದೆಯೇ ಉಳಿದವನು...
💭💬💭💬💭

ಖಾಲಿ ಕಿಸೆಯ ಬೆಳಗಿಗೊಂದು ನಚ್ಚನೆಯ ನಗೆಯ ತುಂಬುವ ನೆನಹು, ಇರುಳ ತುಂಬಾ ಮತ್ತೆ ಮತ್ತೆ ಓದಿದ ಹುಚ್ಚು ಕವಿತೆ - ನೀನು...
___ ಒಂದು ಕುಡ್ತೆ ನೀರು ಹಸಿರರಳಿಸೋ ಬೇರಿಗೆ...

ಇರುಳ ದಾಂಟಲು ನಾ ಬರೆ(ರಿ)ದೇ ಬರೆದ ಉಸಿರಿಲ್ಲದ ಕವಿತೆಯ ಕೊನೆಯ ಸಾಲಿನಾಚೆ ಬೆಳೆದು ನಿಂತ ಒಣ ನಗೆಯ ನಿರಂಕುಶ ಮೌನ ನೀನು...
____ ಒಂದು ಹಿಡಿ ಮಣ್ಣು ಕರುಳಿಲ್ಲದ ಕನಸಿಗೆ...
💭💬💭💬💭

ಅವಳು ಕಣ್ಣ ತುಂಬಾ ನಗು ತುಳುಕಿಸಿಕೊಂಡು ಎದೆಯ ತಬ್ಬಿದಾಗಲೆಲ್ಲ ಸಾವಿರ ಬಣ್ಣ ಕಲಸಿದ ಹೋಳಿ ನೀರ ಮಿಂದಂಗೆ ಅಲೆ ಅಲೆ ಅಲೆ ಜೀವ ಝೇಂಕಾರ...
ಅವಳದು ತೋಳಲ್ಲೇ ಬದುಕನೇ ಸುಗ್ಗಿ ಹಬ್ಬವಾಗಿಸೋ ಚಂದ ಆಳಿಕೆ...
ನಗು ಮತ್ತು ಕಪ್ಪು ಪ್ರಕೃತಿ ತುಂಬಿ ಕೊಟ್ಟ ಗಟ್ಟಿ ಬಣ್ಣಗಳು ನನ್ನ ಪಾಲಿಗೆ...
____ ಕಪ್ಪು ಹುಡುಗಿ...
💭💬💭💬💭

ಪ್ರೀತಿಯ ಸಣ್ಣ ಆರಂಭ ಮತ್ತು ಉತ್ತುಂಗ ಅಭಿವ್ಯಕ್ತಿ ಎರಡೂ ನಮ್ಮ ನಾಭಿ ಮೂಲದ ಬೆಂಕಿಯಿಂದಲೇ...
____ ನಾನು, ನೀನು ಮತ್ತು ಪ್ರಕೃತಿಯ ವಶೀಕರಣ...
💭💬💭💬💭

ಸೋಲುವ ಚಂದವ ಕಾಣಿಸಿದವಳೇ -
ನಿನ್ನ ತೋಳು ಗೆಲುವಿನ ಬೆವರಂಟದೇ ಬರಿದಾದ ದಿನ ನನ್ನ ಸಾವಾಗಲಿ...
___ ಮೃಗವಾಂಛೆ...
💭💬💭💬💭

ಸಿಗುವೇನೆಂದು ಸಿಗದೇ ನುಣುಚಿಕೊಂಡವರ ಈಷ್ಟುದ್ದಾ ಯಾದೀನ ಎದೇಲಿಟ್ಕೊಂಡು ಸ್ವಯಂ ಕರುಣೆ‌ಯ ಕಂಬಳಿ ಹೊದ್ದು ಬೆಚ್ಚಗಿದ್ದೆ ನೋಡು...
ದಾಟುಬಳ್ಳಿ ದಾಟಿ ಹಾದಿ ತಪ್ಪಿ ಹಾಯ್ದ ಊರ ಬಾಗಿಲಲಿ ನೀ ಸಿಕ್ಕುಬಿಟ್ಟೆ (?) - ಮಾಡು ಹಾರಿ ಹೋದ ಸೂರು ಈಗ ನನ್ನೆದೆ ಪಾಡು...
____ ನಡುಬೀದಿಯಲ್ಲಿ ನಡು ತಬ್ಬಿ ನಡೆದು ಸಿಗದೇ ಹೋದವರ ಹೊಟ್ಟೆ ಉರಿಸುವ ಬಾ...
💭💬💭💬💭

ಕಾಮವನ್ನು ಕಾಮ ಅಂತಲ್ಲದೇ ಬೇರೆ ಯಾವುದೇ ಚಂದ ಹೆಸರಿನಲ್ಲಿ ಸವಿದರೂ ಕೊನೆಯಲ್ಲಿ ಸುಖದ ನಿದ್ದೆಯೂ ಸುಳ್ಳು ಅನ್ನಿಸುವಂಥ ನಿಟ್ಟುಸಿರೊಂದು(ದೇ) ಉಳಿದು(ದೇ) ಹೋಗುತ್ತದೆ...
____  ಅನುಭವಿಸುವುದಲ್ಲ ಪ್ರೇಮ ಅನುಭಾವಿಸುವುದು...
💭💬💭💬💭

ನನಗೇ ಸಿಗದಂತಾದ ನಾನು ಸಿಕ್ಕರೆ ನಿನ್ನಲ್ಲೇ ಸಿಗಬೇಕು...
ಕುರುಡು ಭಕ್ತಿ‌ಯ ಕಣ್ಣಿಗೆ ದೋಷ ಕಾಣಲ್ಲ - ಪೊರೆಯ ಕಣ್ಣಲ್ಲಿ ದೋಷಗಳೇ ಎಲ್ಲಾ...
ತಿರುಳಿಳಿಯದ, ಕರುಳರಿಯದ ಭಾವ ಕುಬ್ಜತೆಯಲಿ ಪಾಂಚಜನ್ಯ‌ದ ನೀತಿ, ತಾಂಡವ ರುದ್ರ‌ನ ಪ್ರೀತಿ; ವ್ಯರ್ಥ‌ವೇ ಇಲ್ಲೆಲ್ಲಾ...
____ ಪೂರ್ವಾಗ್ರಹ‌ಗಳಾಚೆಯ, ಪೂರ್ವಾಪರ ಚಿಂತನೆಯ ಸಮ ಚಿತ್ತ, ಸಮ ಪಿತ್ತ ಎನಗೊಗ್ಗುವುದೇ ಇಲ್ಲ...
💭💬💭💬💭

ಬೆಳುದಿಂಗಳ ನೆರಳೊಂದು ಈಗಷ್ಟೇ ಮೈದೆರೆದು ಕೊರಳ ತಬ್ಬಿ ಹೆಗಲಿಗೆ ಮೂಗುಜ್ಜಿತು - ಹೆರಳ ನೇವರಿಸಿ ಅನಾಮತ್ತು ಎದೆಯ ಮೇಲೆಳೆದುಕೊಂಡೆ...
ಇನ್ನೀಗ -
ಇರುಳಿಡೀ ಭರಪೂರ ಬೆಳದಿಂಗಳೂಟ...
___ ನನ್ನ ಕಪ್ಪು ಹುಡುಗಿ... 

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

ಗೊಂಚಲು - ಮುನ್ನೂರೆಂಬತ್ತೇಳು.....

ಉಗಾದಿ..... 

ಬೇವಿಗೂ ಹೊಸ ಚಿಗುರು
ಮಾವಿಗೂ ಹೊಸ ಚಿಗುರು
ನೋವು ನಲಿವನು ಸಮಪಾಕದಲಿ
ಕಾಂಬ ಬದುಕಿನ ರುಚಿ ಒಗರು ಒಗರು...
ಇಂತಾಗಿ,
ಬೆಲ್ಲ ಬೆರೆಸಿದ ನಗೆಯನೇ ತುಸು ಹೆಚ್ಚಾಗಿ ಹಡೆಯಲಿ
ವರುಷ ಹರುಷದ ಹಬ್ಬವೇ ಆಗಲೆಂಬ
ಮಧುರ ಸ್ವಾರ್ಥ‌ದ ಶುಭಾಶಯ..‌.
_____ ಯುಗಾದಿ...
                           ___02.04.2022
💟💟💟

ಚೂರು ತಿಳುವಳಿಕೆ ಮತ್ತು ಆರ್ದ್ರತೆ ಇದ್ದರೂ ಸಾಕು ನಿನ್ನನ್ನು ನೀನಾಗಿ ಒಪ್ಪಿ ಅಪ್ಪಿ ಪ್ರೀತಿಸಿಬಿಡಬಹುದು..‌.
ಆದರೋ,
ನೀ ಬಯಸುವಂತೆ ನಿನ್ನ ಹಪಹಪಿಗಳಿಗೆ ಕೊರಳೊಡ್ಡಿ ಪ್ರೀತಿಸುವುದಿದೆಯಲ್ಲ ಅದು ಕಷ್ಟ ಕಷ್ಟ...
____ ಪ್ರೀತಿ ಮತ್ತು ಪ್ರೀತಿಸಲ್ಪಡಬೇಕೆನುವ ಆಸೆ...
💟💟💟

ಸಿಕ್ಕಾಪಟ್ಟೆ ಒಳ್ಳೆಯವರ (?) ಜೊತೆ ಬದುಕು ಎಷ್ಟು ರಸಹೀನ ಮತ್ತು ಮಿತಿ ಮೀರಿದ ಏಕ ಸ್ವಾಮ್ಯ ಭಾವದವರ ಜೊತೆಯಲ್ಲಿ ಬದುಕು ಅಷ್ಟೇ ಹಿಂಸಾತ್ಮಕ 'ಅಂತೆ...‌'
____ ಬಂಧ, ಸಂಬಂಧ...
💟💟💟

ಬಂಧವೇ -
ತೀರಾ ಹತ್ತಿರ ಹತ್ತಿರ ಬಂದರೆ ಉಸಿರುಗಟ್ಟತ್ತೆ
ಅಷ್ಟು ದೂರ ಹೋಗಿ ನಿಂತರೆ ಕರುಳು ಕಿವುಚತ್ತೆ
ಇಲ್ಲಿ ಅಲ್ಲಿ ಎಲ್ಲೆಲ್ಲೂ ಕೂಗಳತೆಯ ದೂರದಲ್ಲಿದ್ದು ಪಹರೆ ಕಾಯಬೇಕು ನೀನು ನನ್ನ ಕಾವುಗಳ, ನಾನು ನಿನ್ನ ಭಾವಗಳ...
____ ಸುರಕ್ಷಿತ ಅಂತರವಷ್ಟೇ ಇರಲಿ...
💟💟💟

ಎದೆ ಬಿರಿ(ಗಿ)ಯೆ ನಕ್ಕ ನಗುವಿಗಿಂತ ಚಂದ ಬಣ್ಣ ಬೇರೆ ಕಂಡಿಲ್ಲ ನನಗಿನ್ನೂ...
ನೀ ಸಿಕ್ಕಾಗಲೆಲ್ಲಾ ಒಂದು ಹಿಡಿ ನಗೆಯ ಹಂಚಿಕೊಳ್ಳುವಷ್ಟು ಭಾವ ಸಿರಿತನ ಸದಾ ಕಾಯಲಿ ನನ್ನನ್ನು...
____ ಬಣ್ಣದ ಹಬ್ಬವಂತೆ... 💞
              ___18-03-2022
💟💟💟

ವತ್ಸಾ -
ನೆಲ ಅಗೆದು ಸತ್ತ ನಿನ್ನ ಹೆಣ ಹೂಳಲು ಊರೆಲ್ಲಾ ಸೇರೀತು...
ಆದರೋ,
ಎದೆ ಬಗೆದು ಕಸುವಿಲ್ಲದ ನಿನ್ನ ಭಾವ(ಕನಸು)ಗಳ ನೀನೇ ಹೂಳಿಕೊಳ್ಳಬೇಕು...
____ ಅಲ್ಲಿ ನೋವಿಲ್ಲ, ಆದರಿಲ್ಲಿ ನಗು ಆಯ್ಕೆ ಅಷ್ಟೇ ಅಲ್ಲ ಒಮ್ಮೊಮ್ಮೆ ಅವಶ್ಯಕತೆ ಕೂಡಾ...
💟💟💟

ಕತ್ತಲೇ -
ಎದೆಯಲ್ಲಿ ಇಲ್ಲದೇ ಹೋದುದನ್ನು ಹಾದಿಯಲ್ಲಿ ಹುಡುಕುತ್ತಾ ಹುಡುಕುತ್ತಾ ಕಳೆದು ಹೋಗಿದ್ದೇನೆ...
ಬೆಳಕ ಬೆನ್ನು ಹಿಡಿದು ಕಳೆದು ಹೋದವನನ್ನು ಹುಡುಕಿಕೊಡು ಒಮ್ಮೆ...
____ ಒಂದು ಹಿಡಿ ಮೌನ...
💟💟💟

ಕತ್ತಲೇ -
ಸತ್ಯವೆಂಬುದು ಅಷ್ಟಿಷ್ಟಾದರೂ ಸ್ವಚ್ಛಂದವಾಗಿ ಉಸಿರಾಡಿದರೆ ಅದು ನಿನ್ನುಡಿಯಲೇ ಇದ್ದೀತು...
ಬೆಳಕ ರಣ ಮಡಿಯಲೇನಿದ್ದರೂ ಅದರದು ಬಲು ಸಭ್ಯತೆ, ಪ್ರಜ್ಞಾಪೂರ್ವಕ ಮೌನವೇ ಜನಜನಿತ...
____ ಬಲು ರಸಿಕ ಸತ್ಯ...
💟💟💟

ಯಥಾವತ್ತು ಬಿಂಬ ತೋರುವ ಕನ್ನಡಿಗೂ ಮನಸಿನ ಹುಂಬ ನಡಿಗೆ ಕಾಣದಂಗೆ ನಗಬಲ್ಲವರು ನಾವು...
___ 'ನಾನು' ಕನ್ನಡಿಯೊಳಗಿನ ಗಂಟು...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

Tuesday, January 25, 2022

ಗೊಂಚಲು - ಮುನ್ನೂರೆಂಬತ್ತಾರು.....

ಪ್ರಾಯ ಹನ್ನೊಂದು.....
(ಮಡಿಲ ಬುಟ್ಟಿಯ ತುಂಬಾ ಭಾವಾನುಭಾವದ ಜೀವಂತ ಹೂಗಳು... 😍 )

ಮೃದುಲ ಮೋಹವೇ -
"ತುಟಿಗೆ ತುಟಿ, ಕಟಿಗೆ ಕಟಿ..."
ಛಳಿ ಋತುವಿನ ರಸಿಕ ಶಾಸನವಾಗಬೇಕು... 
____ ವಿರಹದುರಿ/ಲಿ...
💬💭💬

ಕತ್ತಲ ದಾಂಟಲು ದೀಪವಾಗಬೇಕು - ಕತ್ತಲನೇ ಜೀವಿಸುವುದಾದರೆ ದೆವ್ವವೇ ಆಗಬೇಕು...
ಕತ್ತಲನು ಸುಡುವ ದೀಪ ಸಾಮರ್ಥ್ಯ, ಕತ್ತಲನೇ ಜೀರ್ಣಿಸಿಕೊಂಬ ನಿಶಾಚರ ವೀರ್ಯ ಎರಡೂ ಎನ್ನೆದೆಯ ಕೋಶದ ಪ್ರೀತಿಯ ಆವೇಶವಾಗಲಿ...
____ ವಿಕ್ಷಿಪ್ತ...
💬💭💬

ಹೆಣೆವ ಬೇಲಿಗೂ ಒಂದು ಬೇಲಿಯಿರಲಿ...
ಹಸಿರು ಹಾವೊಂದು ಬಯಲ ಕಥೆ ಹೇಳಲು ಒಳಗಿಣುಕುವಷ್ಟಾದರೂ ಕಿಂಡಿ ಇರಲಿ...
____ ಭಾವ ಬಂಧ ಸಂಬಂಧ ಮತ್ತು ನಡುವೆ ಒಡನಾಡೋ ಕನಸು...
💬💭💬

ನಿನ್ನ ಸೇರುವುದೆಂದರದು ನಿನ್ನ ಸೂರು ಸೇರುವುದಲ್ಲ,
ನಿನ್ನ ಸೇರುವುದೆಂದರೇ ಅದು ನೀನೇ ಆಗುವುದು...
ಇಲ್ಲಿನ ತೊರೆಯೊಂದು ಅಲ್ಲಿಗೋಡಿ ಶರಧಿ ಸೇರಿ ಕಡಲೇ ಆದ ಹಾಗೆ...
____ ಲೆಕ್ಕ ಕೂಡುವುದಲ್ಲ; ಚೊಕ್ಕ ಸೇರುವುದು...
💬💭💬

ಕೇಳು -
'ಎನ್ನಂಥಾ ಪರಮ ಸುಖಿ ಯಾರಿಲ್ಲ' ಅಂದುಕೊಂಡು ಸುಖದ ವ್ಯಾಖ್ಯಾನ‌ಗಳ ಮೂಲವನ್ನೇ ಆಡಿಕೊಂಡು ನಕ್ಕು ದಿನ ದೂಡುವುದೊಂದು ದಿವ್ಯ ಸುಖ ಇಲ್ಲಿ...
ಹೇಳು -
ಬದುಕಿಗೇ ಉದ್ದೇಶವೆಂಬುದಿಲ್ಲದವನ ಬದುಕಲ್ಲಿ ನೋವಿಗಾದರೂ ಅಸ್ತಿತ್ವ ಎಲ್ಲಿ...
ನೋಡು -
ನೋವಿಗೂ ನಲಿವಿಗೂ ನಗೆಯದೇ ಪರಿಪಾಕ ಅಲ್ಲಿ...
_____ ವಿಕ್ಷಿಪ್ತ...
💬💭💬

ನಗೆಯ ದೀಪವ ಆರಿಸಲೆಂಬಂತೆ ಆ ಉರಿಗೆ ಮೈಯ್ಯೊಡ್ಡಿ ರೆಕ್ಕೆ ಸುಟ್ಟುಕೊಂಡ ನೋವ ಪತಂಗಗಳೆಲ್ಲ ಚಿಮಣಿಯ ಬುಡದ ಕತ್ತಲಲಿ ಕಣ್ಣ ತೋಯಿಸಿಕೊಳ್ಳುತ್ತವೆ...
_____ ಕರುಣಾಳು ಕತ್ತಲು...
💬💭💬

ಮುಖವಾಡ ಕಳಚಿಟ್ಟೆ ನೋಡೂ - ಸಭ್ಯ ಜಗದ ನಾಟಕದಲ್ಲೀಗ ನಾನು ಅಸ್ಪೃಶ್ಯ...
💬💭💬

ಹಳೆಯದನ್ನು ಯಾರೂ ಕದಿಯಬಹುದು...
ನನಗಾಗಿ ಹೊಸದನ್ನು ಮಾತ್ರ ನಾನೇ ಕೊಳ್ಳಬೇಕು... 

ಹಾಗೆಂದೇ
ಹಾದಿ ಕವಲಾದಷ್ಟೂ ಪಯಣಕ್ಕೆ ಹೊಸತೇ ಹದ ಇಲ್ಲಿ...
ಆದರೂ, 
ಓಡುವ ಕಾಲನ ಅಂಡಿಗೆ ಬರೆಯಿಡಲು ನಗೆಯ (ಆಟ)ಆಡುವುದ, ನಲಿವನು ಹಾಡುವುದ ಮರೆತು ಕಾಲನ ಹಿಂದೆ ಓಡುವ ಮರುಳ ಜಗವೇ, ಹೆಸರನುಳಿಸಿ ಹೋಗುವ ಹಂಬಲವಿಲ್ಲದ ಎನ್ನಂಥ ತೀರಾ ಸಾಮಾನ್ಯ‌ನ ಎದೆಯ ಅಂಗಳದಲಿ ನಿಂತು ಶಾಂತ ನಿದ್ದೆಯ ಕದಡಿ ಕಾಡುವಂಥ ರುದ್ರ ರಮಣೀಯ ಕನಸುಗಳ ಮಾರಲು ಸುಖಾಸುಮ್ಮನೆ ಹೆಣಗಬೇಡವೇ…
ಅವನ ಪಾಡಿಗವನ ಬಿಟ್ಟು ಬಿಡು ಹಸುಳೆ ನಗುವ ಗೆದ್ದುಕೊಂಡು ತಣ್ಣಗೆ ಬಾಳ್ವೆ ಗೈಯ್ಯುವುದೂ ಜೀವ ಜಗದ ಚಂದಾನೆ ಹಾದಿಯೇ ಅಂದುಕೊಂಡವನ...

ಇಲ್ಲಿನ ಎಲ್ಲಾ ಎತ್ತರ‌ಗಳೂ ನಿಂತದ್ದು, ನಿಲ್ಲಬೇಕಾದ್ದು ಗಟ್ಟಿ ನೆಲಕಂಟಿಯೇ - ನೆಲ ಹೆಗಲು ಕೊಡದೇ ಎತ್ತರ‌ವನಾಳಲಾಗುವುದಿಲ್ಲ...

ಗದ್ದಲ ಮಾಡದೆ ಬದುಕಿ ಸದ್ದಿಲ್ಲದೆ ಸತ್ತು ಹೋದ ನಿರುಪದ್ರವಿಯ ಮಸಣ ಯಾತ್ರೆಯುದ್ದಕ್ಕೂ  ಬೀದಿ ನಾಯೊಂದು ಕರುಳ ಸಂಕಟದಿ ಊಳಿಟ್ಟರೆ ಆಶ್ಚರ್ಯ‌ಬೇಡ - ಅಂತಃಕರಣದ ಅರಿವು (ಪ್ರೀತಿ)ಅನ್ನ ಉಂಡವರಿಗಷ್ಟೇ ಅರಿವಾಗುವುದು...

ಇವೇ ಇಂಥವೇ
ಈ ತಿಕ್ಕಲು ಭಾವಗಳ ಬರವಣಿಗೆಯ ಮೆರವಣಿಗೆ ಉರವಣಿಗೆ ಹಿಡಿದುಕೊಟ್ಟ ಅಭಿಮಾನದ ನೋಟಗಳೇ ಎನ್ನೆದೆಯ ಬಾಗಿಲ ನಗೆಯ ದೀಪಗಳಾಗಿ ಮಿನುಗುತ್ತಾ ಬೆಚ್ಚಗಿಟ್ಟಿವೆ ಇಂದು ಈ ಬದುಕನು...
ನನ್ನ ಬರವಣಿಗೆ ಕೂಡಾ ಇಂದೀಗ ನನ್ನ ಒಂದು ಹುಚ್ಚು ಗೀಳು...
ಭಾವಗಳ ಸಹಜ ಝರಿ ಬತ್ತಿ ಎಷ್ಟೋ ಕಾಲ ಸಂದಮೇಲೂ ಬರೆಯುತ್ತಲೇ ಇದ್ದೇನಲ್ಲ, ಅಭ್ಯಾಸವಾಗಿ ಹೋದ ಬರವಣಿಗೆ ಬರೆಯದೇ ಇರಲಾಗದೆಂಬ ಭ್ರಮೆಯ ಹುಟ್ಟು ಹಾಕಿದೆಯಾ ಅನ್ನಿಸುತ್ತೆ ಒಮ್ಮೊಮ್ಮೆ...
ಇಷ್ಟಾಗಿಯೂ ಈ ಬರವಣಿಗೆ ತುಂಬಿ ತಂದ ಹಗುರತೆ, ನೇಹ ನಂಟುಗಳಿಂದ ದೂರ ನಿಲ್ಲಲಂತೂ ಆಗಲಿಕ್ಕಿಲ್ಲ...
ಹಾಗೆಂದೇ ಹನ್ನೊಂದು ಸುಧೀರ್ಘ ವರ್ಷಗಳ ಹಾಯ್ದು ಹನ್ನೆರಡನೆಯ ಪ್ರಾಯಕ್ಕೆ ಎದೆ ತೆರೆಯುತ್ತಿದೆ ಈ ನನ್ನ ಬ್ಲಾಗ್ ಎಂಬ ಭಾವ ಪೆಟ್ಟಿಗೆ...
ನಿಮ್ಮಗಳ ಅಕಾರಣ ಪ್ರೀತಿ ಮುಂದೆಯೂ ಬರೆಸೀತು...
ಇಲ್ಲಿ ನಾ ಚೆಲ್ಲಿದ ಭಾವಗಳ ಮೊಗೆದು ನಿಮ್ಮೆದೆಯ ಹಸಿ ನೆಲಕೆರೆದುಕೊಂಡಿರಿ...
ಗಟ್ಟಿ ಕಾಳಾಗಿ ನಿಮ್ಮೊಳಗೆ ಹೊಸ ಹಸಿರ ಸೂಸಿದವೆಷ್ಟೋ, ಜೊಳ್ಳಾಗಿ ತುಸು ಗೊಬ್ಬರವಾದವದೆಷ್ಟೋ...
ಲೆಕ್ಕ ಹಾಕುವ ಹುಂಬತನ ತೋರದೇ ನಿಮ್ಮ ನೇಹದ ಆದರವನಷ್ಟೇ ಬಾಚಿಟ್ಟುಕೊಂಡು ಬೆಚ್ಚಗಿದ್ದೇನೆ...
ಇಂತೆಯೇ -
ಪ್ರೀತಿಯಿಂದ ಪ್ರೀತಿಯ ಕಾಯ್ದುಕೊಳ್ಳುವಾ...
ಇದೇ ಅಭಿಮಾನದ ಪ್ರೀತಿ ಕಾಲನ ದಿನದರ್ಶಿಕೆಯ ಯಾವುದೋ ತೇದಿಯಲಿ ನಮ್ಮನು ಮುಖಾಮುಖಿ‌ಯಾಗಿಸೀತು - ಹಾಂಗೆ ಸಿಕ್ಕಾಗ ಅಕ್ಕರೆಯ ನಗುವೊಂದು ನಡುವೆ ಒಡನಾಡಿದರೆ ಈ ಭಾವಗೊಂಚಲು ಸಾರ್ಥಕ್ಯದ ತೀರ್ಥವ ಮಿಂದಂತೆ ಲೆಕ್ಕ...

ಹನ್ನೊಂದಕ್ಕೊಂದು ಶುಭಾಶಯ - ಎನ್ನ ಬೆನ್ನಿಗೆ ಎನ್ನದೇ ಮೊದಲ ಚಪ್ಪರಿಕೆ...

ನಿಮ್ಮ ಅಕಾರಣ ಪ್ರೀತಿಗೆ ಇಲ್ಲಿಂದಲೇ ಶಿರಸಾ ನಮಾಮಿ...
ಪ್ರೀತಿ ಕಾಯುತ್ತದೆ, ಕಾಯಲಿ ಸದಾ...
ಧನ್ಯವಾದ... ಲವ್ಯೂ ಆಲ್... 💞💞


*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

Sunday, December 19, 2021

ಗೊಂಚಲು - ಮುನ್ನೂರೆಂಬತ್ತೈದು.....

ಮರಣ ಸುಖ.....

ಮಾತು ಸೋತ ಹೊತ್ತಿನಲ್ಲಿ -
ನಿನ್ನ ಕಾಡದಂತೆ ನನ್ನ ನಾನು ಸಂಭಾಳಿಸಿಕೊಳ್ಳಬೇಕಾದಲ್ಲಿ ಸುಮ್ಮನಿದ್ದುಬಿಡಬೇಕು...
ಸುಮ್ಮನೆದ್ದುಬಿಡುವ ನಿರಾಕರಣೆಗಿಂತ ತುಸು ಸುಮ್ಮನಿದ್ದು ನೀರೆರೆಯಬೇಕು...
____ನೇಹ, ಪ್ರೀತಿ, ನೆನಹು, ಇತ್ಯಾದಿ...
⇱↺↹↻⇲

ಶ್ರೀ ಇಲ್ಕೇಳೋ -
ರಾಧಾ ಕೃಷ್ಣ‌ರನ್ನ ಆ ಪರಿ ಆರಾಧಿಸೋ ನಾವುಗಳೇ ಒಲವೆಂಬೋ ಬಯಲ ಗಂಧವನ್ನ ಡಬ್ಬೀಲಿ ತುಂಬಿ, ಮುಷ್ಟೀಲಿ ಹಿಡ್ಕೊಂಡು, ವಿಧವಿಧ ಹೆಸರಲ್ಲಿ ಕೇವಲ ನಂದ್‌ನಂದೇ ಆಗಿ ಪಳಗಿಸ್ಕೊಂಡು ಆಳ್ತೀನೀ ಅಂತ ಹೊರಡ್ತೀವಿ ನೋಡು; ಚೋದ್ಯವೇ ಅಲ್ವಾ...!!
ಎಲ್ಲಾ ಋತು ರಾಗಗಳಿಗೂ ಎದೆಯೀಯದ ಭಾವಗಳೆಲ್ಲಾ ಮಣ್ಣ ಗೋಲಕದೊಳಗೆ ಕೂಡಿಟ್ಟ ಪುಡಿಗಾಸಿನಂಗೇ ಅನ್ಸಲ್ವಾ...
______  ಪ್ರೀತಿ, ಪ್ರೇಮ, ಪ್ರಣಯ ಇತ್ಯಾದಿ ಇತ್ಯಾದಿ...
⇱↺↹↻⇲

ಈ ಅಪರ ಹೊತ್ತಿನ ಮಳೆಯಲ್ಲಿ ನೆನಪುಗಳೆಲ್ಲಾ ತೊಳೆದು ಹೋಗಬೇಕು - ನಿಮ್ಮೊಳಗಿನ ನನ್ನೆಡೆಗಿನದು...
ಗುರುತುಗಳುಳಿಯಬಾರದು ಈ ಊನ ಪಾದದ್ದು...
_____ ಸತ್ಯ ರುಚಿಸುವುದಿಲ್ಲ ಭಾವೋನ್ಮಾದಿ ಮನಸಿಗೆ...
⇱↺↹↻⇲

ಭಾವ ಪ್ರವಾಹ/ಪರವಶತೆ ಒಮ್ಮುಖವಾದರೂ ನಗುತಲೇ ಸ್ವೀಕರಿಸಿ ಸೈರಿಸಬಹುದು - ಅಂತರಂಗದ ಅನುಸಂಧಾನದಲಿ ನನ್ನ ಪ್ರೀತಿಸಿಕೊಂಡಂತೆಯೇ ನಿನ್ನನೂ ಪ್ರೀತಿಸಿಕೊಂಡಿರಲಾದೀತು... 
ಆದರೋ,
ನೇರ ಸಂವಹನದ ಹಾದಿ ಒಮ್ಮುಖದಲಿ ಸವೆಯುವುದಾದರೆ ಮಾತ್ರಾ ತುಂಬ ಕಾಲ ಒಡನಾಟ ಸಹನೀಯವಾಗಿ ಒಡಂಬಡುವುದು ಕಷ್ಟ ಕಷ್ಟ - ಅಲ್ಲಿ ಸ್ವಯಂ ಅವಮಾನದ ಭಾವ ಒಳಗೊಳಗೇ ಕಾಡದೇ ಉಳಿವುದು ದುರ್ಲಭ...
_____ ಭಾವ - ಬಂಧ - ಸಂಬಂಧ ಇತ್ಯಾದಿ ಇತ್ಯಾದಿ...
⇱↺↹↻⇲

ಒಳಗೆ ಗದ್ದಲ ಗುಡುಗುಡಿಸುವಾಗ ಹೊರಗಿನ ಸದ್ದು ಕಿವಿಯ ಅಂಟುವುದಿಲ್ಲ...
ಶೃದ್ಧಾಂಜಲಿಗೆ ಮೌನವೇ ಗಟ್ಟಿ ಆಯ್ಕೆ ಆಗಿದ್ದು ಅದಕ್ಕೇ ಅಲ್ಲವಾ...
⇱↺↹↻⇲

ನಿನ್ನ ಇರುವಿಕೆಯೇ ಒಂದು ವಿಪಿನ ಸೌಂದರ್ಯ - ಚಂದಕೊಂದು ರೂಪಕ...
ನಿನ್ನಂತೆ ನಿನ್ನಲ್ಲಿ ಚಂದವ ಕಂಡೆನಾದರೆ ನಾನೂ ನಿನ್ನಷ್ಟೇ ಚಂದ...
_____ ನಿನ್ನಂತೆ ನೀ ಅದೆಷ್ಟು ಚಂದ ಚಂದ...
↺↹↻⇲

ಮಳೆಯಲಿ ಮಿಂದು ಛಳಿಯ ಸೆರಗ ಹೊದ್ದ ಬೆಳಕಿನ ಕೋಲ್ಗಳು ಹಸಿರ ಮರೆಯಿಂದ ತಿಣುಕುತ್ತಾ ಊರು ಕೇರಿ ಹಾದಿ ಬೀದಿಗಳನು ಮೆಲ್ಲಗೆ ತುಳಿಯುತ್ತವೆ... 

ಹೆಸರಿರದ ಹಾಡು ಹಕ್ಕಿಯೊಂದು ರೆಕ್ಕೆ ಕೊಡವಿದ ಸದ್ದಲ್ಲಿ ಕಾಡು ಕತ್ತಲ ನೀರವದ ನಡುವಿನ ಓಂಕಾರ ಕೇಳಿದರೆ ಅದು ನನ್ನೂರು...
_____ಮಲೆ(ಳೆ)ನಾಡು - ಮಬ್ಬು ಹಬ್ಬಿದ ಹಬ್ಬದ ಬೆಳಗು...
⇱↺↹↻⇲

ಉರಿಯುತಿರಲಿ ಕಣ್ಣ ಕಕ್ಷೆ‌ಯ ತುಂಬಾ ನಗೆಯ ಹಣತೆ...
ಉಕ್ಕುತಿರಲಿ ಎದೆಯ ಪಾತ್ರೆ ತುಂಬಿ ತುಂಬಿ ಪ್ರೀತಿ ಒರತೆ...
ಬೆಳಕು - ಬೆಡಗಿನ ಶುಭಾಶಯ... 💞🍬
_____ ದೊಡ್ಡಬ್ಬ...
⇱↺↹↻⇲

ಒಂದು ನಗೆಯ ಕಿಡಿಯು ಸಿಡಿಯೆ ಎದೆಯಿಂದ ಎದೆಗೆ
ಪ್ರೀತಿ ಬಣ್ಣದಾ ಹುಗ್ಗಿ ಪರಿಪಾಕವ ಬಡಿಸಿದಂಗೆ ಎದೆಯಿಂದ ಎದೆಗೆ
ಕನಸುಗಳ ಸುಗ್ಗಿ ಹಿಗ್ಗಿನ ಸಗ್ಗವಾಗಲಿ ಎದೆಯ ನೆಲ/ಬಿಲದಾಗೆ...
"ಹುಚ್ಚಾಟದ ಹೆಗಲನೇರಿ ನಡೆವ ಹುಚ್ಚು ನಗೆಯ ಆಂತರ್ಯದಲ್ಲಿ ಹೊತ್ತಿ ಉರಿವ ಜೀವಂತಿಕೆ‌ಯ ಹಸಿವು..."
____ ನಗುವೊಂದೇ ಆಯ್ಕೆ, ಆದ್ಯತೆ, ಪ್ರಾರ್ಥನೆ, ಎಲ್ಲ ಎಲ್ಲಾ...
⇱↺↹↻⇲

"ನಾನು ಹೇಳುವುದೆಲ್ಲಾ ಸತ್ಯ, ಸತ್ಯವನ್ನಲ್ಲದೇ ಬೇರೇನನ್ನೂ ಹೇಳುವುದಿಲ್ಲ" ಅಂತಂದು ಅಂತರಾತ್ಮನೆದುರು ಪ್ರಮಾಣ ಮಾಡಬಲ್ಲೆಯಾದರೆ.........
______ ಮರಣ ಸುಖ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

ಗೊಂಚಲು - ಮುನ್ನೂರೆಂಬತ್ನಾಕು.....

ನನ್ನ ಆಧ್ಯಾತ್ಮ.....

ಕನ್ನಡಿಯೆದುರು ಕಣ್ಮುಚ್ಚಿ ಕಳೆದಿರುಳ ನೆನೆಯುತ್ತಾ ಮೀಸೆಯಂಚಿನ ಬೆಳಕ ಕುಡಿಯುತಿಹಳು...
ಅವಳೀಗ ಅವಳೊಳಗೆ ನನ್ನ  ಕ(ಪ)ಡೆಯುತಿಹಳು...
______ ನನ್ನ ಕಪ್ಪು ಹುಡುಗಿ...
↯↩↰↱↪↯

ಮೊದಲ ನೋಟದಲ್ಲೇ ಚಿಗುರುತ್ತಂತಲ್ಲ ಪ್ರೇಮ - ಚೆಲುವು, ಬೆರಗು...
ನಿಬ್ಬೆರಗಷ್ಟೇ ಪ್ರೇಮವಾ...?!!
ಒಡನಾಡಿ ಒಡನಾಡಿ ಅರಳಿ ಕಾಡುತ್ತಂತೆ ಪ್ರೇಮ - ರೂಢಿಗತ ಸಂವಹನ...
ಬೆರಗೇ ಉಳಿಯದಲ್ಲಿ ಪ್ರೇಮವಾ...?!!
ಮತ್ತೇನೂ
"ಅನುಕ್ಷಣದ ಬೆರಗು ಪ್ರೇಮ - ಕಡಲಿನಂಥ ಮೊರೆತ, ಕಾಡಿನಂಥಾ ಜೀವಂತಿಕೆ..."
_______ನನ್ನ ಆಧ್ಯಾತ್ಮ...
↯↩↰↱↪↯

ನನ್ನ ಖುಷಿಗಳೆಲ್ಲಾ ಇಂಥವೇ - ನೀನು ತೂಗುವ ಕನಸು, ನಿನ್ನ ಕೂಗುವ ನೆನಪು...
ಮಲೆನಾಡ ಹುಡುಗ ನಾನು; ತುರುಬಿಗೆ ಕಾಡಿನಂದವ ಮುಡಿಸುವೆ - ಉಸಿರಿಂಗೆ ಮಣ್ಣ ಗಂಧವ ಕುಡಿಸುವೆ...
ಕಣ್ಮುಚ್ಚಿ ಕರೆಯ ಕೊಡು ಕನಸೀಗೆ ಬಂದು ಲಾಲೀನ ಹಾಡುವೆ...
ಬಡ‌ವನ ಕಣ್ಣ ಜೋಳಿಗೆ ತುಂಬಾ ಬಾನ ತಾರೆಗಳದೇ ಜಾತ್ರೆ...
____ ಸಿಗು ಒಮ್ಮೆ, ಕಣ್ಣಲ್ಲಿ ನಕ್ಷತ್ರ ಬಾಡುವ ಮುನ್ನ...
↯↩↰↱↪↯

"ನಂಬಿದ್ರೆ ನಂಬು ಬಿಟ್ರೆ ಬಿಡು, ನಾ ನಿಜಾ ಹೆಳ್ತಿದೀನಿ - ನಿಂಗಿಂತ ಚೆಲುವನ್ನು ಮತ್ತೆಲ್ಲೂ ಕಂಡಿಲ್ಲ" ಅನ್ನುವ ಕಣ್ಣಲ್ಲಿ ತೋಳ್ತುಂಬ ತುಂಟತನ, ಬೊಗಸೆಯಷ್ಟು ಆಸೆ, ಚಿಟಿಕೆ ಪ್ರೀತಿ.......
_____ ಸುಳ್ಳೇ ಸೋಲುವ ಸಖ್ಯ...
↯↩↰↱↪↯

ಬೆಳದಿಂಗಳು ಚೆಲುವಲ್ಲ ಅದು ನಿನ್ನ ಗುಣ...
ಸುಡುಬಿಸಿಲು ಉರಿಯಲ್ಲ ಅದು ನಿನ್ನ ಬಣ್ಣ...
ಯಾವ ಕಾವ್ಯ ಕುಸುರ ಸಮ ತೂಗೀತು ಹೇಳು - 
ಎದೆಯ ಪ್ರೀತಿ ಗಂಗೆ ತುಂಬಿ ನಗುವ ನಿನ್ನ ಕಣ್ಣ...
___ ಅಡಗಲರಿಯದ ಬಯಲ ಬೆಳಕು ನೀನು...
↯↩↰↱↪↯

ನಾನೇನು ಕಡಲಲ್ಲ - ಗಾಳಿಗೊಲಿದ ಸಣ್ಣ ಹನಿ ಅಷ್ಟೇ...
ಆದರೂ,
ನನ್ನೊಳಗಿಂದ ಹಾಯುವ ಬೆಳಕ ಸೆಳಕು ನಿನಗೆ ದಕ್ಕಿದಷ್ಟೇ ನಿನ್ನದು...
____ 'ನಾನು' ಅಂಬೋ ಕಾಮನ ಬಣ್ಣ...
↯↩↰↱↪↯

ಬೆಳದಿಂಗಳು ತನ್ನ ಬೆಳಕನ್ನು ತಾನೇ ಬೆರಗಿನಿಂದ ನಿರುಕಿಸಿದಂತೆ ನಿನ್ನ ನೀನು ನೋಡಿಕೊಂಡು ಬೆಡಗಿನಿಂದ ಬೀಗುವಾಗ ನಾನಿನ್ನ ಕದ್ದು ನೋಡಬೇಕು...
ಕತ್ತಲು ಕತ್ತಲೆನಿಸದಂಗೆ ಮುತ್ತು ಮಳೆ ಉಂಡು ಮತ್ತ ನಗೆಯಾಗಿ ತೇಗುವ ನಿನ್ನ ತುಟಿಗಳು ಬಾಗಿ ಬಿರಿದ ಎನ್ನೆದೆಯಲಿ ಅಡಗುವಾಗಿನ ನಿನ್ನ ನಾಚಿಕೆಯ ನಾನು ಖುದ್ದು ಸವಿಯಬೇಕು...
____ಇನ್ನೇನು ಆಷಾಢ ಮುಗಿದಂಗೇ... 
↯↩↰↱↪↯

ನಿನ್ನ ರಾಕ್ಷಸಾಕಾರಕೆ ಜಗ್ಗದ ಮೈ ನೀ ಎದೆಯಲ್ಲಿ ಬಿತ್ತಿ ಬಿಟ್ಟು ಹೋದ ಗುಬ್ಬಚ್ಚಿ ಮೆದು ಭಾವಗಳ ಭಾರಕ್ಕೆ ಸೋಲುತ್ತದೆ...
ಇನ್ನು ಈ ಮುಂದಿನ ಇರುಳ ಹೊರೆಯ ಹೊರುವುದು ಹೇಗೋ...
____ ವಿದಾಯದ ಮೌನ ಮತ್ತು ತೇವ ಕಂಗಳ ಮಾತು...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

Sunday, November 28, 2021

ಗೊಂಚಲು - ಮುನ್ನೂರೆಂಬತ್ಮೂರು.....

ಚೇತೋಜಾತನ ಸೂತ್ರ.....

ನನಗೆ ನನ್ನ ಗೆದ್ದು ಕೊಟ್ಟ ಹಸಿ ಮಣ್ಣಿನಂಥ ಹೆಣ್ಣೇ -
ಪೋಲಿ ಹೈದನೆದೆಯ ಮಳೆ ಸಂಜೆಯ ಕಡು ಮೋಹೀ ಘಮಲಿನ ತಲ್ಲಣಗಳಿಗೆ  ಪದಗಳ ಪೋಣಿಸಿದರೆ ನೆಂದ ಹಾದಿಯ ತುಂಬಾ ನಿನ್ನ ಹೆಸರೇ ಕವಿತೆ...
ಪಾದಕಂಟುವ ತಂಪಿನಿಂದೆದ್ದು ಬರುವ ನೆನಹುಗಳಿಗೆ ಉದ್ದುದ್ದ ಬಿದ್ದ ಏಕಾಂತದ ಬಿಸಿಯಲ್ಲಿ ಸಾಣೆ ಹಿಡಿದು ಕಟ್ಟುವ ಪ್ರಣಯೀ ಕನಸುಗಳ ಕಣಜದ ತುಂಬಾ ಕಾಳು ಕಾಳು ನೀನೇ ನೀನಾಗಿ ತುಂಬಿಕೊಂಡ ಕವಿತೆ...
_____ 'ಕಾಯ'ಬೇಕು, ನಿನ್ನೊಳಗೆ ಮೀಯಬೇಕು...
$$$

ಕರಿಯಾ -
ಕಾಮನ ಅಬ್ಬರ ಉಬ್ಬರ‌ಗಳನೆಲ್ಲ ಮರೆತು ಬಿಡಬಹುದು ಕಣೋ...
ಆದ್ರೆ,
ಮಹಾಪೂಜೆಯ ಮರು ಘಳಿಗೆ ಬೆಮರು ಆರುವ ಹೊತ್ತಲ್ಲಿ ಅನಾಮತ್ತು ಎದೆಯ ಮೇಲೆಳಕೊಂಡು ನವಿರಾಗಿ ನೆತ್ತಿ ನೇವರಿಸುತ್ತಾ ನಿದ್ದೆಗೆ ಸ್ಪರ್ಶ‌ದ ಲಾಲಿ ಹಾಡ್ತೀಯ ನೋಡೂ, ಅದೊಂದು ಅನುಭಾವಕ್ಕಾಗಿ ಮತ್ತೆ ಮತ್ತೆ ನಿನ್ನ ಬಿಗಿ ಬಾಹುಗಳ ಹಸಿವಿನ ಆಟಿಕೆಯಾಗಿ ನಿನ್ನೆಡೆಗೆ ಬರ್ತೇನೆ...
___ ನಿನ್ನ ತೋಳಲ್ಲಿ ಕರಿ ಮುಗಿಲ ಬಿಳಲು ನಾನು...
$$$

ಏನಿಲ್ಲಾ...
ಸುಮ್ನೆ ಕೂಗ್ದೆ ಅಷ್ಟೇ ಅಂತಾಳೆ...
ಮುಸ್ಸಂಜೆ ಮುಳುಗುವಾಗಲಿರಬಹುದು, ಇಲ್ಲಾ ಹೊತ್ತಲ್ಲದ ಹೊತ್ತಲ್ಲೂ ಇರಬಹುದು...
ಈ "ಏನಿಲ್ಲಾ" ಅಂಬೋದ್ರಲ್ಲಿ ಏನೇನೆಲ್ಲಾ ಇರತ್ತೆ ಅನ್ನೋದು ತಿಳೀಬೇಕಂದ್ರೆ ನಾ ಹಾಗಂದವಳ ಕಣ್ಣ ತಿಳಿಗೊಳದಲ್ಲಿ ಈಜು ಮರೆತು ಮುಳುಗಬೇಕು...
ಅವಳ ಹೊತ್ತಲ್ಲಿ ಅವಳಿಗೆ ಒಪ್ಪವಾಗಿ ಒಪ್ಪಿಸಿಕೊಂಡು ಬೇಶರತ್ತಾಗಿ ಸಿಕ್ಕಿ ನೋಡಬೇಕು...
ಆ ಕಣ್ಣಾಮುಚ್ಚೆ ಆಟದಲ್ಲಿ ಕತ್ತಲ ಹುಡುಕೋ ಅವಳಿಗೆ ಸಾರಾಸಗಟಾಗಿ ಸೋತು ನೋಡಬೇಕು...
ಅಷ್ಟೇ,
ಖಡಕ್ ಚಾಯ್‌ನ ಕಟ್ಟಗಿನ ಘಮವೊಂದು ಸಣ್ಣ ಕರುಳಿನಿಂದೆದ್ದು ಬಂದಂತ ಹಿತವಾದ ಭಾವ ವಿದ್ಯುಲ್ಲತೆ ಮೈಮನಸಲೆಲ್ಲ ಸುಳಿದಿರುಗಿ ಕಣ್ಣು ತೇಲುವಂತೆ ಆ ಹೊತ್ತನು ಮತ್ತಾಗಿಸುತಾಳೆ ಮತ್ತು ಕುರುಳ ಕೆಡಿಸಿ ಈ ಗಂಡ್ಗೊರಳನು ಪ್ರಣಯ ಸುರಹೊನ್ನೆಯಾಗಿ ಬಳಸಿ ಸಿಂಗರಿಸುತಾಳೆ...
ಹಾಗೆ
ಒಲೆಯ ಮೇಲೆ ಹಾಲುಕ್ಕುವಾಗ ಹೆಣ್ಣೆದೆ ಬಿರಿದರೆ ತುಟಿಯ ಕೊಂಬೆಯಿಂದ ಮುತ್ತು ಜೇನಾಗಿ ಸುರಿಯುವ ಮೋದವ ಅವಳ ಗತ್ತು ಗೈರತ್ತಿಗೆ ಸೋತೇ ಸವಿಯಬೇಕು...
ಗುಟ್ಟಿನ ವಿಷ್ಯಾ ಏನ್ಗೊತ್ತಾ,
ನನ್ನೊಡನೆಯ ನೂರು ಕಿರುಚಾಟಗಳ, ಅಸಮರಾಗದರಿಗಳ ಅವಳು ಎದೆಯಲ್ಲೇ ಕೊಲ್ಲುವುದು ಎದೆಗೆ ಎದೆಯಾತು ನಿಂತು ಉಗೋಡಾಗಿ ಆಡದೇ ಮಿಡಿದ ಇಂಥದೊಂದು ಪಿಸುನುಡಿಯಲೇ ಅನ್ನುತಾಳೆ...
___ಮುಂದುವರಿದು ಎಲ್ಲಾ ಎಂದಿನಂತೆ ಚಂದ ಸ್ವಚ್ಛಂದ...
$$$

ಆಹ್,
ಆ ಮಧುರ ಮಾರ್ಗವ ಹಾಯುವ ಭೋರ್ಗರೆತದ ಮಜಲುಗಳಲಿ ನೀನು ದಾಖಲಿಸುವ ಸುಖದ ಪಲುಕುಗಳ ಮುಲುಕುಗಳನು ಜೋಪಾನ ಕಾಯ್ದಿರಿಸಿಕೊಳ್ತೇನೆ...
ಹಾss,
ನೀ ಜೊತೆ ಇಲ್ಲದ ನೀರವ ರಾತ್ರಿಗಳ ಹೊಳೆಯ ಸುಳಿಗಳನು ದಾಟಲು ಅವೇ ನನಗೆ ಸುಕೋಮಲ ಹಾಯಿಗಳು...
___ ಕೊಟ್ಟು ಕೊಟ್ಟು ಬರಿದಾದಷ್ಟು ತೃಪ್ತವೆನಿಸೋ ಮೋದ/ಹ..‌.
$$$

ಋತುಮಾನದ ಮೂರೂ ಕಾಲಗಳ ಇರುಳನೂ ನಿನ್ನ ವಿರಹದ ಕಿಡಿ ಹಿಡಿಹಿಡಿಯಾಗಿ ಸುಟ್ಟಷ್ಟು ಘನವಾಗಿ ಬಿಸಿಲೂರಿನ ರಣ ಬೇಸಿಗೆಯ ನಡು ಹಗಲ ಸುಡು ಬಿಸಿಲ ಒಣ ಉರಿಯೂ ಸುಡುವುದಿಲ್ಲ ನನ್ನನು...
___ನಾಭೀಮೂಲಜ್ವಾಲೆ...
$$$

ಛೀ ಪೋಲೀ,
ಮಾತಲ್ಲಿ ಗೆಲ್ಲಲಾಗದೋ ನಿನ್ನ ಅಂದಳು...
ಈ ಸಂಭಾಷಣೆ,
ನಾ ಗೆಲ್ಲುವ ಮಾತಲ್ಲವೇ ಇದೂ, ನಿನ್ನ ಗೆಲುವನು ಮನಸ್ವೀ ಖಾತರಿಪಡಿಸಿ ನಾನಳಿದು ಸಂಭ್ರಮಿಸೋ ಉತ್ಸವ ಅಂದೆ...
ಕೊರಳ ಹಾರವಾಗಿ ಆರಾಜಿತ ಕಣ್ಣ ತುಂಬಾ ಕಮ್ಮಗೆ ಬಿರಿದ ಹೂ ನಾಚಿಕೆಯ ನಿಸ್ವನ...
____ಚೇತೋಜಾತನ ಸೂತ್ರ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

ಗೊಂಚಲು - ಮುನ್ನೂರೆಂಬತ್ತಾ ಎರಡು.....

ನರಕವೂ ಒಂದು ಭರವಸೆ.....

ಊಟದ ಸಮಯ ಮೀರಿದರೆ ಹಸಿವೂ ಇಂಗಿ ಹೋಗತ್ತಂತೆ - ನಿತ್ರಾಣವೊಂದೇ ಉಳಿಯೋದು ಆಮೇಲೆ...
____ ನಾನೂ ಹಂಗೇ ಆದೇನಾ...

ಹಸಿದಾಗ ಊಟ ಸಿಕ್ಕರೆ ಹೊಟ್ಟೆ ಉಬ್ಬರಿಸಿ ತೇಗು - ಊಟ ಸಿಗದಾಗ ಗ್ಯಾಸ್ಟ್ರಿಕ್‌ನ ತೇಗು...
_____ ನೀನು ಮತ್ತು ಮೋಹ...
&&&

ಎಲ್ಲೆಲ್ಲಿಂದಲೋ ಬಂದು ಇಲ್ಲೇ ನೆಲೆನಿಂದು ಕೊಟ್ಟ ನಾಕಾಣೆ ನಗುವಿಗೆ ನೂರಾಣೆ ಪ್ರೀತೀನ ತುಂಬಿ ತುಂಬಿ ಕೊಡುವ ನೇಹ ರಾಗಗಳೆದುರು ಕಣ್ಣ ತೂಗುವ ಮೂಕ ಸಭಿಕ ನಾನು...
_____ ನೀವೆಂದರೆ ಎನ್ನೆದೆಯ ಸಂದೂಕದ ಸಿರಿ ಸಂಭ್ರಮ...
&&&

ಸತ್ಯದ ಬಗ್ಗೆ ಬೊಬ್ಬಿರಿಯುವವರ ಮಧ್ಯೆ ಸತ್ಯವ ನುಡಿಯುವವರ ಅಲ್ಲಲ್ಲ ಸತ್ಯವ ಹುಡುಕುವುದು ಸಾಹಸವೇ ಹೌದು...
____ ಸುಭಗತನ...
&&&

ಇದೇನು ಕರ್ಮಾನೋ, ಬದುಕಿದ್ದಾಗ್ಲೇ ನರಕ ನೋಡ್ಬೇಕು ಕಣೋ...
ನರಕದಲ್ಲೂ ಬದುಕಿದ್ದೇವೆ ಅನ್ನೋದೇ ಸ್ವರ್ಗ‌ದ ಕನಸಿನ ಶಕ್ತಿ ಕಾಣೋ...
____ ನರಕವೂ ಒಂದು ಭರವಸೆ...
&&&

ಭಾವ ಸತ್ತುಬಿಟ್ಟರೆ ಬದುಕೋದು ಸುಲಭ...
ಭಾವವ ಕೊಂದುಕೊಂಡು ಜೀವಿಸೋದು ಹಿಂಸೆ...
_____ ನೀನೆಂಬ ಕಡು ಮೋಹ...
&&&

ನಿನ್ನ ಮೌನಕೆ ಹೆಸರು - ನನ್ನ ಸಾವು...
____ ಹೃದಯಾ...
&&&

ಉಸಿರ ಭಾವ ಬೆರೆತರೆ ಹಸಿರಿಗೆ ಬೇರು ಒಂದೇ ಸಾಕು...
____ಆತ್ಮ ಸಾಂಗತ್ಯ ಎಂದರೆ...

ಪಟ ಸೌಜನ್ಯ: SDG 30

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

Sunday, October 24, 2021

ಗೊಂಚಲು - ಮುನ್ನೂರೆಂಬತ್ತೊಂದು.....

ವಯಸ್ಸೇ ಆಗದ ಪ್ರೀತಿ.....

ಬರುವಾಗಲೊಂದು ಖುಷಿ ಇರಬೇಕು ಅಥವಾ ಹೊರಡುವಾಗ ಒಂದು ಹಗುರತೆ ಜೊತೆಯಾಗಬೇಕು - ವಿದಾಯಕ್ಕೂ ಘನತೆ ತುಂಬುವ ಒಂದು ಗಟ್ಟಿ ತಬ್ಬುಗೆ ಹೊಮ್ಮಿ ಬರಬೇಕು...
ಸ್ನೇಹವೆಂದರೆ ಇಷ್ಟೇ ಇರಬೇಕೇನೋ; ಅಲ್ಲಲ್ಲ ಇಷ್ಟಾದರೂ ಇರಬೇಕೇನೋ...
_____ ನಾ ಕೊಡಲಾರದ್ದನ್ನು ನಿನ್ನಲ್ಲಿ ಹುಡುಕುವ "ನಾನು..."

ಬೇರಿಗಂಟಿದ ಮಣ್ಣು - ಹೂವೆದೆಯ ಧೂಪ - ನೆಲಕಂಟಿ ಮುಗಿಲ ಬಾಚುವ ಕನಸಿಗೆ ಹೆಗಲಾದ ಜೀವ ತಂತು "ನೇಹ..."
_____ ಭಾವಕೆ(ದ) ಬೆರಳಿನಾ(ಗಾ)ಸರೆ ನೀನು ಮತ್ತು ನಿನಗೆ ಹೃದಯದ ಧನ್ಯವಾದ...
💟💟💟

ಅಲ್ಯಾರೋ ನೆನೆಸಿಕೊಳ್ತಾರೆ ಮತ್ತು ಇಲ್ಲೊಂದು ಮುಚ್ಚಟೆ‌ಯ ನಗೆ ಕಣ್ಣಾಲಿಯಲಿ ತುಳುಕುತ್ತೆ...
____ವಯಸ್ಸೇ ಆಗದ ಪ್ರೀತಿ... 💞💞

ನೀನೇ ನಿನ್ನ ಹಾದಿಯ ಬೆಳಕಾಗುವಲ್ಲಿ ನಿನ್ನ ವಿಜಯ... 🌾 
ಗೆಲುವಿನ ಹಬ್ಬದ ಶುಭಾಶಯ ನಿಮಗೆ... 🕊️
15.10.2021
💟💟💟

ಬದುಕಿನ ಬಂಧನವ ಧಿಕ್ಕರಿಸಿಯೇನು - ಹಾಗಂತ ಜೀವಾಭಾವದ ಭವ್ಯತೆಯನ್ನಲ್ಲ...
____ ನೀನು ಮತ್ತು ಪ್ರೀತಿ...
💟💟💟

ಅಂಟಿ ನಡೆವ ಒಂಟ್ಹಿಡಿತದ ಗಂಟು ಗಂಟು ನಂಟುಗಳ ಹಕ್ಕು ಸ್ವಾಮ್ಯದ ಭಾವಗಳು ಆಕರಿಸುವ ಸುಂಕವ ಭರಿಸಲಾಗದ ಬಿಂಕದ ಬಡವ ನಾನು...
ಹಾಗೆಂದೇ,
"ಈ ಕ್ಷಣದ ಸತ್ಯ ನೀನು...
ಈ ಕ್ಷಣಕಷ್ಟೇ ಸತ್ಯ ನಾನು..."
💟💟💟

ಮೊರೆವ ಕಡಲ ಮರ್ಮರ‌ ಎನ್ನೆದೆಯಲಿ ಸೃಜಿಸುವ ದಿವ್ಯ ಮೌನ ಅವಳು...
ಸಿಂಧುವಿನಂಚಿನ ಕ್ಷುದ್ರ ಬಿಂದು ನಾನು... 
ಸಾಗರ ದಂಡೆಯ ಯೆನ್ನ ಮರಳ ಗೂಡಿಗೂ ಶತಾಯುಷ್ಯವ ಬೇಡುವ ಕಡು ಜೀವನ್ಮೋಹಿ ಅವಳು...
ಬೆರಗಿನ ಬೇರುಗಳೆಲ್ಲ ಬತ್ತಿ ಬೋಳಾಗಿ ದಂಡೆಗಂಟಿ ನಿಂತಿರುವ ಕುಬ್ಜ ಮರ ನಾನು...
"ಶರಧಿಯ ಹೆಗಲಿಗಾತು ತುಸು ನಕ್ಕಾಗಲಷ್ಟೇ ಜೀವಂತ ನಾನು - ಶರಧಿಯೇ ಅವಳು..."
____ ಪಶ್ಚಿಮಾಂಬುಧಿ - ಆಯೀ ಅಂಬುವವಳು - ಎನ್ನೆದೆ ಗೂಡೊಳಗಣ ಜೀವಾಭಾವ ಸಂಜೀವಿನಿ...



*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

ಗೊಂಚಲು - ಮುನ್ನೂರೆಂಬತ್ತು.....

ಭಾವಾನುಭಾವ ಬೆಳಕು.....

"ಪ್ರೀತಿ" 
ಉಸಿರಿನಂಗೆ ಸುಮ್ಮನೇ ಜೀವಿಸಿದಾಗಷ್ಟೇ ಜೀವಂತ...
ಕೊಟ್ಟೆ, ಪಡೆದೆ ಎಂಬುದೆಲ್ಲ ಬರೀ ಖೊಟ್ಟಿ ಧಾವಂತ...
_____ ಏಕಾಂತದೊಡನೆಯ ಏಕಾಂಗಿಯ ಅನುಸಂಧಾನ...
💞💞💞

ಕೊಟ್ಟಾತ ಮರೆತು ಪಡೆದಾತ ಮೆರೆಸಿ ಮರಮರಳಿ ಅರಳುವಲ್ಲಿ ದಿವ್ಯ ಗಂಧ "ಪ್ರೀತಿ..."
____ ಭಾವಾನುಭಾವ ಬೆಳಕು...
💞💞💞

ಕಟಬಾಯಿ‌ಗಂಟಿದ ಕದ್ದು ಮೆದ್ದ ಬೆಣ್ಣೆ ನೆಯ್ಕ್ಲು ಪಾಪವಾಗದೇ ಪಾಪಚ್ಚಿ ನಗೆಯಾಗುವ ಪರಿಗೆ 'ಕೃಷ್ಣಾsss' ಇಂದಿಗೂ ನಿನ್ನದೇ ಹೆಸರು...
ಬದುಕಿನ ಎಲ್ಲಾ ವಯೋಮಾನದಲೂ, ನೂರು ಸ್ಥಿತ್ಯಂತರದಲೂ ಮಗುವಾಗಬಹುದು ನೋಡು ನಿನ್ನ ನಗೆಯಲ್ಲಿ ಮಿಂದುದಾದರೆ - ಬೆಣ್ಣೆಯಷ್ಟೇ ಮೆದುವಾಗಿ ಕಟು ಮನಸನೂ ಕದಿಯಬಲ್ಲ ನೀನೆಂದರೆ (ಮಗುವೆಂದರೆ) ನವಿಲುಗರಿ‌ಯ ನವಿರು ಮೈ ಸೋಕಿದ ಗರಿ ಗರಿ ಕಚಗುಳಿ...
____ ಅದ್ವೈತ...


ನೀನಿಲ್ಲದೆ ಬದುಕಬಲ್ಲೆನೆ ಹೊರತು ಜೀವಿಸಲಾರೆ... 
ಉಸಿರಾಡಿದರಾಯಿತೇ - ಜೀವಂತ ಅನ್ನಿಸೋ ನಿನ್ನ ಕನಸಿಲ್ಲದೇ ನಿಟ್ಟುಸಿರ ಭಾರ ನೀಗಲಾರೆ...
ಬಿಂಬ - ಪ್ರತಿಬಿಂಬ, ಬಾನು - ಭೂಮಿ, ಕೊಳಲು - ನಾದ, ರುದಯ - ಬಡಿತ, ಮಂದ್ರ - ತಾರಕ, ತುಡಿತ - ಮಿಡಿತ, ಸೆಳೆತ - ಮಿಳಿತ, ನವಿಲು ಗರಿ - ಮೊಲ್ಲೆ ಮಾಲೆ, ಕಪಿಲೆ ಕೊರಳ ಘಂಟೆಯ ದನಿ - ನೊರೆ ಹಾಲ ಹಸಿ ಘಮ, ನಿನ್ನ ಪಾದಕೆ ಎದೆ ಕೊಟ್ಟ ಧೂಳು - ಊರಾಚೆಯ ಪಾಳು ಭವಂತಿ, ಇಲ್ಲಿಯದೆಲ್ಲದರಲ್ಲೂ - ಮತ್ತಲ್ಲದೇ ಶರತ್ತುಬದ್ಧ ಬದುಕಿಗೆ ಒಪ್ಪಿಸಿಕೊಂಡೂ ಬೇಶರತ್ತಾಗಿ ನಿನ್ನ ಪ್ರೀತಿಸಿಕೊಂಡ ನನ್ನಲ್ಲೂ ನೀನೊಂದು ಆತ್ಮಸ್ತ ನವಿರು ಛಾಯೆ... 

ನಿನ್ನ ಬರುವಿಕೆಯ ಬಯಕೆಯಲ್ಲಿರುವವಳ ನೀ ಬರಲಾರೆಯೆಂಬ ವಾಸ್ತವದ ಅರಿವಿನಲ್ಲೂ ನೀನೇ ನೀನು...

ನೀನಿಲ್ಲದ ನಾನೇನು ಎಂಬ ನನ್ನದೇ ಪ್ರಶ್ನೆಯ ಮರುಳುತನದ ನಗುವಲ್ಲೂ ಮತ್ತೆ ನೀನು...

ನೀನಿಲ್ಲದೆ ಬದುಕಬಲ್ಲೆನೆ ಹೊರತು ಜೀವಿಸಲಾರೆ - ನೀನು ನೀನಾಗಿಯೇ ನನ್ನೊಳಿಳಿದು, ನಿನದೆಲ್ಲ ನನದಾಗಿ, ನೀನೇ ನಾನಾಗಿ ಭೋರ್ಗರೆಯುವಾಗ ನನ್ನಿಂದ ನಿನ್ನ ಬೇರ್ಪಡಿಸಲಿ ಹೇಗೆ...!!

ಮುಸ್ಸಂಜೆ ನೆಳಲಲ್ಲಿ ನೆನಪು, ಕನಸುಗಳ ಬೆರಳು ತಲೆ ಸವರುವಾಗ ಮಡಿಯ ಮಡಿಲಲ್ಲಿ ನಿನ್ನ ಶಾಂತ ಮೊಗವರಳುತ್ತದೆ... 
ಮತ್ತು
ನಾನು ನನಗೆ ಸಿಗುತ್ತೇನೆ - ನಾನಾಗಿ...
____ಮಾಧವರಾಧಾನುಭಾವ...

*** ಭಾವ ಭಿತ್ತಿ - ವೀಣಾ ಶಂಕರ್...
** ಶಬ್ದ ಪಾತ್ರೆ - ಶ್ರೀವತ್ಸ ಕಂಚೀಮನೆ...
💞💞💞

ಪ್ರೀತಿ ನೆರಳು ಉಸಿರ ನಗೆಯ ಕಾಯುವುದೆಂದರೆ ಇಷ್ಟೇ - 
ಕರುಳ ಹೂ ಅರಳಿ ಕೊರಳ ತಬ್ಬುವುದು...
ಆ ಹೊಂಬೆಳಕಲ್ಲಿ ಎದೆಯ ಹೊರೆ ಕಳೆದು ಹಬ್ಬವಾಗುವುದು...
ಮನದಂಗಳದ ಕಂಬ ಕಂಬದ ಸುತ್ತಲೂ 'ಕೃಷ್ಣ' ತುಂಟ ಕೂಸಾಗಿ ಆಡುವುದು...
ಜಗದ ಜಾತ್ರೆಯ ಮರೆತು 'ಆನು/ನೂ' ಮಗುವಾಗುವುದು...
#ಶಿಶುವೊಲವ_ಮುದ್ದೆಂಬ_ದೇವ_ಭಾಷೆ... 
#ಅಮೃತ_ಘಳಿಗೆ...
#ಮಮತೆ_ಕೂಸುಮರಿ...
____ಆದ್ಯಾ - ಶಶಾಂಕ್... 😘😘

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)