Thursday, September 13, 2012

ಗೊಂಚಲು - ನಲವತ್ತರ ಮೇಲೆ ಮೂರು.....

ದಾರಿ.....




ಸಾವಿನ ಮನೆ ಕಡೆಗೆ ಮುಖ ಮಾಡಿ
ಉದ್ದಕ್ಕೂ ಬಿದ್ದುಕೊಂಡಿದೆ 
ಬದುಕ ದಾರಿ...

ಅದು ಒಮ್ಮುಖ ಪಥ...

ಒಂದು ಕ್ಷಣಕೂ ತಿರುಗಿ ಬರುವಂತಿಲ್ಲ
ಜೀವನ ರಥ...

ತೋಚಿದಂತೆ ಸಾಗುತಿರುವುದಷ್ಟೇ ಕೆಲಸ...

ಕಷ್ಟಗಳೆಂಬ ಕಲ್ಲು ಮುಳ್ಳುಗಳ
ಭರವಸೆಯ ಚಪ್ಪಲಿ ತೊಟ್ಟು ಹಾಯುತಿರಬೇಕಷ್ಟೇ...

ಅಲ್ಲಲ್ಲಿಯ ತಗ್ಗು - ದಿಣ್ಣೆಗಳ ಏರಿಳಿಯಲು
ಸಹನೆಯೇ ಶಕ್ತಿ ಕವಚ...

ದಾರಿಪಕ್ಕ ಸಿಗುವ ನೋವಿನ ಬಯಲುಸೀಮೆಯ ಬಿಸಿಲು,
ನಲಿವಿನ ಮಲೆನಾಡ ನೆರಳುಗಳ ಕಂಡು
ಮೈಮರೆಯುವಂತಿಲ್ಲ...
ಹಾಗಂತ 
ನೋವು - ನಲಿವುಗಳಿಗೆ ಸ್ಪಂದಿಸದಿದ್ದರೆ
ಬದುಕಿಗೆ ಸೊಬಗೂ ಇಲ್ಲ...

ನಮ್ಮ ದಾಟಿ ಹೋಗುವವರೆಡೆಗೆ ಮತ್ಸರ,
ನಾವು ದಾಟಿದವರೆಡೆಗೆ ಕರುಣೆ
ಉಹುಂ
ಅವಕೆಲ್ಲ ಸಮಯವಿಲ್ಲ...
ಆದರೆ
ಇವೆಲ್ಲ ಕಾಡದೇ ಹೋದರೆ
ನಡೆವ ತುಡಿತ ಮೂಡುವುದಿಲ್ಲ...

ನಾವು ನಿಲ್ಲಬಯಸಿದರೂ
ರಥ ನಿಲ್ಲುವುದಿಲ್ಲ...
ಚಲನೆಯೊಂದೇ ಅದರ ನಿಯಮ...

ಗೊತ್ತಿಲ್ಲ -
ಯಾವ ತಿರುವಿನಲ್ಲಿ
ಯಾರ ಮೈಲಿಗಲ್ಲು...

ತನ್ನ ಪಯಣ ಮುಗಿದ ಕ್ಷಣ
ಆಳಿದವನಿಗೂ - ಆಳಿಸಿಕೊಂಡವಗೂ
ಸಿಗುವುದು
ಮೂರು ಹಿಡಿ ಮಣ್ಣು 
ಮತ್ತು
ಮೂರು - ಆರು ಅಡಿಯ ಅದೇ ಮಸಣದ ಮನೆ...

ಉಳಿದವರ ಮನದಲ್ಲಿ ಉಳಿದದ್ದು ನೆನಪಾಗಿ -
ಮಂದಹಾಸದ ನವಿರು
ಅಥವಾ
ವಿಕಟಾಟ್ಟಹಾಸದ ಕಸರು...

ಹಿಮ್ಮುಖ ಚಲನೆಯಿಲ್ಲದ ಹಾದಿಯಲಿ ನಡಿಗೆ ಜೋಪಾನ...

***@@@***

ದಾರೀಲಿ ಒಂದು ಚಿಟ್ಟೇನ ಕಂಡೆ.
ನಾನಿನ್ನೂ ನೋಡದಿದ್ದಂತ ಚೆಂದದ ಚಿಟ್ಟೆ.
ದೊಡ್ಡ ದೊಡ್ಡ ರೆಕ್ಕೆಗಳ ಬೂದು ಬಣ್ಣದ ಚಿಟ್ಟೆ.
ಒಂದು ಕ್ಷಣ ಬಿಟ್ಟ ಕಂಗಳಿಂದ ನೋಡುತ್ತ ನಿಂತೆ.
ಒಮ್ಮೆ ಮೃದುವಾಗಿ ಮುಟ್ಟಿದೆ.
ಅದರ ರೆಕ್ಕೆಗಳ ಹುಡಿ ಬೆರಳಿಗೆ ಅಂಟಿತು.
ಖುಷಿಯಾಯ್ತು.
ತಕ್ಷಣ ಆ ಚಿಟ್ಟೆ ಉಚ್ಚೆ ಹೊಯ್ದಿತು.
ಎಷ್ಟು ಖುಷಿಯಾಯ್ತು ಗೊತ್ತಾ...
ಪ್ರಕೃತಿಯ ಮಡಿಲ ವೈವಿಧ್ಯವ ಆಸ್ವಾದಿಸ್ತಾ ಅಲೆಯುತಿದ್ದರೆ ಎಂತೆಂಥ ರೋಮಾಂಚನಗಳೋ...
ಬದುಕು ಕರುಣಿಸುವ ಇಂಥ ಪುಟ್ಟ ಪುಟ್ಟ ಖುಷಿಗಳ ಮನಸಾರೆ ಆಸ್ವಾದಿಸಿದಾಗಲೇ ದಾರಿ ಸುಗಮ ಮತ್ತು ಸಹನೀಯ ಅನ್ನಿಸೀತು...
ಕೊನೆಯ ಉಸಿರಲ್ಲಿ ಸಾರ್ಥಕ್ಯದ ನಗು ಅರಳೀತು...

ಚಿತ್ರ : ನನ್ನ ಕ್ಯಾಮರಾ ಕಣ್ಣಲ್ಲಿ ಯಾವುದೋ ದಾರಿಯ ತಿರುವು...

7 comments:

  1. ನಿಜ ಶ್ರೀವತ್ಸ... ಜೀವನದ ದಾರಿಯೆ ಹಾಗೆ. ಬಹಳಷ್ಟನ್ನು ಪಡೆದುಕೊಳ್ಳುತ್ತೇವೆ ಎಲ್ಲವನ್ನೂ ಒ೦ದಿನ ಕಳೆದುಕೊಳ್ಳಲು.... ಆದರೆ ಅದೇ ಏನೋ ಒ೦ದು ರೀತಿಯ ಸುಖ....

    ReplyDelete
  2. ಬದುಕಿನ ದಾರಿಯನ್ನು ಚೆನ್ನಾಗಿ ಕಟ್ಟಿಕೊಟ್ಟ ಕವನ.

    ReplyDelete
  3. ಅನಿಶ್ಚಿತ ಬದುಕಿನ ನಡಿಗೆಗೆ ಒಳ್ಳೆಯ ರೂಪ ಕೊಟ್ಟಿದ್ದೀರಿ.

    ReplyDelete
  4. ಶ್ರೀ ವತ್ಸ ರವರೆ ಮೊದಲ ಕವಿತೆ ಮನಸಿಗೆ ಬಹಳ ಹಿಡಿಸಿತು , ಜೀವನದ ದರ್ಶನ ಅದರಲ್ಲಿದೆ, ಜೀವನದ ದಾರಿಯಬಗ್ಗೆ ನಿಮ ಕಲ್ಪನೆಗೆ ಜೈ ಹೋ
    ಪ್ರೀತಿಯಿಂದ ನಿಮ್ಮವ [ನಿಮ್ಮೊಳಗೊಬ್ಬಬಾಲು. ]

    ReplyDelete
  5. "ಒಂದು ಕ್ಷಣಕೂ ತಿರುಗಿ ಬರುವಂತಿಲ್ಲ
    ಜೀವನ ರಥ..." ನಿಜ.. ಚಂದದ ಕವಿತೆ

    ReplyDelete
  6. ಮೆಚ್ಚಿದ ಎಲ್ಲರಿಗೂ ಧನ್ಯವಾದಗಳು...

    ReplyDelete