Wednesday, September 5, 2012

ಗೊಂಚಲು - ನಲವತ್ತೆರಡು.....


ಕೇಳಬಾರದ (?) ಕೆಲವು ಪ್ರಶ್ನೆಗಳು.....

ಬದುಕಿನ ಯಾವುದೋ ತಿರುವಿನಲ್ಲಿ ಫಕ್ಕನೆ ಎದುರಾಗಿ ಪಯಣಕ್ಕೆ ಜತೆಯಾದ ಗೆಳೆಯ ನಟರಾಜು (ನಟರಾಜು ಸೀಗೇಕೋಟೆ ಮರಿಯಪ್ಪ) ತಮ್ಮ ಫೇಸ್ ಬುಕ್ ಗೋಡೆ ಬರಹದಲ್ಲಿ ಹೀಗಂತ ನಾಲ್ಕು ಸಾಲು ಬರೆದಿದ್ದರು.
ನೀನು ನಿನ್ನ ಎಲ್ಲ ಭಾವನೆಗಳ
ನನ್ನೊಡನೆ ಹಂಚಿಕೊಳ್ಳುವೆಯಾ.?
ಹಾಗಾದರೆ ಬಾ ಮೊದಲು 
ಊಟವನ್ನು ಹಂಚಿ ತಿನ್ನೋಣ...

ಅವರ್ಯಾವ ಭಾವದಲ್ಲಿ ಬರೆದರೋ ನಾನ್ಯಾವರೀತಿ ಅರ್ಥೈಸಿಕೊಂಡೆನೋ ಒಟ್ಟಿನಲ್ಲಿ ಎಲ್ಲ ಹೇಳಿಕೊಳ್ಳುವುದು ಎಂಬ ಮಾತು ನನ್ನಲೇನೋ ಗೊಂದಲ ಸೃಷ್ಟಿಸಿಬಿಟ್ಟಿತು.
ಅವರನ್ನೇ ಕೇಳಿದೆ.
ಅಲ್ಲಾ ಕಣಣ್ಣೋ ಊಟವನ್ನು ಹಂಚಿಕೊಂಡಷ್ಟು ಸುಲಭವಾ ಮನದೆಲ್ಲ ಭಾವಗಳನು ಹಂಚಿಕೊಳ್ಳುವುದು.?
ನಮ್ಮೊಡನೆ ಅನ್ನವನ್ನು ಹಂಚಿಕೊಳ್ಳಲಾರದವರು ಭಾವನೆಗಳನ್ನು ಹಂಚಿಕೊಳ್ಳಲಾರರು ಗುರುಗಳೇ [:):):)] ಅಂತಂದರು.
ಉಹುಂ ನಂಗೆ ಸಮಾಧಾನವಾಗಲಿಲ್ಲ.

ಶತ್ರುವಿನೊಂದಿಗೂ ಒಂದೊಮ್ಮೆ ಊಟ ಹಂಚಿಕೊಳ್ಳಬೇಕಾದೀತು ಹಾಗೂ ಹಂಚಿಕೊಂಡೇವು...ಆದರೆ ನಮ್ಮೊಳಗಣ ಎಲ್ಲ ಭಾವಗಳನ್ನು...??
ನಮ್ಮೊಳಗಣ ಎಲ್ಲ ಭಾವಗಳನ್ನೂ ಇನ್ನೊಬ್ಬರೊಂದಿಗೆ ಪೂರಾ ಪೂರಾ ಹಂಚಿಕೊಳ್ಳುವುದು ಎಂಬ ಮಾತಲ್ಲೇ ನಂಗೇನೋ ಕಸರು ಕಾಣಿಸುತ್ತೆ.
ಅವರು ಎಷ್ಟೇ ಆಪ್ತರು ಎಂದಾದರೂ.
ನಮ್ಮ ಮನದ ಭಾವಗಳನ್ನು ನಮ್ಮದೇ ಬುದ್ಧಿಯೊಂದಿಗೆ ಹಂಚಿಕೊಳ್ಳುವುದೂ ಕಷ್ಟ ಎಂದೆನಿಸುವ ಹೊತ್ತಲ್ಲಿ...ಬೇರೊಬ್ಬರೊಂದಿಗೆ...!!!
ಹೆಚ್ಚಿನ ಸಲ ಆಗೋದು ಹಾಗೇ - ಆಡಬೇಕಿಲ್ಲದ ನೂರೆಂಟು ಮಾತುಗಳನ್ನು ಗಂಟೆಗಳ ಕಾಲ ಆಡುತ್ತಿರುತ್ತೇವೆ. ಆಡಲೇಬೇಕಿದ್ದ ಒಂದು ಮಾತು ಅಲ್ಲೆಲ್ಲೋ ಮನದ ಮೂಲೆಯಲ್ಲೇ ಕಚ್ಚಿಕೊಂಡುಬಿಟ್ಟಿರುತ್ತದೆ. ಆಡಲು ಶಬ್ದಗಳ ಕೊರತೆಯಿಂದೇನಲ್ಲ. ಹೆಚ್ಚಾದ ಶಬ್ದಗಳ ಆಡಂಬರದ ಕಾರಣ ಸತ್ತ ಮಧುರ ಮೌನದಿಂದ...(ಹೇಳದೆಯೂ ಎಲ್ಲ ಕೇಳಿಸುವ ಮೌನ ಸಾಧಿಸಲಾದೀತಾ..?)

ಒಂದಿಡೀ ಬದುಕು ಗಂಡನ ಎಂಜಲು ತಾಟಿನಲ್ಲೇ ಊಟ ಮಾಡುತ್ತಾ ಕಳೆದ ಹಳ್ಳಿ ಹೆಣ್ಣ ಮನದಲ್ಲೂ ಅದೆಷ್ಟು ಭಾವಗಳು ನರಳುತ್ತಲಿದ್ದಾವೋ ಗಂಡನೆದುರು ಅರುಹಲಾಗದೇ ಬಚ್ಚಿಟ್ಟುಕೊಂಡಂತವು...
ಯಾವುದೋ ಮುನಿಸು, ಸಣ್ಣ ಬೇಸರ, ತೋರಲಾಗದ ಅಸಮಾಧಾನ, ಅಷ್ಟೇಕೆ ಒಂದು ಪ್ರೀತಿ ಕೂಡ ಹೇಳದೇ ಒಳಗೇ ಉಳಿದಿದ್ದೀತು...

ಕಾಲು ಶತಮಾನ ಒಂದೇ ಹಾಸಿಗೆ ಹಂಚಿಕೊಂಡ ಹೆಂಡತಿಗೂ ಹೇಳದೇ ಉಳಿದ ಅದೆಷ್ಟು ಸತ್ಯಗಳಿದ್ದಾವೋ ಗಂಡನೆಂಬುವನ ಎದೆಯಾಳದಲ್ಲಿ...
ಸುಖ ಕಳೆದ ಮೇಲೆ ಈಗಲೂ ನಿತ್ಯ ನೆನಪಾಗುವ ಅದೇ ಹಳೆ ಗೆಳತಿಯ ಒನಪು...

ಹತ್ತಾರು ವರ್ಷ ಜೊತೆ ಬಾಳಿದ ಮೇಲೂ ಒಂದಷ್ಟು ಸತ್ಯಗಳು ಆಚೆಯೇ ಉಳಿಯುತ್ತವಲ್ಲವಾ..?
ನಾವದಕ್ಕಿಟ್ಟುಕೊಂಡ ಸುಂದರ ಹೆಸರು ಪ್ರೈವೇಟ್ ಲೈಫು, ಒಂಚೂರು ಪ್ರೈವೆಸಿ ಇತ್ಯಾದಿ ಇತ್ಯಾದಿ...

ಭಾವಗಳೆಂದರೆ ಅಂತರಂಗದ ಮಾತುಗಳಲ್ಲವಾ.?
ಎಲ್ಲ ಅರುಹುವುದೆಂದರೆ ಅಂತರಂಗದ ಬೆತ್ತಲೆಯಲ್ಲವಾ..??
ಅಂತರಂಗದಿಂದ ಬೆತ್ತಲಾಗುವುದೆಂದರೆ ಗಂಡ ಉಂಡ ಅದೇ ತಾಟಿನಲ್ಲಿ ಉಂಡು ಕೈತೊಳೆದಷ್ಟು ಅಥವಾ ಒಂದೇ ಹಾಸಿಗೆಯಲ್ಲಿ ಮಗ್ಗಲು ಬದಲಿಸಿದಷ್ಟು ಸುಲಭವಾ...???
ಪ್ರಾಮಾಣಿಕವಾಗಿ ಅಂತರಂಗದಿಂದಲೂ ಬೆತ್ತಲಾಗಬಲ್ಲವಳಾದರೆ ಸೂಳೆ ಕೂಡ ನಿಜದ ಸನ್ಯಾಸಿಯೆನಿಸಿ ಸ್ವರ್ಗ ಸೇರಿಯಾಳೇನೋ...
ಮನದ ಭಾವವೊಂದು ಮಾತಾಗಿ ಹೊರಬರುವ ಹೊತ್ತಿಗೆ ಅದು ಬರೀ ಅರ್ಧಸತ್ಯ ಮಾತ್ರವಾಗಿರುತ್ತೆ ಅಂತನಿಸುತ್ತೆ ನಂಗೆ.
ಕಾರಣ - ಮನಸು ಮತ್ತು ಮಾತುಗಳ ನಡುವೆ ಬುದ್ಧಿಯೆಂಬ ಅಗೋಚರ ಸೆನ್ಸಾರ್ ಮಂಡಳಿ ಕೆಲಸ ಮಾಡುತ್ತಿರುತ್ತೆ.
ಹಾಗಾಗಿ ಆಳದ ಸತ್ಯ ಅಲ್ಲೇ ಸಮಾಧಿಯಾಗಿರುತ್ತೆ ಮನದಾಳದಲ್ಲಿ...

ಕೊನೆ ಮಾತು: ಪ್ರೇಮದ (?) ವಂಚನೆಯಿಂದ ನೊಂದು ಬದುಕಿನಿಂದಲೇ ವಿಮುಖನಾಗಿ, ಹೆಣ್ಣು ಮಾಯೆ ಅವಳ ಪ್ರಭಾವಲಯದಲ್ಲಿರುವ ಈ ಲೌಕಿಕದಾಚೆಯ ಜ್ಞಾನವನರಸಲು ಹಿಮಾಲಯದೆಡೆಗೆ ಬರಿಗಾಲ ಪಯಣವನ್ನಾರಂಭಿಸಿದ ಯುವಕನೋರ್ವ ನಡಿಗೆಯ ಸುಸ್ತು ಕಳೆಯುವ ವಿಶ್ರಾಂತಿ ಕಾಲದಲ್ಲಿ ಸಿಕ್ಕ ಬೀದಿ ಬದಿಯ ವೇಶ್ಯೆಯ ಮಡಿಲಲ್ಲಿ ಜ್ಞಾನೋದಯವಾಗಿ ಮತ್ತೆ ಬದುಕಿಗೆ ಹಿಂದಿರುಗಿ ಸಂಭ್ರಮಿಸಿದನಂತೆ...

ಏನೋ ಬರೆದಿದ್ದೇನೆ. ಸ್ವಲ್ಪ ಗೊಂದಲವಿದೆ. (ಗೊಂದಲದ ಸತ್ಯಗಳು ಅನ್ನಬಹುದಾ..?) ತಪ್ಪೋ ಸರಿಯೋ ಗೊತ್ತಿಲ್ಲ. ನನ್ನಲ್ಲಿ ಹುಟ್ಟಿ ಕಾಡಿದ ಪ್ರಶ್ನೆಗಳ ಕೇಳದಿರಲಾಗದ ನನ್ನ ಚಪಲದಿಂದಾಗಿ ನಿಮ್ಮೆದುರಿಗಿಟ್ಟಿದ್ದೇನೆ. ನಿಮ್ಮೆಲ್ಲ ಅಭಿಪ್ರಾಯಗಳಿಗೂ, ವಿಚಾರ ಮಂಥನಗಳಿಗೂ ನನ್ನಲ್ಲಿ ಸದಾ ಸ್ವಾಗತವಿದೆ...

2 comments:

 1. ನಟರಾಜ್ ಸರ್ ಹೇಳಿದ್ದು,
  ನೀನು ಎಲ್ಲಾ ಭಾವನೆಗಳನ್ನು ನನ್ನಲ್ಲಿ ಹಂಚಿಕೊಳ್ಳಲು ತಾಯರಿದ್ದೆಯಾದರೆ.... ಎಂದು, ಅಂದರೆ ನೀನು ತಾಯರಿ ಇರುವುದಾದರೆ, ಭಾವನೆಗಳನ್ನು ಹಂಚಿಕ್ಕೊಳ್ಳುವ ಮೊದಲು ಊಟ ಹಂಚಿಕ್ಕೊಳ್ಳೋಣ ಎಂದು.
  ಊಟ ಹಂಚಿಕೊಂಡ ಮಾತ್ರಕ್ಕೆ ಭಾವನೆಗಳನ್ನು ಹಂಚಿಕೊಳ್ಳಲು ಸಾದ್ಯ ಇಲ್ಲ... ಆದರೆ ಭಾವನೆಗಳನ್ನು ಹಂಚಿಕೊಂಡವರು ಖಂಡಿತ ಊಟವನ್ನು ಹಂಚಿಕ್ಕೊಳ್ಳುತ್ತಾರೆ..
  ನಾನು ಅರ್ಥೈಸಿಕ್ಕೊಂಡಿದ್ದು ಹೀಗೆ....

  ReplyDelete
 2. ಹಲ ಭಾವಗಳನ್ನು ಒಟ್ಟಿಗೆ ಪೇರಿಸಿಕೊಟ್ಟ ಸುದೀರ್ಘ ಬರಹ. ನನಗಂತೂ ಮೆಚ್ಚುಗೆಯಾಯ್ತು.

  ಇಂದು ಅಂತರಂಗ ಮಾತುಗಳೂ ನಮಗೇ ಕೇಳಿಸದಷ್ಟು ನಾವೂ ಕಿವುಡರಾಗಿದ್ದೀವಿ!

  ReplyDelete