Wednesday, August 29, 2012

ಗೊಂಚಲು - ನಲವತ್ತು + ಒಂದು.....ಅಸಂಬದ್ಧ ಆಲಾಪಗಳು.....

ಮರಣಕ್ಕೆ ಮುಹೂರ್ತ ಇಟ್ಟ ದಿನದಿಂದ ಬದುಕಿಗೆ ಹೊಸ ಬಣ್ಣ ಬಂದಿದೆ - ಮದುಮಗನ ಸಂಭ್ರಮ ಮತ್ತು ತಲ್ಲಣದಂತದ್ದು...

ಆಸೆಯೇ ದುಃಖಕ್ಕೆ ಮೂಲವೆಂದಾದರೆ - ನಾನು ದುಃಖವನ್ನೂ ಪ್ರೀತಿಸುತ್ತೇನೆ.
ಕಾರಣ ಆಸೆ ಕನಸುಗಳೆಲ್ಲ ಮುಗಿದ ದಿನ ಬದುಕು ಜಡವೆನ್ನಿಸುತ್ತೆ ನನಗೆ.
ಮನದಲ್ಲಿ ಈಡೇರದ ಆಸೆಗಳು, ಕಣ್ಣ ಮುಂದೆ ನನಸಾಗದ ಕನಸುಗಳು ಒಂದಷ್ಟಾದರೂ ಇಲ್ಲದೇ ಹೋದರೆ ಬದುಕು ಶಲ್ಲಿಲ್ಲದ ಗಡಿಯಾರದಂತೆನಿಸುತ್ತೆ.

ಸನ್ಯಾಸಿಯ ಪಾರಮಾರ್ಥಿಕ ಚಿಂತನೆ ಕೂಡಾ ಒಂದು ಆಸೆಯೇ ಅಲ್ಲವಾ..?
ಸಾವಿನಾಚೆಯ ಸುಖದ ಭ್ರಮೆಯ ಬಯಕೆ ಅಂತನ್ನಿಸುತ್ತೆ ನನಗೆ.
ಸರ್ವಸಂಗ ಪರಿತ್ಯಾಗಿಯೊಬ್ಬ (?) ತನಗಾದ ಜ್ಞಾನೋದಯವನ್ನು ಹಂಚಹೊರಟದ್ದು ತಾನು ಇತರರಲ್ಲಿ ತನ್ನ ನಂತರವೂ ಬದುಕಿರಬೇಕೆಂಬ ಆಳದ ಆಸೆಯಿಂದಲೇ ಇರಬಹುದಾ...??

ಒಂದಿಷ್ಟು ಒಳ್ಳೇತನ, ಮನಸಿನ ಕಳ್ಳತನ, ಒಂಚೂರು ನಗು, ಎರಡು ಹನಿ ಕಣ್ಣೀರು, ಸಣ್ಣ ಈರ್ಷ್ಯೆ, ಇಷ್ಟೇ ಇಷ್ಟು ಉದಾರತೆ, ಸೋಲುವ ಭಯ, ಗೆಲ್ಲುವ ಖುಷಿ, ಎದೆ ಉಬ್ಬಿಸೋ ವಿಶ್ವಾಸ, ತಲೆ ತಗ್ಗಿಸೋ ವಿನಯ, ಆಗೀಗ ಅವರಿವರಿಗೆ ಹಂಚೋ ವಿನಾಕಾರಣದ ಪ್ರೀತಿ ಎಲ್ಲವನ್ನೂ ಒಳಗೊಳ್ಳೋ ಮನುಷ್ಯರೆಂದರೇ ನಂಗಿಷ್ಟ.

ಮನುಷ್ಯ ದೇವರೋ ಇಲ್ಲಾ ದಾನವರೋ ಆಗಲು ಹೋಗಿ ಎರಡನ್ನೂ ಒಳಗೊಂಡ ತನ್ನತನದ ಖುಷಿಗಳ ಕಳೆದುಕೊಳ್ಳುವುದು ಎಷ್ಟು ಸರಿ.?

ಸತ್ತ ಮೇಲೆ ಸ್ವರ್ಗ - ನರಕಗಳ ಆಯ್ಕೆ ನನಗೇ ಕೊಟ್ಟರೆ ನಾನು ನರಕವನ್ನೇ ಆಯ್ದುಕೊಂಡೇನು.
ವೈರುಧ್ಯಗಳಿಲ್ಲದ ಬರೀ ಸುಖಗಳೇ ತುಂಬಿರುವ, ನಿನ್ನೆ ನಾಳೆಗಳ ಹಂಗಿಲ್ಲದ ಸ್ವರ್ಗಕ್ಕಿಂತ - ಕಾವಲಿ ಎಣ್ಣೆಯ ಬಿಸಿ, ಮಂಜುಗಡ್ಡೆಯ ತಂಪು, ಶಿಕ್ಷೆಯ ವೈರುಧ್ಯದಲ್ಲಿನ ಕೊರಗು ಮತ್ತು ಖುಷಿ ಎರಡೂ ಇರುವ ನರಕವೇ ಚಂದವೆನಿಸುತ್ತೆ ನನಗೆ.
ಪ್ರಶ್ನಿಸಲಾಗದ ಇಂದ್ರನ ದೊಡ್ಡಸ್ತಿಕೆ, ಮೇನಕೆಯ ಅದೇ ನೃತ್ಯ, ಊರ್ವಶಿಯ ಸಖ್ಯಗಳಲ್ಲಿ ಎಷ್ಟೆಂದು ಸುಖ ಕಾಣುವುದು.
ವೈವಿಧ್ಯವಿಲ್ಲದ ಸುಖವೂ ಬೇಸರ ತಂದೀತು...

ನಗುವಿಗೆ ಭಾವುಕ ಶಕ್ತಿ ತುಂಬುವುದು ನೋವಿನ ಅರಿವೇ ಅಲ್ಲವೇ..?
ಹತ್ತು ಸೋಲುಗಳ ನಂತರದ ಒಂದು ಪುಟ್ಟ ಗೆಲುವು ಎಷ್ಟೆಲ್ಲ ಖುಷಿ ತಂದೀತು.
ಸಾವಿನ ಭಯವಿಲ್ಲದ ಬದುಕಿಗೆ ಥ್ರಿಲ್ ಎಲ್ಲಿಯದು...!!!
:::
ಯಾರೂ ಕೆಟ್ಟವರಲ್ಲ.
ಅವರವರ ಭಾವದಲ್ಲಿ ಎಲ್ಲರೂ ಸಂಭಾವಿತರೇ.
ನನ್ನ ಕಣ್ಣಲ್ಲೇ ಏನೋ ಐಬಿದೆ.
ನನ್ನ ಕಣ್ಣ ಹರಿವಿನಾಚೆಯೂ ಒಂದು ಬದುಕಿರಬಹುದೇ...
ಅದೂ ಸೊಗಸಾಗಿಯೇ ಇರಬಹುದೇ...
ಉಹುಂ ನಂಗೆ ನಂಬೋಕಾಗ್ತಿಲ್ಲ. ಅಲ್ಲಲ್ಲ ನಂಗೆ ನಂಬೋ ಮನಸಿಲ್ಲ.
ಸಾಗರವನ್ನು ಕಲ್ಪಿಸಿಕೊಳ್ಳಲೂ ನಂಗೆ ಇಷ್ಟವಿಲ್ಲ.
ನನ್ನ ಮನಸೊಂದು ಬಾವಿ.
ಸಾಗರ ವಿಶಾಲವಂತೆ, ಅಗಾಧವಂತೆ, ಆದರೆ ಉಪ್ಪಂತೆ...
ಅಲ್ಲಿಗೆ ದೊಡ್ಡವರ ಬಣ್ಣ ಬಯಲಾಯ್ತಲ್ಲ.
ಹಿಡಿದಾಹ ತಣಿಸದ ಅಗಾಧತೆಯಿದ್ದೇನು - ನೈದಿಲೆ ತಾ ನಗುವ ಕಲ್ಯಾಣಿಯು ನಾನು...
ಆದರೂ ಸಾಗರವನ್ನೊಮ್ಮೆ ನೋಡಬೇಕಿತ್ತು.

ದೊಡ್ಡವನಾಗಬೇಕೆಂದರೆ ಬೆಳೆಯಬೇಕು.
ಅಮ್ಮಮ್ಮಾ ಬೆಳೆಯೋದೆಂದರೇನು ಸುಲಭವಾ...
ಭೂಗರ್ಭ ಸೀಳಿ, ಆಳಕ್ಕೆ ಬೇರು ಬಿಟ್ಟು, ನೀರು ಗೊಬ್ಬರ ಹೀರಿ, ಕಾಂಡವ ಗಟ್ಟಿಗೊಳಿಸಿ, ಚಿಗುರನು ಆಗಸದೆಡೆಗೆ ಅರಳಿಸಬೇಕು.
ಬಿಸಿಲ ಬೇಗೆಗೆ ಸುಡದೆ, ಮಳೆಯ ತಂಪಿಗೆ ನಡುಗದೆ, ಗಾಳಿಗೆ ಬಾಗಿ ಹೇಗೆ ಹೇಗೋ ಉಸಿರ ಹಿಡಿದಿಡಬೇಕು.
ಬಿಸಿಲು, ಮಳೆ, ಗಾಳಿ ಎಲ್ಲ ಬೇಕು - ಯಾವುದೂ ಹೆಚ್ಚಾಗಬಾರದು.
ಹೌದು ಇಷ್ಟೆಲ್ಲ ಮಾಡಿ ಬೆಳೆದು ಸಾಧಿಸೋದೇನು..??
ಚಂದಿರನನ್ನು ಇನ್ನಷ್ಟು ಹತ್ತಿರದಿಂದ ನೋಡಬಹುದೇನೋ...
ಚಂದ್ರನ ಮೇಲೇ ನಡೆದಾಡಿದ ಸಮರ್ಥನೂ ಮೊನ್ನೆ ಇಹವ ತೊರೆದು ನಡೆದನಂತೆ.
ಆದರೂ ಚಂದಿರನ ಮೇಲೆ ಮೊದಲ ಹೆಜ್ಜೆ ಇಟ್ಟಾಗ ಅದ್ಭುತ ರೋಮಾಂಚಕ ಅನುಭೂತಿ ಆಗಿರುತ್ತಲ್ವಾ...!!!
ಅಲ್ಲೆಲ್ಲೋ ಬೆಟ್ಟದ ಮೇಲೆ ಮೋಡ ಕೈಗೇ ಸಿಗುತ್ತಂತೆ ನಾಳೆ ಹೋಗ್ಬೇಕು...
:::

ಪಡೆದುಕೊಂಡೆನೆಂಬ ಹೊತ್ತಿಗೇ ಕಳೆದುಕೊಂಡೇನೆಂಬ ಭಯ...
ಇಲ್ಲಿ ಚಿಗುರಿ ಇನ್ನೆಲ್ಲೋ ಕಮರುವ ಮಧುರ ಭಾವ ಬಂಧಗಳು...
ಕಂಗೆಡಿಸುತ್ತೆ -
ಬೆಳೆಸಿಕೊಳ್ಳಲೂ, ಉಳಿಸಿಕೊಳ್ಳಲೂ ಆಗದ ನನ್ನೊಳಗಿನ ನನ್ನದೇ ಅಸಮರ್ಥ ಮಾನಸಿಕತೆ...
:::
***ಇದು ಸಾಹಿತ್ಯವಲ್ಲ - 
ಕ್ಷಣ ಕ್ಷಣಕೂ ಅದಲುಬದಲಾಗುವ ಆಸೆ ನಿರಾಸೆಗಳ ಆಗರವಾದ ಮನದ ವೈರುಧ್ಯಭಾವಗಳ (ಸಂಚಾರಿ ಭಾವಗಳ) ಆಲಾಪವಷ್ಟೇ...

ಯಾರೋ ಅಂದರು ನಿನ್ನದೂ ಒಂಥರಾ ಸಾಹಿತ್ಯ ಸೇವೆಯೆಂದು. ಆಶ್ಚರ್ಯವಾಯಿತು. ನನ್ನ ಬರಹ ಸಾಹಿತ್ಯದ ಯಾವ ಪ್ರಕಾರದ್ದೆಂಬುದೂ ಗೊತ್ತಿಲ್ಲದ ನಾನು ನನ್ನ ತೆವಲಿಗೆ ಅಕ್ಷರಗಳನು ಸಾಲುಗಳಲಿ  ಗೀಚಿಕೊಂಡರೆ  ಅದು ಸಾಹಿತ್ಯ ಸೇವೆ ಹೇಗಾದೀತೆಂದು...13 comments:

 1. ಯಾಕೋ ನಾನು ಮೂಕ

  ReplyDelete
 2. ಅಬ್ಬಬ್ಬಾ.. ಅದೆಷ್ಟು ಭಾವಗಳು .. ಅದೆಷ್ಟು ಭಾವನೆಗಳು ... ಮನಸ್ಸಿನ ತುಮುಲಗಳು, ಹರಿವ ಭಾವನೆಗಳನ್ನು ಅಧ್ಬುತವಾಗಿ ಅಕ್ಷರೀಕರಿಸಿದ್ದೀರಿ ...ಅಸಂಬದ್ದ ಅಲಾಪವಲ್ಲ .. ಜೀವನ ಸಾರವಿದು..
  ಹುಸೇನ್ (http://nenapinasanchi.wordpress.com/)

  ReplyDelete
 3. ಯಾರೂ ಕೆಟ್ಟವರಲ್ಲ.
  ಅವರವರ ಭಾವದಲ್ಲಿ ಎಲ್ಲರೂ ಸಂಭಾವಿತರೇ... ಅಸಂಬದ್ಧ ಆಲಾಪಗಳು ಅಸಂಬದ್ಧವಾಗಿರದೆ ಜಿಜ್ಞಾಸೆಯಿಂದ ಕೂಡಿವೆ... ಭಾವಘರ್ಷಣೆಗಳಿಗೆ ನಾವು ಎಳೆದುಕೊಂಡ ಗೆರೆಗಳೇ ಕಾರಣ... ಈ ಪ್ರಪಂಚದಲ್ಲಿ ಒಳ್ಳೆಯದು ಮತ್ತು ಕೆಟ್ಟದ್ದಿಲ್ಲ... ಉತ್ತರಕ್ಕೆ ನಿಂತದ್ದು ಒಳ್ಳೆಯದಾದರೆ ದಕ್ಷಿಣಕ್ಕೆ ನಿಂತದ್ದು ವಿರುದ್ಧವಾಗುವುದು ಈ ಲೋಕ ಚಟ. ಪಕ್ಷಪಾತವಾಗುತ್ತಿದೆ ಎಂಬ ಮಾತು ಬಂದರೆ ನನ್ನ ಪ್ರಕಾರ ಎಲ್ಲರೂ ಸಮ ಪಕ್ಷಪಾತಿಗಳೇ..!

  ReplyDelete
 4. ಹಲ ಭಾವಗಳ ಗುಚ್ಛ ಈ ಬರಹ. ಒಳ್ಳೆಯವರು ಮತ್ತು ಕೆಟ್ಟವರು ಅವರವರ ಭಾವಕ್ಕೆ ದಕ್ಕುವ ವಿಚಾರ. ವಿಭಿನ್ನ ಶೈಲಿಯ ಬರಹ.

  ReplyDelete
 5. ಅಲ್ಲೆಲ್ಲೋ ಬೆಟ್ಟದ ಮೇಲೆ ಮೋಡ ಕೈಗೇ ಸಿಗುತ್ತಂತೆ ನಾಳೆ ಹೋಗ್ಬೇಕು...
  ಈ ವಾಕ್ಯ ಇಷ್ಟವಾಯಿತು.. ಯಾಕೋ "ಯಾವ ಮೋಹನ ಮುರಳಿಯ.." "ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ... " ಎಂಬ ಸಾಲುಗಳ ನೆನಪಾಯಿತು..

  ReplyDelete
 6. ಸಣ್ಣ ಮುಗ್ದತೆ, ಪುಟ್ಟ ಯೋಚನೆ...ದೊಡ್ಡದಾಗ ಚಿಂತನೆ...ಇವಿಷ್ಟು ಸೇರಿದ್ದಾರೆ ಇಂತಹ ಬರಹವಾಗದಬಹುದಾ?
  ಎಲ್ಲೂ ಕೃತಕತೆ ಇಲ್ಲಾ.. ವಿಷಯದ ಮೆರೆಸುವಿಕೆ ಇಲ್ಲಾ...
  ಇದಿದ್ದು ಇದ್ದ ಹಾಗೆ..!
  ಚಂದದ ಬರಹಗಳ ಸಮುಹವಿದು

  ReplyDelete
 7. ನನ್ನೀ ಅಸಂಬದ್ಧ ಆಲಾಪಗಳ ಓದಿದ, ಮೆಚ್ಚಿದ, ಪ್ರತಿಕ್ರಿಯಿಸಿದ ಎಲ್ಲರಿಗೂ ಪ್ರೀತಿಪೂರ್ವಕ ಧನ್ಯವಾದಗಳು...

  ReplyDelete
 8. ಅದ್ಭುತ ಸಾಲುಗಳು... ನಿಜ ದುಃಖ,ಕಷ್ಟಗಳಿಲ್ಲದ ಬದುಕು ಬದುಕೇ ಅಲ್ಲ. ದುಃಖವೂ ಹಿತವಾಗಿಯೇ ಇರುತ್ತದೆ. ಸುಖ-ದುಃಖಗಳು ಸಮನಾಗಿ ಮಿಳಿತವಾಗಿದ್ದರೆ ಬದುಕು ಸು೦ದರ....

  ReplyDelete
 9. ಅನೇಕ ಭಾವಗಳ ಸಮಾಗಮ ಒಂದೇ ಕಡೆ.....ಚೆನ್ನಾಗಿದೆ ನಿಮ್ಮ ಬರಹ....ಇಷ್ಟ ಆಯಿತು...

  ReplyDelete
 10. ಅಸಂಬದ್ಧವಾದದ್ದು ತನ್ನ ತಾನು ಆಲಾಪ ಅಂದುಕೊಂಡರೂ ಅದು ಅದಾಗಿರದೆ, ಪ್ರಲಾಪವಾಗಿರ್ತದೆ ಶ್ರೀವತ್ಸ, ನಿಮ್ಮದು ಆಲಾಪವೇ.... ಶುದ್ಧವಾಗಿ ಸಾರಂಗ ರಾಗನ್ನ ಪ್ರಕೃತಿ ಮಡಿಲಲ್ಲಿ, ವಿಶೇಷವಾಗಿ ಹಸಿರಿನ ಮಧ್ಯೆ ಹಾಡಿದ್ರೆ ತುಂಬಾ ಚೇತೋಹಾರಿ, ಪ್ರಭಾವಶಾಲಿಯಂತೆ, ನಿಮ್ಮ ಬ್ಲಾಗ್ ಇದೆಯಲ್ಲಾ, ಅದರ ತುಂಬ ಸಾರಂಗ ರಾಗದ ಆಲಾಪವೇ ಅನುರಣಿಸ್ತಾ ಇದೆ ಅನ್ನಿಸ್ತು ನಂಗೆ....

  ReplyDelete
 11. ವತ್ಸಾ....
  ಅನಿಸಿದ್ದನ್ನು ಅನಿಸಿದ ಹಾಗೆ ಬರೆಯೋಕೂ ಧೈರ್ಯ ಬೇಕು...
  ಎಷ್ಟು ಜನ ಬರೆದಾರು.... ಅದರಲ್ಲೂ ತನ್ನ ಮೇಲೇನೇ ವಿಶ್ಲೇಷಣೆಯನ್ನು
  ಕೃತಕಕ್ಕೆ ಅರ್ಥ ಕೊಡದ ಹಾಗೆ ಎಷ್ಟು ಜನ ಬರೆದಾರು...
  ನಿನ್ನಲ್ಲಿದೆ ಅದು...
  ಇದೇ ನಿನ್ನದೇ ಬರಹವನ್ನು ಓದುವಾಗ ನಾನೂ ಹೀಗೇ ಬರೆಯಬಲ್ಲವನಾದರೆ,,,,,???
  ಎಷ್ಟು ಜನರಿಗೆ ಅನಿಸಿರಲಿಕ್ಕಿಲ್ಲ...
  ಆದರೆ ಮತ್ತದೇ ಮಾತು ಧೈರ್ಯ ಬೇಕು..
  ನಿನ್ನ ಬರಹ ಆ ಧೈರ್ಯವನ್ನು ಕೆಲವರಲ್ಲಾದರೂ ಕೊಟ್ಟೀತು..
  ಸಾಹಿತ್ಯ ಸೇವೆ ಅನ್ನುವದರಲ್ಲೇನೂ ಅತಿಶಯೋಕ್ತಿ ನನಗೆ ಕಂಡಿಲ್ಲ...

  ಅನಿಸಿದ್ದನ್ನು ಬರೆಯುತ್ತಾ ಹೋಗುವವನು ಜಂಗಮನ ಹಾಗೆ... ಬರಹ ಜಂಗಮ
  ಯಾವ ಬಂಧ(ನ)ಗಳಿಲ್ಲ...

  ಆದರೆ ಈ ಜಂಗಮನ ಜೊತೆ ಅವುಗಳನ್ನೆಲ್ಲಾ ನಾವು
  ಬೆಳೆಸಿಕೊಂಡಿದ್ದೇವೆ ಗೆಳೆಯಾ...

  ತಲೆಗೆ ಕೆಲಸ ಕೊಡಲು
  ವಿಚಾರಕ್ಕೆ ಸಾಣೆ ಹಿಡಿಯಲು
  ಮನಸ್ಸು ಮೃದುವಾಗಿಸಲು ನಿನ್ನ ಬರಹಗಳು ಸಾಕು...

  ಶುಕ್ರಿಯಾ....

  ReplyDelete
 12. ತುಂಬಾನೇ ಇಷ್ಟ ಆತು ಶ್ರೀವತ್ಸ...ವೈವಿಧ್ಯವಿಲ್ಲದ ಸುಖದ ಬದುಕು ಬೇಸರ ತಂದೀತು ಎಷ್ಟು ಚಂದದ ಸಾಲು....ಪಡೆದುಕೊಳ್ಳುವ ಹೊತ್ತಿಗೆ ಕಳೆದುಕೊಳ್ಳುವ ಭಯ ..ನಿಜ ನೀ ಹೇಳಿದ್ದು..ಎಲ್ಲವೂ ಬೇಕೆನ್ನುತ್ತಲೇ ದಾಟುವ ಮನಸ್ಸಿನ ರೀತಿ ಒಂದು ಕಡೆಯಾದರೆ, ಬೇಡವೆನ್ನುವ ಮತ್ತೊಂದು ಪರಿ..

  ReplyDelete