Monday, August 6, 2012

ಗೊಂಚಲು - ಮೂವತ್ತೆಂಟು.....


ಕವಿಯಾಗುವ ಬಯಕೆಯಿಂದ.....

ನೂರಾರು ಕವನ ಸಂಕಲಗಳ ತಿರುವಿ ಹಾಕಿದೆ...

ಸಾವಿರಾರು ಹಾಡ ಕೇಳಿದೆ...

ಗಗನದ ವಿಶಾಲತೆಗೆ ಬೆರಗಾದೆ...
ಬೆಳದಿಂಗಳ ಸ್ನಾನ ಮಾಡಿದೆ...
ಚುಕ್ಕಿಗಳ ಚಿತ್ತಾರಕೆ ಚಕಿತನಾದೆ...

ಕಡಲ ಅಲೆಗಳ ಜೊತೆಗೆ ಸರಸವಾಡಿದೆ...

ಮಲೆನಾಡ ಧೋ ಮಳೆಯ ನೋಡುತ್ತಾ ಧ್ಯಾನಸ್ತನಾದೆ...

ಹೂವು ಅರಳುವ ಚಂದ ಸವಿದೆ...
ಅದರ ಗಂಧ ಹೀರಿದೆ...

ದುಂಬಿಯ ನಾದಕೆ ಕಿವಿಯಾದೆ...

ನಿದ್ದೆ ತೊರೆದು ಸೂರ್ಯೋದಯದೆದುರು ಹೃದಯ ತೆರೆದು ಕೂತೆ...
ಸೂರ್ಯಾಸ್ತದ ಕೆಂಪಿಗೆ ಕಣ್ಣಾದೆ...

ಮಗುವ ನಗುವಿಗೆ ಕಾರಣನಾಗಿ ನಲಿದಾಡಿದೆ...

ಹೆಣ್ಣ ಅಂದವ ಆರಾಧಿಸಿದೆ...
ಆಕೆಯ ಕಣ್ಣ ಕೊಳದಲಿ ಮಿಂದೆದ್ದೆ...

ದಟ್ಟಡವಿಯ ಹಸಿರ ಸಿರಿಯ ನಡುವೆ ಕಳೆದುಹೋದೆ...
ನವಿಲ ನಾಟ್ಯವ ಕಂಡೆ -
ಜಿಂಕೆ ಸಖ್ಯವನುಂಡೆ...

ಎಳೆಗರುವ ತುಂಟಾಟಕೆ ಸಾಕ್ಷಿಯಾದೆ...

ಜಲಪಾತದ ಧಾರೆಯೆದುರು ಮೌನಿಯಾದೆ...

ಚಿನ್ನಾರಿ ಮೀನ ಬಾಯಲ್ಲಿ ಕಾಲ್ಬೆರಳ ಕಚ್ಚಿಸಿಕೊಂಡೆ...

ತೆಂಗು ನೆಟ್ಟು - ನೀರನೆರೆದು - ಅದು ಬೆಳೆದು ಫಲವಂತವಾಗುವುದಕ್ಕೆ ಕಾಯುತ್ತಾ ಸಹನೆ ಕಲಿತೆ...

ಬದುಕ ಅಗಾಧತೆಗೆ ಬೆರಗಾದೆ...

ಕತ್ತಲ ಏಕಾಂತದಲಿ - ಬೆತ್ತಲ ಸುಖಾಂತದಲಿ...

ಕ್ಷಣ ಕ್ಷಣವನೂ ಅನುಭಾವಿಸಿ ಪದಗಳಾಗಿಸಲು ಎಷ್ಟೆಲ್ಲ ತಿಣುಕಾಡಿದೆ...
ಉಹುಂ...
ಒಂದಕ್ಷರವೂ ಪದವಾಗಿ ಹೊರಬರಲಿಲ್ಲ...

ಬೇಸತ್ತು - ಬಳಲಿ ಕಾಲೆಳೆಯುತ್ತ ಸಾಗಿದ್ದೆ - ಸೋತ ದ್ಯಾಸದಲಿ ಯಾವುದೋ ದೂರದೆಡೆಗೆ - ಅರಿವಿಲ್ಲದೇ...

ಇನ್ನೇನು ಒಂದು ಹೆಜ್ಜೆ ಆಚೆ...
ಸಾವಿನ ಮನೆಯ ಮುಂಬಾಗಿಲು...
ನಿನ್ನೆಗಳಿಗೆ ಜೀವ ಬಂದು -
ನಾಳೆಗಳ ಆಸೆ ಚಿಗುರಿ -
ಮನದಿ ಹೊಸ ಭಾವಗಳ ಸಂತೆ ನೆರೆದು -
ನೆನಪು, ಕನಸುಗಳೆಲ್ಲ ಪದಪುಂಜಗಳಾಗಿ -
ಇಳಿಗಾಲದಲಿ ಜ್ಞಾನದಂತ ಮೂಡಿದಂತೆ -
ಕವಿತೆಯೊಂದು ಜನ್ಮ ತಳೆಯಿತು.....

'ಗಲ್ಫ ಕನ್ನಡಿಗ' ಈ - ಪತ್ರಿಕೆಯಲ್ಲಿ  ಪ್ರಕಟಿತ 
http://gulfkannadiga.com/news/culture/13334.html

11 comments:

  1. ಕವಿಯ ಅನಿವಾರ್ಯತೆ ಮತ್ತು ಕವಿತೆಯ ಹುಟ್ಟಿನ ಬಗ್ಗೆ ಅತ್ಯುತ್ತಮ ಕವನ.

    ಪ್ರಕೃತಿಯ ವರ್ಣನೆ ಮತ್ತು ಮನಸ್ಸಿನ ತುಮಲದ ವಿವರಣೆ ಅಮೋಘವಾಗಿ ಮೂಡಿ ಬಂದಿದೆ.

    ಇದು ನಮ್ಮ ನಿಮ್ಮೆಲ್ಲರ ಹಾಡು.

    ReplyDelete
    Replies
    1. ಬದರಿ ಜಿ -
      ಮೆಚ್ಚುಗೆಯ ಪ್ರತಿಕ್ರಿಯೆಗೆ ಧನ್ಯವಾದಗಳು...

      Delete
  2. ಏನೇ ಆದ್ರೂ ಕವಿತೆ ಮೂಡೋಕೆ ಒಂದು ಕಾರಣ ಬೇಕು ಅನ್ನೋದು ಸ್ಪಷ್ಟ ಅಂತೀಯಾ...?

    ಕಡಲ ಅಲೆ.....

    ಮಲೆನಾಡ ಮಳೆ....

    ಹೆಣ್ಣ ಅಂದ....

    ಪ್ರಕೃತಿಯ ಚಂದ....

    ತೆಂಗಿನ ಗಿಡ ಮರವಾಗುವಾಗಿನ ಸಹನೆಯಿಂದ ಹಿಡಿದು

    ಮಗುವಿನ ನಗುವಿನ ವರೆಗೆ ಎಲ್ಲವೂ ಹೃದಯವನ್ನು ಮೃದುಮಾಡಿದೆ ತಾನೆ?

    ಹೃದಯ ಮೃದುವಾದ ಹಾಗೆ ಕವನಕ್ಕೆ ಪದ ಪುಂಜಗಳು ಸಾಂದ್ರಗೊಳ್ಳದೇ ಇದ್ದಾವ್ಯೇ?

    ಒಳ್ಳೆಯ ಬರಹ.... ಓದೋ ಅದೃಷ್ಟ ನಮ್ದು ಅಷ್ಟೇ.....

    ReplyDelete
  3. ಆ ಹೂಮನದ ಕವಿತೆಗಳಿಗಾಗಿ ನಾನು ಕಾಯುತ್ತೇನೆ

    ReplyDelete
    Replies
    1. ಮೆಚ್ಚುಗೆಗೆ ಧನ್ಯವಾದಗಳು ಉಷಾ ಜಿ...

      Delete
  4. ಚೆನ್ನಾಗಿದೆ ಸರ್....

    ReplyDelete
  5. ಬಹಳ ಚನ್ನಾಗಿದೆ. ಇಷ್ಟವಾಯಿತು....:)

    ReplyDelete