ಜನುಮ ದಿನ.....
ಈ ಸಂಜೆ ಸರಿದು - ಈ ರಾತ್ರಿ ಕಳೆದರೆ ನಾಳೆ ಹುಟ್ಟುತ್ತದೆ.
ಆ ನಾಳೆಯೊಂದಿಗೆ ನನ್ನ ಬದುಕಿನ ಹೊಸ ವರ್ಷ ಪ್ರಾರಂಭವಾಗುತ್ತೆ.
ಅಂದರೆ ಆ ನಾಳೆ ನನ್ನ ಹುಟ್ಟು ಹಬ್ಬ.
ಅದು ನಂಗೆ ನನ್ನ ಆಯುಷ್ಯವನ್ನು ನೆನಪಿಸುತ್ತೆ.
ಹಾಂ..!!
ನನ್ನ ಆಯುಷ್ಯದ ಖಾತೆಯಿಂದ ಇನ್ನೂ ಒಂದು ವರ್ಷ ಕಡಿಮೆ ಆಯ್ತು.
ಹೊಸದೇನೂ ಸಂಭವಿಸದೆ - ಏನೇನೂ ಸಾಧಿಸದೇ.
ಆಯುಷ್ಯದ ಖಾತೆಯಲ್ಲಿ ಎಷ್ಟು ವರ್ಷಗಳು ಬಾಕಿ ಉಳಿದಿವೆಯೋ ನಂಗೊತ್ತಿಲ್ಲ.
ಖರ್ಚಾದದ್ದಷ್ಟೇ ಲೆಕ್ಕಕ್ಕೆ ಸಿಗೋದು.
ಅದಕ್ಕೇ ಭಯವಾಗೋದು.
ಏನಂದ್ರೆ ಏನೂ ಸಾಧಿಸದೇ ಹೀಗೇ ವೈಫಲ್ಯಗಳೊಂದಿಗೆ ನಿರರ್ಥಕವಾಗಿ ಬದುಕಿ ಕೊನೆಗೊಂದು ದಿನ ಖಾತೇಲಿನ ಶಿಲ್ಕು ಖಾಲಿಯಾಗಿ ಹಾಗೇ.........
ಕಳೆದ ಮೂರು ದಶಕಗಳ ಹಿಂದೆ ಇದೇ ಆಗಸ್ಟ್ ಒಂದನೇ ತಾರೀಖಿನ ಭಾನುವಾರದ ಮುಂಜಾವಿನಲ್ಲಿ ಆಯಿಯ ಗರ್ಭ ಸೀಳಿ ಮೊದಲಬಾರಿಗೆ ಈ ಬದುಕಿಗೆ ಕಣ್ತೆರೆದಿದ್ದೆ.
ಒಂದೇ ಸಮ ಅಳುತ್ತಲಿದ್ದೆನಂತೆ. ಆಯಿ ಹೇಳಿದ್ದು.
ಕಾರಣ ನೆನಪಿಲ್ಲ.
ಇಂದಿಗೂ ಅಳುತ್ತಲೇ ಇದ್ದೇನೆ. ಆಯಿಗೆ ಗೊತ್ತಾಗದಂತೆ.
ಕಾರಣ ಇಂತದ್ದೇ ಅಂತ ಹೇಳಲಾಗುತ್ತಿಲ್ಲ.
ಅಂದಿನ ಸಣ್ಣ ಅಳುವಿಗೂ ಅಮ್ಮ ಎತ್ತಿ ಎದೆಗವುಚಿಕೊಳ್ಳುತ್ತಿದ್ದಳು.
ನನ್ನ ಹಸಿವಿಗೆ ಅವಳೆದೆಯಲ್ಲಿ ಸದಾ ಅಮೃತ ಜಿನುಗುತ್ತಿರುತ್ತಿತ್ತು.
ಆ ಅಮೃತವ ಹೀರಿ ಬಹು ಬೇಗ ಬೆಳೆದುಬಿಟ್ಟೆ ಅನ್ನಿಸುತ್ತೆ.
ಅದಕ್ಕೇ ಅಮ್ಮನ ಮಡಿಲಿಂದ ಜಾರಿ ಬದುಕ ಸಾಗರಕ್ಕೆ ಬಿದ್ದುಬಿಟ್ಟೆ.
ಅಮ್ಮನ ಹಾರೈಕೆ ಇದ್ದೇ ಇದೆ ಬೆನ್ನಿಗೆ.
ಆದರೂ ಸಲಹುವ ಹಕ್ಕೀಗ ಬದುಕಿನದು.
ಬದುಕು ಅಮ್ಮನಷ್ಟು ಕರುಣಾಳುವಲ್ಲ ಅನ್ನಿಸುತ್ತೆ.
ಒಮ್ಮೊಮ್ಮೆ ನಾ ತುಂಬ ರಚ್ಚೆ ಹಿಡಿದಾಗ ತನ್ನೊಡಲಿಂದ ಸಣ್ಣಪುಟ್ಟ ಗೆಲುವುಗಳ ಗೊಂಬೆಯ ಎತ್ತಿಕೊಟ್ಟರೂ ಹೆಚ್ಚಿನ ಸಲ ನನ್ನ ಹಸಿವನ್ನು ಅರಿತೂ ಸುಮ್ಮನಿದ್ದುಬಿಡುತ್ತದೆ ಬದುಕು.
ನನಗೋ ಬಕಾಸುರನ ಹಸಿವು.
ಸುದೀರ್ಘ ಮೂವತ್ತು ವಸಂತಗಳು ಕಳೆದು ಹೋದವು -
'ಹಂಗೇ ಸುಮ್ಮನೇ...'
ಇನ್ನೆಷ್ಟು ವರುಷಗಳು ಕಳೆದು ಹೋಗುತ್ವೇನೋ -
'ಹೀಗೇ ಸುಮ್ ಸುಮ್ಮನೇ...'
ಏನಂದ್ರೆ ಏನೂ ಘಟಿಸದೇ.
ಹೇಳಿಕೊಳ್ಳೋಕೆ ಒಂದೂ ಸಾಧನೆಗಳಿಲ್ಲದೆ.
ಬದುಕಿ ಬಿಡಬಹುದು ಹಾಗೆ - ಹೀಗೆ ಸಾವು ಬರೋ ತಂಕಾ.
ಆದ್ರೆ ಹಾಗೆ - ಹೀಗೆ ಅಂತ ಸುಮ್ಮನೆ ಕಳೆದ್ಬಿಡೋದು ಎಷ್ಟು ಸರಿ.
ಹುಟ್ಟಿದ್ದು ಮನುಷ್ಯ ಜನ್ಮದಲ್ಲಿ.
ಆಮೇಲೆ ಸಾವಿನಾಚೆ ಯಮಧರ್ಮ [:)] ಏನ್ಮಾಡಿದೆ ಇಷ್ಟು ಕಾಲದ ಬದುಕಲ್ಲಿ ಅಂತ ಕೇಳಿದ್ರೆ ಹೇಳೋಕೊಂದು ಪುಟ್ಟ ಸಾಧನೆಯಾದ್ರೂ ಬೇಡ್ವಾ.
ಸಾಯೋತಂಕಾ ಬದ್ಕೊಂಡಿದ್ದೆ ಅನ್ನೋದೂ ಒಂದು ಸಾಧನೆಯಾ..??
ನನ್ನ ಆಲಸ್ಯ, ಅಸಮರ್ಥತೆಗಳಿಗೆ ಯಾವುದೋ ಕಾಣದ ದೈವವನ್ನೋ - ಓದಲಾಗದ ಹಣೆಬರಹವನ್ನೋ ದೂಷಿಸ್ತಾ, ಹಾಗಂತಲೇ ನನ್ನನ್ನು ನಾನೇ ನಂಬಿಸಿಕೊಳ್ತಾ, ಉಳಿದವರನ್ನು ನಂಬಿಸಲು ಒದ್ದಾಡುತ್ತಾ ಸುಳ್ಳೇ ಭ್ರಮೆಗಳಲ್ಲಿ ಇನ್ನೆಷ್ಟು ಕಾಲ ತಳ್ಳೋದು..??
ಎಲ್ಲ ಪ್ರಶ್ನೆಗಳೇ...
ಉತ್ತರ..???
ಇದ್ದೀತು ನನ್ನಲ್ಲೇ...
ಆದ್ರೆ ಹುಡುಕಿಕೊಳ್ಳೋಕೆ ಅಡ್ಡಿ ಬೆನ್ನಿಗಂಟಿದ ಆಲಸ್ಯ ಮತ್ತು ಉತ್ತರ ಸಿಕ್ಕಿಬಿಟ್ಟರೆ ಎಂಬ ಭಯ.
ಬದುಕು = ನಿನ್ನೆಗಳ ಕನವರಿಕೆ ಮತ್ತು ನಾಳೆಗಳ ವೈಭವದ ಕನಸುಗಳಲ್ಲಿ ನಿದ್ದೆ ಹೋದ ಈ ದಿನ...
ರಾತ್ರಿ ಕಳೆದು ಬೆಳಗಾದರೆ ಬದುಕಿಗೆ ಹೊಸ ಸಂವತ್ಸರದ ಸಂಭ್ರಮ.
ಕಳೆದ ಬದುಕ ವಿಮರ್ಶಿಸಿಕೊಂಡಾಗ ವ್ಯಥೆಯಾದರೂ - ಬರುವ ನಾಳೆಗಾಗಿ, ಅದು ತರಬಹುದಾದ ನಗುವಿನ ಆಸೆಗಾಗಿ ಮನಸು ಮುದಗೊಳ್ಳುತ್ತೆ.
ಹೌದು
ಬರುವ ನಾಳೆ ನಗುವಿನೊಂದಿಗೆ ನೋವನ್ನೂ ಹೊತ್ತು ತಂದೀತು.
ಬೇಸರವೇನಿಲ್ಲ.
ಬರುವ ಆ ನೋವು ಹೋಗುವಾಗ ಒಂದು ದಿವ್ಯ ನಗುವನ್ನು ಉಳಿಸಿಹೋಗುತ್ತಲ್ಲ.
ಪ್ರತಿ ರಾತ್ರಿಯ ನಂತರವೂ ಒಂದು ಹಗಲಿದ್ದೇ ಇದೆಯಲ್ಲ.
ಇಂದಿನವರೆಗಿನ ಸೋಲು - ನೋವುಗಳನೆಲ್ಲ ರಾತ್ರಿಯ ಕಾವಳದಲ್ಲಿ ಹೂತು ಗೆಲುವು - ನಲಿವುಗಳನ್ನು ಹೊತ್ತು ನಾಳೆಯ ಸೂರ್ಯ ಉದಯಿಸುತ್ತಾನೆ.
ಈ ಭರವಸೆಯ ಭಾವ ಮನಸಿಗೆ ಹೊಸ ಶಕ್ತಿ ನೀಡುತ್ತೆ ಮತ್ತು ನಾಳೆಯ ಬಗ್ಗೆ ನಂಬಿಕೆಯನ್ನು ಮೂಡಿಸುತ್ತೆ.
ನಾಳೆಗಳೆಡೆಗಿನ ಭರವಸೆಗಳೇ ಅಲ್ಲವಾ ಬದುಕಿನ ಮೂಲಾಧಾರವಾದ ಒಳಸೆಲೆ.
"ಬದುಕ ಶರಧಿಯ ಅನಿಶ್ಚಿತ ಅಲೆಗಳ ಮೇಲೆ ಭರವಸೆಯ ದೋಣಿಯಲಿ ಕೂತು ನಗುವಿನ ಹುಟ್ಟು ಹಾಕುತ್ತಾ ಸಾಗುತಿದೆ ಒಬ್ಬಂಟಿ ಪಯಣ..."
ಭರವಸೆಯ ದೋಣಿಗೆ ತೂತಾದರೆ ಬದುಕು ಮಗುಚಿ ಬಿದ್ದಂತೆಯೇ ಸರಿ.
ನಾಳಿನ ಸೂರ್ಯ ಒಂದಿಷ್ಟು ಹೊಸ ಭರವಸೆಗಳ ಕಿರಣಗಳ ಹೊತ್ತು ಮುಂಬಾಗಿಲಲಿ ಬಂದು ನಿಲ್ತಾನೆ.
ಒಂದಷ್ಟು ಹೊಸ ನಲಿವು - ನಗುವುಗಳು ನನ್ನದಾಗುತ್ತವೆಂಬ ಆಸೆಯಿಂದ...
ಬದುಕಿನ ಮರದ ರೆಂಬೆಗಳು ಆಲದಂತೆ ಅಗಲಗಲ ವಿಶಾಲವಾಗಿ ಹಬ್ಬಿ ಬೆಳೆಯಲಿ - ಸಾವಿರ ಖಗ, ಮೃಗಗಳಿಗೆ ಗೂಡಿಗೆ ತಾವು ಮತ್ತು ನೆರಳಾದೀತು - ಅವೆಲ್ಲವುಗಳ ಅನುಭವವೂ ನನ್ನದೇ ಆದೀತೆಂಬ ಬಯಕೆ ಹೊತ್ತು...
ಇಂದಿಗೆ - ಈ ವರ್ಷಕ್ಕೆ ವಿದಾಯ ಹೇಳುವೆ...
ಬದುಕಿನ ಸಾಧ್ಯತೆಗಳ ವಿಸ್ತಾರದ ನಿರಂತರ ನಿರೀಕ್ಷೆಯಲ್ಲಿ ಹೊಸ ಮುಂಜಾವಿಗೆ ಕಣ್ತೆರೆಯುವೆ...
ದಯನೀಯವಾಗಿ ಉರುಳದಿರಲಿ ನಿರೀಕ್ಷೆಗಳ ಕನಸ ಸ್ತಂಭ ಎಂಬ ಸದಾಶಯದೊಂದಿಗೆ ನನ್ನೊಳಗಿನ ನನಗೆ ನಾನೇ ಜನ್ಮದಿನಕ್ಕೆ - ನವ ಸಂವತ್ಸರಕ್ಕೆ ಶುಬಕೋರಿಕೊಳ್ಳುತ್ತೇನೆ.....
ನಿಮ್ಮದೂ ಒಂದು ಪ್ರೀತಿಯ ಹಾರೈಕೆಯಿರಲಿ.....
Many more happy returns of the day
ReplyDeleteಧನ್ಯವಾದಗಳು ಮಂಜುಳಾ ಮೆಡಂ...
Deleteವಿಶ್ವಾಸ ವೃದ್ಧಿಸಲಿ...
ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ತಮ್ಮಣ್ಣ.. :))
ReplyDeleteಕಳೆದ ದಿನಗಳಿಗೆ ಬದುಕಿನ ಕ್ಷಣಗಳಿಗೆ ಸಾಧನೆಯ ರಂಗು ತುಂಬುವ ಬಯಕೆಯ ಗೆಳೆಯಾ
ReplyDeleteಸಾಧನೆಯೆನ್ನುವುದು ನಮ್ಮೊಳಗಿನ ಅರಿವಿನ ಬೆಳಕು, ಎಲ್ಲವನ್ನು ಎದುರಿಸುತ್ತ ಕಾಲೂರಿ ನಿಂತು ಕ್ಷಣಗಳೊಂದಿಗೆ ಬಡಿದಾಡುವುದೂ ಸಾಧನೆಯೇ ಅಲ್ವಾ, ಜಾರುವ ಕ್ಷಣಗಳಲ್ಲಿನ ನಮ್ಮ ಬದುಕಿನ ನೆರೆಳು ಸಾಧನೆ...
ಹಳೆ ಕನಸುಗಳಿಗೆ ನನಸಾಗುವ ಮೋಹ ಬರಲಿ, ಹೊಸ ಕನಸುಗಳು ಗೆಲ್ಲಿಸುವ ದಾಹ ತರಲಿ..
ಆಲಸ್ಯ ಭಯಗಳ ಮೀರಿ ಉತ್ತರ ಹುಡುಕುವ ಸಾಧನೆ ನಿನ್ನದಾಗಲಿ...
ಬದುಕೆಂಬ ಅಮ್ಮ ನಾಳೆಯ ಭರವಸೆಗಳ ಈ ದಿನವೂ ತುಂಬಿ ಸಾಧನೆಯೆಡೆಗೆ ನೂಕಲಿ...
ಮಿತ್ರ, ಜನ್ಮದಿನದ ಶುಭಾಷಯಗಳು...
ಹುಟ್ಟು ಹಬ್ಬದ ಶುಭಾಶಯಗಳು..
ReplyDeleteನನ್ನ ಜನುಮ ದಿನವನ್ನು ತಮ್ಮ ಪ್ರೀತಿ ತುಂಬಿದ ಸದಾಶಯಗಳ ಶುಭಾಶಯಗಳಿಂದ ಸಿಂಗರಿಸಿದ ನನ್ನೆಲ್ಲ ಸಹೃದಯ ಸಸ್ನೇಹಿ ಬಂಧುಗಳಿಗೆ ನಾನು ಆಭಾರಿ...
ReplyDeleteಈ ಪ್ರೀತಿ ಹೀಗೇ ಇರಲಿ...
ವಿಶ್ವಾಸ ವೃದ್ಧಿಸಲಿ...
ನಿಮ್ಮಲ್ಲಿ ಗೊಂದಲಗಳಿರುವವರೆಗೂ ಜೀವನ ರಸಮಯವಾಗೇ ಇರುತ್ತೆ. ಉತ್ತರ ಸಿಕ್ಕ ಮರುಕ್ಷಣನೇ ಜೀವ್ನ ನಿರರ್ಥಕ ಅನ್ನಿಸೋಕೆ ಶುರುವಾಗಬಹುದು. ಸ್ವಗತ ಲಹರಿ ಝರಿಯಂತೆ ಹರಿದಿದೆ. ಎಲ್ಲಾ ಶುಭವಾಗಲಿ.
ReplyDeleteಸಾಧನೆಯೆಂದರೆ ಏನು ಹೇಳು ನೋಡ್ವಾ....?
ReplyDeleteಕಂಪ್ಯೂಟರ್ ಕಂಡು ಹಿಡಿದ ಟಿ.ವಿ.ಕಂಡು ಹಿಡಿದ....
ಸಾಧನೆ ಮಾಡಿದ.
ನೂರಾರು ಕವಿತೆ ಬರೆದ... ಕವಿಯಾದ....
ಸಂಗೀತ ಕಲಿತ .. ಪೇಮಸ್ ಹಾಡುಗಾರನಾದ...
ಸಾಧನೆ ಮಾಡಿದ...
ಸಾಧನೆಗೆ ಎಲ್ಲೆ ಕಟ್ಟಿಕೊಳ್ಳಬಹುದಾ?
ಒಂದೊಂದು ಕ್ವಿಂಟಲ್ ಅಡಿಕೆ ಹೆಚ್ಚಾದಾಗಲೂ ಅದನ್ನು ದೊಡ್ಡ ಸಾಧನೆ ಅಂತ ಬಿಗಿದವನು ನೀನು...
ಸಾಧನೆ ತಾನೇ ಅದು...??
ತೋಟ ಗದ್ದೆಯ ಮಧ್ಯ ಜೀವವಿರಿಸಿ ಅದರಲ್ಲೇ ಬದುಕಬೇಕಿದ್ದ ನೀನು
ಮಹಾನಗರಿಗೆ ಹೋಗಿ ಬದುಕ ಜೊತೆ ಸೆಣೆಸಾಡುವುದಕ್ಕೆ ಏನನ್ನೋಣ.....???
ಸಾಧನೆಗೆ ಸಾವಿರ ಮುಖ ಗೆಳೆಯ.....
ದೇಶ-ಕೋಶ ಎರಡೂ ನೋಡ್ತಿದೀಯಾ....
ಖುಷಿಯಿದೆ ತಾನೇ?.....
ಒಂದಕ್ಕೊಂದು ಸಂಬಂಧವೇ ಇಲ್ಲಾ ಅಂದ್ಕೋಬೇಡಾ....
ಹುಟ್ಟು ಹಬ್ಬದ ಶುಭಾಷಯಗಳು ದೋಸ್ತಾ..........
ಎಷ್ಟು ಚಂದ ಬರೆಯುತ್ತಿರಿ? ಒಂದು ಕಾಲದಲ್ಲಿ ನಾನೂ ನಿಮ್ಮಂತೆ ಬರೆಯಲು ಪ್ರಯತ್ನಿಸುತ್ತಿದ್ದೆ ಬರಬರುತ್ತಾ ಹೀಗಾಗಿಬಿಟ್ಟೆ. ನೀವು ನನ್ನಂತೆ ಆಗದೆ ಹೀಗೆಯೇ ಭಾವ ತುಂಬಿ ಬರೆಯುತ್ತಲೇ ಇರಿ
ReplyDeleteನಿಮಗೆ ಶುಭವಾಗಲಿ.