Sunday, July 1, 2012

ಗೊಂಚಲು - ಮೂವತ್ತು + ಮೂರು.....


ಮಳೆ ಹಾಗೂ ಬೆಳದಿಂಗಳು ಬೆರೆತ
ಒಂದು ಹಳೆಯ ನೆನಪು.....





ಅಂದು 2006ನೇ ಇಸವಿಯ ಮಾರ್ಚ್ ತಿಂಗಳ ಹತ್ತನೇ ದಿನ.
ಆಗಿನ್ನೂ ನಾನು ಮಲೆನಾಡಿನ ಪುಟ್ಟ ಹಳ್ಳಿಯೊಂದರಲ್ಲಿ ಕೃಷಿಕನಾಗಿ  ಪ್ರಕೃತಿಯೊಡನೆ ಭಾವಗಳ ಬೆಸಗೊಂಡು  ಬದುಕು ಕಟ್ಟಿಕೊಳ್ಳಲು ಶ್ರಮಿಸುತ್ತಿದ್ದ ಕಾಲ.
ಆಗ ಮಧ್ಯ ಬೇಸಿಗೆಯಲ್ಲಿ ಸುರಿದ ಅಕಾಲ ಮಳೆಯ ದಿನದ ನನ್ನೊಳಗಿನ ಭಾವಾವೇಶಗಳಿಗೆ ಅಕ್ಷರ ರೂಪ ನೀಡುವ ಪ್ರಯತ್ನ ಮಾಡಿದ್ದೇನೆ.
ಓದಿ...
ನಕ್ಕು...
ಮರೆತು ಬಿಡಿ...

ಮೂಗನ್ನರಳಿಸುತ್ತಿದೆ - ಮಣ್ಣ ಕಂಪು.
ಮೊದಲ ಮಳೆಗೆ ಭೂಮಿ ಸ್ಪಂದಿಸುತ್ತಿದೆ.
ವರ್ಷದ ಮೊದಲ ಮಳೆ ತುಂಬಾ ಮುಂಚಿತವಾಗಿ ಅಕಾಲದಲ್ಲಿ ಅತಿವೃಷ್ಟಿ ಎಂಬಂತೆ ಸುರಿದು ಬಿಟ್ಟಿದೆ.
ಭುವಿಗೆ ಮೊದಲ ಮಿಲನದ ಸಂಭ್ರಮ.
ಪಾಪ ಭಯವೂ ಆಗಿದ್ದೀತು - ಅನಿರೀಕ್ಷಿತ ಆರ್ಭಟ ಅಲ್ಲವಾ.
ಆಗಸ ಹುಚ್ಚೆದ್ದುಬಿಟ್ಟಿದೆಯೇನೋ - ಭುವಿಯ ಯಾವುದೋ ಚೆಲುವ ಕಂಡು.
ಬೆಳಿಗ್ಗೆ ಎರಡು ತಾಸುಗಳ ಕಾಲ ಒಂದೇ ಸಮ ಮುಸಲಧಾರೆ.
ಆಗಸ ಮತ್ತು ವಸುಧೆಯ ಪ್ರೇಮೋನ್ಮಾದ ಏನೋ ಖುಷಿ ಮತ್ತೇನೋ ಆತಂಕ ಎರಡನ್ನೂ ಮೂಡಿಸುತ್ತದೆ ರೈತನ ಮನದಲ್ಲಿ.
ಮಳೆ ಯಾವತ್ತಿದ್ದರೂ ಸಂಭ್ರಮವೇ.
ಆದರೆ ಅಕಾಲದಲ್ಲಾದ್ದರಿಂದ ಸಣ್ಣ ಆತಂಕ.

ಸಂಜೆ ಕೂಡಾ ಮೋಡ ಮುಸುಕಿದ ವಾತಾವರಣ.
ಸೂರ್ಯ ಮುಳುಗುವ ಮುಂಚೆಯೇ ಮಧುರ ಕತ್ತಲು.
ಬೆಳಗಿನ ಮಳೆಯ ತಂಪು ಮತ್ತು ಮಣ್ಣ ಗಂಧ ಗಾಳಿಯಲ್ಲಿ ಇನ್ನೂ ಜೀವಂತ...
ಅವುಗಳನ್ನು ಆಸ್ವಾದಿಸ್ತಾ ಅಂಗಳದಲಿ ನಿಂತಿದ್ದೆ.
ಎದುರಿನ ಫಲವಂತ ಹಲಸಿನ ಮರದ ಹಸಿರೆಲೆಗಳ ನಡುವೆ ಎರಡು ಹೆಸರರಿಯದ ಚಂದದ ಹಕ್ಕಿಗಳು ಸರಸವಾಡ್ತಾ ಇದ್ವು.
ನಂಗದು ಪ್ರಣಯದಾಟದಂತೆ ತೋರಿ ನನ್ನಲ್ಲೂ ಎಲ್ಲೋ ಏನೋ ಸಣ್ಣ ಕಂಪನ.
ಒಂದು ಮಳೆಹನಿ ಮೈಮೇಲೆ ಬಿತ್ತು.
ಬೇಜಾರಾಯ್ತು.
ಯಾಕ್ ಗೊತ್ತಾ -
ಬಾನಾಡಿಗಳ ಮಿಲನ ಸಂಭ್ರಮಕ್ಕದು ಅಡ್ಡಿ ಮಾಡುತ್ತೇನೋಂತಾ.
ಆದ್ರೆ ಅಷ್ಟರಲ್ಲಾಗಲೇ ಅವು ದೂರ ಹಾರಿ ಹೋದ್ವು.
ಆಮೇಲೆ ಶುರುವಾಯ್ತು ನೋಡಿ ನನ್ನೊಳಗೆ ಬೆಚ್ಚಗಿನ ಕನಸುಗಳ ಓಕುಳಿ.
ಪ್ರಕೃತಿಯ ಪ್ರತೀ ಚರ್ಯೆಯೂ ಪ್ರಣಯದಾಟದಂತೆ ಕಂಡು ಮನಸಿಗೇನೋ ಹಿತವಾದ ರೋಮಾಂಚನ.
ಗಾಳಿಯ ತಂಪಿಗೆ ಬಾಗಿ ತೂಗಾಡಿ ಒಂದಕ್ಕೊಂದು ತಾಕುವ ದೂರದ ಬೆಟ್ಟದ ಮೇಲಿನ ತರುಲತೆಗಳು ಒಂದನ್ನೊಂದು ಮುತ್ತಿಟ್ಟು ಸರಸವಾಡಿ ಆನಂದಿಸ್ತಿವೆಯೇನೋ ಎಂಬ ಭಾವ.
ಅದರಲ್ಲೂ ಬೆಟ್ಟದ ತಲೆಯ ಮೇಲೆ ಎಲ್ಲಕ್ಕೂ ಎತ್ತರದಲ್ಲಿ ತಲೆದೂಗುವ ಬಿದಿರ ಮೆಳೆಗಳಂತೂ... 
ಓಹ್.!! 
ಮಾತಲ್ಲಿ ಹೇಳಲಾಗದ ಭಾವಗಳ ಸಂಕ್ರಾಂತಿ.

ಬಿರು ಬೇಸಿಗೆ ಇರಬೇಕಾದ ಒಂದು ದಿನದಲ್ಲಿ
ಜಡಿ ಮಳೆಯ ಬೆಳಗು - ಮೋಡಗಟ್ಟಿದ ಸಂಜೆ - ಈಗ ರಾತ್ರಿ ನಿಚ್ಛಳ ಬೆಳದಿಂಗಳು...
ಎಲ್ಲ ಸೇರಿ ಮನಕೆ ಅರಳು ಮರಳು.
ಪ್ರಕೃತಿಯ ಆಟ ಎಂಥ ವಿಚಿತ್ರ...
ಎಂಥ ಸೊಗಸು...

ಅದು ಚಾಲಿ ಅಡಿಕೆಯ ಕೆಲಸದ ಸಮಯ.
ನಾನು ಒಬ್ಬಂಟಿ ಕೆಲಸಗಾರ.
ನನ್ನ ಕೆಲಸಕ್ಕೆ ಸಾಥಿಯಾಗಿ ಟೇಪ್ ರೆಕಾರ್ಡಿನಲ್ಲಿ ಹದವಾಗಿ ಗುನುಗುವ ಮಧುರ ಪ್ರೇಮ ಗೀತೆಗಳು...
ಅದು ಹಳೆಯದಾದಷ್ಟೂ ಸೊಗಸು ಹೆಚ್ಚು.

ಬೆಳಗಿನಿಂದ ರಾತ್ರಿಯವರೆಗೂ ಅಡಿಕೆ ಕೆಲಸದೊಂದಿಗೆ ಜೊತೆಯಾದ ಏಕಾಂತ...
ಮನಸಿಗೂ ಮೈಗೂ ತುಂಬು ಹರೆಯ...
ಸಹಜವಾಗಿ ಮನದಲ್ಲಿ ಜೀಕುವ ಪ್ರೇಮ, ಪ್ರಣಯ ಭಾವಗಳ ಕನಸಿನ ಜೋಕಾಲಿ...
ಜೊತೆಗೆ ಎಲ್ಲೋ ಓದಿದ ಯಾವುದೋ ಪೋಲಿ ಪುಸ್ತಕದ ಸಾಲುಗಳ ನೆನಪು...
ಸಣ್ಣಗೆ ಕಿವಿಯಲ್ಲಿ ಮೊರೆವ ಪ್ರೇಮಗೀತೆಯ ಇನಿದನಿ...
ಮನಕೆ ಎಂಥಾ ಮುದವಿತ್ತು.

ಪ್ರೇಮ ಭಾವದ ಕಲ್ಪನೆಯೇ ಮೈಮನಗಳಲ್ಲಿ ಪುಳಕವೆಬ್ಬಿಸುವ ವಯಸಲ್ಲಿ - ಹಿತವಾದ ಏಕಾಂತದಲ್ಲಿ ಮಧುರ ಪ್ರೇಮ ಗೀತೆಗಳ ಕೇಳುತ್ತಾ ಕೆಲಸ ಮಾಡ್ತಾ ಇದ್ರೆ ಎಂಥ ಕೆಲಸವೂ ನಿರಾಯಾಸ...
ಕಣ್ಣಲ್ಲಿ  ಪ್ರೇಮಸೌಧ...
ಮೈಯಲ್ಲಿ ಪ್ರಣಯ ಝೇಂಕಾರ...

ಅಂತಹುದರಲ್ಲಿ ಇಂದು ಮಳೆಯೂ - ಬೆಳದಿಂಗಳೂ ಜತೆಯಾಗಿಬಿಟ್ಟಿವೆ...
ಎರಡೂ ನನ್ನ ಬಹು ಇಷ್ಟದ ವಿಷಯಗಳು...
ಹಾಗಾಗಿ ಅಕಾಲ ಮಳೆಯ ಆತಂಕವನ್ನೂ ಮೀರಿ ಮನದಲ್ಲಿ ಎಷ್ಟೆಲ್ಲ ಆನಂದಮಯ ಭಾವಗಳ ಸಮ್ಮಿಲನ...

ಕಣ್ತುಂಬ ಬೆಳದಿಂಗಳ ತುಂಬಿಕೊಂಡು ದಿಂಬಿಗೆ ತಲೆಯಿಟ್ಟರೆ ಮನದೊಳಗಣ ಎಷ್ಟೆಲ್ಲ ಆಸೆಗಳು ಕನಸುಗಳಾಗಿ ಜಾತ್ರೆ ನೆರೆದಿದ್ದವು ಕಣ್ಣ ಮುಂದೆ...
ಕನಸು ತುಂಬಿದ ಸಣ್ಣ ನಿದ್ದೆಯ ನಂತರದ ಮಧ್ಯ ರಾತ್ರಿಯ ಕಥೆ ಕೇಳ್ತೀರಾ...
ಅದು
ಪ್ರೇಮದ ಕನಸು ಪ್ರಣಯದ ಹಾದಿ ತುಳಿವ ಪ್ರೇಮಭಾವದ ಪರಾಕಾಷ್ಠೆಯ ಸಮಯ...
ಬೆಳಗಿನಿಂದ ಪ್ರೇಮಭಾವದ ರೋಮಾಂಚನದಿಂದ ಮೈಯಲೆಲ್ಲ ಗಡಿಬಿಡಿಯಿಂದ ಹರಿದಾಡುತ್ತಿದ್ದ ಒಳಗೇ ಕೆರಳಿದ ರಕ್ತ
ಒಮ್ಮೆಲೆ ತನ್ನ ಮಿತಿಗಿಂತ ಹೆಚ್ಚು ಬಿಸಿಯಾಗಿ
ದೇಹದ ಕೆಳಭಾಗಕ್ಕೆ ಹರಿದು
ನಾಭಿಯಾಳದ ಯಾವುದೋ ನರಕ್ಕೆ ನುಗ್ಗಿ -
ಒತ್ತಡದಿಂದ -
ಅಲ್ಲೇಲ್ಲೋ ಹೆಪ್ಪುಗಟ್ಟಿದ ಸೃಷ್ಟಿಜಲ ಕರಗಿ -
ಛೀ..!!
ಒಳ ಚೆಡ್ಡಿಯಲ್ಲಿ ಮಳೆ...
ಅಂಗುಷ್ಠದಿಂದ ನೆತ್ತಿಯವರೆಗೂ ಬೆವರ ಧಾರೆ...
ಏನೋ ಅರಿಯದ ಸುಖದ ಸುಸ್ತು...
ಸುಸ್ತಿನಿಂದಾಗಿ ಬೆಳಗಿನವರೆಗೆ ಮತ್ತೆ ಕನಸುಗಳೂ ಬಾರದ ಗಾಢ ನಿದ್ದೆ...
ಎಂಥ ಹೊಸತನದ ಸೊಬಗಿತ್ತು ದಿನಗಳಿಗೆ...

ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಪ್ರಕೃತಿ ಮಡಿಲಲ್ಲಿ ಒಡನಾಟ -
ರಾತ್ರಿಯ ಮೊದಲ ಜಾವವೆಲ್ಲ ಅಂಗಳದಲ್ಲಿ ನಿಂತು ಚಂದಿರನ ಬೆಳಕಲ್ಲಿ ಕಾಣುವ ಚಂದ್ರಿಕೆಯೆಡೆಗಿನ ಕನಸು -
ಎರಡೂ ಸೇರಿ ಬಡಿದೆಬ್ಬಿಸಿದ ಕಲ್ಪನಾ ಪ್ರೇಮಭಾವ ಹಾಸಿಗೆ ಸೇರುವ ಹೊತ್ತಿಗೆ ಉತ್ಕಟ...
ಮನದ ಪ್ರೇಮ ದೇಹದ ಜೊತೆ ಸೇರಿ ಮಧ್ಯರಾತ್ರಿಯಲ್ಲಿ ಅರಿವೇ ಆಗದೇ ಕನಸಲ್ಲೇ ಬ್ರಹ್ಮಚರ್ಯದ ಅರ್ಧ ಸಾವು...

ನಂತರ ಪ್ರೇಮದ ಉತ್ಕಟತೆ ಕಾಮನ ಆವೇಶದಲ್ಲಿ ಕರಗಿ,
ಪ್ರೇಮ - ಕಾಮಗಳೇ ಜೋಗುಳವಾಗಿ,
ಮನಸೂ - ದೇಹವೂ ಸುಖದ ಸುಸ್ತಿನಿಂದ ವಿರಾಮವ ಬಯಸಿ,
ಏನೇನೂ ಇಲ್ಲದ ನಿರುಮ್ಮಳ ಭಾವದ ಮತ್ತೊಂದು ರೀತಿಯ ಸುಖದ -
ಪ್ರಚ್ಛನ್ನ ನಿದ್ರೆಯ ಕಾಲ.
ಮುಂದಿನ ಬೆಳಗಿನವರೆಗೆ...

ಮಲೆನಾಡ ಮಣ್ಣಲ್ಲಿ ಬೆಳೆದ ಹುಡುಗರಲ್ಲಿ ಇಂಥ ಎಷ್ಟೆಷ್ಟು ಅನುಭವಗಳೋ...
ಅದರಲ್ಲೂ ಮಳೆಗಾಲದಲ್ಲಿ...
ಪ್ರಕೃತಿಯ ಭಾವಗಳನ್ನು ತನ್ನದಾಗಿಸಿಕೊಂಡು ಆಸ್ವಾದಿಸಬಲ್ಲ ಸ್ವಲ್ಪೇ ಸ್ವಲ್ಪ ರಸಿಕತೆ ಇರುವ ಯಾರೇ ಮಲೆನಾಡ ಕೂಸು, ಮಾಣಿಗಳನ್ನು ಕೇಳಿ ನೋಡಿ -
ಹೊರಗೆ ಧೋ ಮಳೆ ಸುರಿಯುತಿರುವಾಗ -
ಒಳಗೆ - ತಮ್ಮ ಮನದೊಳಗೆ
ಸುರಿದು ಕಾಡುತ್ತಿದ್ದ ಬೆಚ್ಚನೆ ಭಾವಗಳ ನೂರು ಕಥೆ ಹೇಳಿಯಾರು...

@@@ % @@@

ಆದ್ರೆ ಇಂದು ನನ್ನಂಥ ಎಷ್ಟೋ ಹಳ್ಳಿ ಬಿಟ್ಟು ಪೇಟೆ ಸೇರಿದ ಮಲೆನಾಡಿಗರಿಗೆ ಇವೆಲ್ಲ ಬರೀ ನೆನಪಷ್ಟೇ ಎಂಬುದು ನೋವಿನ ಸಂಗತಿ.
ನಾನಂತೂ ಮಲೆನಾಡ ಜಡಿಮಳೆಯಲ್ಲಿ ಮನಸೋ ಇಚ್ಛೆ ಮೈತೋಯಿಸಿಕೊಂಡು ಮೂರು ವರ್ಷಗಳೇ ಸಂದು ಹೋದವು.
ಬೆಂದಕಾಳೂರಲ್ಲಿ ಸುರಿವ ಮಳೆಯೂ ಶುದ್ಧ ಅಂತ ಮನಸಿಗನ್ನಿಸಲ್ಲ.
ಮಲೆನಾಡ ಮಳೆಯಲ್ಲಿ ತೋಯ್ದು ತೊಪ್ಪೆಯಾಗುತ್ತಿದ್ದ ದೇಹ - ಮನಸುಗಳು ಅನುಭವಿಸುತ್ತಿದ್ದ ಸುಖವೇ ಬೇರೆ.
ಮಳೆಯೊಂದಿಗೆ ಗಾಳಿಯೂ ಬೆರೆತು ತೋಯ್ದ ದೇಹದಲ್ಲಿ ಹೊಟ್ಟೆಯೊಳಗಿಂದ ನಡುಕ...
ಮಳೆಯ ಸದ್ದು ಮನದಿ ಅರಳಿಸುವ ಮೌನ -
ಹೊಯ್ದಾಡುವ ತರವೆ ಗಿಡಗಳು
ವಿಚಿತ್ರ ಶಬ್ದ ಮಾಡುವ ತೆಂಗಿನ ಗರಿಗಳು
ಅಲ್ಲೆಲ್ಲೋ ಗುಡ್ಡದ ತುದೀಲಿ ಒಂಟಿ ಒಣಗಿದ ಮರದ ಮೇಲೆ ಒಮ್ಮೆ ಮೈಕೊಡವಿ ಹಾಗೇ ಕೂತ ಗಿಡುಗ...
ಜೊತೆಗೆ ಜಾಸ್ತಿ ತೋಯಬೇಡ ಎಂಬ ಅಮ್ಮನ ಕಾಳಜಿಯ ಗದರಿಕೆ...
ಇವನೆಲ್ಲಾ ನೋಡುತ್ತಾ, ಆಸ್ವಾದಿಸ್ತಾ ಪಡೆವ ಅನಿರ್ವಚನೀಯ ಸುಖ ಅದು ಭಾಷೆಗೆ ನಿಲುಕದ ಭಾವ ಗೀತೆ.
ಯಾವ ಕೊಪ್ಪೆ - ಯಾವ ಕಂಪನಿ ಕೊಡೆಗಳೂ ಅಲ್ಲಿಯ ಮಳೆಯಲ್ಲಿ ಸಂಪೂರ್ಣವಾಗಿ ಮೈತೋಯದಂತೆ ತಡೆಯಲಾರವು.
ಮಳೆಯಲಿ ನೆನೆದು ಭಾವಗಳ ಬೆಳೆ ಬೆಳೆವ ಹಸಿವಾಗುತಿದೆ...



6 comments:

  1. ತುಂಬು ಚಂದಿರನ ಹುಣ್ಣಿಮೆಯ ರಾತ್ರಿಗಳು....
    ಅಬ್ಬಿ ಒಲೆಯ ಮುಂದೆ ಕೂತು ಕನಸ ಕಾಣುವ ಸಂಜೆಗಳು....
    ಅಕಾಲ ಮಳೆಯ ನೀರವದಲ್ಲಿ ನಿದ್ದೆಗೆಡಿಸಿ ಕಾಡುವ ಹಗಲಿನ ಆವೇದನೆಗಳು.....
    ಮನೆಯ ಅಕ್ಕೀ ಮೂಟೆಯ ಮೂಲೆಯಲ್ಲೂ ಕೂಡಾ ಒಂದು ಬೆಚ್ಚನೆಯ ಬಿಸುಪಿದೆ.....
    ಅದೊಂದು ಸಮಯ.....
    ಮೂಡಿಯ ವಯಸ್ಸು.....
    ರೋಮಾಂಚನಗಳದ್ದೇ ಹಾವಳಿ.......

    "ಮನದ ಪ್ರೇಮ ದೇಹದ ಜೊತೆ ಸೇರಿ ಮಧ್ಯರಾತ್ರಿಯಲ್ಲಿ ಅರಿವೇ ಆಗದೇ ಕನಸಲ್ಲೇ ಬ್ರಹ್ಮಚರ್ಯದ ಅರ್ಧ ಸಾವು..."
    ಕೆಲವು ಸಾಲುಗಳಿಗೆ ಅದರದೇ ಆದ ಅದ್ಭುತತೆಯಿದೆ....
    ಶಬ್ಧಗಳ ಜೊತೆ ಆಟವಾಡುವ ನಿನ್ನ ಸಾಲುಗಳಲ್ಲಿ ಬಾವಗಳ ಥಳಕು ಬಳುಕಿನ ಸೌಂದರ್ಯವಿದೆ.....
    ಥತ್ತೇರಿ...!!!!!!!
    ಏನ್ ಹೇಳ್ಲೋ ದೋಸ್ತಾ......

    ReplyDelete
  2. ಮೆಚ್ಚಿದ್ದಕ್ಕೆ ಧನ್ಯ...
    ಆ ರೋಮಾಂಚನಗಳೆಲ್ಲ ಅಕ್ಕಿ ಮೂಟೆಯ ಮೂಲೆಯಲ್ಲೇ ಕಳೆದುಹೋದುವಲ್ಲಾ ಎಂಬ ಹಳಹಳಿಕೆಯಷ್ಟೇ ಉಳಿದದ್ದು ಎಂಬುದೇ ವಿಪರ್ಯಾಸ...
    ನನ್ನ ಬರಹಕ್ಕಿಂತ ನಿನ್ ಕಾಮೆಂಟೇ ಸಕತ್ತಾಗಿದ್ದಲೋ...

    ReplyDelete
  3. ಚೆನ್ನಾಗಿದೆ ಬರಹ,.,:-)

    ReplyDelete
    Replies
    1. ಧನ್ಯವಾದಗಳು...
      ವಿಶ್ವಾಸ ವೃದ್ಧಿಸಲಿ...

      Delete
  4. ನಿಮ್ಮ ಬರವಣಿಗೆ ನನಗೆ ಇಷ್ಟ ಆಯ್ತು ಗೆಳೆಯ!
    ಚೆನ್ನಾಗಿದೆ ಮಳೆಯಲ್ಲಿ ನೆನೆಯುವಾಗ ನೆನಪುಗಳ ಮಿಂಚು ಬಂದಾಗ ಹಾಗೆ ಇತ್ತು ನಿಮ್ಮ ಸಾಲುಗಳು..

    ನಿಮ್ಮೊಳಗಿನ ಬರಗಾರನನ್ನು ಸದಾ ಚಟುವಟಿಕೆಯಲ್ಲಿಡಿ..
    ಮತ್ತಷ್ಟು ಬರೆಯಿರಿ ನಿಮಗೆ ಶುಭವಾಗಲಿ!

    ReplyDelete
  5. ಧನ್ಯವಾದಗಳು...
    ವಿಶ್ವಾಸ ವೃದ್ಧಿಸಲಿ...

    ReplyDelete