Monday, October 1, 2012

ಗೊಂಚಲು - ನಲವತ್ತು ಮತ್ತೈದು.....

ಸಮಾಧಾನ.....

ಅಂದು -
ಆಗಷ್ಟೇ ರುದ್ರಭೂಮಿಯಿಂದ ಹಿಂತಿರುಗಿದ್ದೆ. ನನ್ನ ಮಗ ಅಳುತ್ತಳುತ್ತಲೇ ಕೇಳಿದ್ದ, ಅಮ್ಮಾ ತಾತ ಎಲ್ಲಿ ಹೋದ್ರು.?
ಆಗಿನ್ನೂ ಮಗನಿಗೆ ನಾಲ್ಕು ವರ್ಷ. 
ದೇವರ ಹತ್ರ ಪುಟ್ಟಾ ಅಂದಿದ್ದೆ. 
ಮತ್ತೆ ಪ್ರಶ್ನೆ - ಯಾಕೆ.?
ದೇವರಿಗೆ ತಾತ ಅಂದ್ರೆ ತುಂಬಾ ಪ್ರೀತಿಯಂತೆ. ಅದಕ್ಕೇ ತಾತನ್ನ ತನ್ನಹತ್ರ ಕರೆಸಿಕೊಂಡಿದಾನೆ, ಇನ್ನು ಮೇಲೆ ತಾತ ಆಕಾಶದಲ್ಲಿನ ನಕ್ಷತ್ರವಾಗಿ ನಮ್ಮ ನೋಡ್ತಿರ್ತಾರೆ ಅಂತೆಲ್ಲ ಏನೇನೋ ಹೇಳಿ ಸಮಾಧಾನಿಸಿದ್ದೆ. ಅಂದಿನಿಂದ ನನ್ನಷ್ಟೇ ತಾರೆಗಳನ್ನೂ ಪ್ರೀತಿಸಹತ್ತಿದ್ದ.

ಈಗ ಅದೇ ಮಗನಿಗೆ ಕನಸು ಬಿಚ್ಚಿಕೊಳ್ಳುವ ಹದಿನಾರರ ವಯಸು.
ನನ್ನನ್ನೇ ಸಮಾಧಾನಿಸುತ್ತಿದ್ದಾನೆ.
ಅಮ್ಮಾ - ಉಹುಂ ಅಮ್ಮ ಅಲ್ಲ ನೀನು. ಈ ಬದುಕು ನೀಡಿದ ಮೊದಲ ಜೀವದ ಗೆಳತಿ. ನೀ ನೊಂದು ಕಣ್ಣೀರಾದರೆ ನಾ ಕಂಗೆಡುತ್ತೇನೆ. ಮತ್ತೇನಿಲ್ಲ ಆ ನಿನ್ನ ದೇವರಿಗೆ ನಾನೆಂದರೆ ತುಸು ಹೆಚ್ಚೇ ಪ್ರೀತಿಯಂತೆ. ಅದಕೇ ಸ್ವಲ್ಪ ಮುಂಚಿತವಾಗಿ ಬಾ ಅಂತಿದಾನೆ. ನಂಗೊತ್ತು - ನಿನ್ನ ಮಡಿಲ ಬಿಸುಪು ಮತ್ತು ಕಂಪು ಅಲ್ಲೆಲ್ಲೂ ಇಲ್ಲ. ಆದರೂ ನೀನಿಲ್ಲಿ ನಗುತಿದ್ದರೆ ಅಲ್ಲೂ ನಾನು ನಚ್ಚಗಿದ್ದೇನು. ನಿನ್ನ ಈ ಪುಟ್ಟ ತಾರೆ ಮನೆಯಂಗಳದಿಂದ ಆಗಸಕೆ ಹಾರಿ ಕೋಟಿತಾರೆಗಳ ನಡುವೆ ಮಿನುಗುವದಂತೆ. ಇಲ್ಲಿ ಜಿನುಗುವ ನಿನ್ನ ಪ್ರೀತಿಯ ಅಲ್ಲಿಂದಲೇ ಸವಿದೇನು...

ಆದರೂ ಅಮ್ಮಾ -
ಎಲ್ಲ ನೀಡುವವ ಅವನೇ ಆದರೆ, ನೋವ ನುಂಗಿ ನಗೆಯ ಹಂಚು ಎಂಬ ನಿನ್ನ ಎಂದಿನ ಮಾತು ಅವನಿಗೇಕೆ ಅನ್ವಯಿಸುವುದಿಲ್ಲ.?
ಈ ಜಗದಿ ಯಾಕಿಷ್ಟು ನೋವಿದೆ.??
ಅವನೇ ಬಿಡಿಸಿದ ಅವನದೇ ಚಿತ್ರಕೆ ಬಣ್ಣ ತುಂಬುವ ವೇಳೆ ಹರಿದೆಸೆವ ಹಂಬಲವೇಕೆ.???
ತಾನೇ ಬಿಡಿಸಿದ್ದು ಎಂಬ ಅಹಮಿಕೆಯಾ...????


ನಗೆಯ ಹರಡಬೇಕಿದ್ದವನು ನಿನ್ನ ಕಣ್ಣಲ್ಲಿ ಹನಿಯನಿಳಿಸಿ ಹೋಗುತಿರುವ ನನ್ನ ಕ್ರೌರ್ಯವ ಕ್ಷಮಿಸಿಬಿಡಮ್ಮಾ....


ಇಂದು - 
ವೈದ್ಯರುಗಳೆಲ್ಲ ಸೋಲೊಪ್ಪಿಕೊಂಡು ನನ್ನ ಕರುಳಿನ ಸಾವಿಗೆ ಮಾರುದ್ದದ ಖಾಯಿಲೆಯ ಹೆಸರಿಟ್ಟು ಬದುಕಿಗೆ ಗಡುವು ನೀಡಿದ ದಿನ...

8 comments:

 1. ಕಣ್ಣಂಚು ಒದ್ದೆ ಒದ್ದೆ..
  ಹೃದಯ ತಾಕುವ ಬರಹ....
  "ಈ ಜಗದಿ ಯಾಕಿಷ್ಟು ನೋವಿದೆ.??"
  ಪ್ರಶ್ನೆ ಮತ್ತೇ ಮತ್ತೇ ಕಾಡುತ್ತದೆ.... ವೆರಿ ನೈಸ್...

  ReplyDelete
 2. ಒಬ್ಬ ಸಹೃದಯಿಯಾಗಿ ಬರಹಗಾರನಾಗಿ ತುಂಬಾ ಮೆಚ್ಚುಗೆಯಾಗಿಬಿಡ್ತೀರ..

  ReplyDelete
 3. :( :(
  ಅವನೇ ಬಿಡಿಸಿದ ಅವನದೇ ಚಿತ್ರಕೆ ಬಣ್ಣ ತುಂಬುವ ವೇಳೆ ಹರಿದೆಸೆವ ಹಂಬಲವೇಕೆ.???
  ತಾನೇ ಬಿಡಿಸಿದ್ದು ಎಂಬ ಅಹಮಿಕೆಯಾ...????

  ಇರಬಹುದೇನೋ...

  ತುಂಬಾ ಚೆನ್ನಾಗಿದೆ ಶ್ರೀ...
  ಕಂಡೂ ಕಾಣದಂತೆ ಕಣ್ಣಂಚನ್ನು ಒದ್ದೆ ಮಾಡುವ ಶಕ್ತಿಯಿದೆ ಬರಹಕ್ಕೆ ...

  ReplyDelete
 4. ಓದುತ್ತ ಓದುತ್ತ ಎಲ್ಲೋ ಕಳೆದು ಹೋದೆ ... ಹೃದಯಕ್ಕೆ ನಾಟಿ ಸೀಳಿ ಬರುವ ಕೆಲವು ಪ್ರಶ್ನೆಗಳು ಹಾಗೆ ಉಳಿದಿದೆ... ಹೃದ್ಯ ಬರಹ ...

  Hussain

  ReplyDelete
 5. ಚನ್ನಾಗಿದೆ ಶ್ರೀವತ್ಸ.... ಈ ಪ್ರಶ್ನೆ ಕೆಲವು ದಿನಗಳವರೆಗೆ ನನ್ನನ್ನೂ ಕಾಡಿತ್ತು. ಕೊನೆಗೆ ಸಿಕ್ಕ ಉತ್ತರವಿದು. ನೋವುಗಳು ನಮ್ಮ ಶಾಶ್ವತ ನೆಲೆಯನ್ನು ನೆನಪಿಸಿಕೊಡುವ ರಿಮೈ೦ಡರ್ ಇದ್ದ೦ತೆ. ನೋವುಗಳು ಬ೦ದಾಗಲೇ ನಾವು ನಮ್ಮ ಶಾಶ್ವತ ನೆಲೆಯಾದ ಸಚ್ಚಿದಾನ೦ದನನ್ನು ಬಿಟ್ಟು ಈ ಭ್ರಮಾಲೋಕದಲ್ಲಿ ಇದ್ದೇವೆ ಎ೦ಬುದನ್ನು ನೆನಪಿಸಿಕೊಡುತ್ತದೆ.
  ಕೆಲವೊಮ್ಮೆ ಇವೆಲ್ಲಾ ಪುಸ್ತಕದಲ್ಲಿ ಓದಲಷ್ಟೆ ಚ೦ದ ಎನಿಸುತ್ತದೆ. ನೋವುಗಳನ್ನು ವಾಸ್ತವದಲ್ಲಿ ಎದುರಿಸವುದು ಪುಸ್ತಕ ಓದಿದಷ್ಟು ಸುಲಭವಲ್ಲ. ಹಾಗ೦ತ ಅಸಾಧ್ಯವೂ ಅಲ್ಲ...

  ReplyDelete
 6. ಮನಸ್ಸು ಮೂಕವಾಯಿತು.

  ಅಜ್ಜನಿಗೆ ಉತ್ತರವಾದ ಪ್ರಶ್ನೆಯೇ, ಈಗ ಅಮ್ಮನಿಗೂ ಉತ್ತರವಾಗದ ಪ್ರಶ್ನೆ!

  ಕೆಲವೊಮ್ಮೆ ಭಗವಂತ ಕ್ರೂರಿ ಅನಿಸುತ್ತದೆ.

  ReplyDelete
 7. ಹೌದು ಭಗವಂತನೇ ಬಿಡಿಸಿದ ಚಿತ್ರವದು.....

  ತುಂಬ ಸೊಗಸುತನವಿರುವುದು ಒಳ್ಳೆಯತನದಲ್ಲಿ.....

  ಅದು ಆತನಿಗೂ ಇಷ್ಟ.......

  ಒಳ್ಳೆಯವರನ್ನು ಆತ ಕಳಿಸುವುದು ಅವನಿಂದಷ್ಟು ಒಳ್ಳೆಯತನ ಹರಡಲಿ ಎಂದು....

  ಇರೋ ಬರೋ ಪ್ರೀತಿ... ಭಾವನೆ... ಮೃದುತ್ವ.... ಹಿತವಾಗೋದೆಲ್ಲ

  ಅವನಲ್ಲೇ ತುಂಬಿದೆ....

  ಆದರೆ ಅವನಿಗೆ ಭಗವಂತ ಮಾನವರುಗಳ ಹಂಗಿಲ್ಲ....

  ಎಲ್ಲಿದ್ದರೂ ಆ ಹೃದಯ ಒಳ್ಳೆಯದನ್ನೇ ಬೆಳೆಸುತ್ತೆ....

  ಅದಕ್ಕಾಗಿಯೇ ಆ ಜೀವ ಇತ್ತ ನಮ್ಮನ್ನೂ ಸೆಳೆದು...
  ಅತ್ತ ದೇವರನ್ನೂ ಸೆಳೆಯುತ್ತೆ.....

  ಆ ಜೀವ ಇಲ್ಲಿದ್ದರೆ ಅವನಿಗೆ ದುಃಖ....
  ಅಲ್ಲಿದ್ದರೆ ನಮಗೆ.....

  ದೇವನಿಗೆ ನಮ್ಮ ಒಂದು ನೂರು ವರುಷ ಒಂದು ಕ್ಷಣವಂತೆ....
  ದೇವರಂತ ದೇವನೇ ಈ ಜೀವವನ್ನು ಒಂದು ಅರೆ ಕ್ಷಣ ಬಿಟ್ಟಿರಲಾರ ಅಂದರೆ
  ಬಂಧನಗಳ ಹಂಗಿರುವವರು ನಾವು....

  ನಮ್ಮನ್ನು ಯೋಚಿಸಿಯಾದರೂ ಆತ ಒಂದು ಕ್ಷಣವನ್ನು ತ್ಯಾಗಮಾಡಬಹುದಿತ್ತಲ್ಲವಾ.....???

  ಏನು ಹೇಳಲಿ ?...
  ಹೇಳೋಕೇನೂ ಇಲ್ಲಾ.......

  ReplyDelete
 8. ನಂಗೂ ಹೇಳಲ್ಲಿಕ್ಕೇನೂ ಇಲ್ಲ ಶ್ರೀವತ್ಸ, ಬರವಣಿಗೆಯ ಬಗ್ಗೆ ಆಲೋಚನೇನೇ ಬರ್ತಿಲ್ಲ, ತಿರುಳು ಒಳಗೊಂದು ಮೌನವನ್ನ ಹುಟ್ಟು ಹಾಕಿಬಿಟ್ಟಿದೆ. ಆದರೆ ಈ ಮೌನಕ್ಕೊಂದು ಆಕಾರ ಇದೆ, ಅದು ಹೀಗಿದೆ-"?"

  ReplyDelete