Thursday, March 28, 2013

ಗೊಂಚಲು - ಅರವತ್ತು ಮತ್ತು ಏಳು.....


ನಾಕು ಪ್ರಶ್ನೆ - ಹಗುರಾಗೋ ಮಾತು...

ನೀನೇನೋ ಎಂಬುದು ಅವಳ ಪ್ರಶ್ನೆ...

ನನ್ನ ಮನದಂತೆ ನಾನು...ಒಂದಷ್ಟು 'ನಾನು'ಗಳ ಪ್ರೀತಿಸುತ್ತಾ - ಪ್ರೀತಿಯೆದುರು ಇಷ್ಟಿಷ್ಟೇ 'ನಾನೆಂಬುದ' ಕಳಚಿಕೊಳ್ಳುತ್ತಾ - ಪೂರ್ಣತ್ವವ ಬಯಸದೇ ಅಪೂರ್ಣತೆಯಲ್ಲೇ ಸೊಬಗಿದೆಯೆಂದು ನಂಬುತ್ತಾ - ಕ್ಷಣ ಕ್ಷಣಕೂ ಅದಲು ಬದಲಾಗುವ ನನ್ನೊಳಗಿನ ನನ್ನದೇ ಭಾವಗಳಿಗೆ ಬೆಚ್ಚಿಬೀಳುತ್ತಾ - ಪರೀಕ್ಷೆ ನಡೆಸಿ ನಂತರ ಪಾಠ ಹೇಳೋ ಅನುಭವದ ನೆಲೆಯ ಬದುಕಿನ ಕಲಿಕಾ ವಿಧಾನದೆಡೆಗೆ ಒಮ್ಮಲೇ ಬೆರಗು ಮತ್ತು ಆತಂಕದಿಂದ ನೋಡುತ್ತಾ - ಬದುಕು ಹೇಳುವ ಪಾಠಗಳ ಅರ್ಥೈಸಿಕೊಳ್ಳಲಾಗದೇ - ಬದುಕಿಗೆ ಬೆನ್ನು ತಿರುಗಿಸಲೂ ಇಷ್ಟವಾಗದೇ - ಈ ಎಲ್ಲ ತೊಳಲಾಟಗಳು - ಬುದ್ಧಿ ಹುಟ್ಟು ಹಾಕೋ ದ್ವಂದ್ವಗಳು - ಅವೆಲ್ಲವುಗಳ ನಡುವೆ ಮನದ ಸನ್ನಿಧಿಯಲ್ಲಿ ಮೂಡುವ ಮಧುರ ಭಾವಗಳು - ಇವುಗಳನೆಲ್ಲ ಒಳಗೊಂಡು ನಗುತಿರುವ ಬದುಕೆಂಬ ಪಾಠ ಶಾಲೆಯ ಅತಿದಡ್ಡ ವಿದ್ಯಾರ್ಥಿ ನಾನು...



ನಿನ್ನ ಬರಹ ಎಂದರೇನೋ ಎಂಬುದು ಇನ್ನೊಂದು ಪ್ರಶ್ನೆ...

ನನ್ನೊಳಗಣ ಭಾವ ಮತ್ತು ನನ್ನ ಬದುಕು ಅದು ನನ್ನ ಬರಹ...
ಮನದ ಭಾವ ಶಬ್ದವಾಗಿ ಆಚೆ ಬಂದಾಗಲೂ ಅದು ನನ್ನದೇ ಭಾವ ಎಂದು ನನಗೆ ಪ್ರಾಮಾಣಿಕವಾಗಿ ಅನ್ನಿಸಿದ ಕ್ಷಣ ನಾನು ಸಂಭ್ರಮಿಸುತ್ತೇನೆ.
ಪ್ರತೀ ಕ್ಷಣವ ಹಾಗೇ ಬದುಕಬೇಕೆಂದು ಪ್ರಯತ್ನಿಸುತ್ತೇನೆ.
ಒಮ್ಮೊಮ್ಮೆ ಸೋಲುತ್ತೇನೆ...:(
ನಾ ಬರೆದ ಯಾವುದೇ ಬರಹ ಬರೆದಾದ ಆ ಕ್ಷಣ ನನ್ನಲ್ಲಿ ಒಂದು ಸಂತೃಪ್ತ ಭಾವ ಅಥವಾ ಏನನ್ನೋ ಇಳುಕಿ ಹಗುರಾದ ಭಾವವನ್ನು ಮೂಡಿಸುತ್ತಲ್ಲ ಆ ಖುಷಿಯೇ ಅಂತಿಮ...ಆ ಬರಹಾನ ಓದಿದವರೂ ಇಷ್ಟಪಟ್ಟರೆ ಅದು ಬೋನಸ್ ಖುಷಿ...ಬೋನಸ್ ಗಾಗಿಯೇ ಬರೆಯುವುದಿನ್ನೂ ರೂಢಿಯಾಗಿಲ್ಲ...(ಬೋನಸ್ ಗಾಗಿ ಬರೆಯ ಯತ್ನಿಸಿದಾಗ ನಂಗೆ ಪೂರ್ತಿ ಖುಷಿ ದಕ್ಕಿಲ್ಲ) ಒಮ್ಮೊಮ್ಮೆ ಇನ್ಯಾರದೋ ಭಾವ ಅದು ನನ್ನದೂ ಭಾವವೇ ಅಂತನ್ನಿಸಿದಾಗ ಅದಕ್ಕೆ ಅಕ್ಷರ ರೂಪ ಕೊಡಲು ಪ್ರಯತ್ನಿಸಿಯೇನು...ನನ್ನ ಬರಹ ಸಹಜವಾಗಿಯೇ ನನ್ನನ್ನು ಇನ್ನಷ್ಟು ವಿಸ್ತಾರವಾಗಿಸುತ್ತಾ, ಬೆಳೆಸುತ್ತಾ, ನನ್ನೊಳಗನ್ನು ಬೆಳಗಿಸುತ್ತಾ ಸಾಗುತ್ತದೆಂಬುದು ನನ್ನ ಪ್ರಾಮಾಣಿಕ ನಂಬಿಕೆ...ಬೆಳವಣಿಗೆ ಹೊರತೋರದೆ ಇದ್ದೀತು ಆದರೆ ನನ್ನೊಳಗದು ಇದ್ದೇ ಇದ್ದೀತು...
ನಿಜ ಒಪ್ಪುತ್ತೇನೆ ತೀರ ನಮ್ಮ ಹತ್ತಿರದವರು, ಪ್ರಜ್ಞಾವಂತರೂ ಆಗಿರುವವರು ಒಂದು ಮಾತು ಹೇಳಿದಾಗ ನಾವು ನಮ್ಮನ್ನು ವಿಮರ್ಶಿಸಿಕೊಳ್ಳಬೇಕಾದ್ದು ಅಗತ್ಯವೇ...ಆದರೂ ಯಾವುದೇ ಬರಹಗಾರನ ಎಲ್ಲಾ ಬರಹಗಳೂ ಅತ್ಯುತ್ತಮವಾಗಿಯೇ ಇರಲು ಮತ್ತು ಎಲ್ಲರಿಗೂ ಖುಷಿಯ ನೀಡಲು ಸಾಧ್ಯವಿಲ್ಲ ಎಂಬುದನ್ನೂ ಮರೆಯಲಾಗದಲ್ಲವಾ...
ನಮ್ಮ ಯಾವುದೋ ಬರಹದ ಯಾವುದೋ ನಾಕು ಸಾಲು ಯಾರೋ ಓದುಗನಿಗೆ ಒಂದು ಹೊಸ ಯೋಚನೆ, ಹೊಸ ಖುಷಿ, ಈ ಭಾವ ತನ್ನದೆನ್ನುವಂಥ ಭಾವವನ್ನು ಮೂಡಿಸಿದರೆ ಅಲ್ಲಿಗೆ ಬರಹಗಾರನ ಬರಹಕ್ಕೆ ಸಾರ್ಥಕ್ಯ ದಕ್ಕಿದಂತೆಯೇ ಎಂಬುದು ನನ್ನ ಅನಿಸಿಕೆ...
ನಮ್ಮ ಬರಹ ಅಂದರೆ ಅದು ನಮ್ಮ ಭಾವ...ಅದು ಓದುಗರ ಭಾವವೂ ಆಗಿ ನಲಿದರೆ ಆಗ ಬರಹಗಾರನ ಖುಷಿಯ ವಿಸ್ತಾರ...ಆ ಖುಷಿಯ ವಿಸ್ತಾರಕ್ಕಾಗಿ ಶ್ರಮವಹಿಸುವುದಾದರೆ ಪ್ರಜ್ಞಾವಂತ ಓದುಗರ ಅಭಿಪ್ರಾಯಗಳನ್ನು ಅನುಸರಿಸುವುದರಲ್ಲಿ ತಪ್ಪಿಲ್ಲ...ಅದು ನಮ್ಮ ಬರಹದ ನಮ್ಮದೇ ಶೈಲಿಗೆ, ನಮ್ಮೊಳಗಿನ ಮೂಲ ಸೆಲೆಗೆ ಧಕ್ಕೆಯಾಗದಿದ್ದಲ್ಲಿ ಮಾತ್ರ...


ಬಯಲಲ್ಲಿ ಪೂರ್ತಿ ಬೆತ್ತಲಾಗಿ ಹೋಗ್ತೀಯಾ ಎಂಬುದು ಆತಂಕಭರಿತ ಪ್ರಶ್ನೆ...

ಅರೆಬರೆಯಾಗಿ ಕಾಡುವುದಕಿಂತ ಪೂರ್ತಿ ಕಳಚಿ ಹಗುರಾಗುವುದು ಸುಲಭ ನಂಗೆ...
ಬರುವಾಗ ತಂದದ್ದು ಅಳುವೊಂದೇ...ಹೋಗುವಾಗ ನಾಕು ಕಂಗಳಲಿ ಎರಡು ಹನಿಗಳನುಳಿದು ಬೇರೇನನೂ ಉಳಿಸಿ ಹೋಗುವ ಹಂಬಲವಿಲ್ಲ...ಈ ನಡುವೆ ಮುಚ್ಚಿಟ್ಟು ಬಚ್ಚಿಟ್ಟು ಸಾಧಿಸುವುದೇನಿದೆ ಎಂಬುದೆನ್ನ ಮನದ ಪ್ರಶ್ನೆ...


ಹಾಗಲ್ಲವೋ ಕೆಲವು ನೋವುಗಳನ್ನಾದ್ರೂ ಮುಚ್ಚಿಡಬೇಕು...ನಮ್ಮ ಮೌನದೊಂದಿಗೆ ಕೊಂಡೊಯ್ಯಬೇಕು...ಹಾಗೆಲ್ಲ ಹೇಳುವುದಲ್ಲ...ಅಷ್ಟಕ್ಕೂ ನಿನ್ನ ನೋವಿಂದ ಯಾರಿಗೇನಾಗಬೇಕಿದೆ...?? ಬಯಲಲ್ಲಿ ಬೆತ್ತಲಾಗಿ ಸಾಧಿಸೋದೇನಿದೆ...???

ಒಂದು ಕ್ಷಣ ಮನಸು ತಡಬಡಾಯಿಸಿದ್ದು ಖರೆ...ಹೌದಲ್ಲವಾ ಅನ್ನಿಸಿದ್ದು ಸತ್ಯ...ಅರೆಘಳಿಗೆ ಮೌನದೊಂದಿಗೆ ಮಾತಾಡಿದೆ...
ಮನಸು ಹೇಳಿದ್ದಿಷ್ಟು...
ನನ್ನ ನೋವೆಂದರೆ ಅದು ಬರೀ ನನ್ನದೊಂದೇ ಅಲ್ಲವಲ್ಲಾ...ನೋವ ಸಾಗರವೇ ಉಸಿರಾಡೋ ಈ ಜಗದಲ್ಲಿ ನನ್ನ ನೋವು ಅದೆಷ್ಟು ಜೀವಗಳ ನೋವ ಹೋಲುತ್ತೋ - ನನ್ನ ಭಾವ ಅದೆಷ್ಟು ಜೀವಿಗಳ ಭಾವಗಳ ಸಂಧಿಸುತ್ತೋ...ನನ್ನ ನೋವಂಥದೇ ನೋವ ಭಾವವ ನುಂಗಿ ಉಸಿರಾಡುತಿರೋ ಒಂದ್ಯಾವುದೋ ಜೀವ ಆಕಸ್ಮಿಕವಾಗಿಯಾದರೂ ನನ್ನ ಭಾವವ ಓದಿದರೆ, ಓದಿ ಅರೆ ನನ್ನ ನೋವಂಥ ನೋವು ಇಲ್ಲೂ ಒಂದಿದೆ - ನನ್ನ ನೋವು ಒಂಟಿಯಲ್ಲ ಅಂದುಕೊಂಡು ಒಂದು ನಿಟ್ಟುಸಿರ ಚೆಲ್ಲಿದರೆ - ಆ ನೋವನುಂಡ ಜೀವ ಬದುಕಿದೆ ಅಂದರೆ ನಾನೂ ಬದುಕಬಹುದಲ್ಲವಾ ಅಂತ ಒಂದು ಕ್ಷಣ ನಗೆ ಚೆಲ್ಲಿದರೆ ಸಾಕಲ್ಲವಾ...ನನ್ನ ಬರಹಕ್ಕೆ ಅದಕಿಂತ ದೊಡ್ಡ ಸಾರ್ಥಕ್ಯ ಇನ್ನೇನು ಬೇಕು...
ಸ್ಫೂರ್ತಿಯಾಗಬೇಕಿಲ್ಲ ನಾನ್ಯಾರಿಗೂ - ಒಂದು ನೋವಿಗೆ ಜತೆಯಾದ ನೋವಿನ ಸಮಾಧಾನದ ನಿಟ್ಟುಸಿರಾದರೂ ಸಾಕು...
ಹಾಗನ್ನುತ್ತಲೇ ಒಂದಷ್ಟು ಎದೆಯ ನೋವ ಹಿಂಡಿ ಅಕ್ಷರವಾಗಿಸಿ ಹಗುರಾದೆ...ಓದಿದ ಒಂದಿಬ್ಬರ್ಯಾರೋ ಶ್ರೀ ನನ್ನ ಬದುಕು - ಭಾವಕ್ಕೆ ನೀ ಅಕ್ಷರಗಳ ಪೋಣಿಸಿದೆ, ಯಾಕೋ ನಾನು ಕಳೆದು ಹೋದೆ ಅಂತಂದರು...ಸಾರ್ಥಕವಾಯಿತು ಬರೆದದ್ದು ಮತ್ತು ಬದುಕಿದ್ದು ಅನ್ನಿಸಿತು...

6 comments:

  1. ಶ್ರೀ..
    ಇದನ್ನ ಬರಹವಾಗಿ ಓದುವುದೋ.. ನಿಮ್ಮ ಮನದ ಮಾತಿದು ಎಂಬಂತೆ ಓದುವುದೋ ಎಂಬ ಜಿಜ್ಞಾಸೆ ನನ್ನದು.
    ಬದುಕನ್ನ ತೀರಾ ಸಮಾಜದೆದುರು ತೆರೆದಿಟ್ಟು, ನಾನು ಹೀಗುಹೀಗೆ ಎಂದು ತನ್ನೊಳಗನ್ನು ಬಿಚ್ಚಿಡುವುದು ಎಷ್ಟು ಸರಿ..?! ನೇರಾನೇರ ಬದುಕಿ ಬಿಡುವುದು ಕಷ್ಟ.. ಆದರೆ ಸಾದ್ಯ. ಅಂತಹ ಸಾಧ್ಯತೆಯಲ್ಲಿ ಖುಷಿಯನ್ನು ಕಂಡುಕೊಳ್ಳುವ ಕೆಲವರಲ್ಲಿ ನೀವೂ ಒಬ್ಬರಾದರೆ, ನಿಮ್ಮ ಒಳಗಿನ ಪ್ರಾಮಾಣಿಕ ವ್ಯಕ್ತಿಗೊಂದು ಸಲಾಂ..

    ReplyDelete
  2. ದಿವ್ಯ ಆಂಜನಪ್ಪMarch 28, 2013 at 6:14 PM

    :-) ಮಾತು ಮನದ ಕನ್ನಡಿ, ಚೆನ್ನಾಗಿದೆ ವತ್ಸ ರವರೇ.

    ReplyDelete
  3. ಚೆನ್ನಾಗಿದೆ ಭಾವುಕ ಬರಹ.

    ReplyDelete
  4. ನಿನ್ನೊಳಗಿನ ತುಮುಲ , ಪುಳಕ , ದುಃಖ , ಸಂತೋಷಗಳನ್ನೆಲ್ಲ ಭಾವಗಳ ಗೊಂಚಾಲಾಗಿ ಹಂಚುತ್ತಿರುವದಕ್ಕೆ ಮೆಚ್ಚಬೇಕು.. ಎಂದಿನಂತೆ ಅದ್ಭುತ ....

    ReplyDelete
  5. ಧರ್ಮರಾಯನಿಗೆ ಯಕ್ಷ ಕೇಳಿದ ಪ್ರಶ್ನೆಗಳು ಹೀಗೆಯೇ ಇದ್ದವು. ಸೂಪರ್ ಗೆಳೆಯ..ಮನದೊಳಗೆ ಇರುವ ಭಾಷೆ ಅಕ್ಷರಗಳಾಗಿ ಮೂಡಿಬರಬೇಕು..!

    ReplyDelete
  6. ಇಂತದ್ದೇ ಭಾವ ಎಂದು ಹೇಳೋಕೆ ಕಷ್ಟ ...ಆದರೂ ಎಲ್ಲರೂ ಕೇಳೋ "ನಿನ್ನ ಭಾವಗಳನ್ಯಾಕೆ ಎಲ್ಲರೆದುರು ಹರಿಬಿಟ್ಟು ಚಿಕ್ಕವಳಾಗ್ತೀಯಾ "ಅನ್ನೊ ಪ್ರಶ್ನೆಗೆ ಪ್ರತಿನಿಧಿಯಾಗಿ ಉತ್ತರಿಸಿದ್ದೀಯ ಅಂತ ಹೇಳಬಲ್ಲೆ ....
    ಮಾತಿನಲ್ಲಿ ಹೇಳಲಾಗದ ಭಾವಗಳನ್ನ ಮನ ಮುಟ್ಟೋ ತರ ಅದ್ ಹೇಗೆ ಹೇಳುವೆಯೋ ನಾ ಕಾಣೆ ....ನಿನ್ನೀ ಭಾವಗಳ ವಿಧ ವಿಧ ಗೊಂಚಲಿಗೊಂದು ಪ್ರಣಾಮ

    ReplyDelete