Thursday, January 2, 2014

ಗೊಂಚಲು - ಒಂದು ಸೊನ್ನೆ ಮೂರು.....

ನಾ ಇತಿಹಾಸವಾಗುವ ಮುನ್ನ.....

ನಗುವೇ –
ಎಲೆ ಉದುರಿದ ಮರ ನಾನು – ತುಸುವಾದರೂ ನೀ ದಕ್ಕಿದರೆ ಮತ್ತೆ ಚಿಗುರಿಯೇನು...
ಹೂ ಅರಳಿಸಿ ಫಲಕೊಡ ಬೇಕಿಲ್ಲ, ಒಂದಿನಿತು ಹಸಿರ ಸೂಸುವಷ್ಟಾದರೂ ಒಳಸೇರು ಒಮ್ಮೆ ಬೇರು ಕೂಡ ಒಣಗಿ ಕಾಷ್ಠವಾಗುವ ಮುನ್ನ...
ಆ ಹಸಿರ ಸೊಂಪಿಂದ ಇನ್ಯಾರೋ ದಾರಿಹೋಕನಿಗೆ ಒಂಚೂರು ನೆರಳಾದೇನು... 
***
ಬದುಕೇ –
ಬಡ ಜೋಗಿ ನಾನು - ಮನದ ಜೋಳಿಗೆಯಲಿ ನೀ ನಕ್ಕ ಘಳಿಗೆ ನಾ ಶ್ರೀಮಂತ... 
ಹುಸಿಯೇ ಆದರೂ, ನಸುನಗುವನಾದರೂ ಬೀರೊಮ್ಮೆ ಈ ದೇಹದ ಬಿಸಿ ಆರುವ ಮುನ್ನ...
ಕೆಲ ಘಳಿಯಲಾದರೂ ನಾನೇ ನಾನಾಗಿ ನಲಿದೇನು...
***
ಒಲವೇ –
ಪಾಳು ಮನೆ ನನ್ನದು - ಮನದ ಮಂಟಪಕೆ ನೀ ಹೆಜ್ಜೆ ಇಟ್ಟ ಕ್ಷಣ ಕನಸುಗಳ ಪಟ್ಟಾಭಿಷೇಕ... 
ಅಪರಿಚಿತ ನೆರಳಂತಾದರೂ ಸುಳಿದು ಹೋಗೊಮ್ಮೆ ಈ ಉಸಿರ ಹಣತೆ ಆರುವ ಮುನ್ನ...
ಸುಳಿದಾಡಿದ ನಿನ್ನ ನೆನಪಲ್ಲೇ ಒಂದಿಡೀ ಜನ್ಮ ನಲಿವಿಗರಸನಂತೆ ಜೀವಿಸಿಯೇನು...
***
ಗೆಳತೀ - 
ಭಾವವಿಲ್ಲದ ಒಣ ಕವಿತೆ ನಾನು – ನೀ ಬದುಕ ತಬ್ಬಿದರೆ ಭಾವಗೀತೆಯಾದೇನು...
ಕವಿತೆಯ ಕೊನೆಯ ಚುಕ್ಕಿಯಂತಾದರೂ ಬೆರಳ ಸೋಕು ಒಮ್ಮೆ  ಎದೆಯ ಶಾಯಿ ಖಾಲಿಯಾಗುವ ಮುನ್ನ...
ರೆಕ್ಕೆ ಮೂಡಿದ ಮರಿ ಹಕ್ಕಿಯಾಗಿ ಭಾವದ ಬಾನಗಲ ಹಾರಿ ಹಾರಿ ನಲಿದೇನು...
***
ಮೌನವೇ –
ಹಿತವಲ್ಲದ ಮಾತು ನಾನು – ನೀ ರೂಢಿಗತವಾದರೆ ಒಂದಷ್ಟು ಹಿತಮಿತವಾದೇನು...
ಕೊಟ್ಟ ಕೆಲ ಮಾತುಗಳ ಉಳಿಸಿಕೊಂಬುದಕಾದರೂ ಇಷ್ಟೇ ಇಷ್ಟಾದರೂ ಮನದೊಡಲ ಸೇರು ಒಮ್ಮೆ ಶಾಶ್ವತವಾಗಿ ಈ ಉಸಿರೇ ನಿನ್ನೊಡಲ ಸೇರುವ ಮುನ್ನ...
ಒಂದಷ್ಟು ಭಾವ ಬಂಧಗಳಲಿ ಒಂಚೂರು ನಗೆಯ ತುಂಬಿ ಉಳಿದೇನು...
***
ನೋವೇ –
ನನ್ನ ಕರುಳಿನ ಹುಣ್ಣು ನೀನು – ನಿನ್ನಿಂದ ಓಡಲು ಹವಣಿಸುವ ಅಸಹಾಯ ಹೆಳವ ನಾನು...
ನಿನ್ನ ಹಂಚಿಕೊಂಬುವರಿಲ್ಲ – ನಿನ್ನ ನೆನಪ ಹಂಚಿಕೊಂಬುವವರೇ ಎಲ್ಲ...
ನೀನವರ ಸೋಕಿದ ಕ್ಷಣದಲ್ಲೇ ನಿನ್ನ ನನ್ನೊಡನೆ ಹಂಚಿಕೊಳ್ಳಬಲ್ಲ ಮನಸುಗಳ ಒಡನಾಟವನಾದರೂ ಕೊಡು ಒಮ್ಮೆ ನೀ ನನ್ನ ಕೊಲ್ಲುವ ಮುನ್ನ... 
ಅವರ ಹಗುರತೆಗೆ ಕಾರಣನಾದ ಭ್ರಮೆಯಲಾದರೂ ನನ್ನೊಳಿರುವ ನಿನ್ನನು ತುಸುವಾದರೂ ಮರೆತು ನಕ್ಕೇನು...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

6 comments:

  1. ಟೈಟಲ್ ಜೀರ್ಣವಾಗುತ್ತಿಲ್ಲದ ಸಂಕಟ... :(

    ReplyDelete
  2. ಚೆನ್ನಾಗಿದೆ .ನಗುವೇ –
    ಎಲೆ ಉದುರಿದ ಮರ ನಾನು – ತುಸುವಾದರೂ ನೀ ದಕ್ಕಿದರೆ ಮತ್ತೆ ಚಿಗುರಿಯೇನು...
    ಹೂ ಅರಳಿಸಿ ಫಲಕೊಡ ಬೇಕಿಲ್ಲ, ಒಂದಿನಿತು ಹಸಿರ ಸೂಸುವಷ್ಟಾದರೂ ಒಳಸೇರು ಒಮ್ಮೆ ಬೇರು ಕೂಡ ಒಣಗಿ ಕಾಷ್ಠವಾಗುವ ಮುನ್ನ...
    ಆ ಹಸಿರ ಸೊಂಪಿಂದ ಇನ್ಯಾರೋ ದಾರಿಹೋಕನಿಗೆ ಒಂಚೂರು ನೆರಳಾದೇನು... so nice lines

    ReplyDelete
  3. ನಾ ಇತಿಹಾಸವಾಗುವ ಮುನ್ನ, ಎಂದು ಬರೆದಿಟ್ಟ ಪಲುಕುಗಳು ಒಮ್ಮೆಯಾದರೂ ಮನದ ಕೊನೆಯ ಸೋಕುವಂಥವು :-)

    - ಪ್ರಸಾದ್.ಡಿ.ವಿ.

    ReplyDelete
  4. ವತ್ಸಾ ಎಲ್ಲರದ್ದೂ ಇತಿಹಾಸವಾಗುವ ಮುನ್ನದ ಕಥೆಯೇ.....

    ಕೆಲವೇ ಕೆಲವರು ಮಾತ್ರ ಇತಿಹಾಸವಾಗಿ ಕಥೆಯಾಗುತ್ತಾರೆ....

    ಸಾಲುಗಳಿಗೆ.... ಅವುಗಳ ಭಾವಗಳಿಗೆ ಪ್ರತಿಕ್ರಿಯಿಸಬಲ್ಲೆ....

    ಅಂತರಾಳಕ್ಕಲ್ಲ.....

    ಚನ್ನಾಗಿದೆ ದೊರೆ....

    ReplyDelete
  5. ನೀನೆಂಬೋ ನೀನು ಏನೇನೋ ಆಗಿಬಿಡುತ್ತೀಯ.. ಆತ್ಮೀಯನಾಗಬಲ್ಲೆ, ಗೆಳೆಯನಾಗಬಲ್ಲೆ, ಗುರುವಾಗಬಲ್ಲೆ , ಮಗುವಾಗಬಲ್ಲೆ , ವೇದಾಂತಿಯಾಗಬಲ್ಲೆ, ಏನೂ ಅಲ್ಲದ ಯಾರೋ ಕೂಡಾ ಆಗಿಬಿಡಬಲ್ಲೆ.

    ಭಾವಗಳು ಚೆನ್ನಾಗಿವೆ... ಸಾಲುಗಳು ಕಲ್ಪನೆಗಳಾಗಿದ್ದರೆ ನನ್ನದೊಂದು ಸಲಾಂ..

    ಎಂದಿನಂತೆ ನಗುವಿದೆ ಅಲ್ಲವಾ ನಿನ್ನ ಮುಖದಲ್ಲಿ.. .. :)

    ReplyDelete