Wednesday, July 16, 2014

ಗೊಂಚಲು - ನೂರಿಪ್ಪತ್ತಾರು.....

ಹೀಗೆಲ್ಲ ಅನ್ನಿಸಿದರೆ ತಪ್ಪಾ.....

ಹೊಸ ನೀರು ಬಂದಾಗ ಹಳೆ ನೀರು ಕೊಚ್ಚಿ ಹೋಗುತ್ತೆ ಅಂತಾರೆ...
ಮಧುರ ಬಂಧಗಳ ನಡುವೆ ಈ ಮಾತು ಹೆಚ್ಚಾಗಿ ನೋವನೇ ಧ್ವನಿಸುತ್ತೆ...
ತುಂಬ ಸಲ ಗೆಳೆತನಗಳ ನಡುವೆ ಈ ಮಾತು ಬಂದು ಹೋಗುತ್ತಿರುತ್ತೆ - ಒಮ್ಮೊಮ್ಮೆ ಸುಮ್ಮನೇ ತಮಾಷೆಯಾಗಿ, ಇನ್ನೊಮ್ಮೆ ಮನದ ವೇದನೆಯ ಕುರುಹಾಗಿ...
ನನ್ನೆದುರು ಈ ಮಾತು ಬಂದಾಗ ನನ್ನ ನಾನು ಹೀಗೆ ಸಮರ್ಥಿಸಿಕೊಳ್ಳ ಹೊರಡುತ್ತೇನೆ:

ನೀರ ಪ್ರತಿ ಹನಿಯ ಪರಮೋಚ್ಛ ಗುರಿ ಸಾಗರ ಸಂಗಮ...

ಹನಿ ನಿಂತಲ್ಲೇ ಸಾಗರ ತಾನು ಬರಲಾರದಲ್ಲ...
ಹೊಸ ನೀರ ಹನಿ ಬಂದು ಈ ನೀರ ಹನಿಯ ಮುಂದೆ ತಳ್ಳಿದಾಗ ಈ ಹನಿ ತಾನೇ ತಾನಾಗಿ ಒಂದು ಹೆಜ್ಜೆ ಸಾಗರದೆಡೆಗೆ ಸಾಗುವುದು ದಿಟ ತಾನೆ...

ನೀರ ಪ್ರತಿ ಬಿಂದುವಿನ ನೈಜ ಸಾರ್ಥಕ್ಯ ಹಸಿರ ವಿಹಂಗಮಕೆ ಉಸಿರಾಗಿ ನಕ್ಕದ್ದು...
ಬಿಂದು ತಾನು ಭುವಿಯಾಳದ ನಿಧಿಯಾಗಿ ಶೇಖರವಾಗದೆ ಹೋದಲ್ಲಿ ಹಸಿರ ಬೇರು ಆಳಕಿಳಿದು ಬಲವಂತವಾಗದಲ್ಲ...

ಹೊಸ ಹನಿಯೊಂದಿಗೆ ಬೆರೆತು ಹೊಸ ಹುರುಪು ಹೊಂದಿ ಹರಿವನು ಮೈಗೂಡಿಸಿಕೊಳ್ಳಲಾರೆನೆಂಬ ಅಥವಾ ಭುವಿಯೆದೆಯಲಿ ಇಂಗಿ ಹೊಸ ಝರಿಯಾಗಿ ಚಿಮ್ಮಲಾರೆನೆಂಬ ಹನಿ ಸಾಗರದ ಅಗಾಧತೆಯ ಕಾಣುವ ಇಲ್ಲವೇ ಭುವಿಯೊಡಲ ಒಲವ ಹೀರಿ ಹಸಿರ ಉಸಿರಲ್ಲಿ ನಗುವ ಸೊಬಗಿಂದ ವಂಚಿತವಾಗದಾ...

ಹೊಸದರೊಂದಿಗೆ ಬೆರೆತು ಸ್ಫುಟಗೊಂಡು ಹೊಸದಕೂ ಆಸರೆಯಾಗಿ ಹರಿದಾಗಲೇ ಅಲ್ಲವಾ ಹಳೆಯದರ ಹಿರಿತನಕೆ ಹೊಸ ಬೆಲೆ ಮತ್ತು ಅಸ್ತಿತ್ವಕ್ಕೆ ಹೊಸ ಚೈತನ್ಯ ದಕ್ಕುವುದು...

ಇಷ್ಟಕ್ಕೂ ಈ ಹನಿ ಕೂಡ ಹಳೆಯದಾಗುವ ಮುನ್ನ ಹೊಸದಾಗಿಯೇ ಇತ್ತಲ್ಲವಾ...

ಇನ್ಯಾವುದೋ ಹನಿಯ ಮುಂದೆ ತಳ್ಳಿಯೇ ಅಲ್ಲವಾ ಇದಿಲ್ಲಿ ಅಸ್ತಿತ್ವ ಸ್ಥಾಪಿಸಿದ್ದು...

ಹೊಸ ನೀರು ನನ್ನ ದಾರೀಲಿ ಮಾತ್ರವೇ ಹರಿಯುವುದಿಲ್ಲ ಅಲ್ಲವಾ – ಎದುರಿನ ದಾರೀಲೂ ಭರದಿಂದಲೇ ಹರಿದೀತು ತಾನೆ...

ಇಂಗಿ ಒಳಹರಿವಾಗಿ ಅನುಗಾಲವೂ ಉಳಿವ ಅಥವಾ ಹರಿದು ಶರಧಿ ಸೇರಿ ಮೆರೆವ ಜೀವನ ಪ್ರೀತಿಯ ಹನಿ ತಾನು ಹೊಸದರೊಂದಿಗೆ ಎಂದಿಗೂ ಜಿದ್ದಿಗೆ ಬೀಳದೇನೋ - ಹೊಸದನ್ನು ತನ್ನ ಸ್ಥಾನ ಕದ್ದ ಕಳ್ಳನೆಂಬಂತೆ ಕಾಣದೇನೋ – ಜಿದ್ದಿಗೆ ಬದಲಾಗಿ ಹೊಸದರೊಂದಿಗೆ ಪ್ರೀತಿಗೆ ಬಿದ್ದೀತು – ಹೊಸ ಹನಿಯನು ಪ್ರೀತಿಯಿಂದ ತಬ್ಬಿ ತನ್ನ ಕಕ್ಷೆಯ ನಕ್ಷೆಯ ಹಿಗ್ಗಿಸಿಕೊಂಡೀತು...

ಬಂಧವೊಂದು ಸಾಯುವುದಕೆ ಹೊಸ ಬಂಧ ಕಾರಣವಾಗುವುದೆಂಬ ಮಾತು ಪೂರ್ತಿ ಸತ್ಯವೆನಿಸಲ್ಲ ನನಗೆ – ಹೊಸದನ್ನು ಅದಿರುವಂತೆ ಹೀರಿ ತನ್ನಂತಾಗಿಸಿಕೊಂಡು ನಗಬಲ್ಲ ಮಾತೃ ಮನದ ಹಿರಿತನವಿದ್ದಲ್ಲಿ (ನನಗಿದೆಯಾ ಆ ಹಿರಿತನ ಎಂದು ಕೇಳಬೇಡಿ)...

ಒಂಟಿಯಾಗಿಯೇ ಉಳಿದು ಒಂಟಿಯಾಗೇ ಅಳಿವೆನೆಂದು ಪಣ ತೊಟ್ಟು ಎಲ್ಲೂ ಬೆರೆಯದೇ ಬಿಸಿಲಿಗೆ ಮೈಯ್ಯೊಡ್ಡಿದ ಹನಿ ತಾನು ಒಂಟಿಯಾಗಿಯೇ ಆವಿಯಾಗಿ ಅಳಿದರೂ; ಮೋಡವಾಗಿ, ಮಳೆಯಾಗಿ ಮತ್ತೆ ಭುವಿಯೆದೆಯ ಮುತ್ತಾಗಲೇಬೇಕಲ್ಲವಾ...

ಅದರ ಬದಲು ಹೊಸದರೊಡನೆ ಕಲೆತು, ಹೊಸದಾಗಿ ಹೊಳೆದು, ಹೊಸತಕೂ ಮೆರಗು ತುಂಬಿ ಇನ್ನಷ್ಟು ಕಾಲ ನಗುವುದು ಮೇಲಲ್ಲವಾ...

ಅದಕೇ ಯಾರದೇ ಹೊಸ ಬಂಧವನೂ ಮನಸಿಂದ ಶಂಕಿಸಲಾರೆ...
ಅಲ್ಲಿ ಬಂಧಗಳು ಸಾವಿರ ಸಾವಿರವಾದರೂ ನನ್ನ ಸ್ಥಾನ ನನಗಿದ್ದೇ ಇದೆ ಅಂದುಕೊಳ್ತೇನೆ - ಸಾಗರಕೆ ಒಂದು ಹನಿ ಏನೂ ಅಲ್ಲದಿರಬಹುದು ಆದರೆ ಹನಿ ಹನಿ ಸೇರಿಯೇ ಸಾಗರ ಆದದ್ದು - ಹಸಿರು ನಗಲು ಪ್ರತಿ ಬಿಂದುವೂ ಊಟವೇ - ಉಬ್ಬರದ ಒಂದು ಹನಿ, ಹಸಿರಿನೂಟದ ಒಂದು ಬಿಂದು ನಾನೆಂಬ ಖುಷಿಯೇ ಆ ಬಂಧದೊಂದಿಗೆ ನಾ ನಗುತಿರಲು ಪ್ರೇರೇಪಿಸುತ್ತೆ ನನ್ನ...

ನನ್ನೊಡನೆಯ ಬಂಧಗಳು ನನ್ನ ತೊರೆಯಲು ನನ್ನ ಸ್ವಭಾವಜನ್ಯ ತಪ್ಪುಗಳು ಮತ್ತು ನನಗಿಲ್ಲದ ಯೋಗ್ಯತೆ ಕಾರಣವೇ ಹೊರತು ಅಲ್ಲೆಲ್ಲೋ ಹೊಸ ನೀರು ಹರಿದದ್ದಲ್ಲ ಎಂಬುದು ನನ್ನ ನಂಬಿಕೆ ಮತ್ತು ನನ್ನ ಪಾಲಿನ ಸತ್ಯ ಕೂಡ...

ಇವೆಲ್ಲ ಕೇವಲ ನನ್ನ ಪಾಲಿನ ಸತ್ಯಗಳು - ನಿಮ್ಮ ಸತ್ಯಗಳೇನಿವೆಯೋ....

1 comment: