Wednesday, July 2, 2014

ಗೊಂಚಲು - ನೂರಿಪ್ಪತ್ನಾಕು.....

ಈ ನಡುವೆ ಒಲವ ಮೆರವಣಿಗೆ.....
(ನೆನಪು, ಕನಸುಗಳ ಗುಂಗಲ್ಲಿ ಅವಳ ಒಲವ ಬಗೆಗೆ ಒಂದಷ್ಟು ಬಿಡಿ ಬಿಡಿ ಸಾಲುಗಳು...)

ನೋವ ಹೂಳು ತುಂಬಿ ಬಗ್ಗಡವಾಗಲಿದ್ದ ಕಣ್ಣ ಕೊಳದಲ್ಲಿ ಗೆಜ್ಜೆ ಕಾಲ್ಗಳನಾಡಿಸಿ ನಗೆಯಲೆಯನೆಬ್ಬಿಸಿದವಳು... 
ಕತ್ತಲಾಗಿದ್ದ ಎದೆಯ ಗರ್ಭಗುಡಿಯ ಬಾಗಿಲಲಿ ಒಲವ ಪ್ರಣತಿಯ ಹಚ್ಚಿಟ್ಟು ಕಣ್ಣ ಮಿಟುಕಿಸಿದವಳು...
ಅವಳೆದೆಯ ಬಟ್ಟಲ ಒಲವ ಅಕ್ಷಯ ಪಾತ್ರೆಯ ಬಲದಿಂದ ನಿತ್ಯ ದಾಸೋಹವ ನಡೆಸಿ ಎನ್ನೆದೆಯ ಹಸಿವ ನೀಗುತಿರುವಳು...

ತನ್ನ ಮುಗುಳ್ನಗುವಿಂದಲೇ ಶಕ್ತಿ ತುಂಬಿದಳಾಕೆ ನನ್ನಾಳದ ಕನಸ ಹಕ್ಕಿಯ ರೆಕ್ಕೆಗೆ...
ಇನ್ನೀಗ ಅವಳ ಮಡಿಲ ಅಕ್ಕರೆಯ ಜೇನೊಂದೆ ಸಾಕು ಈ ಬದುಕಿಗೆ...

ಅವಳ ಬದುಕ ಸಂತೆಯ ನಡುವೆ ನಕ್ಕ ಯಾವುದೋ ಮುಖ ನಾನು...
ನನಗಾದರೋ ಅವಳು ನನ್ನ ಕನಸ ನಕ್ಷತ್ರಗಳ ಸಂತೆ ಮಾಳಕೆ ತಾವು ನೀಡಿದ ಬಾನು...

ತನ್ನ ಸ್ನೇಹದ ತೊಟ್ಟಿಲಲೆನ್ನ ಕಂದನಾಗಿಸುವಳು...
ನನ್ನ ಖುಷಿಗಳಿಗೆಲ್ಲ ಅಮ್ಮನೆನಿಸುವಳು...

ತನ್ನ ಎದೆ ಕಣಿವೆಯ ಕತ್ತಲ ಸೊಬಗಿಂದ ನನ್ನ ದೇಹದ ಬಯಕೆ ಬೆಂಕಿಯ ಮಣಿಸಿ ತಣಿಸಿದಾಕೆ...
ಅದೇ ಹೊತ್ತಿಗೆ - 
ತನ್ನೊಳಗೆ ತಾ ಸದಾ ಹಚ್ಚಿಟ್ಟುಕೊಂಡ ಒಲವ ಹಣತೆಯ ಜ್ಯೋತಿಯಿಂದ ಎನ್ನ ಆತ್ಮದ ದೊಂದಿಗೆ ಕಿಡಿಯ ಹೊತ್ತಿಸಿದಾಕೆ...

ಅವಳ ಸ್ನೇಹದ ಮಡಿಲ ಘಮದ ನೆನಪ ಮಾಲೆಯ ಧರಿಸಿದ ನನ್ನೀ ಮನದ ಮನೆಯಂಗಳದಲ್ಲಿನ್ನು ಸದಾ ನಗುವಿನುತ್ಸವ...
ಎಷ್ಟೆಲ್ಲ ಸವಿಗನಸುಗಳು ಕುಂಟೆಬಿಲ್ಲೆಯಾಡುತ್ತಿವೆ ಅವಳು ಕಣ್ಣಲ್ಲಿ ಕಣ್ಣಿಟ್ಟ ಮೇಲೆ ನನ್ನ ಕಣ್ಣ ಬಯಲಲ್ಲಿ....
ಇದೀಗ ನನ್ನೆಲ್ಲ ಕ್ಷಣಗಳೂ ಸುಂದರ ಮತ್ತು ಬರೀ ಸುಂದರ...

ನನ್ನೀ ಬದುಕ ಕೊಳಲಿಗೆ ಉಸಿರ ತುಂಬಿ ಮಧುರ ನಾದ ಹೊಮ್ಮಿಸಿದಾಕೆ... 
ತಿಳಿ ಮನದ ನಗೆಯ ಬದುಕಿದು ಅವಳದೇ  ಕರುಣೆಯ ಕಾಣಿಕೆ...

ಅವಳು ಏನೂ ಆಗದೆಯೇ ಎಲ್ಲವೂ ಆಗಬಲ್ಲವಳು...
ಸ್ನೇಹದ ಕಿರುಗೆಜ್ಜೆ ನಾದದಲೇ ಎನ್ನ ಬದುಕನಾಳುವಳು...

ಹೆಸರೇನೆಂದು ಕೇಳದಿರಿ...
ಕಣ್ಣ ಬಿಂಬದ ಬೆಳಕಿಗೆ ಏನೆಂದು ಹೆಸರಿಡಲಿ...
ನನ್ನ ಹೆಸರನೂ ತನ್ನದಾಗಿಸಿಕೊಂಡ ಎನ್ನ ಮನ ಮನೆಯ ಮಾರಾಣಿ – ಅವಳೆನ್ನ ಕಪ್ಪು ಹುಡುಗಿ...

5 comments:

  1. ಕಪ್ಪು ಹುಡುಗಿಯ ಒಲವಿನೆಡೆಗೆ ಒಪ್ಪವಾದ ಸಾಲುಗಳು.... :) ಅಬ್ಬಾ ಅದೆಷ್ಟು ವರ್ಣನೆ, ಅಲಂಕಾರ ....! ಅದ್ಭುತ :)

    ReplyDelete
  2. ಅವಳೆನ್ನ ಕಪ್ಪು ಹುಡುಗಿ...:-)

    ReplyDelete
  3. ಮತ್ತೆ ನಕ್ಕಳಾ ಆ ಕಪ್ಪು ಹುಡುಗಿ... ತನ್ನನ್ನು ತಾನು ಕಳೆದುಕೊಳ್ಳದ ಪರಿಶುದ್ದ ಕಪ್ಪಿನಷ್ಟೇ ಚಂದವಾಗಿದೆ...

    ReplyDelete
  4. ಒಮ್ಮೆಲೇ ಕಂದನಾಗಿಸುವ ಅವಳು
    ಹಾಗೆಯೇ ಏನೂ ಆಗದೆಯೇ ಎಲ್ಲವೂ ಆಗಬಲ್ಲವಳು
    ಅದೇ ಆಕೆಯ ವೈಶಿಷ್ಟ್ಯ.

    ReplyDelete