Friday, August 1, 2014

ಗೊಂಚಲು - ನೂರು + ಇಪ್ಪತ್ತು + ಎಂಟು.....

ಚಿತೆಯೂರಿನ ದೂರ ನೆನಪಿಸುವ ದಿನಕ್ಕೊಂದಿಷ್ಟು.....
(ಎಂಥ ಮಳೆಯಲಿ ನೆನೆದರೂ ಆರದ ಮನದ ಬೆಂಕಿ...)

ಆದರೂ - ಜನ್ಮ ದಿನವೇನೂ ಮೊದಲಿನಂತೆ ತೀವ್ರತರ ಖುಷಿಯ ಕೊಡುತ್ತಿಲ್ಲ ಈಗೀಗ...
ಕಳೆದದ್ದೇ ಚಂದವಿತ್ತು ಮತ್ತು ನಾಳೆಗಳೆಲ್ಲವೂ ನನ್ನನ್ನ ಈ ಬದುಕಿನಿಂದ ಇಷ್ಟಿಷ್ಟೇ ದೂರ ಒಯ್ಯುವ ಸಾಧನಗಳು ಅನ್ನಿಸುವಾಗ - ಖಾಲಿಯೂ ಆಗದೇ, ಹೊಸ ನಗುವಾಗಿಯೂ ಹೊಮ್ಮದೇ ಅದದೇ ಕಂಗಾಲುಗಳಲ್ಲಿ ಕೊಳೆಯುತ್ತಿದೆ ಆಯಸ್ಸು ಅನ್ನಿಸುವ ಹೊತ್ತಿಗೆ ಜನ್ಮದಿನಗಳ ನೆನಹು ಖುಷಿತರಲಾರದಲ್ಲವಾ...
ದಿನಾಂಕವ ಮರೆತು ಬಿಡಬಹುದು – ವರ್ಷವೊಂದು ಹೆಚ್ಚಾದದ್ದು ಗೊತ್ತಾಗದಿರಲಿ ಅಂತ...
ಆದರೆ ಬೆಳೆಯುತಿರೋ ಹೊಟ್ಟೆ, ಕಡಿಮೆಯಾದ ತಲೆಗೂದಲು, ಇದ್ದವುಗಳಲ್ಲಿ ಅಲ್ಲಲ್ಲಿ ಇಣುಕೋ ಬೆಳ್ಳಿಗೂದಲು, ಇಷ್ಟಿಷ್ಟೇ ಜೀವ ಕಳಕೊಳ್ತಾ ಇರೋ ಚರ್ಮ, ಕಳೆದು ಹೋಯ್ತಾ ಅನ್ನಿಸಿ ಭಯ ಮೂಡಿಸೋ ಕಿಬ್ಬೊಟ್ಟೆಯಾಳದ ಉನ್ಮಾದ ಎಲ್ಲ ಸೇರಿ ಬೇಡ ಬೇಡ ಅಂದರೂ ವಯಸು ಏರುತಿರುವದನ್ನ ನೆನಪಿಸಿ ಕಂಗಾಲಾಗಿಸುತ್ತವೆ – ಮತ್ತೆ ಶುರು ಸಂದ ವರ್ಷಗಳ ಲೆಕ್ಕಾಚಾರ ಮನದಲ್ಲೇ...
ನಿನ್ನೆಯ ನೆನಪುಗಳ ಮತ್ತು ಇಂದಿನ ವಾಸ್ತವತೆಯ ಬೆಂಕಿಯಲಿ ನಾಳೆಯ ಕನಸುಗಳು ಬೇಯುತಿವೆ...
ನಿನ್ನೆಗಳ ದಾರಿಯಲೂ ಕಲ್ಲು ಮುಳ್ಳುಗಳಿದ್ದವು...
ಆದರೆ ನಡೆವ ಕಾಲುಗಳಿಗೆ ಕನಸುಗಳ ಚಪ್ಪಲಿಯ ರಕ್ಷಣೆಯಿತ್ತು...
ಇಂದೀಗ ಹರಿದ ಚಪ್ಪಲಿ ಕಾಲನು ಅಣಕಿಸುತಿದೆ...
ನಾನಿನ್ನೂ ಸಾಗಬೇಕಿರುವ ಆ ದುರ್ಗದ ದಾರಿ ಬಲು ದುರ್ಗಮ...
ಚಪ್ಪಲಿಯಿಲ್ಲದ ಅನಾಥ ಕಾಲಲ್ಲಿ ನಡೆವುದೇನೂ ಸುಲಭವಲ್ಲ...
ಹಾಗಂತ ಕಾಲನ ಅನುಮತಿ ಇಲ್ಲದೇ ನಡಿಗೆ ನಿಲ್ಲಿಸುವಂತಿಲ್ಲ...
ಕನಸುಗಳಿಗೆ ಕಾವು ನೀಡಿ ಉಸಿರ ತುಂಬಲು ನಿಚ್ಚಳ ಹಗಲ ಆಸರೆ ಇಲ್ಲದವನು ಇರುಳಿಗೆ ಕಣ್ಣು ಹೊಂದಿಸಿಕೊಳ್ಳಬೇಕಷ್ಟೇ...
ಹೊಯ್ದಾಡುವ ಆತ್ಮದೀಪ ಆರುವಷ್ಟರವರೆಗೆ ಅದು ತೋರಿದಷ್ಟು ದೂರ ತೆವಳುತಿರುವುದು...
ಅದಷ್ಟು ಬೇಗ ಆರಲಾರದು – ಅದಕೆ ನಿಮ್ಮಗಳ ವಿನಾಕಾರಣದ ಪ್ರೀತಿಯ ಹರಕೆ, ಹಾರೈಕೆಗಳ ಕೈಬೊಗಸೆಯ ಮರೆಯ ಆಸರೆಯಿದೆ...
ಅದಕೇ –
ನೆನಪ ಜೋಳಿಗೆಯ ಬಿಚ್ಚಿಟ್ಟುಕೊಂಡು ಅದರೊಳಗಣ ಖುಷಿಯ ಕ್ಷಣಗಳನು ಹುಡುಕಿ ಹುಡುಕಿ ಮೆಲ್ಲುತ್ತಾ ಈ ಕ್ಷಣ ನಗಬೇಕಿದೆ – ಅದೇ ಖುಷಿಗಳ ಕಣ್ಣಲ್ಲೇ ನಾಳೆಗಳ ಕನಸನೂ ಹೊಸೆಯಬೇಕಿದೆ; ನಿನ್ನೆ ಮರಳಿ ಬಂದು ನಾಳೆಯಾಗದು ಎಂಬ ಸ್ಪಷ್ಟ ಅರಿವಿದ್ದೂ...

ಮತ್ತೀಗ ನನಗೆ ನಾನೇ ಹಾರೈಸಿಕೊಳ್ಳುತ್ತೇನೆ:
“ನನಗಾಗಿ ನನ್ನ ಕಣ್ಣು ತುಳುಕುವ ಕ್ಷಣಕೂ ಒಂದು ಕ್ಷಣ ಮುಂಚೆಯೇ ಉಸಿರ ದೀಪ ಆರಿ ಹೋಗಲಿ - ನಗುವೇ ಬದುಕಾಗಲಿ ಮತ್ತು ಮೃತ್ಯುವಿಗೂ ನಗುವೇ ನನ್ನ ಉತ್ತರವಾಗಲಿ – ಜನುಮ ದಿನದ ಶುಭಾಶಯಗಳು..........” 

2 comments:

  1. ಮೃತ್ಯುವಿನ ಮಾತೇಕೆ ಗೆಳೆಯ?

    ReplyDelete
  2. ನೀ ಹೀಗೆಲ್ಲಾ ಬರೆವಾಗ ಎದೆ ತಲ್ಲಣಿಸಿಹೋಗುತ್ತದೆ...

    ಖುಷಿಯಾಗಿರು... ಕೆಲವರಿಗೆ ಕಾಲೇ ಇರುವುದಿಲ್ಲಾ... ಚಪ್ಪಲಿಯ ಬಗ್ಗೆ ಚಿಂತೆಯೇಕೆ..??ನಿನ್ನ ಬದುಕು ತುಂಬಾ ಖುಷಿ, ನಗು ತುಂಬಿ ಹೋಗಲಿ...


    ಹುಟ್ಟು ಹಬ್ಬದ ಶುಭಾಶಯಗಳು...

    ReplyDelete