Saturday, August 2, 2014

ಗೊಂಚಲು - ನೂರಿಪ್ಪತ್ತೊಂಬತ್ತು.....

ಭಯ.....
(ಇವೆಲ್ಲ ಕೇವಲ ನನ್ನ ಭಾವಗಳಷ್ಟೇ... ನಿಮಗುಪಯೋಗವಾಗುವಂತೆನಿಸಿದರೆ ಎತ್ತಿಕೊಳ್ಳಿ...)

ನಂಗೆ ನೀರೆಂದರೆ ಬಹಳವೇ ಭಯ...
ಈಜು ಕಲಿಯಲಾಗದೇ ಹೋದ, ಮುಳುಗಿ ಉಸಿರುಗಟ್ಟುವ ಭಯ...
ಅದಕೇ ಮತ್ತೆ ಮತ್ತೆ ಅಲೆಗಳೊಂದಿಗೆ ಸರಸಕ್ಕೆಂದು ಶರಧಿಯ ಮಡಿಲಿಗೆ ಹೋಗುತ್ತೇನೆ...

ನಂಗೆ ಗಾಳಿಯೆಂದರೆ ಒಂದಷ್ಟು ಭಯ...
ಅದರ ಓಘಕ್ಕೆ ಸಿಕ್ಕಿ ಅರಿವಿಲ್ಲದೂರಿಗೆ ತೂರಿ ಹೋಗುವ ಭಯ...
ಅದಕೇ ಗಿರಿಗಳ ನೆತ್ತಿಯನರಸಿ ಹೋಗಿ ತೋಳ್ದೆರೆದು ನಿಲ್ಲುತ್ತೇನೆ ಪವನಚುಂಬನಕಭಿಮುಖವಾಗಿ...

ನಂಗೆ ಬೆಂಕಿಯೆಂದರೆ ತುಂಬಾನೇ ಭಯ...
ಅದರ ಉರಿಯಲ್ಲಿ ಬದುಕೇ ಬೆಂದು ಹೋಗುವ ಭಯ...
ಅದಕೇ ನೆತ್ತಿಯ ಕಾಯಿಸುತ್ತಾ ಉರಿಬಿಸಿಲ ಬೀದಿಗಳಲಿ ಅಂಡಲೆಯುತ್ತಿರುತ್ತೇನೆ, ಅಂತೆಯೇ ಎದೆಯೊಳಗೂ ಒಂದಷ್ಟು ದ್ವಂದ್ವಗಳ ಬೆಂಕಿಯನಿಟ್ಟುಕೊಂಡು ಕೂತಿದ್ದೇನೆ...

ಆಗೀಗ ಮಾತೆಂದರೆ ವಿಪರೀತ ಭಯ...
ಎಲ್ಲ ಹಲುಬಿ ಬೆತ್ತಲಾಗುವ, ಮೌನದ ವಿರೋಧ ಕಟ್ಟಿಕೊಳ್ಳುವ ಭಯ...
ಅದಕೇ ಯಾರೋ ಅಪರಿಚಿತ ದಾರಿ ಬದಿಯಲ್ಲಿ ಹಾಯ್ ಅಂದರೂ ನಾಲಗೆ ತುರಿತದ ರೋಗ ಇರುವವನಂತೆ ವಾಚಾಳಿಯಾಗುತ್ತೇನೆ...

ನಂಗೀಗ ಸ್ನೇಹವೆಂದರೂ ಭಯವೇ...
ಸ್ನೇಹಿಗಳ ಭಾವಗಳಲ್ಲಿ ಏಕೀಭವಿಸಲಾಗದ, ಭಿನ್ನಾಭಿಪ್ರಾಯಗಳನೆಲ್ಲ ನಿಷ್ಠುರವಿಲ್ಲದೆ ಹಿತವಾಗುವಂತೆ ಹೇಳಿ ಅಥವಾ ನಿಷ್ಠುರವಾಗುವ ಹೊತ್ತಲ್ಲಿ ಮೌನವಹಿಸಿ ಸ್ನೇಹವ ದೀರ್ಘಕಾಲ ಸಲಹಿಕೊಳ್ಳಲಾಗದ ಭಯ...
ಅದಕೇ ಹೊಸ ಹೊಸ ಸ್ನೇಹಗಳಿಗೆ ಕೈಚಾಚಿ ಗೆಳೆತನದ ಶ್ರೇಷ್ಠತೆಯ ಸವಿಯಲು, ಮಧುರ ಸ್ನೇಹಗಳ ಮಡಿಲ ಕೈಗೂಸಾಗಲು ಹೆಣಗುತ್ತಿರುತ್ತೇನೆ...

ನಂಗೀಗ ಪ್ರೇಮವೆಂದರೆ ಭಯವೋ ಭಯ...
ನಿಭಾಯಿಸುವ ಅರ್ಹತೆಯಿಲ್ಲದ, ಆ ತೀರದವರೆಗೂ ಭದ್ರತೆಯ ನೀಡಿ ಕೈಹಿಡಿದು ನಡೆಸಲಾಗದ ಅಸಹಾಯಕತೆಯ ಭಯ...
ಅದಕೇ ಎದೆಗುಡಿಯಲಿ “ಕಪ್ಪು ಹುಡುಗಿಯ” ಕಲ್ಪನಾ ಮೂರ್ತಿಯನಿಟ್ಟುಕೊಂಡು ಆರಾಧಿಸುತಾ ನಗುತಿರುತ್ತೇನೆ...

ಈಗೀಗ ಕಾಮವೆಂದರೆ ತೀವ್ರ ಭಯ...
ಗೆಲ್ಲಲಾಗದ, ಸೃಷ್ಟಿಸಲಾಗದ ನಿರ್ವೀರ್ಯತೆಯ ಭಯ...
ಅದಕೇ ಕಂಡರಿಯದ ಹೆಣ್ಣುಗಳ ಎದೆಗೊಂಚಲ ಕಣಿವೆಯ ಕತ್ತಲಲ್ಲಿ ಕೂಡ ಮುಖ ಹುದುಗಿಸಿ ಉಸಿರುಗಟ್ಟುವ ಭಾವದಲ್ಲಿ ಇರುಳೆಲ್ಲ ಬೆವರುತ್ತಿರುತ್ತೇನೆ...

ನಂಗೀಗ್ಯಾಕೋ ಬದುಕೆಂದರೇ ದೊಡ್ಡ ಭಯ...
ಘನತೆಯಿಂದ ಬದುಕಲಾಗದ, ಹೂವ ನಗೆಯ ಸದ್ದನಾಲಿಸುವ ತನ್ಮಯತೆಯಿಂದ ಒಂದರೆಘಳಿಗೆಯೂ ಮನಸಾರೆ ಜೀವಿಸಲಾಗದ ಭಯ...
ಅದಕೇ ಹುಚ್ಚಾಗಿ ಪರಿತಪಿಸಿ ಪ್ರೇಮಿಸಿದವಳೊಡನೆಯ ಮೊದಲ ಮಿಲನೋತ್ಸವದುತ್ತುಂಗದ ಸುಸ್ತಲ್ಲಿ ಕಣ್ಮುಚ್ಚಿ ಅವಳ ಹಣೆಯ ಚುಂಬಿಸಿ ಮತ್ತೆ ತಬ್ಬಿ ಮಲಗಿದಂತೆ ಬದುಕ ತಬ್ಬಿದ್ದೇನೆ...

ನಂಗೋ ಸಾವೆಂದರೆ ಇನ್ನಿಲ್ಲದ ಭಯ...
ಈಗಿದ್ದು ಇನ್ನಿಲ್ಲದಂತಾಗುವ, ನೆರಳೇ ಉರುಳಾಗುವ, ಅದರ ವಿರೋಧಿಸಿ ಒಂದು ಮಾತಾಡಲೂ ಆಗದ, ಶಾಶ್ವತ ಮೌನದ ಭಯ...
ಅದಕೇ ಅವಳ ಹೊಕ್ಕುಳಿನಾಳವ ಅಳೆಯುತ್ತಾ ಒಳಗೊಳಗೇ ನಗುತ್ತಾ ಮೈಮರೆತು ತಬ್ಬಿ ಮಲಗಿದಂತೆ ಸಾವನ್ನು ಎದೆಯ ಬಿತ್ತಿಯಲ್ಲಿ ಬಚ್ಚಿಟ್ಟುಕೊಂಡು ಬದುಕಿದ್ದೇನೆ...

ಮನಸೆಂಬುದೊಂದು ಭಯಗಳ ಮೂಟೆ... ಬದುಕನ್ನ ಅದರ ಮರ್ಜಿಗೇ ಬಿಟ್ಟು ಬಿಟ್ಟರೆ ಅದು ಮತ್ತಷ್ಟು ಹೊಸ ಭಯಗಳನನ್ನೇ ಸೃಜಿಸುತ್ತಾ ಬದುಕನ್ನೇ ಬಡಿದು ಮೂಲೆಗೆ ಕೂರಿಸಿಬಿಡುತ್ತೆ... ಅದಾಗಬಾರದೆಂದರೆ ಮನಸಿನೊಂದಿಗೆ ಪ್ರಜ್ಞೆಯ ಪ್ರಿಯ ಸಾಂಗತ್ಯವನೇರ್ಪಡಿಸಬೇಕಷ್ಟೇ... ಮನದ ಭಾವಗಳಿಗೆ ಪ್ರಜ್ಞೆಯ ಮೇಲುಸ್ತುವಾರಿ ಒದಗಿಸಿ ಯಾವುದು ಭಯ ಮೂಡಿಸುತ್ತೋ ಅದರೊಂದಿಗೇ ಆಡುತ್ತಿರು – ಹೋಗಬೇಡ ಅಂದಲ್ಲಿ ಮಗು ಮುದ್ದಾಂ ಹೋಗುವಂತೆ... ಭಯವೇ ನಿನ್ನಿಂದ ಓಡಿಹೋಗುತ್ತೆ... ಓಡಿ ಗೆಲ್ಲುವ ಬದಲು ಕಾದಾಡಿ ಮತ್ತೆ ಸೋಲುವುದು ಮೇಲಲ್ಲವಾ... ಸೋಲಿಗೆ, ನೋವಿಗೆ, ಭಯಗಳಿಗೆ ಬೆನ್ನಾಗಿ ಓಡುವ ಬದಲು ಅವುಗಳ ಜತೆ ಜತೆಗೇ ಆಡುತ್ತ, ಕುಣಿಯುತ್ತ, ಮಲಗುತ್ತ, ಏಳುತ್ತ, ಬೀಳುತ್ತ, ಅಳುತ್ತ, ನಗುನಗುತ್ತ ನಾಳೆಗಳೆಡೆಗೆ ಹೆಜ್ಜೆ ಎತ್ತಿಡುವುದು ಒಳಿತಲ್ಲವಾ... 

ನೋವುಗಳ ಜತೆಗೇ ಸಾಗುವುದೆಂದರೆ ಅವುಗಳಿಗೆ ಶರಣಾಗುವುದೆಂದಲ್ಲ ಅರ್ಥ... ನೋವುಗಳನು ಅವುಗಳಿರುವಂತೆಯೇ ವಾಸ್ತವಿಕ ನೆಲೆಯಲ್ಲಿ ಒಪ್ಪಿಕೊಳ್ಳುವುದು  – ಒಪ್ಪಿಕೊಳ್ಳುತ್ತಲೇ ನಮ್ಮದೇ ಆದ ನೆಲೆಯಲ್ಲಿ ಅವುಗಳ ಮೀರುವುದು - ನೋವ ಸುಳಿಯ ಸುತ್ತ ಸುತ್ತುತ್ತಲೇ ನಗೆಯ ಮೀನಿನೊಂದಿಗೆ ಚಿನ್ನಾಟವಾಡುವುದು – ಆ ಮೂಲಕ ಬದುಕ ಪೂರ್ತಿ ಜತೆ ಬರುವ, ಅಪರಿಹಾರ್ಯವಾದ ನೋವು ಕೂಡ ನಮ್ಮ ಮೂಲ ನಗೆಯ ಚಿಲುಮೆಯನ್ನು ಬತ್ತಿಸದಂತೆ ನಮ್ಮನ್ನು ನಾವು ಕಾಯ್ದುಕೊಳ್ಳುವುದು... 

ಹೌದು ಬದುಕೇ ಬರೀ ನೋವುಗಳ ಸಂತೆ ಅಂತನ್ನಿಸುವ ಹೊತ್ತಿಗೆ ಎಲ್ಲ ಸಾಕು, ಯಾರೂ - ಯಾವುದೂ ಬೇಡ ಅನ್ನಿಸುವುದು ಸತ್ಯ... ಆಗೆಲ್ಲ ಅಳಬೇಕೆನಿಸಿದರೆ ಅತ್ತುಬಿಡಿ ಒಮ್ಮೆ... ಅಳುವ ಹಿಡಿದಿಟ್ಟು ಒಳಗೇ ಒಡೆದು ಹೋಗುವ ಬದಲು ಬಿಕ್ಕಿ ಬಿಕ್ಕಿ ಅತ್ತು ಹರಿವ ಕಣ್ಣೀರಲ್ಲಿ ಕಾಗದದ ದೋಣಿ ಬಿಟ್ಟು ಮಗುವಂತೆ ನಕ್ಕುಬಿಡುವುದು ಲೇಸೆನಿಸುತ್ತೆ... ನಮ್ಮಳುವ ನೋಡಿ ನಗುವವರೆದುರಿಗಲ್ಲದೇ ಅಳುವ ನಗುವಾಗಿಸಬಲ್ಲ ಅಮ್ಮನಂಥವರ ಮಡಿಲನ್ನ ಅಥವಾ ನಿಮಗೆ ನೀವೂ ಕಾಣದಂತ ನಿಚ್ಚಳ ಇರುಳನ್ನ ಆಯ್ಕೆ ಮಾಡಿಕೊಳ್ಳಬೇಕಷ್ಟೇ ಅಳುವುದಕ್ಕೆ... ಮೌನವಾಗಿ ಎಲ್ಲವನೂ ಒಳಗೇ ಇಟ್ಟುಕೊಂಡು ನಗುವುದು ಹಿತವೇ ಆ ಮೌನದಲಿ ಮಾಧುರ್ಯವಿದ್ದಾಗ... ಆದರೆ ನೋವ ಹಿಡಿದಿಟ್ಟ ಮೌನ ಮತ್ತೆ ನೋವನೇ ಹಿಗ್ಗಿಸುತ್ತೆ ಅಂತನ್ನಿಸುತ್ತೆ ನಂಗೆ... ಪ್ರಶಾಂತವಾಗಿ ಕೂತು ಮಾತಾಡಿ - ಸೋಲುಗಳೊಂದಿಗೆ, ನೋವುಗಳೊಂದಿಗೆ, ಭಯಗಳೊಂದಿಗೆ... ಅರ್ಧ ನೋವಿಗೆ ಅಲ್ಲೇ ಮೋಕ್ಷ...

ಸೋತು ಸುಸ್ತಾದ ಕನಸುಗಳೆಲ್ಲವನ್ನೂ ಎದುರಿಗೆ ಕೂರಿಸಿಕೊಂಡು ಗೆಲುವಿನ ಪರ್ಯಾಯ ಮಾರ್ಗಗಳ ಪಾಠ ಮಾಡಿಕೊಳ್ಳೋಣ ನಮ್ಮೊಳಗೆ ನಾವು... 
ಓಡುವ ಓಘದಲ್ಲಿ ಗೆದ್ದವನಿಗೂ ಸೋತವನಿಗೂ ತುಂಬ ದೂರದ ವ್ಯತ್ಯಾಸವೇನಿಲ್ಲ - ಗೆರೆಯ ಆಚೆ ಅವನು, ಗೆರೆಯ ಈಚೆ ಇವನು ಅಷ್ಟೇ...
ಇನ್ನೊಂದೇ ಒಂದು ಹೆಜ್ಜೆ ಮುಂಚಿತವಾಗಿ ಎತ್ತಿಟ್ಟಿದ್ದಿದ್ದರೆ ಗೆಲುವು ನನ್ನದೂ ಆಗಬಹುದಿತ್ತಲ್ಲವಾ... ಮತ್ತೆ ಪ್ರಯತ್ನಿಸೋಣ - ಹೊಸ ದಾರಿಯಲ್ಲಿ - ಹೊಸ ಶಕ್ತಿಯೊಂದಿಗೆ... ಓಡುವುದರಲ್ಲಿ ಸೋತವನು ನಡೆಯುವುದರಲ್ಲೂ ಸೋಲಬೇಕೆಂದಿಲ್ಲವಲ್ಲ... ಬದುಕು ನಮ್ಮನ್ನು ಪ್ರೀತಿಸದೇ ಹೋದರೇನಂತೆ ಬದುಕನ್ನು ನಾವು ಇನ್ನಿಲ್ಲದಂತೆ ಪ್ರೀತಿಸಬಹುದಲ್ಲವಾ... ಮನಸಿಗೆ ಪ್ರಜ್ಞೆ ತುಂಬಬಹುದಾದ ಶಕ್ತಿ ಅದೇ ಆ ಭರವಸೆ... 

ಪ್ರಜ್ಞೆಯ ತೋಳಿಂದ ಸೋಲನ್ನು ಅದೇ ಉಸಿರುಗಟ್ಟಿ ಬೆವರಾಗುವಂತೆ ತಬ್ಬಿ ಮಲಗಲಾರದವನು ಗೆಲುವನ್ನು ಸೃಷ್ಟಿಸಲಾರನೆನಿಸುತ್ತದೆ... 

ನೋವಿನ ಮೈದಡವಿ ನಗುವ ಮೂಡಿಸಲಾದರೆ ಆಗ ಕಾಲನ ಕುಣಿಕೆಗೂ ನಗುತ್ತಲೇ ಕತ್ತನೊಡ್ಡಬಹುದೇನೋ... ನಾವೆಲ್ಲ ಸಾಮಾನ್ಯರು ನಿಜ... ಆದರೆ ಸಾವಿನಂಥ ಸಾವೂ ನಾಚುವಂತೆ ಸಾವಲ್ಲೂ ನಗುತಿರಬಲ್ಲ ಆತ್ಮಶಕ್ತಿಯ ಸಾಧಿಸುವುದೇನು ಸಣ್ಣ ಸಾಧನೆಯಾ....???

ಈಗ ಗೊತ್ತಾಯ್ತಲ್ಲಾ ನಾನ್ಯಾಕೆ ಭಯವಿರುವಲ್ಲೇ ಮತ್ತೆ ಮತ್ತೆ ಹೋಗುತ್ತೇನಂತ....:)

10 comments:

  1. This comment has been removed by the author.

    ReplyDelete
  2. ನಿನ್ನ ಬರಹಗಳ ಶಕ್ತಿ ಅಪಾರ.
    ಖಾಸಗಿತನದ ಹಿಡಿತವನ್ನು ಮೀರಿ ನಿನ್ನ ಬರಹ ನಿಲ್ಲಬಲ್ಲುದು.. ಅದಕ್ಕೆ ಈ ಲೇಖನಕ್ಕಿಂತ ಬೇರೆ ಉದಾಹರಣೆ ಬೇಕಿಲ್ಲಾ..

    ಇಷ್ಟವಾಯ್ತು ಭಾವ ಮತ್ತು ಪ್ರಜ್ಞಾಪೂರ್ವಕ ಬರಹ...
    ಇನ್ನೊಂದಿಷ್ಟು ಪ್ರಯತ್ನಿಸಿದರೆ ಮನೋವಿಜ್ಞಾನದ ಬಗ್ಗೆ ಬರೆಯಲು ನೀನು ಸಶಕ್ತ ಅನಿಸಿತು ಈ ಗೊಂಚಲ ಓದಿದ ಮೇಲೆ... ಪ್ರಯತ್ನಿಸು.. ಸಾಧ್ಯವಾದರೆ...

    ReplyDelete
  3. ಭಯ ಎನ್ನುವುದು ನಾವು ಕಲ್ಪಿಸಿಕೊಂಡಂತೆ....
    ನಮ್ಮ ಆತ್ಮಾವಲೋಕನದ ಸಂತೆಯಲಿ ನಾವೆಷ್ಟೆಷ್ಟು ಏನೇನನ್ನು ಕೊಂಡಿದ್ದೇವೆ
    (ಭಯ, ಸಂತೋಷ , ದುಃಖ, ಪ್ರೀತಿ ದ್ವೇಷ, ಸಿಟ್ಟು ಹೀಗೆ) ಎನ್ನುವುದರ ಮೇಲೆ
    ನಾಮ್ಮ ಯೋಚನೆಯ ಶೈಲಿ ಮತ್ತೆ ನಮ್ಮ ಭಾವನೆಗಳು ಬದಲಾಗುತ್ತಿರುತ್ತವೇನೋ....
    ಭಯವೇ ಇರಲಿ ನಿರ್ಭಯತೆಯೇ ಇರಲಿ.... ಅದ್ಯಾವವೂ ಕೂಡಾ ಶಾಶ್ವತವಲ್ಲ...
    ನಿರ್ಭಯ ಒಳ್ಳೆಯದೇ... ಆದರೆ ಭಯವೇ ಇಲ್ಲದ ನಿರ್ಭಯತೆ ಎಲ್ಲೋ ಒಂದು ಕಡೆ ತಪ್ಪನ್ನು ಮಾಡಿಸಿಬಿಡುತ್ತೆ....
    ಮೌಲ್ಯಯುತ ಬರಹ.....
    ಮತ್ತೆ ಮತ್ತೆ ಮೂಡಿಬರಲಿ.....


    ReplyDelete
  4. "ಮತ್ತೆ ಪ್ರಯತ್ನಿಸೋಣ - ಹೊಸ ದಾರಿಯಲ್ಲಿ - ಹೊಸ ಶಕ್ತಿಯೊಂದಿಗೆ... ಓಡುವುದರಲ್ಲಿ ಸೋತವನು ನಡೆಯುವುದರಲ್ಲೂ ಸೋಲಬೇಕೆಂದಿಲ್ಲವಲ್ಲ..."
    ಶಬಾಷ್.... :)

    ReplyDelete
  5. ಎಷ್ಟೊಂದು ಹೃದಯ ಸ್ಪರ್ಶಿ ನಿಮ್ಮ ಸಾಲುಗಳು...ಎಷ್ಟೋ ಸಲ ನನ್ನ ಕಣ್ಣಿಂದ ನಿರಿಳಿಸಿವೆ...ನಿಮ್ಮ ಅಪ್ಪಣೆ ಯಿಲ್ಲದೆ ನಿಮ್ಮ ಭಾವ ಗೊಂಚಲಿನ ತುಣುಕನ್ನು ನನ್ನ ಮುಖ ಪುಸ್ತಕದಲ್ಲಿ ಹಂಚಿಕೊಂಡಿದ್ದೇನೆ...

    ReplyDelete
  6. ಬದುಕು ನಮ್ಮನ್ನು ಪ್ರೀತಿಸದೇ ಹೋದರೇನಂತೆ ಬದುಕನ್ನು ನಾವು ಇನ್ನಿಲ್ಲದಂತೆ ಪ್ರೀತಿಸಬಹುದಲ್ಲವಾ...
    ಇಷ್ಟ ಆಯ್ತು ತುಂಬಾ........

    ReplyDelete
  7. ಪರಿಪಕ್ವ ಬರಹ :)

    ReplyDelete
  8. ಓದಿದ ಮೇಲೆ ಸುಧಾರಿಸಿಕೊಳ್ಳಲು ಸಮಯ ಬೇಕು. ಅಕ್ಷರಗಳ ಈ ಗೊಂಚಲು ಚಂದವೆನ್ನಿಸ್ತು. ಹಾಗೇ ಹೃದಯಕ್ಕೆ ತಟ್ತು.ಚಂದ ಬರಹ...

    ReplyDelete
  9. ಭರವಸೆಯೇ ಬೆಳಕು....!!! ಆತ್ಮ ವಿಶ್ವಾಸವೇ ನಮ್ಮ ಶಕ್ತಿ .....!!!! ನಿಮ್ಮ ಈ ಗೊಂಚಲು ಅತ್ಯುತ್ತಮ ವಾಗಿದೆ....!!!

    ReplyDelete
  10. ನಾನಿರಲು ಯಾಕೆ ಭಯ

    ReplyDelete