Monday, February 23, 2015

ಗೊಂಚಲು - ನೂರಾ ನಲವತ್ತೇಳು.....

ಹೀಗೆಲ್ಲ ಅನ್ನಿಸುತ್ತೆ.....
(ಯಾಕಂತ ಕೇಳಬೇಡಿ...)

ಎಷ್ಟೇ ಎಚ್ಚರದಿಂದಿದ್ದರೂ ತಾಳ ತಪ್ಪುತ್ತೆ ಅಭಿನಯ, ಮರೆತೇ ಹೋಗುತ್ತೆ ಸಂಭಾಷಣೆ...
ತಾಲೀಮಿಲ್ಲದೇ ಆಡಬೇಕಾದ ಬೀದಿ ನಾಟಕ ಇದು ಬದುಕು...
^^^
ಆತ್ಮೀಯತೆ – ಅದರ ಬೆನ್ನಲ್ಲೇ ಬೆಳೆಯೋ ನಿರೀಕ್ಷೆಗಳು – ಅವು ಹೊತ್ತು ತರೋ ನಿರಾಸೆ, ಕರುಳ ಕೊಯ್ಯೋ ವೇದನೆ...
ಅಮ್ಮಾ,
ಬಂಡೆಯಂತೆ ಹುಂಬನಾಗಿ ಬದುಕಿದಷ್ಟು ಸುಲಭವಿಲ್ಲ ಹಸಿರು ಬೆಳೆಯೋ ಹಸಿನೆಲವಾಗಿ ಜೀವಿಸೋದು...
^^^
ಪ್ರೀತಿ, ಪ್ರೇಮ, ಒಲವು, ಪ್ರಣಯ ಏನೇ ಅಂದರೂ ಅವೆಲ್ಲ ಹೊಸ ಕನಸುಗಳೊಂದಿಗಿನ ನಡಿಗೆಯೇ ಅಲ್ಲವಾ...
ಪ್ರೀತಿಯಾಯಿತು, ಪ್ರೇಮ ಸಂಭವಿಸಿತು, ಒಲವು ಒಡನಾಡಿಯಾಯಿತು, ಪ್ರಣಯ ಝೇಂಕರಿಸಿತು – ಏನೇ ಅನ್ನಿ ಅಲ್ಲೆಲ್ಲ ಕನಸುಗಳು ಬದುಕ ನಡೆಗೆ ಶಕ್ತಿ ತುಂಬಬೇಕಲ್ಲವಾ...
ಕನಸುಗಳೆಲ್ಲ ಸ್ಥಬ್ದಚಿತ್ರವಾಗುವುದನ್ನು, ನಿನ್ನ ಕನಸುಗಳು ನನ್ನ ಅಥವಾ ನನ್ನ ಕನಸುಗಳು ನಿನ್ನ ಅಡಿಯಾಳಾಗುವುದನ್ನು ಹೇಗೆ ಪ್ರೇಮವೆಂದು ಹೆಸರಿಸಲಿ...
ಇಷ್ಟಕ್ಕೂ ಭಾವಕ್ಕೊಂದು ಹೆಸರು ಬೇಕೇ ಬೇಕಾ...??
ಸ್ನೇಹಭಾವ, ಕಾಳಜಿ, ಅಕ್ಕರೆ, ಆತ್ಮೀಯತೆಗಳಿಲ್ಲದೇ ಪ್ರೇಮಕ್ಕೆ ಉಸಿರಿಲ್ಲ ನಿಜ; ಹಾಗಂತ ಸ್ನೇಹಭಾವ, ಕಾಳಜಿ, ಅಕ್ಕರೆ, ಆತ್ಮೀಯತೆಗಳೆಲ್ಲ ಪ್ರೇಮವೇ ಎಂದು ಅರ್ಥವಲ್ಲ...
ಚೌಕಟ್ಟುಗಳಾಚೆಯೂ ನಗಲಿ ಭಾವ ಮತ್ತು ಮಿತಿಗಳ ಮೀರಿ ಹರಿಯಲಿ ಬದುಕು...
^^^
ಮೌನವೇ – 
ಅವರೆಲ್ಲ ಅಂತಾರೆ “ಮಾತು ಹೇಳದ ಸಾವಿರ ಭಾವಗಳ ನೀನು ಅರುಹುವಿಯಂತೆ...!!!”
ನಾ ನಂಬಲು ಹೆದರುವ, ನಂಬದೇ ವಿಧಿಯಿಲ್ಲದ ಮಾತು ಅದು...
ಭಾವದರಮನೆಯ ಮಾತಿನ ಮಂಟಪದಿಂದಲೇ ಸಿಂಗರಿಸಿಕೊಂಡು ಕೂತವನು ನಾನು...
ನಿನ್ನ ಮಾತು ನನ್ನ ತಾಕಿ ಅರ್ಥ ಸಹಿತ ನಾ ಅರಳಿ ನಗುವುದಿದ್ದರೆ ಅದು ಸಾವಲ್ಲೇ ಇರಬೇಕು...
ಸಾವೆಂದರೆ ನೀ ಮಾತ್ರ ಆಳೋ ವಿಸ್ತಾರ ಸಾಮ್ರಾಜ್ಯವಂತೆ...
ನಿನ್ನೆಡೆಗೆ ನಂಗೆ ಅಷ್ಟಿಷ್ಟಾದರೂ ಪ್ರೀತಿ ಯಾಕೆ ಗೊತ್ತಾ...?
ಹೆಚ್ಚಿನ ಸಂದರ್ಭ ಮಾತ ಕೇಳಿದವರೊಳಗೆ ಮಾತು ಇಳಿದದ್ದು ಮಾತಾಡಿದಾತ ಶಾಶ್ವತವಾಗಿ ನಿನ್ನ ಸೇರಿದಾಗಲೇ ಅಂತೆ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

2 comments:

  1. ನಿಮ್ಮ ಅನಿಸಿಕೆಗಳೇ ಅಯೋಮಯ :P :D

    ReplyDelete
  2. *ಬಂಡೆಯಂತೆ ಹುಂಬನಾಗಿ ಬದುಕಿದಷ್ಟು ಸುಲಭವಿಲ್ಲ ಹಸಿರು ಬೆಳೆಯೋ ಹಸಿನೆಲವಾಗಿ ಜೀವಿಸೋದು...

    *ಚೌಕಟ್ಟುಗಳಾಚೆಯೂ ನಗಲಿ ಭಾವ ಮತ್ತು ಮಿತಿಗಳ ಮೀರಿ ಹರಿಯಲಿ ಬದುಕು...

    ಎಲ್ಲವೂ ಇಷ್ಟವಾಯಿತು.. ಮೇಲಿನೆರಡು ಸಾಲಿನ ಮೇಲೆ ಮತ್ತಷ್ಟು...

    ReplyDelete