Monday, June 6, 2016

ಗೊಂಚಲು - ನೂರಾ ತೊಂಬತ್ತು ಮತ್ತೆರಡು.....

ಹೀಗಿಷ್ಟು ಆಲಾಪ ಕಲಾಪ.....

ಎರಡು ಜಗಳಗಳ ನಡುವಿನ ಬಿರು ಮೌನದಲ್ಲಿ ಸ್ನೇಹದ ಹಸಿವಿದೆ - ಮತ್ತೆ ಬಾಗಿಲ ಬಡಿಯೋ ಪಿಸುಮಾತಲ್ಲಿ ನಗೆಯ ಹಸಿರಿದೆ...

((@))

ತೆಂಗಿನ ಗರಿಯ ಅಂಚಿಂದ ಜಾರುವ ಆಡ್ಮಳೆಯ ಬಿಡಿ ಹನಿಗಳಿಗೆ ಕೈಯೊಡ್ಡಿದೆ - ಬೊಗಸೆ ತುಂಬಿದ ಸ್ಪಟಿಕ ಹನಿಗಳಲಿ ನಿನ್ನೊಲವ ನೆನಪ ಬಿಂಬ...

((@))

ಹುಡುಗೀ - ಮರುಜನುಮದ ಕನಸನು ನಿನ್ನ ಹೆಸರಿಗೆ ಬರೆದಿಟ್ಟೆ - ಇದೀಗ ಸಾವಿನ ದಾರಿಯಲೂ ಬೆಚ್ಚಗಿನ ನಸುಗಂಪನಗಳು...

((@))


ಪೌರ್ಣಮೀ ರಾಗ -
ಎದೆಯ ಬಿಂದಿಗೆ ತುಂಬಾ ಬೆಳದಿಂಗಳ ಹಾಲು...
ಆ ನೊರೆ ಹಾಲ ಹೀರಿ ಬಿರಿದ ಭಾವ ಪಾರಿಜಾತ...
ಅಂಟಿದ ಹಮ್ಮಿನ ಗಂಟನು ಬಿಡಿಸಿದೆ ಬಾನ್ಬಯಲ ಹಗುರ ಬೆಳಕಿಗೆ ತಾರೆಗಳ ಮಿಣುಕು ಸ್ಪಂದನ...
ಮೌನ ತೇಯ್ದ ಮಾತು ಚಂದನ...
ಅವಳ ಕಣ್ಣ ಕಡಲಲೀಗ ಮೈನೆರೆದುಕ್ಕುವ ಒಲವ ಅಲೆಗಳು...
ಏನು ದಿವ್ಯವೋ ಉಣಿಸಿ ಉಂಬುವಾ ಪ್ರೀತಿ ರಸಾಯನ...❤❤

((@))


ಸ್ನೇಹ, ಪ್ರೀತಿ, ಪ್ರೇಮದ ಭಾವಗಳ್ಯಾವುವೂ ಆದರ್ಶಗಳಲ್ಲ; ಅವೆಲ್ಲ ಈ ಬದುಕೆಂಬೋ ಬದುಕಿನ ಅರಿವಿನ ಹಾದಿಗಳು - ಎಲ್ಲೋ ಎತ್ತರದಲಿಟ್ಟು ಪೂಜಿಸುವುದಲ್ಲ; ಎದೆಗೆಳೆದುಕೊಂಡು ತಲೆ ಸವರಿ, ಹಣೆಯ ಚುಂಬಿಸಿ ಅವುಗಳ ಕಣ ಕಣಗಳನೂ ಆಸ್ವಾದಿಸುವುದರಲ್ಲಿದೆ ಎಲ್ಲ...
ಕಾಮ ವಿಷವೇನಲ್ಲ, ಅದಕೆ ಅಪವಿತ್ರತೆಯ ನಂಜನು ಆರೋಪಿಸಬೇಕಿಲ್ಲ; ಅದು ಬದುಕಿನ ಉಳಿದೆಲ್ಲ ಹಸಿವುಗಳ ಮೂಲಧಾತು ಮತ್ತು ಪ್ರಕೃತಿ ತನ್ನುಳಿವಿಗೆ ಈ ಜೀವಾಂಶಗಳಲಿ ತುಂಬಿಸಿಟ್ಟ ಶಕ್ತಿ ಸುಧೆ - ತುಳಿದಿಡುವುದೇನೂ ಸುಲಭವಲ್ಲ; ತೋಳ್ದೆರೆದು ಆವರಿಸಿ, ಅನುಭವಿಸಿ ಅನುಭಾವದೆತ್ತರಕೊಯ್ಯುವುದರಲ್ಲಿದೆ ಸೊಗಸೆಲ್ಲ...
ಆತ್ಮದಲ್ಲಿ ನೆಲೆ ನಿಲ್ಲದ ದೈವತ್ವವನ್ನ ದೇಹ ನಿಗ್ರಹದ ಮಾತಿನಲ್ಲಿ ಸಾಧಿಸ ಹೊರಡುವ ಆದರ್ಶವಾದಕಿಂತ ಸುಳ್ಳೇ ಹೆಣಗಾಟಗಳಿಲ್ಲದ ಸಮ್ಮತಿಯ ರಕ್ಕಸ ಸ್ವೇಚ್ಛೆಯೇ ಹೆಚ್ಚು ಆಪ್ತ ಎನಗೆ...

((@))


ಆ ಮುಂಜಾವಿನಲಿ ನನ್ನ ಬಿಸಿ ಉಸಿರ ದಾಳಿಗೆ ಅವಳ ಒದ್ದೆ ಹೆರಳು ಇಷ್ಟಿಷ್ಟೇ ಒಣಗುತಿರುವಾಗ ಮಿಂದ ಹಸಿ ಮೈಯಲಿ ಕಮ್ಮಗೆ ಪುಟಿದ ಹೊಸ ಬೆವರಲಿ ಸೃಷ್ಟಿ ಹಸಿವಿನ ಮಹಾ ವಿಲಾಸ...

((@))


ಬೇಲಿಗಳ ಕಿತ್ತಿಟ್ಟು ಪ್ರೀತಿಸು, 
`ಮಿಸ್ ಯೂ' ಅನ್ನದೆಯೂ ಮಿಸ್ ಮಾಡಿಕೊಳ್ಳಬಹುದು - ಅಳದಿರುವ ಮಗುವ ಹಸಿವೂ ಆಯಿಗರಿವಾಗುವಂತೆ...
ಜಗಳದ ನಂತರವೂ ಹೆಗಲು ತಬ್ಬಬಹುದು - ಬಾಲ್ಯದ ಇಳಿಸಂಜೆಗೆ ಜೊತೆಯಾದ ಸಾಥೀ ಮಗುವಿನಂತೆ...
ಮಗ್ಗುಲಲೇ ಇರುವವನೂ ಅರೆ ಘಳಿಗೆಯ ಅಗಲುವಿಕೆಯಲೇ ಮಿಸ್ ಯೂ ಅನ್ನಿಸಿಕೊಂಡಾನು, ಮಿತಿಗಳಿಲ್ಲದ ಪ್ರೀತಿಯಲ್ಲಿ...

((@))


ಕಪ್ಪು ಹುಡುಗೀ -
ಮಳೆ ಬಂದ ಇರುಳ ಮದವೆತ್ತ ಹೊರಳಲಿ ನಿನ್ನ ಎದೆ ಗೊಂಚಲ ಮಿದುವಲಿ ನನ್ನ  ಬಿಸಿ ಉಸಿರ ಹಸಿ ಹಸಿ ಕವಿತೆ...
ಹದಿಬದೆಯ ಉನ್ಮತ್ತ ಸುಖದಮಲಿನ ತೊಡೆ ಕಣಿವೆಯ ಉತ್ಖನನದುತ್ತುಂಗದ ಆಘಾತದಲಿ ಉಮ್ಮಳಿಸೋ ನಿನ್ನುಸಿರಲಿ ಆಹಾಕಾರದ ರತಿರಾಗ ಚರಿತೆ...
ರತಿರಂಗಲಿ ವಯಸನುತ್ತುತೆ, ಬೆವರಿದ ಮೈಮನದ ಬಯಲಲಿ ಒಲವ ಬಿತ್ತುತೆ ಬದುಕು ಶೃಂಗಾರರಂಜಿತೆ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

No comments:

Post a Comment