Thursday, September 1, 2016

ಗೊಂಚಲು - ನೂರ್ತೊಂಬತ್ತೈದು.....

ಸುಮ್‌ಸುಮ್ನೆ.....

ಹೆಚ್ಚೇನಿಲ್ಲ -
ಒಲವ ಸೆರಗಿನ ಅಂಚ ಹಿಡಿದು, ಮಂದಹಾಸದ ಮಿಂಚ ಮಿಡಿದು, ಎದೆಯ ಕನಸಿಗೆ ಜೋಗುಳ, ಬರೆವ ಜೋಗಿಯ ಹಂಬಲ...
    --ಆ ಮುಂಬೆಳಗಲಿ ಬಾಗಿಲ ವಾಡೆಯ ಸಂದಿಯಿಂದ ಅವಳ ಕಂಗಳಾಡಿದ ಮಾತು...
<<>>

ಇರುಳ ಕೌದಿಯ ಸರಿಸಿ ರವಿರಾಯ ಕಣ್ತೆರದ...
ವಸುಧೆ ಬೆಳಕ ವಸನವನುಟ್ಟಳು...
ಹೂವೊಂದು ಅರಳಿ
ಅಂದ ಗಂಧವ ಬೀರಿ
ದುಂಬಿಗಾಹಾರವನಿತ್ತು
ಕಾಯೊಂದಕೆ ಕಾಯವನಿತ್ತು
ದಿನಮಣಿಯು ದಣಿವ ನೀಗಿಕೊಳ್ಳಲು ಧರೆಯ ಮಡಿಲಿಗೊರಗೋ ಹೊತ್ತಿಗೆ ತನ್ನ ಧರಿಸಿದ ಗಿಡಕೇ ಗೊಬ್ಬರವಾಗುತ್ತೆ...
ಮರು ಬೆಳಗು ಅದೇ ಗಿಡದಲ್ಲಿ ಹೊಸ ಚಿಗುರಿನ ಮರೆಯಲ್ಲಿ ಹೊಸ ಹೂವ ನಗು...
ಅವನು - ಇವಳು - ಹೂವು - ದುಂಬಿ; ಉಹುಂ, ಇನಿತು ಗದ್ದಲವಿಲ್ಲ...
ಹೂವಂತಿರಬಾರದಿತ್ತೇ ನನ್ನದೂ ಬದುಕು...
<<>>

**ಪ್ರೇಮವನ್ನು ದಾರದಲ್ಲಿ ಬಂಧಿಸಿದೆ - ಕಾಮ ನೈತಿಕವಾಯ್ತು...
**ನಡುವಿನಬ್ಬರದ ಕಾಮನುಬ್ಬರಕೆ ನಡುಮನೆಯಲ್ಲಿ ತೊಟ್ಟಿಲು ನಗುತಿದೆ - ಪ್ರೇಮ ವಿಸ್ತಾರವಾಯ್ತು...
<<>>

ಬೃಂದಾವನದಲ್ಲಿ ಕೃಷ್ಣನ ಕೊಳಲಿಗೆ ನಿರ್ಬಂಧವೇ...
ರಾಧೆಯ ಪ್ರೇಮದಲ್ಲಿ ಸವತಿ ಮತ್ಸರವೇ...
ಇಷ್ಟಕ್ಕೂ ದುಂಬಿಯ ರೆಕ್ಕೆಗೆ ಬೇಲಿಯ ನೇಯ್ದ ಹೂವಿನ ಕಥೆಯನೆಲ್ಲಾದರೂ ಕೇಳಿದ್ದೀರಾ...
ಹಬ್ಬಿ ತಬ್ಬಲಿ ಅಂಥ ಪ್ರೇಮ ತಬ್ಬಲಿ ಬದುಕುಗಳ...
<<>>

ಯಾವಾಗ್ಲೂ ಹೇಳ್ತಿರ್ತೀನಿ ಎಲ್ಲರ ಬದುಕಿಗೂ ಕೃಷ್ಣನಂಥಾ ಒಬ್ಬ ಗೆಳೆಯ ದಕ್ಕಲಿ...
ಆದರೆ,
ಸೂರೆಗೊಳ್ಳಲಾಗದ ಪ್ರೀತಿ ವಸನ - ಖಾಲಿಯೇ ಆಗದ ಕಾಳಜಿಯ ಅನ್ನದಗುಳು - ರೂಪ, ಕುರೂಪ, ಕುಲ, ನೆಲೆ, ವಯಸು, ಅಂತಸ್ತುಗಳ ಹಂಗನು ಮೀರಿ ಯಾವ ನೋವಿನ ಯುದ್ಧಕೂ ಮೊಳಗಿ ಪಾಂಚಜನ್ಯವ ಮುನ್ನಲೆಯಲೆ ನಿಲ್ಲುವ ನೇಹದ ಸಾರಥ್ಯ - ಜೊತೆ ನಲಿಯುವಾಗ ಅಂಗಳಕೆ ಪಾರಿಜಾತದ ರಂಗೋಲಿಯ ಚೆಲ್ಲಿ, ಹಾದಿ ಕವಲಾದಾಗ ತನ್ನುಸಿರ ಹಸಿವಾದ ಕೊಳಲನೂ ತೊರೆದು ಸಾಗುವ ಪ್ರೇಮದ ಸಾಂಗತ್ಯ - ಪಡೆವ ಇಚ್ಛೆಯ ಆಚೆಯ ಕೊಡುವ ಮನಸಿನ ಸ್ವಚ್ಛತೆ...
ಉಹುಂ - ಸುಲಭವೇನಲ್ಲ ಕೃಷ್ಣನಾಗುವುದು...
ಬರೀ ಲಂಪಟನಾದರೆ ಸಿದ್ಧಿಸುವುದಿಲ್ಲ ಆತ್ಮಸಾಂಗತ್ಯ...
<<>>

ಎದೆಯ ನೋವನ್ನು ಅನುವಾದಿಸಲಿ ಹೇಗೆ...?
ಬರೆದ ಎಲ್ಲ ನಗೆಯ ಹಾಡುಗಳ ಶಬ್ಧ ಶಬ್ಧಗಳ ನಡುವಿನ ನಿರ್ವಾತದ ನಿಶ್ಯಬ್ಧದಲ್ಲಿ ಮುಪ್ಪಿಲ್ಲದೆ ಮುಗುಮ್ಮಾಗಿ ಕುಳಿತ ನೋವ ನಾಡಿಯ ಮಿಡಿತದ ಜಾಡನು ದನಿ ನಡುಗದೆ ದಾಟುವುದು ಹೇಗೆ...??
ಅಂತೆಯೇ -
ಕಣ್ಣ ಮೊನೆಯಿಂದ ಸುರಿವ ಮೌನವೂ ಎದೆಯಾಗ್ನಿ ಕಾವ್ಯವ ಅರುಹಲು ಸೋಲುವಲ್ಲೂ ಕೂಡಾ ಈ ಬದುಕೇ ಹಿರಿದೆನ್ನಿಸುವಾಗ ಸಾವನ್ನು ಅನುಮೋದಿಸಲಿ ಹೇಗೆ...???

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

No comments:

Post a Comment