Saturday, October 1, 2016

ಗೊಂಚಲು - ನೂರು + ತೊಂಬತ್ತು ಮತ್ತು ಆರು.....

ಕೇಳಿಸ್ತಾssss.....

ಎತ್ತಿ ಆಡಲಾಗದ ಅಂತಃಪುರದ ಆಸೆ ಅಲೆಗಳ ಹೊಡೆತಕ್ಕೆ ಹೃದಯ ದಂಡೆಗೆನೋ ಸುಸ್ತಂತೆ...!! 
ಹೊರಟು ಬಿಡಬೇಕು ಸದ್ದಿಲ್ಲದೆ - ಹೆಜ್ಜೆ ಗುರುತನೂ ಉಳಿಸದೆ - ಇರುಳ ಸಂಧಿಸದ ಹೂವಿನಂತೆ...
ಅಷ್ಟಾಗಿಯೂ ಘಮದ ನೆನಪುಳಿದರೆ ಅದು ಉಳಿಸಿಕೊಂಡ ಗಾಳಿಯ ಹಿರಿತನ...
)!(_)!(

ಅಲ್ಲಿ ಒಳಗೆ ಕೊಡದ ತುಂಬಾ ಹಲವರ ಹಸಿವು ನೀಗಬಹುದಿದ್ದ ಹಾಲು ಕುಡಿದೂ ಉಸಿರಾಡದ ಕಲ್ಲು ದೇವರು... 
ಇಲ್ಲಿ ಅಂಗಳದಲಿ ಬೊಗಸೆಯಷ್ಟು ಬರಿ ನೀರು ಕುಡಿದೂ ನಮ್ಮೆಲ್ಲರ ಉಸಿರಿಗೆ ಶಕ್ತಿ ತುಂಬೋ ತುಳಸೀ ಗಿಡ...
ಕಟ್ಟೆಯ ಮೇಲಣ ಭಿಕ್ಷುಕನನು ಧ್ವಜಗಂಬದ ನೆರಳೂ ಸೋಕುವುದಿಲ್ಲ - ಪುಟ್ಟ ಗಿಡದಲ್ಲಿನ ಪ್ರೀತಿ ಹಸಿರು ಸಕಲ ಜೀವಜಾಲಕೂ ಮುಫತ್ತು...
ತುಳಸಿಯ ಕರುಣೆಯ ಪಾವಿತ್ರ್ಯ ಗುಡಿಯೊಳಗಿದ್ದಂಗಿಲ್ಲ - ನನ್ನ ನಮನ ಸದಾ ತುಳಸಿಗೆ...
)!(_)!(

ಕೇಳಿಸ್ತಾ -
ಈ ಬದುಕು ಅಷ್ಟೊಂದು ಕನಿಷ್ಟವೇನಲ್ಲ - ಬದುಕಲೇಬಾರದು ಅನ್ನುವಷ್ಟು; ಸಾವಿಗೇ ಕಣ್ಹೊಡೆದು, ಕುಂಡೆ ಕುಣಿಸಿ ಧಿಮಾಕು ತೋರಬಲ್ಲಷ್ಟು ಬದುಕೇ ಹುಚ್ಚು ಪ್ರೀತಿಯಾದರೆ...
ಯಾವ ಬದುಕೂ ಅಷ್ಟೇನೂ ಸರಳವೂ ಅಲ್ಲ - ನಗುವಾಗ ಕಂಡಷ್ಟು; ಅಳು ಕಾಣುವಷ್ಟು ಒಳಗಿಣುಕೋ ವ್ಯವಧಾನ ಎನಗಿದ್ದರೆ...
ನೋವು ಕರಗಿ ನಗುವಾಗಲು ಜೊತೆಯಾಗದಿದ್ದರೂ, ನಗುವ ಹಿಂದಿನ ನೋವ ಅಣಕಿಸದಿರುವಷ್ಟಾದರೂ ಕರುಣೆ ಬೆಳೆಯಲಿ ಎನ್ನೆದೆ ನೆಲದಲ್ಲಿ...
ಹಾಗಂತ ಯಾರ ಕರುಣೆಯೂ ನನ್ನ ದೌರ್ಬಲ್ಯವಾಗದಿರಲಿ - ನಮ್ಮ ನೇಹದ ಮೂಲ ಉಂಡಷ್ಟೂ ಅರಳೋ ನೇಹದ ಸವಿ ಹಸಿವೇ ಆಗಿರಲಿ...
)!(_)!(

ಗೋಕುಲಕೆಲ್ಲಾ ಆತ ಪರಮಪ್ರಿಯ - ಆದರೆ ರಾಧೆಗೆ ಒಲಿದ ಮಾಧವ ಮತ್ಯಾವ ಗೋಪಿಗೂ ಸಿಗಲಿಲ್ಲ...
ನೇಹದಲ್ಲಾಗಲಿ, ಪ್ರೇಮದಲ್ಲಾಗಲಿ "ಪಡೆವ" ಹಸಿವನು ಮೀರಿದ "ಕೊಡುವ" ಖುಷಿಯ ತೀವ್ರತೆಯಲ್ಲಿ ಪ್ರೀತಿ ಯಮುನೆಯಾಚೆಗೂ ಹರಿವ ಜೀವವೇಣು ರಾಗ...
ಉಹುಂ, ಬರೀ ಭಾವ ಬಂಧಗಳಿಗಷ್ಟೇ ಅಲ್ಲ ಅವುಗಳಾಚೆಯ ಬದುಕಿಗೂ ಇದು ಅನ್ವಯ - ತಕರಾರುಗಳ ತೊರೆದು ತುಂಟರಂತೆ ಬದುಕ ಜೀವಿಸುವಲ್ಲಿ...
ನೋವೇ ಹೆಚ್ಚು ವಾಸ್ತವ ಅನ್ನಿಸಿದರೂ, ಅದ ಹೀರಿ ನಾವೇ ನಮ್ಮೊಳಗೆ ಬಿತ್ತಿ ಬೆಳೆದುಕೊಂಡ ನಗು ಹೆಚ್ಚು ಆಪ್ತ ಎನ್ನುತ್ತೇನೆ - ರಾಧೆಯ ಪ್ರೇಮದಂತೆ, ಕೃಷ್ಣನ ನೇಹದಂತೆ...
ಅಗಲಿಕೆ ಅನಿವಾರ್ಯದ ವಾಸ್ತವ,  ಕೈಯಾರೆ  ತುಂಬಿಟ್ಟುಕೊಂಡ ನೆನಪು ಮತ್ತು ಹುಚ್ಚು ಕನಸುಗಳು ಅದಕೂ ಅಧಿಕ ಆಪ್ತ...
ಮತ್ತೇನೆಂದರೆ, ಆಪ್ತತೆ ಹುಟ್ಟಲು ಎಲ್ಲ ನೆನಪೂ ಸಿಹಿ ಇರಬೇಕಿಲ್ಲ, ಕಂಡೆಲ್ಲಾ ಕನಸೂ ನನಸಾಗಲೂ ಬೇಕಿಲ್ಲ; ಏನಿದ್ದರೂ ಅದು ನನ್ನದೂ ಎಂಬೋ ಭಾವ ತೀವ್ರವಿದ್ದರೆ ಸಾಕು...
)!(_)!(

ಮೌನ – ಅಂತರಂಗದ ಕೊಳಲು,  ಏಕಾಂತದ ಶೃಂಗಾರ...
ಮಾತು – ಬಹಿರಂಗದ ನಗು, ಬಾಂಧವ್ಯದ ಒಕ್ಕಲು...
ಮೌನ – ಭಾವದ ವಿರಕ್ತ ಅನುರಕ್ತಿ...
ಮಾತು – ಬದುಕ ಹಸಿವಿನ ಅಭಿವ್ಯಕ್ತಿ...
ಮೌನ – ಮಾತು ಮಾತಿನ ನಡುವೆ ಅಳಿದುಳಿದ ಸತ್ಯ...
ಮಾತು – ಮೌನದ ಗೋಡೆಗೆ ಆತು ನಿಂತ ಅರ್ಧ ಸತ್ಯ...
ಒಂದು ನೆರಳು, ಇನ್ನೊಂದು ಕೊರಳು – ಕಾಲ ಕಾಲಕ್ಕೆ ಪಾತ್ರಗಳು ಅದಲು ಬದಲು...
ಇಂತಿಪ್ಪ ಭಾವದೆರಡು ಕೂಸುಗಳನು ವಿರುದ್ಧ ಪದಗಳೆಂದು ಕಾಣುವ ಗ್ರಹಿಕೆ ವಿಶಾದನೀಯ...
ವಾಚಾಳಿಯ ಎದೆಯ ಮೌನದೊಳು ಇಣುಕು, ಮೌನಿಯ ಕಣ್ಣಿನಾಳದ ಮಾತನೊಮ್ಮೆ ಕೆಣಕು – ಆ ಬದುಕ ಸಾವಿರ ಸತ್ಯಗಳು ನಿನ್ನ ಹೆಗಲ ತೋಯಿಸಿಯಾವು...
)!(_)!(

ನನ್ನ ಮಾತುಗಳು - ಅರ್ಥ, ಅನರ್ಥ, ಅಪಾರ್ಥ, ಅಪಾರಾರ್ಥ, ಭಿನ್ನಾರ್ಥಗಳ ಗೋಜಲುಗಳಲಿ ಮತ್ತು ನನ್ನದೇ ಹಿರಿಯಾರ್ಥವೆಂಬ ಅಹಂ ಏವಂಗಳಲಿ ಎಲ್ಲೂ ಸಲ್ಲದ ನನ್ನ ಮಾತುಗಳು, ಮೌನದ ಗೂಡಲ್ಲಿ ಕೊಳೆಯಬೇಕಿದ್ದಂತವುಗಳು, ಅಕ್ಷರಗಳಾಗಿ ಅಸುನೀಗಬಯಸಿದವು...
ಒಳಗಿನ ಗದ್ದಲಕೆ ಬಣ್ಣ ಸವರಿ ಭಾವದ ಹೆಸರಿಟ್ಟು ಉದ್ದುದ್ದಕೊಂದಷ್ಟು, ಅಡ್ಡಡ್ಡಕಿನ್ನೊಂದಿಷ್ಟು ಒಂದರ ಪಕ್ಕ ಒಂದನಿಟ್ಟು ಎದೆಯ ಭಾರ ಇಳುಕಿಕೊಂಡೆ...
ಲೋಕ ಕವಿ ಪಟ್ಟ ಕೊಟ್ಟು ಕಾವ್ಯಧಾರಿಯಾಗಿಸಿತು...!!!
ಇದೀಗ ಭಾವ ದಾಸೋಹದ ಹಮ್ಮಿನಲ್ಲಿ ಅಲ್ಲಿಯದೇ ಅದದೇ ಮಾತುಗಳನು ಬರಹದಲ್ಲಿ ಬಡಬಡಿಸುತ್ತೇನೆ...
 . . . ಇಂತಿ - ಶ್ರೀವತ್ಸ ಕಂಚೀಮನೆ

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

No comments:

Post a Comment