Sunday, October 9, 2016

ಗೊಂಚಲು - ನೂರಾ ತೊಂಭತ್ತು ಮೇಲೇಳು.....

ಸಾವಿತ್ರಿ.....

ಅವಳ ಕನಸು
ಒಡಲಲ್ಲಿ ಬಿರಿವಾಗಲೂ
ಇನ್ನಾರದೋ ಮನೆಯ ಕಣಜ ತುಂಬಲು
ನೆಟ್ಟಿಗೆ ಹೋಗುತಿದ್ದಳು...
ಕರುಳ ಮೂಲೆಗೆಲ್ಲೋ
ಒದ್ದದ್ದಿರಬೇಕು ನಾನು
ನಕ್ಕ ಅವಳ ಬೆವರಲೂ
ಬೆಳಕ ವಾಸನೆ (?)

ನೋವೆಲ್ಲ ಮರೆತದ್ದು ಅಲ್ಲೇ ಇರಬೇಕು
ಗದ್ದೆ ರಾಡಿಯಲಿ
ತೋಟದ ಮೂಲೆಯಲಿ
ಹೊದ್ದ ಪ್ಲಾಸ್ಟೀಕು ಕೊಪ್ಪೆ ಅಡಿಯ ಬಿಕ್ಕಿನಲಿ...
ಮಧ್ಯಾಹ್ನದ ಕಿರು ನಿದ್ದೆಯೂ ಸಾಯುತ್ತದೆ
ಆಚೆ ಮನೆಯ ಕಳ್ಳ ದನದ ಗೆಂಟೆ ಸದ್ದಿಗೆ...
ಘನತೆ ಮರೆತ ಅವನು
ಪ್ರೇಮ ಕಾಣದ ಮದುವೆ
ಕರಗಿದ ಕುಂಕುಮ
ಸವೆದು ಹೋದ ತಾಳಿ...

ಕಿಟಕಿಯಿಂದ ಇಣುಕುತಿದ್ದೇನೆ
ಉದ್ದಕೂ ಬಿದ್ದಿದೆ
ಖಾಲಿ ಖಾಲಿ ಹಾದಿ
ಅವಳ ಬದುಕಿನಂತೆ...
ನೆಡಬೇಕಿದೆ ಇಕ್ಕೆಲಗಳಲಿ
ನನ್ನ ಕನಸುಗಳ
ಸಾವಿಗೂ ನೆರಳನೂಡುವಂತೆ...
ಮತ್ತೆ ನಕ್ಕಾಳೊಮ್ಮೆ
ನಿನ್ನೆ ನಾಳೆಗಳು ಬೆಚ್ಚಿ ಬೀಳುವಂತೆ...
ಹೂವರಳುವಾಗ
ಬೇರು ಸಂಭ್ರಮಿಸದಿದ್ದೀತೆ...
;;;;
ಮೊನ್ನೆ ಅಲ್ಲಾರೋ
ಕಥೆ ಹೇಳ್ತಿದ್ರು 
ಅವಳ್ಯಾರೋ ಯಮನ ಗೆದ್ದಳಂತೆ
ಸಾವಿತ್ರಿ...
ಜವರಾಯ ಸಾಯ್ಲಿ
ಮುಟಿಗೆ ಪ್ರೀತಿಯಾದರೂ
ದಕ್ಕಬಹುದಿತ್ತಲ್ಲ ಬದುಕಿಗೆ
ಇವಳ ಹೆಸರೂ
ಸಾವಿತ್ರಿ...

No comments:

Post a Comment