Saturday, March 18, 2017

ಗೊಂಚಲು - ಎರಡ್ನೂರರ ಮೇಲೆ ಹನ್ನೆರಡು...

ಪ್ರಜ್ಞೆ - ಮೌನ - ಬದುಕು - ಮತ್ತಿಷ್ಟು....  

ಎಷ್ಟು ಕಾಲವಾಗಿತ್ತು ಇಷ್ಟು ಮನಬಿಚ್ಚಿ ನಕ್ಕು - ನಿನ್ನ ಜೊತೆಯೆಂದರೆ ನಗೆಯ ಸಿಹಿ ಔತಣ... (ಅವರು)
ನನ್ನಿಂದ ಯಾರದೋ ಮೊಗದಲ್ಲಿ ನಗೆಯ ಲಾಸ್ಯ - ಆಹಾ ಎಂಥಾ ಮಹತ್ತು... (ಬುದ್ಧಿಯ ಗರ್ವ)
ಬಿಕ್ಕಿ ಬರಿದಾಗಲು ಒಂದಾದರೂ ಮಡಿಲ ಗೆಲ್ಲದ ನಿನ್ನ ನಗೆಯದು ಅದೆಂತ ಸಾಧನೆ...!? (ಎದೆ ಕಡಲ ಬೇಗುದಿ)
;;;;
ಮೌನವು ಹಡೆದ ಕವಿತೆಗೆ ಮೌನವೇ ಉರುಳು...
-----
ಆ ಕಡಲು
ನಿನ್ನ ಮಡಿಲು
ಪ್ರಶ್ನೆ ಉತ್ತರಗಳ ನಡುವೆ ಎದೆಗೊರಗಿದ ಕಿವಿಯ ಮೌನ...
ನೋವೊಂದು ನೋವ ನೆತ್ತಿ ಮೂಸಿ ಸಂತೈಸುವಾಗ ಕಣ್ಣಿಂದ ಇಳಿವ ನಗೆ ಹನಿಗೆ ಏನೆಂದು ಹೆಸರಿಡಲಿ...!?
#ಕಡಲು_ಧ್ಯಾನ_ಹೆಸರಿರದವರು...
-----
ಉಸಿರಿಗೆ ಗಾಳ ಹಾಕಿ ಮೀಟುತ್ತಿರುವುದು ಯಾರು..!?
ಅದೇ ಹಾದಿ, ಅದೇ ಮುರ್ಕಿ, ಅದದೇ ಎಳೆದೆಳೆದು ಎತ್ತಿಡುವ ಹೆಜ್ಜೆ...
ನೀ ನಡೆದಾಡಿದ ವೈಭವೀ ಕಾಲದ ನೆನಪುಗಳ ನೇವರಿಸುತ್ತ, ಗುರುತುಗಳ ಹುಡುಕುತ್ತ - ನೀನಿಲ್ಲದೆಯೂ ಸೋಲೊಪ್ಪದ ಹುಂಬ ಕೊಂಬಿನ ನಡಿಗೆ...
ಕನಸೇ -
ಮತ್ತೆ ಸಿಗೋಣ - ಅದೋ ಅಲ್ಲಿ ಎಲ್ಲರ ಹಾದಿಯೂ ಸೇರುವ ಹಾಡಿಯೊಂದಿದೆಯಂತಲ್ಲ...
#ಸಾವಿನಹಾದಿ_ಉಸಿರಧ್ಯಾನ...
-----
ನಗುವಿಗೆ ಬೀದಿಯೆಲ್ಲ ಬಳಗ, ನೋವಿಂದೋ ಅನಾಥ ನಡಿಗೆ - ಯಾರ ನೋವಿಗೂ ಯಾರೂ ಇಲ್ಲಿ ವಾರಸುದಾರರಲ್ಲ ಮತ್ತು ಕರುಳ ಹುಣ್ಣಿಗೇ ಹನಿಯದ ಈ ಕಣ್ಣು ಪರ ನೋವ ವರದಿಗೆ ಜಿನುಗೀತೆ - ನೇಹದ ಅಳುವಿಗೇ ತೋಯಲರ್ಹವಲ್ಲದ ಈ ಹೆಗಲು ಹಾದಿಯ ಹಸಿವಿಗೆ ಮರುಗೀತೆ...!?
-----
ಹುಟ್ಟಿನಿಂದ ಯಾರೂ ಜಾಣರಲ್ಲ - ಹುಟ್ಟಿನಲ್ಲಿ ಎಲ್ಲ 'ಮಕ್ಕಳು' ಅಷ್ಟೇ - ಬಿಳಿ ಹಾಳೆ...
ಆ ಮುಂದಿನ ಪ್ರತಿ ಹೆಜ್ಜೆಯೂ ಹೊಸ ಪಾಠವೇ...
ಹೆಜ್ಜೆ ಹೆಜ್ಜೆಗೂ ಚಿತ್ರ ವಿಚಿತ್ರ ಹಚ್ಚೆ ಹಾಕಿ ಹೊಸ ಹೊಸತೇ ಗುರುತುಳಿಸುವ ಬದುಕಿದು ಅನುಭವಗಳಲಿ ಬಿಚ್ಚಿಕೊಳುವ ಸಂತೆ...
ನಡಿಗೆ ನಗುವಿನದಾದರೆ ಹಾದಿ ತಂಪು - ನಡೆದಷ್ಟೂ ಸೊಂಪು...
ನೋವಿಗೆ ಹೊರಳಿಕೊಂಡರೆ..!!??
ಮುಳ್ಳ ಮೇಲಿಟ್ಟ ಪಾದದ ಮೇಲೆಯೇ ವಿವೇಕ ತಪ್ಪಿ ಮತ್ತೊಂದು ಪಾದವನೂ ಊರಿದರೆ ಆ ನಂಜಿಗೆ ಬದುಕ ನಡಿಗೆಯೇ ಊನವಾದೀತು... 
ಎಡವಿದ ಅದೇ ಹಾದಿಯಲಿ ಮತ್ತೆ ನಡೆವುದಾದರೆ ಎಡವಿದ ಕಲ್ಲನು ಬದಿಗೆಸೆದುಕೊಳ್ಳಬೇಕಲ್ಲವಾ ಅಥವಾ ಮತ್ತಿಡುವ ಹೆಜ್ಜೆಯನು ಸಂಪೂರ್ಣ ಸ್ಪಷ್ಟತೆಯ ರಕ್ಷಣೆಯಲಿ ಎತ್ತಿಡಬೇಕಲ್ಲವಾ...
ಅಷ್ಟಾದರೂ ತಾರ್ಕಿಕ ಯೋಚನೆ, ಯೋಜನೆ ಇಲ್ಲದೆ ಕಣ್ಮುಚ್ಚಿ ಹಾಯುವುದು ಒಲೆಯ ಕೆಂಡವ ಮಡಿಲಿಗೆ ನಾವೇ ಸುರಿದುಕೊಂಡಂತಲ್ಲವಾ...
ಪ್ರಜ್ಞೆ ಮರೆತ ನಡಿಗೆಗೆ ದೇವರೆಂತು ಹೊಣೆ...? 
ಹದ ಮೀರಿದ ಪಯಣಕೆ ಹಣೆಯ ಬರಹವ ಹಳಿದರೆ ಕಳೆದ ಘಳಿಗೆ ಮರಳುವುದೇ...??
#ಅರಿವಿನ_ನಿದ್ದೆಯ_ನಡಿಗೆಯದು_ನೋವೊಂದೇ_ಕೊಡುಗೆ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

2 comments:

  1. "ಯಾರ ನೋವಿಗೂ ಯಾರೂ ವಾರಸುದಾರರಲ್ಲ" .... ಇದಂತೂ ನೂರಕ್ಕೆ ನೂರು ಸತ್ಯ, ಇಂದು ಒಬ್ಬರಲ್ಲಿದ್ದ ನೋವು ಮುಂದೆ ಮತ್ತೊಬ್ಬರಿಗೆ ವರ್ಗವಾಗುತ್ತದೆ ಹಾಗೆ ಸದಾ ನೋವು ಒಬ್ಬರಲ್ಲೇ ಉಳಿಯುವುದಿಲ್ಲ..


    "ಮುಳ್ಳ ಮೇಲಿಟ್ಟ ಪಾದದ ಮೇಲೆಯೇ ವಿವೇಕ ತಪ್ಪಿ ಮತ್ತೊಂದು ಪಾದವನೂ ಊರಿದರೆ ಆ ನಂಜಿಗೆ ಬದುಕ ನಡಿಗೆಯೇ ಊನವಾದೀತು"... ಇಲ್ಲಿ ವಿವೇಕ ತಪ್ಪಿ ಮತ್ತೊಂದು ಪಾದವಿಡುತ್ತೇವೋ ಅಥವಾ ಒಂದೇ ಕಾಲಿನಲ್ಲಿ ನಿಲುವುದು ಕಷ್ಟ ಎಂದು ಮತ್ತೊಂದು ಪಾದ ಊರುತ್ತೇವೋ ಎನ್ನುವುದು ನೋಡಬೇಕಾಗುತ್ತದೆ ಆಲ್ವಾ, ಕೆಲವೊಮ್ಮೆ ಆಯಾ ತಪ್ಪಿಯೂ ಮತ್ತೊಂದು ಪಾದವಿಡುವ ಸಾಧ್ಯತೆಯಂಟು. ಬದುಕಿನ ನಡೆಯೂ ಅಷ್ಟೇ ಅನಿವಾರ್ಯತೆಯಲ್ಲಿ ಎರಡು ಪಾದಗಳನ್ನ ಊರ ಬೇಕಾಗುತ್ತದೆ.

    ತುಂಬಾ ಚೆನ್ನಾಗಿ ಬರೀತೀಯಪ್ಪಾ ಹೀಗೆ ಬರೀತಾ ಇರು ಒಳ್ಳೆಯದಾಗಲಿ

    ReplyDelete