Wednesday, June 6, 2018

ಗೊಂಚಲು - ಎರಡ್ನೂರಾ ಅರವತ್ತು.....

ನಾನೆಂಬೋ ಪಾತ್ರ..... 

ಅಲೆ ತೊಳೆದ ಅಂಗಳದಿ ಎದೆ ಗೀಚಿದ ರಂಗೋಲಿಯ ಹೆಸರು ನನ್ನದೇ - ಎನಗೆ ಎನ್ನದೇ ಧ್ಯಾನ - ಸಾವಿರ ಸಾವಿನ ಮಾತಾಡೋ ಮೌನ...
ನಾಟಕ ಮುಗಿದ ಮೇಲೂ ವೇಷ ಕಳಚಲಾಗದ ಪಾತ್ರ ನಾನಿಂದು - ನನಗೆ ನಾನೇ ನಂಬಿಸಿಕೊಂಡಾಗಿದೆ ಆವಾಹಿಸಿಕೊಂಡ ಪಾತ್ರದ ನಗೆಯನ್ನೇ ನಾನೆಂದು - ಒಂದೊಮ್ಮೆ ಬಣ್ಣ ತೊಳೆದು ಬಯಲಾದರೆ ಬಿಂಬವೂ ಬೆಚ್ಚೀತು ಕಂಡು ಒಳಿಗಿನಳುವನ್ನು...
ಸೂತಕವಿಲ್ಲದ ಮುಖವಾಡ ತೊಟ್ಟ ಸೂತ್ರವಿಲ್ಲದ ಪಾತ್ರ - ಕನ್ನಡಿ...
ಆಡಬೇಕಿದ್ದ ಸಾವಿರ ಮಾತುಗಳು ಗಂಟಲಲ್ಲೇ ತೆವಳುತ್ತಿರುತ್ತವೆ - ಆಡಿಬಿಟ್ಟ ಆಡಬಾರದಿದ್ದ ಒಂದೇ ಒಂದು ಮಾತು ಎದೆಎದೆಯ ಸಾಸಿರ ಹೋಳಾಗಿ ಸೀಳಿರುತ್ತದೆ...
ಆಡಿದ್ದು ಆಡಿದಂತೆಯೇ ನಾಟುವುದಿಲ್ಲ - ಶಬ್ದಕ್ಕೆ ನಾನಾರ್ಥದ ಭಾವ ಭಾಷ್ಯಗಳ ಬಡಿವಾರ...
ನನ್ನ ಕನಸೂ ನನ್ನದಲ್ಲ ಅಂಬೋ ಸಾವಿನ ನೆಳಲು - ಪ್ರೀತಿಯ ಸಂತೆಯಲ್ಲೂ ವಿಲೇವಾರಿಯಾಗದ ವಾಸ್ತವದ ಚಿತ್ರ - ಖಾಲಿ ಖಾಲಿ ಜೋಳಿಗೆಯ ಕಬೋಜಿ ಪಾತ್ರ ನಾನು...
ಗಾಳಿಯ ಸಖ್ಯದಿ ಮೋಡ ಮಣಿ ಮಣಿ ಹೋಳಾಗಿ ಮಳೆಯಾಯಿತು - ಹರಿವು...
ಕೊಳಲ ನಾದಕೆ ನವಿಲಾದ ಯಮುನೆಯೂ ಸಾಗರ ಸೇರಿ ಪಾಂಚಜನ್ಯವ ಹಡೆಯುತ್ತಾಳೆ - ಅರಿವು...
#ಪಾಪಿ_ಪುಣ್ಯಾತ್ಮ_ಪಾತ್ರಗಳು...
#ನಾನು...
↬↭↩↹↪↭↫

ಈ ಜನುಮದ ಕನಸುಗಳ ಹಡೆಯುವ ಹಕ್ಕನ್ನು ಮರು ಜನ್ಮಕೆ ಎತ್ತಿಡಬೇಕಿದೆ...
ಅಥವಾ
ಶವ ಪೆಟ್ಟಿಗೆಯೊಂದನ್ನು ಕೊಳ್ಳಬೇಕಿದೆ - ಹುಟ್ಟುತ್ತಲೇ ಸತ್ತ ಖುಷಿಯ ಖಯಾಲಿಗಳನೆಲ್ಲ ಜನ್ಮಾಂತರಕೆ ಕಾಯ್ದಿರಿಸಲು........
#ಆಶಾವಾದ...
↬↭↩↹↪↭↫

ಮಲಗು ಮೌನವೇ ಮಲಗು - ಕನಸ ಕಣ್ಣಿನ ಕುರುವಾಗದೇ, ನಗೆಯ ಅಂಗಾಲ ಸೀಳುವ ಅಂಬಿನಲುಗಾಗದೇ - ಮಲಗು ಮೌನವೇ ಮಲಗು - ಒಲವ ಕುಡಿಗೆ ಮಾತು ಪದ ಕಟ್ಟಬೇಕಿದೆ - ಎದೆ ಗುಡಿಯ ದೇವತೆಗೆ ಪ್ರೀತಿ ಮಂತ್ರ ಹೇಳಬೇಕಿದೆ...
#ಅಪಧಮನಿಯ_ಹಾದಿಯಲೇ_ಹೆಪ್ಪಾದ_ಕಣ್ಣಹನಿಯ_ಕವಿತೆ...
↬↭↩↹↪↭↫

ಸದ್ದು ಮಾಡಬೇಡ - ಮೆಲ್ಲನೆ ಬಂದು ಕದ್ದು ಹೋಗು ಉಸಿರ - ಬೆಕ್ಕಿನ ಹೆಜ್ಜೆಯೇ ಚಂದ ನಿನಗೆ; ಸುದ್ದಿ ಮಾಡಬೇಡ - ಬಿಮ್ಮನೆ ಬಂದು ಉಂಡು ಹೋಗು ಉಸಿರ - ಕಳ್ಳ ಹಾದಿಯೇ ಘನತೆ ನಿನಗೆ...
#ಸಾವು...
↬↭↩↹↪↭↫

ಮಾತು ತಾ ಹೇಳಲಾಗದೇ, ಮೌನವದು ಅನುವಾದಿಸಲರಿಯದೇ, ಅಕ್ಷರವೂ ಹಡೆಯಲಾರದೇ ಸೋಲುವ ಎದೆ ಕಮರಿಯಲೇ ಕಟ್ಟಿಕೊಂಡ ಕಣ್ಣ ಹನಿಯೊಂದನು ಮುಸ್ಸಂಜೆಯ ತುಂಡು ಕರಿ ಮೋಡವೊಂದು ಸರಾಗವಾಗಿ ನೆಲಕೆ ದಾಟಿಸಿದ್ದು ಮಳೆಯ ಗೆಲುವು...
#ಸುರಿದು_ಬರಿದಾದಷ್ಟೂ_ಹದುಳ...
#ಮಳೆ...
↬↭↩↹↪↭↫

ಭಾವ ಹಾಗೂ ಭಾವ ಪ್ರೇರಿತ ಕ್ರಿಯೆ ಪ್ರಕ್ರಿಯೆಗಳನ್ನು ಎಷ್ಟು ಚಿಕ್ಕ ಚಿಕ್ಕ ಹೋಳುಗಳಾಗಿ ಒಡೆದು ನೋಡುತ್ತೇನೋ ಅಷ್ಟೂ ವಾಸ್ತವದ ಸ್ಪಷ್ಟ ಪಾತಳಿ ಬಿಚ್ಚಿಕೊಳ್ಳುತ್ತೆ ಎನ್ನೊಳಗೆ...
ನನ್ನೆಲ್ಲ ಭ್ರಮೆಯ ಪ್ರಭಾವಳಿಯ ಕಾಲು ಸೋಲುವ ಬಿಂದು ಅದೇ ಎಂದುಕೊಂಡಿದ್ದೇನೆ - ಭಾವ ಬಿಂಬಗಳನೆಲ್ಲ ಒಡೆಯುತ್ತ ಕೂರುತ್ತೇನೆ...
#ಒಳಗಣ_ಜಿದ್ದಾಜಿದ್ದಿ...
#ನಾನು...
↬↭↩↹↪↭↫

ನಿನ್ನೆ ಮೊನ್ನೆಯ ಜಾಡಿನಲ್ಲಿ, ಹಮ್ಮು ಬಿಮ್ಮಿನ ಕಂಬಿಯಲ್ಲಿ ಬಂಧಿಸಲ್ಪಟ್ಟ ಜಾಮೀನು ಸಿಗದ ಭಾವಗಳಿಗೆ ಸುಖಾ ಸುಮ್ಮನೆ ಕಾದು ಕಾದು ಸುಸ್ತಾಗಿ - ಸಂಜೆ ಕಣ್ಣು ಸಿಡಿದು ಸೊರಗಿ - ಎದೆಯ ನೆಲ ಒಣಗಿ ಬಿರಿದು - ಹಸ್ತ ಮೈಥುನದುತ್ತುಂಗದ ಅತೃಪ್ತ ಸುಖದ ಸುಸ್ತಿನೊಂದಿಗೆ ಕನಸು ಸುಟ್ಟ ಕಮಟಿನ ಕಳಮಳದಿ ಮುಗಿಯಲಾಗಿ ಇರುಳು...... ಮತ್ತದೇ ಬೆಳಗು - ಖಾಲಿ ಖಾಲಿ ಒಳಗು....
ಹರಿವು ನಿಂತೇ ಹೋದಲ್ಲಿ......... ಉಳಿದದ್ದು ಉಸಿರೊಂದೆ......
ಸಾವೇ - ನಿನ್ನೊಂದಿಗಿನ ಎಲ್ಲ ಜಗಳವೂ ಇಂದಿಗೆ ಮುಗಿದುಹೋಯಿತು...... ಬದುಕ ಪ್ರೀತಿಗಿಂದು ಸೂತಕ...
#ನಾನು...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

No comments:

Post a Comment