Thursday, June 21, 2018

ಗೊಂಚಲು - ಎರಡ್ನೂರಾ ಅರ್ವತ್ತೆರಡು.....

ಹಾದಿ - ಹಾಳೆ.....  

ನೀ ಗೆದ್ದ ಗೆಲುವುಗಳ ಸಂಭ್ರಮಿಸಲು ಜಗವೆಲ್ಲ ಜೊತೆ ಬರಲಿ...
ಎಡವಿದೆಯಾ - ಪೆಟ್ಟು ಬಿತ್ತಾ - ತಿರುಗಿ ನೋಡು - ಸೋತ ಸೋಲಿಗೆ ಮಂಡಿಯೂರದಂತೆ ಆ ಕ್ಷಣ ಸಾವರಿಸಿಕೊಂಡು ನಿಲ್ಲಲು ಸಣ್ಣ ಊರುಗೋಲು ನನ್ನ ಹೆಗಲು - ನೋವ ನಿಟ್ಟುಸಿರು ಜಗದ ಮಾತಿನ ಸರಕಾಗದಂತೆ ನನ್ನುಡಿಯಲ್ಲೇ ಅಡಗಲಿ...
ಬಡ ಗುಡಿಸಲ ಒಡೆಯನಲಿ ಕೊಡಲಿರುವ ಒಳ ಕೋಣೆಯ ನಗನಾಣ್ಯ ಅದಷ್ಟೇ: ನಡೆನುಡಿಯ ಪುಟ್ಟದೊಂದು ಭರವಸೆಯ ಶಕ್ತಿ ಮಂತ್ರ - "ಜೊತೆಗೆ ನಾನಿದೀನ್ಕಣೋ..."

ಗೆಲುವಿನ ನಶೆಗೆ ಅರ್ಥವಾಗುವುದಿಲ್ಲ; ಎಂಥಾ ಗಳಿಕೆ ಗೊತ್ತಾ ಅದೂ - ಖಾಲಿ ಖಾಲಿ ಜೋಳಿಗೆಯಲಿ ಊರಾಚೆ ಬಯಲಲಿ ಕಬೋಜಿಯಾಗಿ ನಿಂತಾಗ 'ನಾನಿದೀನ್ಕಣೋ' ಅಂದು ತೋಳ್ದೆರೆವ ಒಂದು ಜೀವ...

ಅಲ್ವಾ -
ಆಗೊಂದು ಜಗಳ - ಅಲ್ಲಿಷ್ಟು ವಿಚಾರ ಭಿನ್ನತೆ - ನಡೆವ ಹಾದಿಯ ನಡುವೆ ಸಾವಿರ ಬೇಲಿಯ ಕವಲು...
ಆದರೇನಾತು, ಈ ಎದೆ ಉಮ್ಮಳಿಸಿ ಕೊರಳು ಹಿಂಡುವಾಗ ಕಣ್ಣ ಕಕ್ಷೆಯಲಿ ಫಕ್ಕನೆ ಹೊರಳುವುದು ಆ ಅದೇ ಮುಖ...
ಎಲ್ಲ ವಿಪರೀತಗಳ ಆಚೆಯೂ, ನೋವೂ ಅಂತ ಈ ಕಂಗಳು ತೋಯುವಾಗಲೆಲ್ಲ "ನಾನಿಲ್ಲೇ ಇದೀನಿ ಕಣೋ" ಅಂದು ಬಾಗಿಲಿಗೆ ಬಂದು ನಿಲ್ಲುವ ಆ ಶುದ್ಧ ಶಾಂತ ಹೆಗಲು...
#ಆತ್ಮೀಯ_ನೇಹವೆಂದರೆ_ಅದೇ_ಅದಷ್ಟೇ_ಮತ್ತೇನಲ್ಲ...
#ನನ್ನೆಲ್ಲ_ನಗೆಯ_ಮೂಲ...
⇱ ⇲ ⇜ ⇝ ⇱ ⇲

ಗುಟುಕು ಉಸಿರಿಗಾಗಿ ಹೃದಯ ಪಟಪಟಿಸುವಾಗ ಗಬಕ್ಕನೆ ತಬ್ಬುವ ಶುದ್ಧ ಮಂತ್ರ ಅವಳು; ರಕುತದಿಂದ ಜೀವ ತುಂಬಿದವಳು - ಸೋಲಿಗೂ, ನೋವಿಗೂ ನಗೆಯ ನಡಿಗೆ ಕಲಿಸಬಲ್ಲವಳು - ಮನೋ ಕುಂಡಲಿಯ ಸಂಜೀವಿನಿಯೇ ಇರಬಹುದು ಅವಳು...
#ಅಮ್ಮಾ...
⇱ ⇲ ⇜ ⇝ ⇱ ⇲

ಜಗತ್ತು ಇನ್ನಷ್ಟು ಮತ್ತಷ್ಟು ಮಗದಷ್ಟು ಚಿಕ್ಕದಾಗಲಿ - ಪ್ರೀತಿಯ ಕೈಕೊಳದಲ್ಲಿ...
ಸಾವಿರ ಕವಲಿನ ಪ್ರೀತಿ - ಸಾವಿನ ಸಲಿಗೆಯ ಪ್ರೀತಿ...
#ಪ್ರೀತಿ_ಪರಿಭ್ರಮಣ #ಪ್ರೀತಿ_ಜಾಗತೀಕರಣ... 
⇱ ⇲ ⇜ ⇝ ⇱ ⇲

ಹೂವಿಗೆ ಹೂವಿತ್ತು ನಗೆಯ ಬಿತ್ತುವ ಪ್ರೀತಿ...
ಹಣ್ಣ ತಿರುಳಿನ ಸಿಹಿಗಿಂತ ಸವಿಯಾದ ರುಚಿ ಈ ಪ್ರೀತಿ...
ನಾಲಿಗೆಯಿಲ್ಲದ ಎದೆಯ ಜೋಳಿಗೆಯಿಂದೆತ್ತಿ ಕೊಡು ಕೊಳ್ಳುವ ಪುಟ್ಟ ಪುಟ್ಟ ಖುಷಿಗಳಲ್ಲೇ ಪ್ರೀತಿಯ ಅಪಮೌಲ್ಯವಾಗದ ನೈಜ ಅಸ್ತಿತ್ವ...
ಪ್ರೀತಿ ಪ್ರೀತಿಯನ್ನೇ ಬಿತ್ತಿ ಬೆಳೆಯಲಿ - ಪೀಳಿಗೆಯಿಂದ ಪೀಳಿಗೆಗೆ ಪ್ರೀತಿಯೊಂದೇ ದಾಟಲಿ...
⇱ ⇲ ⇜ ⇝ ⇱ ⇲

ನಟ್ಟ ನಡು ರಾತ್ರಿ ಮಿಂಚುಹುಳವೊಂದು ಕನ್ನಡಿಗೆ ಮುತ್ತಿಟ್ಟಿತು - ಬೆಳಕು ಸಾವಿರ ಹೋಳು...
#ದೈವ_ಸಂಭಾಷಣೆ...
⇱ ⇲ ⇜ ⇝ ⇱ ⇲

ಕನಸ ಗುಡಿಯ ನೆತ್ತಿ ಕಾಯ್ವ ಗುಟುಕು ಒಲುಮೆಯಂತೆ, ಕತ್ತಲೋಟದ ಹಳಿಯ ಹಾಯ್ವ ಮಿಣುಕು ಬೆಳಕಿನಂತೆ - "ಯಾರೋ ಬರೆದ ಏನೋ ಸಾಲಲಿ ನೀನೂ ಸಿಗಬಹುದು, ನನಗೆ ನಾನೇ ಸಿಗಬಹುದು..."
#ಓದಿನೊಕ್ಕಲು...
⇱ ⇲ ⇜ ⇝ ⇱ ⇲

ಎಂಥ ಅಪ್ಪನಾಗಬಾರದು ಎಂಬುದಕ್ಕೆ ಸಾಕ್ಷಿ ಕೊಟ್ಟ - ಆದ್ರೆ ಇಂಥಾ ಅಪ್ಪ ಆಗ್ಬೇಕು ಅಂಬೋ ಕನಸ ಬಿತ್ತಿದ - ಜವಾಬ್ದಾರಿಗಳ ಸವಾಲಿಗೆ ಹೆಗಲು ಕೊಡಲಾಗದ, ಆತ್ಮದ ಪ್ರಶ್ನೆಗೆ ಜವಾಬು ನೀಡಲಾಗದ ಅಸ್ತಿತ್ವ ಮೈಗಷ್ಟೇ ಅಪ್ಪನಾಗುವುದು ಮತ್ತು ಆ ಅಂಥಾ ಅಪ್ಪನ ಪಾತ್ರಕ್ಕೆ ಸ್ವಯಂ ಘನತೆ ಇಲ್ಲ ಎಂಬ ಪ್ರಜ್ಞೆ ತುಂಬಿದ ಈ ಬದುಕು ಅದೆಷ್ಟು ಅಮ್ಮ ಅಮ್ಮ...
#ಅಪ್ಪಂದಿರ_ದಿನವಂತೆ...
                 ತೇದಿ: 17-06-2018
⇱ ⇲ ⇜ ⇝ ⇱ ⇲

ಗೆಳೆಯ ಅಪ್ಪಾನು ಆಗಿದ್ದಾನೇ ಎಷ್ಟೋ ಸಲ💞 -
ಅಪ್ಪಂದಿರ ದಿನದ ಶುಭಾಶಯ ಕಣೋ ಮಂಗೂ... ಗೆಳತಿ ಶುಭಕೋರಿದಳು...
#ಧನ್ಯತೆ...
                ತೇದಿ: 17-06-2018

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

No comments:

Post a Comment