Tuesday, July 3, 2018

ಗೊಂಚಲು - ಎರಡ್ನೂರಾ ಅರ್ವತ್ಮೂರು.....

ಏನೋ ಐಲು..... 

ಪಾವಿತ್ರ್ಯತೆಯ ಸೋಂಕು ತಗಲಿದ ಮನುಷ್ಯ ಕಾಮದ ಸಹಜತೆಯನ್ನು ಕೊಂದ - ಅಷ್ಟಲ್ಲದೇ ಪ್ರೇಮ, ಆಧ್ಯಾತ್ಮದಂತ ಒಳಮನೆಯ ಆಪ್ತ ಒಡನಾಡಿಯಾಗಬೇಕಿದ್ದ ಭಾವಗಳಿಗೆ ಶ್ರೇಷ್ಠತೆಯ ಅಹಂಕಾರವನ್ನು ಬಿತ್ತಿದ...
#ಬಯಲೆಂದರೆ_ಯಾಕಷ್ಟು_ಭಯವೋ_ಭಡವನಿಗೆ..!?
↹↺↹↻↹

ಅತಿ ವಾಚಾಳಿ ನಾನು - ಆಳದ ಹಪ್ಪು ಮೌನಕ್ಕೆ ಅನಾಥ ಮಾತೇ ಸಾಂಗತ್ಯ...
ಸ್ವಚ್ಛಂದ ಮಾತಿನೊಲು ಮಿಕ್ಕುಳಿದ ಮೌನ ನಗು ನನ್ನಿರವು...
ಅಲ್ಲಾss -
ಎತ್ತರದ ಚೆಲುವೆಂದರೆ ಏರುವುದಾ, ಏರಿದೆತ್ತರದ ಆಳವ ಅಳೆಯುವುದಾ ಅಥವಾ ಮೌನದಾಳಕ್ಕಿಳಿದು ಎತ್ತರದ ಮಾತಾಗುವುದಾ...!!!
#ಸಾವಲೂ_ಸಿಕ್ಕದ_ಹುಟ್ಟಿನ_ಗುಟ್ಟನು_ಬಗೆಯಲು_ಗಾಳಿ_ಗದ್ದಲ_ಕಲ್ಲು_ಮೌನ...
↹↺↹↻↹

ಕನಸು ಕೈಕೊಡವಿ ಹೋದ ಹಾದಿಯಲಿ ಕಲ್ಲೆದೆಯಲೂ ಕಣ್ಣ ಹನಿ ಕೊಳವಾಗುವುದು...
ಏಸು ಗಿರಿಗಳನೇರಿ ಯಾವ ಎತ್ತರವ ತುಳಿದರೂ ಒಂಟಿ ಓಟಕೆ ನೆಳಲು ನೆನಹಿನೊಡಲೇ...
ನಾಳೆಗಳಿಲ್ಲದ ನಡಿಗೆಗೆ ನಿನ್ನೆಗಳಷ್ಟೇ ಸ್ವಂತ...
ಕಂತು ಕಂತಾಗಿ ಬರುವ ಅಂತಕನ ಸಂದೇಶಕೆ ಮುದುಡಿ ಕುಂತು ಕಾಯುವ ಹೆಳವ ಮನಸಿಗೆ - ನೀರಲ್ಲೇ ಇದ್ದು ನೀರ ಒದ್ದು ಕೊನೆಗೆ ನೀರಲ್ಲೆ ಕರಗಿ ತನ್ನದೇ ಹೊಸ ಚಿಗುರಿಗೆ ಅನ್ನವಾಗೋ ಕಮಲ ಪತ್ರದೆಡೆಗೆ ದಿವ್ಯ ಬೆರಗು...
ಏನ ಹೇಳಲಿ,
#ಪ್ರಕೃತಿ_ಸಂಸ್ಕಾರದಲಿ_ನಾನೊಂದು_ತೃಣವು...
↹↺↹↻↹

ಬೆಳದಿಂಗಳ ಕುಡಿದರೂ ಆರದ ಕರುಳ ಉರಿ...
ಧಾರೆ ಧಾರೆ ಮುಸ್ಸಂಜೆ ಮಳೆಯ ಮಿಂದರೂ ಚಿಗುರೊಡೆಯದ ಕನಸು...
ಇರುಳ ಮುಷ್ಟಿಯಲಿ ಉಮ್ಮಳಿಸೋ ನಗೆಗೆ ಮೆತ್ತಿಕೊಂಡ ನೆನಪುಗಳ ಹುಳಿ ಹುಳಿ ವಾಸನೆ...
ಸಣಕಲು ಬೆಳಕಿನ ಹಾಳು ಸುರಿವ ಸಂತೆ ಈ ಎದೆಯ ಹಾದಿ...
"ಒಂಟಿ ಒಂಟಿ ನಡಿಗೆಯಲ್ಲಿ ನನ್ನೊಂದಿಗೆ ನನ್ನದೇ ಯುದ್ಧ..."
ಸೋತದ್ದು ಗೆದ್ದದ್ದು ಉಳಿಸಿದ್ದು ಉಳಿದದ್ದು -
ಹಸ್ತ ಮೈಥುನದ ಸ್ಖಲನದಲ್ಲಿ ಸುಖಕ್ಕಂಟಿಕೊಂಡ ವಿಚಿತ್ರ ವಿಷಾದ...
#ನಾನು...
↹↺↹↻↹

ಇನ್ನೆಷ್ಟು ಕಾಯಬೇಕೋ ಜವ ಬರುವ ಹಾದಿಯ...
ಕೇಳುವೆವಾದರೆ -
ಉಳಿಯ ಬೆವರಲ್ಲಿ ಕಗ್ಗಲ್ಲ ನೆತ್ತರು ಬೆರೆತು ಜನ್ಮ ತಳೆದ ರಂಗಮಂಟಪದ ಕಂಬದ ಕಣ್ಣಲ್ಲೂ ಇದ್ದೀತು ನೂರು ಸಾವಿರ ಕರುಣ ಕಥೆಗಳು...
ನಿನ್ನೆಗಳ ಆಳದಿಂದೆದ್ದುಬರುವ ಗಾಢ ಮೌನದ ಅಸಂಖ್ಯ ಪ್ರತಿಧ್ವನಿ ಎದೆ ಮಂಚದ ಅಜ್ಞಾತ ಮೂಲೆಗಳನೂ ಚುಚ್ಚಿ ಚುಚ್ಚಿ ಮೆರೆಯುವಾಗ -
ನಾನೆಂಬೋ ನಾನಿಲ್ಲಿ ಅಳಿದುಳಿದ ರುಗ್ಣ ಪಳೆಯುಳಿಕೆ ಅಷ್ಟೇ..........
#ಸತ್ತಮೇಲೆಲ್ಲ_ಸ್ವರ್ಗದ_ಮಾತೇ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

No comments:

Post a Comment