Tuesday, July 3, 2018

ಗೊಂಚಲು - ಎರಡ್ನೂರಾ ಅರ್ವತ್ತಾರು.....

ಬೆಳಗೂ - ಬೈಗೂ - ಅವಳೂ.....  

ಹೂವಿನ ಸಂತೆಯಲಿ ನವಿಲುಗರಿ ಮಾರುವ ಹೂ ಹಕ್ಕಿ ಭಾವ ಬಳಗದ ಹಾಡು - ಬೆಳಗು...
➤⧬➤

ಬೆಳಗೆಂದರೆ:
ತೋಳ ಬಲೆಯೊಳಗೇ ಕೊಸರಿ ಸುಖದ ತಿರುವುಗಳ ಆಲಸ್ಯದ ನೆಟಿಗೆ ಮುರಿದು - ಹಸಿ ಉಸಿರ ಪಿಸುನುಡಿಯಲೇ ಪ್ರೀತಿ ಹೇಳಿ - ಕಳೆದ ಕತ್ತಲ ಸೊಕ್ಕಿಗೆ ದಿಕ್ಕು ತಪ್ಪಿದ ಹೆರಳ ಸಿಗ್ಗು ಬಿಡಿಸದೆಲೆ ಮುಡಿ ಕಟ್ಟಿ - ಎನ್ನ ತೆಕ್ಕೆಯ ಪ್ರೀತಿ ಹಕ್ಕಿನ ಕಾಡಬೆಳದಿಂಗಳ ಗೊಂಬೆ ತಾ ಏನೋ ನೆನೆಯುತ್ತ, ಇರುಳ ಯುದ್ಧದ ಕಳ್ಳ ಗಾಯಗಳ ಎಣಿಸಿ ಸುಳ್ಳೇ ನಾಚುತ್ತ ವಸನ ಹುಡುಕುವ ಹೊತ್ತು...😍
#ಒರಟು_ತೋಳಲ್ಲಿ_ಶರದಿಂದು_ಮೆರೆದರೆ_ಮುಂಬೆಳಗಿಗೆ_ಕೂಸಿನ_ಕನಸು...💞
➤⧬➤

ಕತ್ತಲ ರಂಗಿನ ಬೀದಿ ದೀಪದ ಅಡಿಗೆ ಲಾವಂಚದ ಹನಿ ಮಿಂದ ಬೆಳದಿಂಗಳ ಕುಡಿಯೊಂದು ಬಳುಕಿ ಸುಳಿಸುಳಿದು ಕುಡಿಮೀಸೆ ಹೈದನ ಹಸಿ ಉಸಿರ ಹಳಿ ತಪ್ಪಿಸಿ ಕೆಣಕುತಿದೆ...
ಇರುಳ ಬಾಗಿಲಲಿ ಉಕ್ಕೋ ರಕುತದ ಪೋಲಿ ಕನಸುಗಳು ಯೌವನ ಪೂಜೆಗೆ ಕರೆಯುತಿವೆ...
#ಅವಳ_ವಾಯುವಿಹಾರ...
➤⧬➤

ಸಾಗರನ ಮಡಿಲಿಗೆ ಬಿದ್ದೆ - ಅಲೆಗಳು ಎದೆಗೆ ಗುದ್ದುವ ಪರಿಗೆ ಪ್ರೇಮೋನ್ಮಾದದುರಿಯಲಿನ ನಿನ್ನ ತುಟಿಗಳ ಧಾಳಿಯ ಅಟಾಟೋಪದ ನೆನಪಾಯಿತು...
ರುಚಿ ಇಲ್ಲದ ಕಣ್ಣ ಹನಿಯೊಂದು ಉಪ್ಪಾಯಿತು...
#ಸಾಗರ_ಸನ್ನಿಧಿ
➤⧬➤

ಬಲು ಬೆರಕಿ ಹರೆಯದ ಮೂರು ಸಂಜೆಯ ಹಿತ್ತಲ ಹಾದಿಯ ಕಳ್ಳ ಭೇಟಿಯಲಿ - ಉಸಿರಿಗೆ ಉಸಿರು ಸೋಕಿ ಹಾಗೆ ಹೊತ್ತಿಕೊಂಡದ್ದು ಸಣ್ಣ ಬೆಂಕಿ ತೋಳ ತಬ್ಬುಗೆಯಲ್ಲಿ...
ಅಮಾಯಕ ತುಟಿಗಳು ರುಚಿಯ ಕಾವಿನ ಜಿದ್ದಿನಲಿ ಕಚ್ಚಾಡುವಾಗ ಬೆನ್ನು ಹುರಿಯ ಬೇರಿನಿಂದೆದ್ದು ಕೈಗಂಟಿದ ಪ್ರಣಯ ಕೌಶಲ ಲೋಬಾನದ ಕಿಡಿಗೆ ಉಟ್ಟ ವಸನಗಳ ಒಟ್ಟು ಆಹುತಿ...
ಬಿರಿದ ಅವಳೆದೆ ಗೊಂಚಲ ಹೂಗಳ ಒಂದೊಂದೇ ಬೊಗಸೆ ತುಂಬಿಕೊಂಡು ಹಸಿವು ಏರುತಲೇ ಇರುವ ಎನ್ನ ಹಸಿ ತುಟಿಗೆ ಪರಿಚಯಿಸಿದೆ - ಆಸೆಯ ಹಳಿಯೇರಿದ ಅವಳ ಚಿಗುರು ಬೆರಳುಗಳು ನನ್ನ ನೆತ್ತಿಗೆ ಪ್ರೀತಿ ತುಂಬುತ್ತಾ ಭುಜದ ಬಿರುಸಿನಲ್ಲಿ ದಿಕ್ಕು ತಪ್ಪಿದವು...
ಬೆತ್ತಲೆ ಬೀದಿಯ ಕತ್ತಲ ಮೂಲೆಗಳಲೂ ಸುತ್ತಿ ಸುಳಿವ ತುದಿ ನಾಲಿಗೆಯ ಕಡು ದಾಹದ ತುಂಟ ಅಟಾಟೋಪಕ್ಕೆ ನಾಭಿ ತಗ್ಗಿನ ಸೀಳು ಹಾದಿಗಳಲಿ ಮತ್ತೆ ಮತ್ತೆ ಮತ್ತಿನ ಒರತೆ...
ಇನ್ನೀಗ - ಉಸಿರುಸಿರ ಬಿಸಿ ಹಬೆಯ ಉರುವಣಿಗೆಯಲ್ಲಿ ಈ ಜೀವಗಳ ರಸಗ್ರಂಥಿಗಳೆಲ್ಲ ಕಾದು ಕರಗಿ ರತಿರಸರಾಗದಲ್ಲಿ ಲಯವಾಗಲೀ ಇರುಳು...
#ಬಿರುಬೇಸಿಗೆಯಲೊಂದು_ಅಡ್ಡಮಳೆ_ಪೋಲಿಪಲ್ಲಂಗ...
➤⧬➤

ಕುಡಿ ಮೀಸೆ ಮರೆಯ ಹಸಿ ಶುಂಠಿ ಹಠವನು ಉಸಿರಿಂದ ಅಳಿಸಹೋದೆ...
ತುಂಟ ತುಟಿಯ ಒದ್ದೆ ಘಮಕೆ ಹೊಕ್ಕುಳ ಹೂ ಅರಳಿತು - ಪ್ರಕೃತಿ ಪ್ರೇಮದ ಮಾತಿಗೆ ಕಳ್ಳ ಮನಸಿದು ಜಾಣ ಮೌನಕೆ ಜಾರಿತು...
ಗಂಡು ಹಠ ಕರಗಿದರೂ/ಕೆರಳಿದರೂ ಬಿರಿದ ಹೆಣ್ಣೆದೆ, ಸಿಡಿದ ನಡು ನಾಡಿಯಲಿ ಸಕಾಲ ವಸಂತೋತ್ಸವ...
ಮುನಿದ ಮೂರು ದಿನವೂ, ಸುಡು ಧಗೆಯ ನಡು ಹಗಲಲೂ ಮುಡಿಗೆ ಮುಟಿಗೆ ಮಲ್ಲಿಗೆ ತಂದು ಸುರಿದವನೇ - ಭುವಿ ಕಾದಾಗ ಗಗನ ಮೋಡಗಟ್ಟಿದರೆ ಬಿದ್ದ ಹನಿ ಹನಿಯೂ ಹಸಿರ ಚಿಗುರ ಮುತ್ತಾಗುವುದಂತೆ ಕಣೋ...
ಸುಳ್ಳೇ ಕಾಯಿಸಬೇಡ - ಇನ್ನೂ ಕಾಯಿಸಿ ಕಾಡಬೇಡ - ಎಂದಿನ ಮಳ್ಳ(ಲ್ಲ) ನಗೆ ನಕ್ಕುಬಿಡು - ಚಿಗುರೊಡೆವ ರೋಮಾಂಚಕೆ ಸೋತು ಸವಿ ಮುಳ್ಳೆದ್ದ ಹಸಿ ಮೈಯ್ಯ ಹೆಣ್ಣ ಒಡಲ ಮಣ್ಣಿಗೆ ಬೀಜ ಮಳೆಯಾಗು ಬಾ...
ಪ್ರಕೃತಿ ಸಾಂಗತ್ಯದ ಸಲ್ಲಾಪಕೆ ಕಾಲದ ಹಂಗು ಗುಂಗಿಲ್ಲ - ಒಲಿದ ಆಸೆ ಕನಸು ಹೊರಳಬೇಕಷ್ಟೇ - ನೇಗಿಲ ಮೊನೆಯಾಗಿ ಮೈ ಸೀಳಿ ಬೆವರಾಗು ಬಾ...
#ಮತ್ತೆ_ಮತ್ತೆ_ಅಡ್ಡ_ಮಳೆ...
#ಕಪ್ಪು_ಹುಡುಗಿಯ_ಕೊರಳ_ಕಂಪು...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

No comments:

Post a Comment