Tuesday, July 3, 2018

ಗೊಂಚಲು - ಎರಡ್ನೂರಾ ಅರ್ವತ್ತೈದು.....

ಹರಿದ ಸಾಲುಗಳು..... 

#ಚಿತಾಭಸ್ಮ:
ನಿಮ್ಮ ನಿಮ್ಮ ನಾಳೆಗಳ ಕನಸುಗಳ ಪಟ್ಟಿ ಮಾಡಿ ಅಂದಿದ್ದರು ಕನ್ನಡ ಅಕ್ಕೋರು - ಹತ್ತು ಬಾರಿ ನಿನ್ನದೇ ಹೆಸರು ಬರೆದಿದ್ದೆ; ನೀನು ನಾಳೆಯಾಗಿಯೇ ಉಳಿದು ಹೋದೆ...

ಬರುವವರ್ಯಾರೂ ಇಲ್ಲ - ಕಾಯುತ್ತಾ ಕೂರುವುದು, ಬಂದವರೂ ಯಾರೂ ಇಲ್ಲ -  ಕಳಿಸೋ ಹಳಹಳಿ; ನಿಜವೆಂದರೆ ಇಲ್ಲಿ  ಖಾಲಿಯೊಂದೇ ಆಖೈರು ವರ್ತಮಾನ...

ಬರುವ ಕನಸುಗಳೆಲ್ಲ ಮಸಣಕೇ ಒಯ್ದರೆ ಬದುಕ ಹೊರುವುದು ಹೇಗೆ...?
ಉತ್ತರವೆಂಬಂತೆ ಹೂವು ಕುಶಾಲು ನಗೆ ಬೀರಿತು...

ಇರಲಿ ಕಾಯುವಾ,
ಮತ್ತೆ ಬೆಳಕಾಗಬಹುದು - ಇರುಳು ಮುಚ್ಚಿದ ಕಣ್ಣ ತೆರೆದರೆ...
ಮರೆತ ಹೆಸರಿನ ರೂಪ, ಗಂಧ ಮರೆಯದ ಹಾಗೆ...
↢↩↪↣

ಈ ಬೆಳದಿಂಗಳು ಎಷ್ಟು ಚಂದ ಅಲ್ವಾ...!!!!
ಅಯ್ಯೋ ಏನ್ ಚಂದಾನೊ, ಆ ಚಂದ್ರನ ಮೈತುಂಬ ಕೆಟ್ಟ ಕಲೆ...
ಚಂದ್ರ - ಸ್ನೇಹ; ಬೆಳಕು - ಪ್ರೀತಿಯ ಭಾವಾನುಬಂಧ ವಾಚಕ...
ಗಂಡಾ? ಹೆಣ್ಣಾ? ಸಂಬಂಧ? ಜಗದ ದೃಷ್ಟಿ ಪ್ರಶ್ನಾರ್ಥಕ...
ಹಹಾ -
"ಮುಂಬಾಗಿಲ ತೆರೆದಿಟ್ಟರೂ ಗೋಡೆಯ ಕಿಂಡಿಗೆ ಕಣ್ಣು ಕೀಲಿಸಿ ಮನೆಯ ಮೂಲೆಯ ಕತ್ತಲನು ಹುಡುಕಾಡೋ ಅಸ್ವಸ್ಥ ಮನಸುಗಳ ದೊಂಬಿ ಸುಸ್ತಿನೆಡೆಗೆ ಮಹಾ ಕರುಣೆಯ ನಗು ನನ್ನದು..."
#ಬಲು_ಮೋಜಿನ_ದೊಂಬರಾಟ_ಇದು...
↢↩↪↣

..........ಈ ಬದುಕಿಗಿಂತ ವಿಲಾಸೀ ರೋಗಿ ಮತ್ತು ಆ ಸಾವಿಗಿಂತ ಪಕ್ಕಾ ವೈದ್ಯ ಸಿಕ್ಕಾರಾ ಶ್ರೀ ನಿಂಗೆ......!!???
#ಒಳಗಿನ_ಪ್ರಶ್ನೆ...
↢↩↪↣

ವಿಚಿತ್ರ ವ್ಯಾಖ್ಯಾನಗಳಲ್ಲಿ, ಅತೃಪ್ತ ಆಚರಣೆಗಳಲ್ಲಿ, ಬೀಗ ಮುದ್ರೆಯ ಗುಡಿಗಳಲ್ಲಿ ಮನುಷ್ಯನ ಅಹಂಕಾರ ಮತ್ತು ದೇವರ ಸೋಲಿನ ನಿತ್ಯ ಮೆರವಣಿಗೆ ನಡೆಯುತ್ತದೆ...
#ಅಪ್ರಿಯ_ಸತ್ಯ...
↢↩↪↣

ಕಸರುಳಿಯದಂತೆ ನಿನ್ನ ಹಾದಿಯನ್ನು ಮತ್ತು ನಿನ್ನ ಗೆಲುವನ್ನು ನೀ ನಂಬಿದ ಕ್ಷಣ ನೀ ಯುದ್ಧ ಗೆದ್ದಂತೆಯೇ ಲೆಕ್ಕ - ಮುಂದಿನದೆಲ್ಲ ಗೆಲುವಿನ ಸಂಭ್ರಮಾಚರಣೆ ಅಷ್ಟೇ...
#ಬದುಕು_ಉತ್ಸವವಾಗಲಿ_ಆತ್ಮಾನುರಾಗದುರಿಯಲಿ.‌‌..
↢↩↪↣

ನಗೆಯ ನಾಟ್ಯಕಿಂತ ಮಿಗಿಲು ಧ್ಯಾನವುಂಟೆ...💞
ಜೀವಿಸುವುದೆಂದರೆ ಇಷ್ಟೇ - ಎದೆ ಭಾವ ಬಿರಿದು ನಗೆಯ ಮೀಯುವುದು... 😍

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

1 comment:

  1. "....ಈ ಬದುಕಿಗಿಂತ ವಿಲಾಸೀ ರೋಗಿ ಮತ್ತು ಆ ಸಾವಿಗಿಂತ ಪಕ್ಕಾ ವೈದ್ಯ ಸಿಕ್ಕಾರಾ ಶ್ರೀ ನಿಂಗೆ......!!???
    #ಒಳಗಿನ_ಪ್ರಶ್ನೆ"

    ಸಾಲುಗಳು ಪ್ರಶ್ನೆಯಾಗೇ ಉಳಿದರೆ ಚೆನ್ನ. ಉತ್ತರ ಹುಡುಕುವುದು ಕಷ್ಟ. ಚೆನ್ನಾಗಿ ಬರೆದಿದ್ದೀರಿ.

    ReplyDelete