Friday, July 20, 2018

ಗೊಂಚಲು - ಎರಡ್ನೂರಾ ಅರ್ವತ್ತೇಳು.....

ಆಷಾಢದ ಪ್ರಣಯ ಮುಖ.....  
(ಅತಿ ಪೋಲಿ ಹರೆಯದ ಮಧುರ ಪಾಪದ ಹಸಿವು...)

ಎನ್ನೆದೆಯ ರೋಮದಿ ನೆಲೆ ನಿಂತ ನಿನ್ನೆದೆಯ ತಿಳಿ ಬೆವರ ಘಮ ಅಡ್ಡ ಹೊತ್ತಲ್ಲಿ ಸುತ್ತಿ ಸುಳಿದು ನೆತ್ತಿ ಸೇರಿ ಹೊಕ್ಕುಳ ಇಳಿ ಎಸರಿನ ಉರಿಯ ಕೆದರುತ್ತದೆ...
ಆಷಾಢದ ಖಾಲಿ ತೆಕ್ಕೆ ತುಂಬುವುದೆಂತು......

ರತಿರಾಗದ ಮಂದ್ರ, ತಾರಕ ಮಿಡಿತಗಳಲಿ ಎನ್ನ ಮೀನಖಂಡವ ಮತ್ತೇರಿ ತೀಡುವ ನಿನ್ನ ಗೆಜ್ಜೆ ಗೀರಿನ ಗಾಯಗಳೆಲ್ಲ ಮೊದಲ ಬಾರಿ ಮಾಯುತಿವೆ...
ಈ ಆಷಾಢ ಮುಗಿಯಲು ಇನ್ನೆಷ್ಟು ಯುಗ ಕಳೆಯಬೇಕು...?

ಮಜ್ಜನದ ಮನೆಯ ನಿಲುಗನ್ನಡಿಯ ಬಳ್ಳಿಗೆ ನೀ ಹಚ್ಚಿಟ್ಟ ಪುಟೀ ಕಪ್ಪು ಟಿಕ್ಲಿಯೊಂದು ನಿನ್ನದೇ ಹೊಕ್ಕುಳ ಇಳಿಜಾರಿನ ಕವಣೆ ಕವಲಿನ ಎಡದಿಬ್ಬದ ಹುಟ್ಟು ಮಚ್ಚೆಯ ನೆನಪಿಸುವಾಗ.....
ಉಫ್ - ಒಂಟಿ ಸ್ನಾನದ ಆಷಾಢಕ್ಕೆ ಗಂಡು ತೊಡೆಗಳ ಹಿಡಿಶಾಪ...

ಮನೆಯ ಅಷ್ಟ ಮೂಲೆಗಳಿಗೂ ಎಷ್ಟೆಷ್ಟೋ ರೋಮಾಂಚವ ಉಣಿಸಿದ ಪ್ರೇಮೋತ್ಕರ್ಷ ಉರಗಬಂಧಗಳಲಿ ಬಿಸಿ ಉಸಿರ ಸುಳಿ ಗಾಳಿಗೆ ಬೀಗಿ ಬಿಗಿಯಾಗಿ ಮುಳ್ಳೆದ್ದ ಮೈಯ ಬಯಲ ಸೀಮೆಗಳ ಸೀಳಿ ಬಿತ್ತಿದ ಮುತ್ತಿನ ಬೀಜಗಳೆಲ್ಲ ಈ ಕುದಿವ ಏಕಾಂತದಲಿ ಮತ್ತೆ ಮತ್ತೆ ಮಿಲನದ ಕಾವು ಕೇಳುತ್ತಿವೆ...
ಈ ಆಷಾಢಕ್ಕೆ ನೀರಾಗಿ ನಿನ್ನೆದೆಗೊಂಚಲ ತಿಳಿಕಂದು ಶಿಖರಾಗ್ರವು ಎನ್ನಧರದ ಎಂಜಲು ಮೀಯುವುದು ಯಾವಾಗ...?

1 comment: