Monday, March 4, 2019

ಗೊಂಚಲು - ಎರಡ್ನೂರ್ತೊಂಭತ್ನಾಕು.....

ಹೂ ಬೃಂಗ ಬಂಧ..... 

ಅಲ್ಲಿ:
ಹುಬ್ಬು ಗಂಟಲಿ ಸಂಜೆ ಮುನಿಸು  - ಕಣ್ಣ ಕೊಳದಲಿ ಕೃಷ್ಣ ಬಿಂಬ... ತುಂಟ ಮೋಹನ ಮೋಹದಾಟದಿ ಬಿದಿರ ಬನದಲಿ ರಾಧೆಯ ಗೆಜ್ಜೆ ಕಳೆದನಂತೆ - ಗೋಪಿಕೆ ಸೆರಗ ಗಳಿಗೆಯಲಿ ಘಳಿಗೆ ಕಾಲ ಮಡಚಿಟ್ಟ ಲಜ್ಜೆಯ ಚಂದ್ರ ಮೆದ್ದನಂತೆ - ಗಂಗೆ, ಕಪಿಲೆಯರ ಗೊರಸಿನಿಂದೆದ್ದ ಹೊನ್ನ ಧೂಳಿಯಲಿ ಮಿಂದ ಗೋಕುಲದ ಗೋಪುರಕೆ ಪ್ರೇಮೋತ್ಸವ... ಯಮುನೆ ಮಡುವಲಿ ಗೊಲ್ಲ ಕೊಳಲಿಗೆ ಉಸಿರ ಸವರಿದ - ಗೋಪಿಯರೆದೆಯಲಿ ಕಾಮನ ಹುಣ್ಣಿಮೆ...

ಇಲ್ಲಿ:
ಕಣ್ತುಂಬಿಕೊಳ್ಳೋ ಒಳ ಬಯಕೆ ಮತ್ತು ಕಣ್ತಪ್ಪಿಸೋ ಸಹಜ ನಾಚಿಕೆ... ಮಡಿ ಮಡಿ ಮುಟ್ಟಾಟದ ಮಧುರ ಪಾಪಗಳಲ್ಲೇ ನಿಜದ ಬದುಕಿರೋದು ಕಣೇ ಹುಡ್ಗೀ - ಪ್ರಕೃತಿ ಪುಳಕಗಳು ಸದಾ ಚಂದ‌... ಬೆಳದಿಂಗಳ ಹೊಳೆಯಲಿ ರತಿ ಮದನನ ಬಿಂಬ ಹುಡುಕುವ ಹೊತ್ತು ಕಣಿ ಕೇಳಬೇಡ ಅರಳಲು, ಕನಸಿನ ಚಾದರದೊಳಗೆ ದುಂಬಿ ಧಾಳಿಗೆ ಮೊಲ್ಲೆ ನರಳಿದರೆ... ಕರಿ ಮೋಡದ ಚಹರೆಗೆ ಇಳೆ ಬೆವರುವಾ ಸೊಗಸು ಮೈಸೋಕಲಿ ಬೇಲಿಸಾಲಿನಿಂದ - ಹರೆಯ ಚಂದ ಚಂದ  ಇಂಥವುಗಳಿಂದ...
#ಹೂ_ಬೃಂಗ_ಬಂಧ...
↯↸↜↝↸↯

ಕಳೆದೋಗಬೇಕು..... ಕಳೆದೇ ಹೋಗಬೇಕು..... ಹಸಿ ಇರುಳ ಕೊನೆಯ ಝಾವದಲಿ ಬಿಸಿ ಬಿಸಿ ಕುದಿವ ಹರೆಯದ ಹರಾಮಿ ಕನಸನೆಲ್ಲ ಸಾರಾಸಗಟಾಗಿ ಕದ್ದು ಸಲೀಸಾಗಿ ಎದೆ ಗೊಂಚಲ ಸೀಳಿದ ಕಿರು ಓಣಿಯ ಕಾವಿನಲಿಷ್ಟು, ಹಾಗೇ ಹಾಯ್ದು ಮರಿ ತಾರೆಯಂಥಾ ಹೊಕ್ಕುಳಗುಳಿಯ ಬಳಸಿದ ಪುಟ್ಟ ಬೇಣದಾಚೆಯ ನಡು ಕಮರಿಯ ಆಳದಲಿ ಉಳಿದಷ್ಟನ್ನ ಬಚ್ಚಿಟ್ಟುಕೊಂಡು ಕಾಡುವವಳ ತೋಳ ಹಸಿವಿನ ಉನ್ಮಾದದಲಿ...
ಸವಿ ಸುಖಿ ತವಕದಲೂಟೆಯೊಡೆದು ಮೈಯ್ಯೆಲ್ಲ ಪಾದ ಊರಿ, ಏರು ತಿರುವಿಂದ ಜಾರಿ ಬೆನ್ನ ಬಯಲಲ್ಲಿ ಕಳೆದೋಗುವ ಬೆವರ ಬಿಂದುವಿನಂತೆ.... ಹೌದು... ಹಾಗೇ ಕಳೆದೋಗಬೇಕು.‌‌..... ಪೂರಾ ಪೂರಾ ಕಳೆದೇ ಹೋಗಬೇಕು... ಮತ್ತೆ ಮತ್ತೆ...
ಥೋ ನೆತ್ತಿ ಸುಡುವ ಹೊತ್ತಲ್ಲಿ ನೆತ್ತಿ ಸಿಡಿವ ಕನಸ ಹೆತ್ತ ಮತ್ತ ಮುಂಜಾವಿನ ಮಾತು ಬೇಕಾ...
#ಕಾಡುಗಪ್ಪಿನ_ಹುಡುಗಿ...
↯↸↜↝↸↯

ಕನಸೂ: ಶಾಂತ ಸಲಿಲೆ ಮಂದಾಕಿನಿಯಂತೆ ಬದುಕಿ ಹರಿಯಬೇಕು - ಭೋರ್ಗರೆವ ಶರಧಿಯನು ಸತ್ತೋಗೋಷ್ಟು ಪ್ರೀತಿಸಬೇಕು...
#ವೈನು_ಮತ್ತು_ಅವಳು...
↯↸↜↝↸↯

ಇಲ್ಕೇಳೇ -
ಪಾಳು ಗುಡಿಯ ಬಸವನ ಕಿವಿಯಲಿ ಅದೇನೋ ಒಪ್ಪಂದದ ಮಾತಾಡಿ ನೀ ಕಂಪಿಸಿದ್ದನು ಅಂಗಳದಿಂದಲೇ ಕಂಡು ನವಿಲಾದವನ ಕಲ್ಪನೆಯಲಿ 'ನೀ ಅವನಲ್ಲಿ ಉಸುರಿದ್ದು ನನ್ನ ಹೆಸರು' - ಕರುಳಿನಾಳದಲೆಲ್ಲೋ ಮೆಲ್ಲಗೆ ಮೊಲ್ಲೆ ಮೊಗ್ಗೊಂದು ಬಿರಿದ ಪರಿಮಳ...
ಅಲ್ಲಿಂದಾಚೆ ಎನ್ನೆದೆಯ ತೀರದ ತಿಲ್ಲಾನದ ಹಾದಿಗಳೆಲ್ಲ ನಿನ್ನನೇ ನೆನೆಯುತ್ತ ಹಿಗ್ಗಾಗುವಾಗ ಹೀಗೆ ಇಲ್ಲೆಲ್ಲೋ ಅಳಿದುಳಿದ ಪಳೆಯುಳಿಕೆಗಳ ನೆರಳನಾತು ಕಣ್ಣರಳಿಸಿಕೊಂಡು ನಿನಗಾಗಿ ಕಾಯುವುದು ಹೊಸದೂ ಅಲ್ಲ, ಕಷ್ಟವೂ ಅನಿಸಿಲ್ಲ ಕಣೇ...
ಎತ್ತರದ ಬಯಲ ಬೆಳಕಿಗೆ ಬಾಂದಾರುಗಳಿಲ್ಲ...
ಈ ಮರುಳ ಮನಸಿಜನ ಸೋಜಿಗಗಳಲಿ ಸೋಗಿಲ್ಲ...
ಮುದ್ಮುದ್ದು ಮುಂಜಾವಿನ ತೋಳ ಕನವರಿಕೆಗಳಲಿ ನಿನ್ನ ಕನಸ ರಜಾಯಿಯಡಿ ಕದ್ದು ಸೇರಿಕೊಳ್ಳೋ ನನ್ನ ಮಧುರ ಪಾಪಗಳನೆಲ್ಲ ತುಂಟ ನಗೆಯಲೇ ಮಾಫಿ ಮಾಡಿಬಿಡು - ಹಾದಿ ಬಿಳಲಿನಲಿ ಹುಟ್ಟಿಕೊಳ್ಳೋ ಪುಟ್ಪುಟ್ಟ ನಗೆಯ ಕಥೆಗಳಿಗೆ, ಪದವಿರದ ಪುಳಕಗಳಿಗೆ ಉಸಿರು ತೋಯಲಿ...
ಹರೆಯದ ಹೆಗಲಿಗೆ ನೇತುಬಿದ್ದ ನೆನಪ ಬಟ್ವೆಯ ಖಾನೆಗಳಲೆಲ್ಲಾ ಸಿಹಿ ಸಿಹಿ ಪುಕಾರುಗಳ ತಾಂಬೂಲ ತುಂಬಿಕೊಳ್ಳಲಿ...
#ಒಂದು_ಕಣ್ಣ_ಹನಿಯ_ತೊಳೆಯಬೇಕಿತ್ತು_ಪ್ರೇಮ_ರಾಗವ_ನುಡಿದೆ...
↯↸↜↝↸↯

ಹೋಗ್ಲೇಬೇಕಾ?
ವಿಧಿ ಇಲ್ಲ - ಕರ್ತವ್ಯದ ನೊಗ ಹೆಗಲ ಕೇಳುತಿದೆ - ಬದುಕಿನ ರಾಜಕೀಯ...

ಪ್ರೀತಿ ಕರೆದಾಗ ಬಂದೀಯಾ?
ಕಾಲ ಹೇಳೀತು... ಜೊತೆಗಿರುತ್ತಾ ಇರುತ್ತಾ ಪ್ರೀತಿಯೂ ಒಂದು ನಿತ್ಯಕರ್ಮ - ಅಲೆಯ ಮೇಲೆ ತೇಲಿ ಬಿಟ್ಟ ದೊನ್ನೆದೀಪ; ಎದೆಯಾಳದ ಮೊರೆಯಾಗೆ ಎದೆಯಲ್ಲೇ ಉತ್ತರ - ಉಸಿರ ಅನುಕ್ಷಣದ ದಾಸೋಹ...

ಬೆನ್ನಾಗುವ ಕಾಲಕ್ಕೆ ಕಣ್ಣಾದ ಕಾಲ ತುಸುವಾದರೂ ನೆನಪಾಗಲಿ...
ವರವಾ, ಶಾಪವಾ?
ನಗುವಾಗಿ, ಅಳುವಾಗಿ ಅದನೂ ಕಾಲ ಹೇಳೀತು...
#ಭಾವಬಳ್ಳಿ...
↯↸↜↝↸↯

ಕಿಡಿಗೇಡಿ ಮುಂಗುರುಳು - ಗಲಗಲ ವಾಚಾಳಿ ಕಾಲ್ಗೆಜ್ಜೆ - ಒಂಟಿ ಬಳೆಯ ಗಡಿಬಿಡಿ - ಸೆರಗಿನ ಪೋಲಿತನ - ಕಾಲ್ಬೆರಳ ಕೋಳಿ ತವಕ - ಕಣ್ಣಂಚ ಕಳ್ಳ ಹುಡುಕಾಟ - ಉಸಿರ ವೇಗದ ಉಲ್ಲಾಸ - ಹುಬ್ಬು ಗಂಟಿನ ಹುಸಿ ಗಲಿಬಿಲಿ - ಕಿವಿ ಹಾಲೆಗೆ ಬೆಂಕಿ - ತುಟಿ ಕಚ್ಚಿದ ಹಲ್ಲಿನ ಸ್ವೇಚ್ಛೆ - ಕತ್ತನು ಕವುಚಿದ ಹೆರಳಲಿ ಬಕುಳದ ಘಮ - ಭುಜದ ತಿರುವಿನೇರಿಯ ಕೆಣಕು ಬಿಗಿತ - ಕಂಕುಳ ಕತ್ತಲಲಿ ಮೊದಲ ಬೆವರ ಪಸೆ - ಬೆನ್ನ ಬಯಲಿನ ಆಹ್ವಾನ - ಒಳ ಸರಿವ ಹೊಕ್ಕುಳ ಹೂ ನಾಚಿಕೆ - ರೋಮಾಂಚಕೆ ಪಟಪಟಿಸೋ ಕಿಬ್ಬೊಟ್ಟೆಯ ಅನುಮೋದನೆ - ಬೆನ್ನ ಬುಡದ ಮರಿ ಹಕ್ಕಿ ರೆಕ್ಕೆ ಉತ್ಸಾಹ - ಹಸಿವು ಮಿಕ್ಕುಳಿಯದಂತೆ  ಕರಕುಶಲ ಹಸೆ ಕಾವ್ಯ - ಊರು ಕೇರಿಯಲಿ ಭರಪೂರ ಮಿಂಚು ಮಳೆ...
ಮನದ ಮಲ್ಲಿಗೆ ಮೈಯ್ಯಲರಳಿ ಹದಿ ಹರಿವಿಗೆ, ಕುದಿ ಮಿಡುಕಿಗೆ ಕಾಯ್ದ ಒಡಲಲಿ ಬಯಕೆ ಹುಚ್ಚು ಹೊಳೆ...
ತೆರೆದ ತೋಳ ಕಸುವಲಿ ಕಟೆದ ಕಲ್ಲು ಮೈಯ್ಯ ಕಡೆವ ಕಡಲ ಮಂಥನ - ಬಿಗಿದ ಜೀವನಾಡಿಯೆಲ್ಲ ಸಿಡಿಲು ಸಿಡಿದು ಸಡಿಲವಾಗೋ ಮೇಳನ...
ಪ್ರೇಮವೆಂದರೂ ರತಿಯ ಪ್ರಿಯ ಅಡ್ಡ ಹೆಸರೇ ಅಂತಂದು ನಕ್ಕ ಮನ್ಮಥ...
#ಹೂ_ದುಂಬಿ_ಮಿಳನ_ಮೇಳ...
↯↸↜↝↸↯

"ಜೋಗಿಯ ಮುಷ್ಟಿಯಲಿ ಕಂಪಿಸೋ ಸಣ್ಣ ಕಿಂಕಿಣಿಯ ಒಂದೆಳೆಯ ಗೆಜ್ಜೆ - ದೇವಳದ ಕಲ್ಯಾಣಿಯಲಿ ನೆಂದ ನಿನ್ನಯ ದಣಿದ ಪಾದ - ಕಣ್ಣ ಪಾಪೆಯಲಿ ಕಲೆಸಿಹೋದ ಗೋಧೂಳಿ..."
ಕನಸೊಂದು ಕನಸಲ್ಲೇ ಧೂಳ್ಹಿಡಿದಿದೆ - ಅಭಿಮಾನದ ನುಡಿ ಒಪ್ಪಿ ಎದೆ ಬೀದಿಗೆ ನೀನಿನ್ನೂ ಪಾದ ಊರದೇ...
ಬಿಚ್ಚಬಾರದೆ ನೇಹಿಗನ ಅಂಗಳದಿ ನಗೆಸಂಹಿತೆ - ಚಂದಿರನ ತೇರಿಂದ ಬೆಳ್ದಿಂಗಳು ತೂರಿದಂತೆ - ಕಳೆದೋಗದೆ ಹಾದಿಯಲಿ ಹುಟ್ಟೀತೆ ಕವಿತೆ...
#ಮಂದಮಾರುತನೂರ_ಕಂದೀಲಿನ_ಪಾದ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

No comments:

Post a Comment