Monday, March 4, 2019

ಗೊಂಚಲು - ಎರಡ್ನೂರ್ತೊಂಭತ್ತೈದು.....

ಜೀವನ ಜೀಕಾಟ - ಪಾಠ..... 

ಊರ ಹಾದಿಯನೇ ಮರೆತೆ...
ಶಾಪವಿರಬೇಕು...
ನಿನ್ನ ಮರೆಯಲಾಗದೇ ಸೋತೆ...
#ಕಣ್ಣ_ಬನಿಯ_ಉಯಿಲು...
↚↨↩↪↨↛

ಒಬ್ಬನೇ ಅತ್ತರೆ ಅಯ್ಯೋ ಪಾಪ ಒಂಟಿ ಪಿಶಾಚಿ...
ಒಂಟೊಂಟಿ ನಕ್ಕರೆ ಅಯ್ಯೋ ಹುಚ್ಚಲ್ಲದೇ ಇನ್ನೇನು...
ಬಯಲಿಗೆ ಬೇಲಿ - ಮಸಣಕ್ಕೆ ಪ್ರೇಮ ಪಿತೂರಿ ಇಲ್ಲಿ...
ಕಟ್ಟಲಾದೀತಾ ಬೆಳಕನು - ಬಂಧಿಸಲಾದೀತೇ ಸಾವನು...
#ಲೊಳಲೊಟ್ಟೆ_ತಾಯಿತ...
↚↨↩↪↨↛

ದಾಟಿ ಹೋದ ನಿನ್ನ ಹೆಸರಿಟ್ಟು - ಇಲ್ಲದ ಪ್ರೇಮವ ಹುಡುಕಿ - ನಾನೇ ಹೆಕ್ಕಿ ತಬ್ಬಿಕೊಂಡ ಒಂಟಿತನದ ನೋವ ನಶೆಯಲ್ಲಿ ಇರುಳ ದೂಡುತ್ತೇನೆ, ಮತ್ತದೇ ಅಮಲಿಗೆ ನಗೆಯ ಪೇಟ ಸುತ್ತಿಕೊಂಡು ಹಗಲ ಹಾದಿ ಹಾಯುತ್ತೇನೆ - ಒಳಗೇ ಸತ್ತ ಬದುಕಿನಿಂದ ಇಷ್ಟಿಷ್ಟೇ ಕಳಚಿಕೊಳ್ಳುತ್ತೇನೆ......
#ನಿರ್ಲಿಪ್ತಿಯ_ಕವಲಲ್ಲಿ_ಒಡೆದ_ಪಾದದ_ಗುರುತು...
↚↨↩↪↨↛

ಹೇಗೆ ಕರೆವುದು ಮೌನವ ಮಾತಿನ ಮನೆಗೆ...
ನನ್ನಲಿಲ್ಲದ ನನ್ನ ಇನ್ನೆಲ್ಲೋ ಹುಡುಕಿದ್ದು ಸಾಕಿಂದಿಗೆ...
ಎದೆಯ ಚಿತಾಗಾರದಲ್ಲಿ ಸುಟ್ಟ ಕನಸುಗಳಿಂದಲೇ ನಗೆಯ ಕಿಡಿಯೊಂದು ಹುಟ್ಟಬೇಕು...
ಮಣ್ಣ ಮೈಗಾಯದಲಿ ಹಸಿರೊಂದು ಚಿಗುರುವಂತೆ...
ಮುರಿದ ಟೊಂಗೆಗೆ ಮತ್ತೆ ಮಣ್ಣೇ ಮಡಿಲಾಗುವಂತೆ...
#ನಾನೆಂದರೆ_ನಾನಲ್ಲದ_ನಾನು...
↚↨↩↪↨↛

ಇಲ್ಲೇನಿದೆ ಎಲ್ಲಾ ಮಣ್ಣು ಅಂಬರು - ಮಣ್ಣಲ್ಲೇ ಹುಟ್ಟಿ ಮಣ್ಣನೇ ಹೊದ್ದು ಮಲಗುವರು...
#ಬಾಳು_ಬಣ್ಣ...

ನಗುವಿನೊಳಮನೆಯ ಮೌನ - ಕವಿಯೆದೆಯ ಸೇರದ ಕವಿತೆ - ಕಳೆದದ್ದಷ್ಟೇ ಸತ್ಯ ಅನ್ಸುತ್ತೆ ಇಲ್ಲಿ...
#ನೀನು...

ಬೆಳಕು ಕಣ್ಣ ಚುಚ್ಚುತ್ತೆ - ಕತ್ತಲು ಕರುಳ ಕುಕ್ಕುತ್ತೆ...
#ತಬ್ಬಲಿ_ಯಾರ_ತಬ್ಬಲಿ...

ನಗುವಿಂದ ಕಣ್ಣುಕ್ಕುವಾಗ ಸಾವನ್ನು ಬರೆದೆ - ಸಾವಿನ ಮನೆಯಲ್ಲಿ ಮಗುವ ಹುಡುಕಿದೆ...
#ಬೆಳಕು...

ಬೆಂಕಿಯನ್ನು ಪ್ರೀತಿಸಿದೆ - ಜೀವ ಬೇಯುತಿದೆ...
↚↨↩↪↨↛

ಈ ದಿನಗಳಲ್ಲಿ ನಾಟಕೀಯವಾಗಿ ಅತೀ ಚರ್ಚೆಗೆ ಒಳಪಡುತ್ತಿರೋ 'ಯುದ್ಧ ಮತ್ತು ಶಾಂತಿ' ಎರಡೂ ಸೂಕ್ಷ್ಮ ವಿಷಯಗಳು... ಯಾವ ಹಂತದಲ್ಲಿ ಅತಿ ಶಾಂತಿ ದೌರ್ಬಲ್ಯವಾಗಿ ಬದಲಾಗಿ ದೌರ್ಜನ್ಯವನ್ನ ಹುಟ್ಟು ಹಾಕತ್ತೆ ಮತ್ತು ಯಾವ ಮಿತಿಯಲ್ಲಿ, ಎಂಥಾ ಸಂದರ್ಭದಲ್ಲಿ ಯುದ್ಧ ಶಾಂತಿಯ ಬೆಂಗಾವಲು ಶಕ್ತಿ ಆಗತ್ತೆ ಅನ್ನೋದನ್ನ ತುಂಬ ವಿವೇಚನೆಯಿಂದ ಗ್ರಹಿಸಬೇಕಾಗತ್ತೆ... ಆ ಗ್ರಹಿಕೆ ಮತ್ತು ಮಿತಿಗಳ ವಿವೇಚನೆ ಇಲ್ಲದೇ ಹೋದಲ್ಲಿ ಗಾಂಧಿಯ ಸತ್ಯಾಗ್ರಹವೂ ಯುದ್ಧವನ್ನು ಪ್ರೆರೇಪಿಸಬಹುದು...  ವಿವೇಚನೆ ಇದ್ದಲ್ಲಿ ಒಂದೊಮ್ಮೆ ಸೈನ್ಯದ ಯುದ್ಧ ಕೂಡ ಶಾಂತಿಯ ಮೂಲ ಆಗಬಹುದು...
ಹೆಮ್ಮೆ ಇದೆ, ನನ್ನ ದೇಶ ತನ್ನ ಬಗಲಲ್ಲಿ ಪಾಕ್, ಚೀನಾದಂತ ದೇಶಗಳನ್ನ ಇಟ್ಟುಕೊಂಡೂ ಇದುವರೆಗೂ ಯಾವತ್ತೂ ಆತ್ಮ ರಕ್ಷಣೆಯ ಹೊರತಾಗಿ ಯುದ್ಧಕ್ಕೆ ನಿಂತದ್ದಿಲ್ಲ... ಆತ್ಮರಕ್ಷಣೆಗೂ (ದೇಶದ್ದು) ಬಂದೂಕು ಹಿಡೀಬೇಡ ಅನ್ನುವಷ್ಟು ಶಾಂತಿಪ್ರಿಯತೆ ಖಂಡಿತಾ ನನ್ನಲ್ಲಿಲ್ಲ...
ಯಾಕಂದ್ರೆ ಶಾಂತಿ ನಂಗೆ ಅಂತಃಶ್ಯಕ್ತಿಯ ರೂಪವೇ ಹೊರತು ದೌರ್ಬಲ್ಯವಲ್ಲ... ಯುದ್ಧವೂ ಅಂತೆಯೇ...
#ಜೀವನ_ಪಾಠ...
↚↨↩↪↨↛

ಖಾಲಿ ಕಿಸೆಯ ಬುರುಡೆ ದಾಸ ಕಳೆದುಕೊಂಡದ್ದೇನು, ಕಳೆದುಕೊಂಬುದಾದರೂ ಏನು...
ಸೋತು ಸೋತು ಸೋಲು ಮೈಗೂಡಿ ಹೋಗಿ ಸೋಲಿನೆಡೆಗಿನ ಭಯ ಮತ್ತು ಭಾವತೀವ್ರತೆ ಸತ್ತು ಹೋಗಿ...
ಇಲ್ಲಿಂದ...... ದೂರ ದೂರ ದೂರ ಬಲುದೂರ ಹೋಗಬೇಕು....  ನನ್ನ ನೆರಳೂ ನನ್ನ ಹಿಂಬಾಲಿಸದ..... ಆss..... ದೂರ....... ತೀರಕೆ.........
ದಾರಿ ಹೇಳಯ್ಯಾ ದಕ್ಷಿಣದ ದೊರೆಯೇ - ನಿನ್ನೂರ ಕೇರಿಗೆ...
ದಕ್ಷಿಣಾಧಿಪತಿಯ ಭೇಟಿಗೆ ಉತ್ತರಾಯಣ ಪರ್ವ ಕಾಲವಂತೆ...
#ಅಭಾವ_ವೈರಾಗ್ಯ...
↚↨↩↪↨↛

ದಾರಿ ಮುಗಿಯಲಿಹುದೇ - ನಿನ್ನ ಮಡಿಲ ಸೇರಲಿಹೆನೇ....
#ಬೇಲಿ_ಸಾಲು #ಹಗಲ_ನಕ್ಷತ್ರ...

ಓಡುವ ಕಾಲನ ಗಾಡಿ - ಕಣ್ಣ ಬಿಂಬವ ತುಂಬಿದ ಕಿಟಕಿಯಾಚೆಯ ಬೆಳಕಿನ ಬೆರಗು - ಇಬ್ಬನಿ ಹನಿಗಳ ಜೋಡಿಸಿ ಬರೆದ ಹೆಸರಿಗೆ ಸೂರ್ಯ ಶಾಖದ ಮುಕ್ತಿ...
ಬದುಕಿದ್ದೇನೆ ಅನ್ನುವ ಭ್ರಮೆಯಲ್ಲಿ ಎಷ್ಟೊಂದು ಸುಖವಿದೆ...

ಚಿಗುರು ಮುರಿದರೆ ನೋವು - ಬೇರನೇ ಹರಿದರೆ.........
#ಒಳ್ಳೆಯತನವೆಂಬೋ_ಹಿಮದ_ಕತ್ತಿ....

ಚಂದನೆ ಹೂಗಳ ಮರೆಯಲ್ಲಿ ತಣ್ಣಗೆ ಕೂತ ಮುಳ್ಳುಗಳು - ಬದುಕು, ಭಾವ ಬಲು ಜಾಣ್ಮೆಯ ವ್ಯಾಪಾರ...
#ಸಂಬಂಧ...

ಸಾಕಿನ್ನು ಏದುಸಿರ ಸೆಣಸಾಟ, ಹೊರಡಬೇಕು ಜರೂರಾಗಿ - ಮೊದಲು ನೀನಾ, ಇಲ್ಲ ನಾನು...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

No comments:

Post a Comment