Wednesday, September 18, 2019

ಗೊಂಚಲು - ಮೂರು ಸೊನ್ನೆ ಎಂಟು.....

ಅಳಿಸಿಹೋದ ನಾನು.....  

ಅವಳು
ಮಾರುತನ ಅಂಗೈಲಿಟ್ಟು ನಾ ಕಳುಹಿದ ಮುದ್ದೊಂದನು ಕುಪ್ಪಸ ಗೂಡಲ್ಲಿ ಬಚ್ಚಿಟ್ಟುಕೊಂಡಳಂತೆ - ಇಲ್ಲೀಗ ಮೋಡಕ್ಕೆ ಬೆಂಕಿ ಬಿದ್ದಿದೆ...

ಅವಳು
ನಿದ್ದೆಗಣ್ಣ ಹೊಳಪಿನಲ್ಲಿ ಬಿದ್ದೆದ್ದ ಒದ್ದೊದ್ದೆ ಶಬ್ದಗಳ ಸಾಲು ಸಾಲು ಸಂಪದವ ತುಟಿಗೆ ಸುರಿದು ಬಿರಿದ ತೊಡೆಯಿಂದ ಕಟಿಯ ಬಳಸುವಳು...

ಅವಳು
ಅವಳ ಬೆನ್ನ ಬಯಲ ಖಾಲಿಯಿಂದ ಹಿಡಿದು ಹೊಕ್ಕುಳ ದಂಡೆಯ ನವಿರಿನವರೆಗೆ ನನ್ನ ಬೆರಳು ಬರೆವ ಓತಪ್ರೋತ ಪ್ರೇಮ ಗೀತೆಯ ಉಸಿರ ಲಯದಲ್ಲಿ ನನ್ನೆದೆ ರೋಮಗಳಿಗೆ ಓದಿ ಹೇಳುವಳು...

ಅವಳು
ಹಾಸಿಗೆಯ ಮಡಿಲಿಗೆ ಸ್ವರ್ಗವ ಉಡಿ ತುಂಬಿದವಳು - ಜನುಮಗಳ ಜಡ ಕಳೆದು ಬೆವರಿಗೂ ಸುಖದ ಮುಲುಕು ಕೊಟ್ಟವಳು - ಪ್ರೇಮ ಪೂಜೆಯಲ್ಲಿ ಕರಡಿಯಾಗದಂತೆ ಚಂದ್ರನಿಗೆ ತಾಕೀತು ಮಾಡುತ್ತಾಳೆ - ಕತ್ತಲನು ಬೆತ್ತಲ ಬೆಳಕಿನ ಸೆಳಕಲ್ಲಿ ಮತ್ತೆ ಮತ್ತೆ ಮೀಯಿಸುತ್ತಾಳೆ...

ಅವಳು
ಮಿಂದ ಮಧ್ಯಾಹ್ನ, ನೆಂದ ಮುಸ್ಸಂಜೆ, ಸಾವಿನಂತ ಖಾಲಿ ಖಾಸಗಿ ಇರುಳಲ್ಲೂ ನನ್ನ ನಾಭಿ ನಾಳದಲ್ಲಿ ಸುಳಿ ಸುಳಿದು ಸತಾಯಿಸೋ ರಣ ರಣ ಹಸಿವು...

"ಭಯ ಮತ್ತು ಖುಷಿ ಒಟ್ಟೊಟ್ಟಿಗೆ ಹುಟ್ಟುವ ಪುಳಕ - ಆಷಾಢದ ಮಳೆಯೊಂದಿಗೆ ಅವಳ ಭೇಟಿ..."
#ಹಸಿಮಣ್ಣ_ಮೆತ್ತಿಕೊಂಡ_ಚೌಕಟ್ಟಿಲ್ಲದ_ಕಪ್ಪು_ಚಿತ್ರ...
↯↯↺↹↻↯↯

ಗಾಳಿ ಕೊಳಲಿನ ಗೀತೆ - ನದಿಯ ಬೆರಳಿನ ಉಂಗುರ - ಗರ್ಭ ಧರಿಸಿದ ಮೋಡ - ಹದ್ದು ಕಣ್ಣಿನ ಹಸಿವು - ಅಮಲುಗಣ್ಣಿನ ನಡಿಗೆ - ತೊಡೆಯ ತಿವಿಯುವ ಹೆಸರಿಲ್ಲದ ಒದ್ದೆ ಹೂವಿನ ಬಾಣ...
ಎದೆಯ ರೋಮದ ಮೇಲೆ ನವಿಲುಗರಿ ಆಡಿದಂಗೆ ನಿನ್ನ ಉಸಿರ ಹೊರಳಿನ ಆ ಸಂಜೆಗಳ ನೆನಹ ನೆಗ್ಸು...
ನಾನಿಲ್ಲಿ ಒಂಟಿ ನಡೆಯುತ್ತಿಲ್ಲ - ನಿನ್ನೊಳಗೆ ನನ್ನ ಹಡೆಯುತ್ತಿದ್ದೇನೆ...
#ಅಳಿಸಿಹೋದ_ನಾನು...
↯↯↺↹↻↯↯

"ಅವಳ ಕಿರು ಬೆರಳ ಹಿಡಿದು ರತಿ ತಾ ಮೆರೆಯುತ್ತಾಳೆ - ತನ್ನ ತಾ ಮರೆಯುತ್ತಾಳೆ..."
ಎದೆಯ ರೋಮದ ಮರೆಯಿಂದ ಇಣುಕೋ ಮೂಗುತಿ ಹಾಕಿದ ಹಚ್ಚೆ - ಬೆನ್ನ ಬಿರುಸಿನ ತುಂಬಾ ಗಡಿಬಿಡಿಯಲಿ ಓಡಾಡಿದ ಎಡಗೈಯ್ಯ ಒಂಟಿ ಬಳೆಯ ಪ್ರೀತಿ ಗುರುತು - ಭುಜವ ತಾರಕದಿ ಮೀಟಿದ ಹಲ್ಲು - ಕುಣಿದು ಮಣಿಸುವಲ್ಲಿ ಗೆಜ್ಜೆಯಿಂದ ಕಳಚಿಬಿದ್ದ ಗಿಲಕಿ - ಉಸಿರಿಗೇ ಅಂಟಿ ಕೂತ ಹೆಣ್ಣು ಗಂಧ...
ಸುಡುಸುಡುವ ಕತ್ತಲು ಜೋಡಿ ಬೆವರ ಕುಡಿದು ಹಗುರಾದ ಕಥೆಯ ಹಗಲ ಕನ್ನಡಿಗೆ ಬಚ್ಚಲಿನ ಬೆತ್ತಲು ಬಿಗುಮಾನದಿ ಹೇಳುತಿದೆ...
#ಸುರತ_ವೈಭವ.‌‌..
↯↯↺↹↻↯↯

ಎರಡು ರಮ್ಯ ಕವಿತೆಗಳು ಒಟ್ಟಿಗೆ ಮಿಂದವು...
#ಮಿಥುನ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

No comments:

Post a Comment