Friday, October 4, 2019

ಗೊಂಚಲು - ಮೂರು ಸೊನ್ನೆ ಒಂಭತ್ತು.....

ಕೃಷ್ಣ ಸಖ್ಯ..... 

ಹರಿದ ಸೀರೆ ತೊಟ್ಟಿಲಲ್ಲೂ ಕೃಷ್ಣ ನಗುತಾನೆ - ಅಮ್ಮನ ಕಣ್ಣ ಜಿನುಗನು ನವಿಲುಗರಿ ಒರೆಸುತ್ತೆ - ಅವನು ಮಡಿಲಲಾಡಿದರೆ ಹರಳುಗಟ್ಟಿದ ಹಾಲಾಹಲವೂ ಎದೆಯ ಹಾಲಾಗುವುದಂತೆ...
ಹೆಣ್ಣಾದರೂ, ಗಂಡಾದರೂ ಒಡಲ ಕೂಸು ಅಮ್ಮನಿಗೆ ಕೃಷ್ಣನೇ - ಅಮ್ಮನ ಕೈಯ್ಯ ಹದ ಮೊಸರ ಕಡೆಯದೇ ಪ್ರೀತಿ ಬೆಣ್ಣೆ ತೇಲೀತು ಹೇಗೆ...
ಮಡಿಲ ಜೋಲಿಯಲಿ ಕೃಷ್ಣನ ತೂಗಿದ ಎಲ್ಲ ಅಮ್ಮಂದಿರಿಗೂ ಅವನ ದಿನದ ಶುಭಾಶಯವು...
           _______ 23.08.2019
↹↯↹↺↻↹↯↹

ಮರಳ ಗೂಡು, ಸಾಗರದಲೆ ಮತ್ತು ಕೃಷ್ಣ ಸಖ್ಯ:

ಆಪ್ತತೆಯ ಅಪ್ಪುಗೆ ಎಂಬೋ ಆತ್ಮದ ವೈಭವದ ಕಿಡಿಗೆ ಗಂಟಲಲಿ ಗಂಟು ಬಿದ್ದ ಉಸಿರು ಕರಗಿ ಕಣ್ಣಿಂದ ಇಳಿದು ಹೋಗಲಿ...
#ನವಿಲ್ಗರಿ...

ಆಡಿ ಸುಖವಿಲ್ಲದ ಫಾಲ್ತು ಫಾಲ್ತು ಮಾತುಗಳೇ ತುಂಬಿರೋ ಈ ಎದೆಯಲ್ಲಿ ನಿನ್ನದಿಷ್ಟು ನಾದದ ಮೌನವ ತುಂಬಿಕೊಡಬಾರದೇ...
#ಮುರಳೀ...

ಎದೆ ಬಾಗಿಲನು ಸಣ್ಣಗೆ ತಟ್ಟುವಾಗ ನೀನು - ಸತ್ಯದ ನೋವೂ, ಸುಳ್ಳಿನ ಸುಖವೂ ಜಿದ್ದಿಗೆ ಬೀಳುತ್ತವೆ - ನಾನು ಆಯ್ದುಕೊಳ್ಳುವ ಗೊಂದಲದಲಿ ಹೈರಾಣಾಗುತ್ತೇನೆ...
#ಪಾಂಚಜನ್ಯ...
↹↯↹↺↻↹↯↹

ಕರಿಯನ ನಿದ್ದೆಯಲಿ ರಾಧೆ ಕೊಳಲ ಸಿಂಗರಿಸುತಾಳೆ...
ರಾಧೆಯುಸಿರಲಿ ಕೃಷ್ಣ ಬೆರಳಾಡಿ ಮಿಡಿವಾಗ ಕೊಳಲಿಂದ ಪ್ರೇಮ ನಾದ...
ಯಮುನೆಯಲಿ ಮಿಂದ ತಂಪು ತಿಳಿ ಗಾಳಿಯಲಿ, ಕಡಗೋಲಿಗಂಟಿದ ಬೆಣ್ಣೆಯಲ್ಲಿ, ಕಪಿಲೆ ಕರುವಿನ ಜೊಲ್ಲಿನಲ್ಲಿ ರಾಧೆಯ ಗೊಲ್ಲ ನುಡಿಯುತ್ತಾನೆ - "ಕಾಯುವ" ಸುಖ ಮತ್ತು ದುಃಖಕ್ಕೆ ರಾಧೆ ಮೌನದ ಗೆಜ್ಜೆ ತೊಡಿಸುತ್ತಾಳೆ...
ಅಲ್ಲಿ ಮಥುರೆಯ ಸಂಜೆಗಳಲ್ಲಿ ಶರಧಿಗೆ ವಿಪರೀತ ಉಬ್ಬರ, ಮನಸು ಬಿಕ್ಕಿದ್ದನ್ನು ಶ್ಯಾಮ ಕಣ್ಣಿಗೂ ಅರುಹಲಾರ, ಬೆಳದಿಂಗಳು ಕಣ್ಣನಿರಿಯುವಾಗ ಬೆರಳು ಬರೆದರೆ ಅವಳ ಹೆಸರನು ಅಲೆಗಳು ಆ ಗುರುತನುಳಿಸುವುದಿಲ್ಲ - ಎದೆಯ ಗಾಯವ ಮರೆಯಲು ಕೃಷ್ಣ ನಾಭಿಯಿಂದ ಉಸಿರನೆಳೆದು ಪಾಂಚಜನ್ಯವನೂದುತ್ತಾನೆ...
ಹಾದಿ ಕವಲಿನ ಕೊನೇಯ ನೋಟದಲಿ ಬಂಧಿಯಾದ ಖಾಲಿ ಬೆನ್ನು ಆಡಿದ ಮಾತುಗಳಿಗೆಲ್ಲ ಭಾಷ್ಯ ಬರೆಯಬಹುದೇ...
#ವಿರಾಗ...
↹↯↹↺↻↹↯↹

"ನನ್ನ ಪಡೆವುದೆಂದರೆ ಅನಾಮತ್ತು ನಿನ್ನ ಕಳಕೊಳ್ಳುವುದಲ್ಲವೇ ಹುಚ್ಚೀ; ನಿನ್ನಲ್ಲಿ ನೀನಾಗಿ ಬೆಳೆಯುತ್ತಾ ನನ್ನಲ್ಲಿ ಬೆರೆವ ಸ್ವಾತಂತ್ರ್ಯ, ನನ್ನಾಚೆಯೂ ಉಳಿವ ನಿನ್ನ ನಗೆಯ ಸೌಂದರ್ಯ ಪ್ರೇಮ" ಅಂದವನು ನನ್ನ ಮಾಧವ...
ರಣ ಹಕ್ಕಿನಿಂದೆಂಬಂತೆ ಓಡೋಡಿ ಕೂಡುವ ಸಾಗರ ಸಂಗಮವಷ್ಟೇ ಅಲ್ಲ ಪ್ರೇಮ; ಹರಿವ ಹಾದಿಯ ಹಸಿರು, ಜೀವ ಜಂತುಗಳ ಉಸಿರೂ ನಿಜ ಪ್ರೇಮ ಎಂಬುದನು ತಬ್ಬಿ ತಿಳಿಹೇಳಿದವನು, ಮೋಡದ ಬಸಿರಿಗೆ ನವಿಲಾಗುವುದ ಕಲಿಸಿದವನು...
ಯಮುನೆ ಮಡುವಿಗೆ ಬಿದ್ದ ಚಂದಿರ ತಿಳಿ ಅಲೆಯಲ್ಲಿ ಕಲಸಿ ಹೋಗುವುದನು ಕಳೆದೋದ ಮನಸಲ್ಲಿ ಕಣ್ಣಿಟ್ಟು ನೋಡುವಾಗ ಆತುಕೊಂಡ ಬಿದಿರ ಮೆಳೆಯ ಚಿಗುರು ಮುಂಗುರುಳ ಸವರುವಲ್ಲಿ ಕೊಳಲಾಗಿ ನಗುವ ನನ್ನ ಶ್ಯಾಮ - ಸುಳಿ ಗಾಳಿ ಹೊರಳಿಗೆ ಹಗಲ ಸುಸ್ತು ಒಣಗುವಲ್ಲಿ, ಗಂಗೆ ಕರು ನೊಸಲ ನಡುವಿಗುಜ್ಜುವಲ್ಲಿ ಅವನ ಧ್ಯಾನ...
ಅವನೆಂದರೆ - ಸೆರಗ ಚುಂಗಿಗಂಟಿದ ನನ್ನದೇ ಹಣೆಯ ಬೆವರು...
ಅದಕೆಂದೇ -
"ಯಮುನೆಯಷ್ಟು ಹತ್ತಿರ ಹಾಗೂ ಮಥುರೆಯಷ್ಟೇ ದೂರ ನನ್ನ ಪ್ರೇಮ..."
#ರಾಧೆ...
↹↯↹↺↻↹↯↹

ಕಂಗಳು ಚೆಲುವನು ಓದಲು ಕಲಿತಾಗಿನಿಂದ ಎದೆ ಪಟ್ಟಿಯ ಕೊನೇ ಪುಟದಲ್ಲಿ ಗೀಚಿ ಗೀಚಿಟ್ಟ ಕಿಶೋರಿಯರ ಹೆಸರುಗಳನೆಲ್ಲ ಸೇರಿಸಿ ಕವನಸಂಕಲನವೊಂದನು ಮಾಡಬಹುದಾ ಅಂತ...
#ಸಂಸ್ಕಾರ...
↹↯↹↺↻↹↯↹

ನಗೆಯ ಮುಗುಳೊಂದು ಹೆಗಲೇರಿ ನೆತ್ತಿ ಕಾಯಲಿ - ಒಡೆದ ಹೃದಯ ಗೂಡಿನ ಬಿರುಕಿನಿಂದಲೂ ಪ್ರೀತಿ ಸೊನೆಯೇ ಜಿನುಗಲಿ - ಸಣ್ಣದೊಂದು ಹಸಿರು ಹರಿವು ಬದುಕಿನೆಡೆಗೆ...
'ಹಿಗ್ಗಿದ' ಹೃದಯದ ಪುಟಾಣಿ ಆಶಯ - ಜೀವಂತ ನಗೆ ಬೆಳಕಿನ ಪ್ರಾರ್ಥನೆ...
#ಹೃದಯದ_ದಿನವಂತೆ...
           ___ 29.09.2019
↹↯↹↺↻↹↯↹

ಅವಳ ಹಾದಿಯ ತುಂಬ ಬೆಳಕು ಆಳಾಗಲಿ - ಮಳೆಯು ಹಾಲೂಡಲಿ - ಹಸಿರು ನೆಳಲೀಯಲಿ...
ಎಲ್ಲ ತುಳಿಯುವ ಓಣಿಯಲ್ಲೂ ನಗೆಯ ಹೂವ ಬಿತ್ತಿ ಬೆಳೆಯುವ ಅವಳ ಹಾದಿಯ ತುಂಬಾ ಅವಳೇ ಅವಳಾಗಲಿ...
#ಪ್ರೀತಿ_ಪ್ರಾರ್ಥನೆ...
↹↯↹↺↻↹↯↹

ಕರಿ ಮೋಡ ಕರಗಿ ತಿಳಿ ನೀಲ ಹರಿವಾಗಿ ನೆಲವ ತೊಳೆದಂತ ಶುದ್ಧ ನಿರಾಳ ನಿರಾಳ ಹಗಲಂತೆ ನಾನೇ ಖುದ್ದು ಒಡನಾಡಿ, ವ್ಯಕ್ತವಾಗಿಸಿ, ಕೊಟ್ಟು, ಕೇಳಿ ಪಡೆಯದೇ ಹೋದರೆ ಯಾವುದೂ ನಂದ್‌ನಂದು ಅನ್ನಿಸುವುದಿಲ್ಲ - ನಂದೂ ಅನ್ನೋ ಮುಕ್ತ ಆಪ್ತತೆ 'ನಾ ಹೇಳದೇ ನೀನೆನ್ನ(ಲ್ಲ) ಅರಿಯಬೇಕೆಂಬೋ ಖೊಟ್ಟಿ ಕನಸುಗಳ ಜಾತ್ರೆಯಲಿ ಮೌನದ ಬೆನ್ನಿಗಂಟಿ ಕಳೆದು ಹೋದರೆ' ಜೊತೆಗೂಡಿ ಬಹು ದೂರ ಹೆಗಲಿಗಾತು ನಡೆವುದು ಹ್ಯಾಂಗೆ, ನಗುವುದು ಹ್ಯಾಂಗೆ...!?
#ಪ್ರೀತಿ_ನೇಹ_ನೆಂಟಸ್ತಿಕೆ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

No comments:

Post a Comment