Friday, March 13, 2020

ಗೊಂಚಲು - ಮುನ್ನೂರಿಪ್ಪತ್ತೇಳು.....

ನೀಲಿ ನೀಲಿ ಕನಸು..... 

ಬಿಸಿ ಉಸಿರಿನೊಡಗೂಡಿ ತಂಪು ಬೆಳದಿಂಗಳೂ ಬರಿಮೈ ಬೆಂಕಿಯಲಿ ಹಾಯುವ ನಟ್ಟಿರುಳ ಸೊಬಗು - ಬಿಸಿಲ ಮಚ್ಚಿನ ಏಕಾಂತದಲಿ ಕಾಂತಾಕಾಂತೆ ಉತ್ಕಂಠ ಪ್ರಣಯ ಸಂಹಿತೆ...
ಮೈಯ್ಯ ಯಾವ ತಿರುವಲ್ಲೂ ಚೂರೇ ಚೂರೂ ಹಸಿವು ಬಾಕಿ ಉಳಿಯದ ಹಾಗೆ ಅಡಿ ಮುಡಿ ಹಿಡಿ ಹಿಡಿ ಆವರಿಸಿ ಜೀವತಂತುಗಳ ಮೀಟಿ ಚೆಲುವನುಂಡು ಸುಖವನುಣಿಸಿ ನುಲಿಸಿ ನಲಿವ ಕಾಂಕ್ಷೆಯ ಕುದಿಯಲ್ಲಿ ಕರಗಿ ವಿವಶವಾಗುವ ಜೀವಭಾವೋತ್ಸವ ರಾಗ ಸಂಯೋಗ...
ಸುಖದ ಸವಿ ಸುಸ್ತಿನಲಿ ತೂಗುವ ಮತ್ತ ಮುಂಜಾವಿನ ಕಣ್ಣ ಸರಸಿಯಲಿ ತೇಲುವ ಪ್ರೇಮ ದೀಪ...
#ನೀಲಿ_ನೀಲಿ_ಕನಸಿನಂತಃಪುರದ_ಬೆಚ್ಚಾನೆ_ಬೆಳಕು...
⇍↹⇏

ಹೆಸರಿಡದ ಭಾವ ದಿವ್ಯವೇ - ಕುದಿ ಉಸಿರ ಕಾವ್ಯವೇ...
ಚಕೋರ ಕಣ್ಣಿನಾಳದ ಪಿಳಿಪಿಳಿ ಒಗಟು - ಆಸೆ ಪಾದದ ಬೆರಳ ಸಂಧಿಯ ಹಸಿಮಣ್ಣ ಜಿಗುಟು...
ಹೆಡ್ಡ ನಾನು - ಅರಿವಾಗದೆನಗೆ ಅಡ್ಡಡ್ಡ ಮಾತು...
ನೇರಾನೆ ಹೇಳು - ಒಳಗಿಳಿವಂಗೆ ಕಣ್ಣಲ್ಲಿ ಕೂತು...
ನನಗಲ್ಲ ಎಂಬಂತೆ ಹೇಳಿ - ಹೇಳಿಯೂ ಹೇಳದಂತ ಚಾಳಿ...
ಕದಡಿದ್ದು ಸಾಕು ಈ ಭಾವದೊಡಲ ಕೇಳಿ - ನಿನ್ನೀ ವರಸೆಯ ಧಾಳಿ...
#ಎದೆಗುದಿ...
⇍↹⇏

ಬೇಲಿಸಾಲಿನ ಹೂವಂತೆ ಅರಳೋ ಕಾಲ್ಹಾದಿ ಬದಿಯ ಅಜ್ಞಾತ ನಗುವೊಂದು ನನ್ನ ಇಡೀ ದಿನದ ನಲಿವು - ಕಣ್ಣ ಕಾಣ್ಕೆಯ ಅಯಾಚಿತ ನಗುವೊಂದರ ಪರಿಚಯವೇ ಜಗದ ಜಾಡಿನ ಗೆಲುವು...
ನಾಕಾಣಿ ನಗು ಬೆಸೆದು ಬಿಗಿದ ಹಸ್ತರೇಖೆಗಳಲೀಗ ನೇಹಾಮೃತ ಅಭಯದ ಬಲವು...
ಚಾಚಿದ್ಯಾರೋ... ಹಿಡಿದದ್ಯಾರೋ... ಬೆಸೆದದ್ದು ನೇಹದ ನಂಟು... ಅದಷ್ಟೇ ಸತ್ಯ...
ಅಲ್ಲಿಂದಾಚೆ ವಿನಾಕಾರಣದ ಅಕ್ಕರೆಯಲ್ಲಿ ತೇಲಿ ನಲಿವ ಬದುಕಿನ ಹಾಯಿ..‌.
ಈ ಫಕೀರನ ಊಟದೆಲೆ ತುಂಬಾ ಮಂದಹಾಸದ ಹಾಲುಬಾಯಿ...
ಎಷ್ಟು ಹಗೂರ ಈಗ ಹೆಗಲು ಹೆಗಲನಾತು ಹಾಯುವ ಈ ಬೆಳಕ ಹಾದಿ...
#ಬಡವನ_ಸಿರಿಬೆಡಗು...
⇍↹⇏

ಒದ್ದೆ ಕೂದಲು ಕೂಡಾ ಒದ್ದೆ ತುಟಿಯಷ್ಟೇ ಕೆಣಕಿ ಕಾಡುತ್ತೆ ಅಂತ ಹಸಿ ಮೈಯ್ಯಲ್ಲಿ ನಿನ್ನ ಕಾಣೋ ತಂಕಾ ಖಬರೇ ಇರಲಿಲ್ಲ...
ಕಿವಿಯ ಮರೆಯಿಂದ ಮೆಲ್ಲನಿಳಿವ ಹಬೆಯ ಹನಿ - ಕಣ್ಣಾದ ಉಸಿರು ಉರಿದು ಮಹಾಪ್ರಾಣ ದೀಪ...
ನೆಚ್ಚಿನಾ ಹರೆಯದ ಪ್ರಣಯ ಪೇಯದ ಖಾಸಾಖಾಸಾ ನಶೆಗೆ ಆಸೆ ಕರುಳು ಭಗ್ಗೆಂದು ಕಣ್ಣ ಮೊನೆಯೂ ತೇವ ತೇವ...
ಹಸಿಯೆಂದರೆ ಜೀವಂತಿಕೆ - ಚಿಗುರೆಲೆಯಂಥ ಒದ್ದೊದ್ದೆ ಭಾವ - ನಿಸರ್ಗದ ಸಂಸರ್ಗ ನಾದ ಪರವಶತೆಯಲಿ ಮೈನೆರೆದು ಹಿತವೇರಿ ಮಿಡುಕುವಾ ಜೀವ...
#ಹೊಂಬಾಳೆ...
⇍↹⇏

ಎಲುಬು ಸೀಳುವ ಛಳಿಯೂ ಬೆಚ್ಚಿ ಕಣ್ಮುಚ್ಚೋ ಹಾಂಗೆ ಉರಿವ ನಿನ್ನ ಹೊಕ್ಕುಳ ದೀಪದುರಿ.‌‌..
ನಖಶಿಖಾಂತ ರತಿ ಮನ್ಮಥ ನರ್ತನ - ಉಸಿರ ಉನ್ಮತ್ತ ಗುಂಜನ...
ರತಿ ರಂಗಿಗೆ ಅರೆಬೆತ್ತಲೆ ಬೆಳಕೇ ದಿವ್ಯಾಭರಣ...
#ಜೀವಂತ_ಮದನಿಕೆ...
⇍↹⇏

ಕ್ಷಣದಲ್ಲಿ ಒಂದು ಭಾಗ ನೀ ಕಣ್ಣಲ್ಲಿ ಕಣ್ಣ ಬೆರೆಸಿ ಏನೋ ಮಧುರವಾದುದನು ಕದ್ದು ಸಿಕ್ಕಿಬಿದ್ದವಳಂತೆ ತುಟಿಯಂಚ ಕಚ್ಚಿಕೊಳ್ಳುವಾಗ ನನ್ನ ತುಟಿಗಳಲಿ ತುಂಬಿಬರೋ ದುಂಬಿ ಹಸಿವಿನ ಜೀವ ತಂತು...
ಕಣ್ಮುಚ್ಚಿ ಸವಿದರೆ ಆಸೆ ಕನಸುಗಳ ಲಕ್ಷ ದೀಪೋತ್ಸವ - ನಾಭಿ ಕುಂಡದಲಿ ಕಮಲ ಅರಳೋ ಪುಳಕ...
#ಮಾಗಿಯ_ಅರೆಬಿರಿದ_ನಡುಹಗಲು...
⇍↹⇏

ಇವಳೇ -
ನೀ ಸನಿಹ ಸುಳಿವಾಗ ಸೋಕೋ ಅಂಗರಾಗದ ಬೆಚ್ಚಾನೆ ಬಿಸಿ ಗಾಳಿಯಲಿ ತೋಯೋ ನನ್ನೆದೆಯ ಬಿಸಿ ಬಿಸಿ ಕನಸುಗಳು ಮೀಸೆಯಡಿಯ ಕಳ್ಳ ನಗುವಲ್ಲಿ ನಿನ್ನ ಸೇರಿದರೆ ಬಿರಿದ ಕುಪ್ಪಸಗೂಡಿನ ಕತ್ತಲ ಕಮರಿಯಲಿ ಕದ್ದು ಕಾಪಿಟ್ಟುಕೋ...
ಮಂದಿ ನೋಡದ ಊರಲ್ಲಿ ಮುಂದಿನ ಮಾತಾಡುವ - ಹಿತ್ಲ ಬಾಗಿಲಲಿ ಕತ್ಲು ಕಂತುವ ಮುನ್ನ ಮುತ್ತಾಗಿ ಮತ್ತೇರುವ...
ಪ್ರಣಯ ನೆಬ್ಬಿದ ತೋಳ ಬಳ್ಳಿಯಲಿ ಕದ್ದ ರೋಮಾಂಚದ ನವಿರು ಘಮವೇಳಲಿ...
#ಮಧು_ಮಧುರ_ಕಳ್ಳತನ...
⇍↹⇏

ನಿನ ಕಣ್ಣ ಮೊನೆಯಲ್ಲಿನ ಗುಂಜನವ ಆಲಿಸಿದೆ - ಸಮಾಹ ಸಂಗೀತ ಒಳಗೂ ಹೊರಗೂ...
#ಕವಳ...
⇍↹⇏

ಕಣ್ಣು ತೂಗುವಾಗಲೊಮ್ಮೆ ನಿನ್ನ ನೋಡಿದೆ - ಎವೆ ಮುಚ್ಚದ ಎಚ್ಚರಕೀಗ ನೀ ತುಳಿದಾಡಿದ ಹಾದಿಯ ಧೂಳಾಗುವ ಖಯಾಲಿ ಮತ್ತು ಸಂಕಟ...
#ಇವಳೇ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

No comments:

Post a Comment