Thursday, January 14, 2021

ಗೊಂಚಲು - ಮುನ್ನೂರರ‍್ವತ್ತು.....

ಭಾವಾನುಭಾವದ ನಿಲುವಿನ ಸೋಜಿಗ.....

ಬಾಲ್ಯಕ್ಕೆ ಕತ್ತಲ ಭಯವಾಗಿ ಕಾಡಿದ ಅಮ್ಮ, ಅಜ್ಜಿಯರ ಮಾಯದ ಕಥೆಗಳ "ಕಾಣದೂರಿಗೆ ಸೆಳೆದೊಯ್ಯುವ ಬಿಳಿ ಸೀರೆಯ ಮೋಹಿನಿಯರು" ಹರೆಯದ ಹೊಕ್ಕುಳಲ್ಲಿ ಬಿಸಿ ರಕ್ತದ ಬೆರಗಾಗಿ ಕನಲುವಲ್ಲಿ ನಾನೆಂಬ ಕಳ್ಳ ಪೋಲಿಯೊಬ್ಬ ಹುಟ್ಟಿದ... 😉
#ನಿಶಾಚರಿ_ಮನಸಿನ_ನೀಲಿ_ನೀಲಿ_ನಶೆ...
⇡↺⇗⇖↻⇡

ನಿನ್ನೆಡೆ(ದೆ)ಗೇ ಹರಿಯುತಿದೆ ಈ ಜೀವತೊರೆ -
ತುಟಿಗಂಟಿದ ಆತ್ಮದೆಂಜಲನು ಒರೆಸಿಕೊಂಬುದಾದರೂ ಹೇಗೇ ಸಖೀ...
ನಾನು ಮೋಹದಂಬಲಿ ಕುಡಿದ ಅಮರ ಸುಖಿ...
ನಿನ್ನೊಡನಾಡಿದ ಸೃಷ್ಟಿಶೀಲ ಇರುಳು ಹನಿದ ಪುಣ್ಯಕಾಲದ ಬೆವರನು ತೊಡೆದುಕೊಂಡರೆ ಮಹಾಪಾಪ...
ಪೋಲಿಯೊಬ್ಬನ ನಾಳೆಗಳ ನವಿರು ನಶೆಗೆ ಮರೆವು ಉಗ್ರ ಶಾಪ...
ನೆನಪಲ್ಲಾದರೂ ಕೂಡಿಡಬೇಡವೇನೇ ಹೂವು ತುಟಿಕಚ್ಚಿ ಕಣ್ಣಲ್ಲಿ ಕರೆ ಕೊಡುವ, ತುಂಬಿ ತೋಳ್ಬಳಸಿ ಹೂವೆದೆಗೆ ಮುದ್ದಿಡುವ ಮೋಹದ ರಮ್ಯ ಕಾವ್ಯ ಕಲಾ ಪಾಕವ...
ದುಂಬಿ ಕಾಲ್ತೊಳೆದಲ್ಲಿ ಪರಾಗಕ್ಕೆ ಮು(ಶ)ಕ್ತಿ - ಪ್ರಕೃತಿಮಾನ್ಯ ಮೋಹದುಂಬಳಿಯಲಿ ಪ್ರಣಯಕಂಟಿಸಿದ ಪಾಪವೆಲ್ಲ ಮುಕ್ತ ಮುಕ್ತ - ನಾನೋ ಮಾಧುರ್ಯದ ಕಣಿವೆಯಲಿ ಕಣ್ಮುಚ್ಚಿ ಹಾದಿ ತಪ್ಪಿದ ಜೀವನ್ಮೋಹೀ ಪಾಪಿ ಪ್ರಣಯಿ...
#ಮಧುರ_ಪಾಪ_ಸಮಾಹಿತಂ...
⇡↺⇗⇖↻⇡

ಆ ಕಪ್ಪು ಹುಡುಗಿ -
ನನ್ನಂತರಂಗವ ನನಗೇ ಒಡೆದು ತೋರುವ ಕಡಲ ಕಣ್ಣಿನವಳು...
ದೊಡ್ಡವಳಾಗುವ ಕಂಗಾಲು ಮತ್ತು ಎದೆ ಬಿರಿಯುವ ಸಂಭ್ರಮ ಎರಡೂ ಸೇರಿ ಸೊಂಪಾದ ಹೆಣ್ತನದ ಬಿಳಲುಗಳ ಮೈಮನದಿ ತುಂಬಿಕೊಂಡವಳು...
ದಾರಿಗಡ್ಡ ನಿಂತ ತನ್ನ ಮೊದಮೊದಲ ಮೋಹಮಾಯಾ ಪಲ್ಲವದೆದುರು ನಾಚಿಕೆಯ ಸುಳಿ ಸೆಳೆದು ಕಣ್ಣ ಬಾಗಿಸಿದಳು...
ನಿನ್ನ ಮೋಹದಾರತಿಗೆ, ಮತ್ತಾss ಮತ್ತ ಹರೆಯದ ಪ್ರೀತಿಗೆ ಸೋತು ವರ ಕೇಳಲು ಬಂದ ಬಲು ಬೆರಕಿ ಪೋಲಿ ಹೈದ ನಾನೂ ಅಂತಂದು ಕೈಚಾಚಿದೆ...
ನಿನ್ನ ತೋಳ್ಬಲದಲಿ ಉಸಿರು ಸೊಕ್ಕಿಳಿಯುವ ಸುಖಕೆ ತಲೆಕೊಡುವ ಈ ಹುಂಬನ ಹಂಬಲದಿ ಆವರಿಸು ಅಂದು ಮಂಡಿಯೂರಿದೆ...
ತುಟಿಯಂಚಿನ ತುಂಟು ನಗುವಿಗಿಷ್ಟು ಕಳ್ಳ ಆಸೆಯ ಘಮ ಬೆರೆಸಿ ಛಳಿಯ ಸೀಮೆಯಲಿ ಪ್ರಣಯ ಪುಷ್ಪ ಮಾರಲು ನಿಂತ ಹುಡುಗ ಬಲು ಉದಾರಿ ಬಿಡಿ - ರತಿಯ ತೋಳಲ್ಲಿ ವಿಲಾಸೀ ಮದನನೂ ವಿಧೇಯ ವಿಹಾರಿ ನೋಡಿ...
ಅವಳ ಕಣ್ಣ ಮಡುವಲ್ಲಿ ಕಣ್ಣ ಮಡಗಿ ಓದಿಕೊಂಡು ಅಪ್ಪಿಕೊಂಡ ಎದೆಯ ಒದ್ದೆ ಭಾವಗಳಿಗೆ ಭಾಷ್ಯ ಬರೆಯಲು ಹೆಣಗುವಾಗ ಒದ್ದು ಬರುವ ಮುದ್ದು ಸಮ್ಮೋದದಲ್ಲಿ ಬದುಕು ಎಂಥಾ ಚಂದ ಗೊತ್ತೇ...
#ನಾನೋ_ಅಖಂಡವಾಗಿ_ಅವಳ_ಮೋಹಿಪ_ಮಹಾ_ಮಧುರ_ಚಟಕ್ಕೆ_ಬಿದ್ದವನು...
⇡↺⇗⇖↻⇡

ಅರಳಿ ಮರಳಿ ಅರಳಿ ಸುಟ್ಟು ಹೋಗುವ ಸುಖಕ್ಕೆ ಕಾಯಾ ವಾಚಾ ಮನಸಾ ಒಪ್ಪಿಸಿಕೊಂಡವನು ನಾನು - ಅವಳೆಂಬ ಬಂಗಾರ ಬೆಂಕಿಗೆ ರೆಕ್ಕೆ ಒಡ್ಡಿ...
#ಪೋಲಿ_ಅಂದಿತು_ಜಗ...
⇡↺⇗⇖↻⇡

ಹೇ ಸುಂದ್ರಾಣೀ -
ನಿನ್ನ ಹಾದಿಯಲ್ಲಿ ನನ್ನ ನೆನಪ ಗಾಳಿ ಬೀಸಿದ ಸಿಹಿ ಸಂದೇಶಕೆ ನನ್ನೆದೆಯ ಕನಸ ಹಕ್ಕಿಗೆ ಹೊಸ ಪುಕ್ಕ ಮೂಡುತ್ತದೆ...
ಹುಚ್ಚೆದ್ದು ಕಾಯುತ್ತೇನೆ ಕಾಯದೊಡಗೂಡಿ - ನಿನ್ನ ತುಂಟು ಇಶಾರೆಗಳಲಿ ಹೆಣ್ಣಾಸೆ ಹಣ್ಣಾದ ಸಣ್ಣ ಸುಳಿವೊಂದು ಸಿಕ್ಕರೆ...
"ನನ್ನ ಕಿವಿಗಿಂಪಾಗುವಂಗೆ ನೀ ನುಡಿವ ಸುಂದರ ಸುಳ್ಳಿನಲೂ ನನ್ನ ಸೆಳೆದು ಕೊಡು(ಲ್ಲು)ವ ಮೋಹಾವೇಶದ ಮೋಹಕ ಪರವಶತೆಯ ಸೆಳಕೊಂದಿದೆ..."
ಬಿಸಿನೀರ ಹೊಂಡದಲಿ ಜೋಡಿಯಾಗಿ ಬೆತ್ತಾಲೆ ಈಸುಬಿದ್ದು ಸುಖ ಸುಸ್ತಾಗಿ ನಿನ್ನೆದೆ ಗುಂಬದ ನಡು ಮಡುವಿನ ಕಿರು ಹಾದಿಯಲಿ ವಿರಮಿಸಿದಂತ ವಿಲಾಸ ಭಾವವೊಂದು ಎನ್ನೆದೆ ಬಡಿತದಲಿ ಬಡಬಡಿಸುತ್ತದೆ ಆ ಕಳ್ಳ ಸಲ್ಲಾಪದಲಿ...
ಎದೆ ಎದೆ ನೆಲದ ನಲ್ಮೆ ಆಶಾಭಾವಗಳು ಬೆವರುವಾಗ ನೆಲದ ನೆಲೆಯ ದೂರಗಳೆಲ್ಲ ದೂರವೇ ಅಲ್ಲ ಮತ್ತು ಮಧುರ ಪಾಪದ ಹೊಳೆಯ ಮೀಸುವಾಗ ಸುಂದರ ಸುಳ್ಳೇನೂ ಹಾಳಲ್ಲ ಬಿಡು - ಬೆಳಕ ಕಡ ತಂದ ಚಂದಿರನ ಮೋಸಗಾರ ಎನ್ನಲೇನು ಹೇಳು...
ಈ ಇರುಳ ಬೆಚ್ಚಾನೆ ಹುಚ್ಚು ಕನಸಿನ ಸಾರಥಿ ಮತ್ತೀಗ ನೀನೇ ಆದರೆ ತಪ್ಪು ನಂದಲ್ಲ ನಿಂದೇನೇ ಒಪ್ಪಿಸಿಕೋ...
#ಸುಳ್ಳಾದರೂ_ಆಡುತಿರು_ಅಷ್ಟಾದರೂ_ಹಿತವುಳಿಯಲಿ...
⇡↺⇗⇖↻⇡

ಆಲಾಪದ ಕಿರು ಅಲೆಯೊಂದು ಎದೆಯಲ್ಲೇ ಅಲೆಯುತಿರುವಂತೆ ಹಾಡು ಮುಗಿದ ಮೇಲೂ...
ಉಸಿರಿನ್ನೂ ಉರಿಯುತಿದೆ ನೀನು ಹಿಂತಿರುಗದೇ ಬದುಕಿಂದ ಎದ್ದುಹೋದ ಮೇಲೂ...
#ಕೊನೆಯ_ನಿಲ್ದಾಣದಲ್ಲಿ_ದಾರಿ_ಮರೆತಂತಿದೆ...
⇡↺⇗⇖↻⇡

ನೀನು ಪಾಪದ ಜೀವಿ...
ನಾನೋ ಪಾಪಗಳನೇ ತಿಂದುಂಡು ಬೆಳೆದ ಪ್ರಾಣಿ...
ನಡುವೆ ನೇಹದ ಬೆಳೆ ಬೆಳೆದದ್ದಾದರೂ ಹೇಗೆ...!!
#ಭಾವಾನುಭಾವದ_ನಿಲುವಿನ_ಸೋಜಿಗ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

No comments:

Post a Comment