ನಿಶಾಚರಿ ಮನಸಿನ ನೀಲಿ ನೀಲಿ ನಶೆ.....
ಜೇನ್ಮಯ್ಯ ಜೀವಂತ ಪುತ್ಥಳಿಯೇ -
ಬೆಳುದಿಂಗಳ ತೂಕಕಿಟ್ಟ ನೀಲಿ ಬಯಲು - ನಿನ್ನ ಕಂಗಳ ಹೊನಲು...
ನಗೆ ಬೆಳಕಿನ ಹಸಿ ಬಣ್ಣ ನೀನು...
ನಿನ್ನೊಡಗೂಡಿದ ಏಕಾಂತ - ಉಬ್ಬೆಗಟ್ಟಿದ ಮೋಡ ಮೈಯ್ಯ ಕನಸ ಕೇಳಿ...
ನೀನಿರದ ಏಕಾಂತ - ನಿನ್ನ ಕೂಡಿಯಾಡಿದ ನೆನಪುಗಳ ಆವರ್ತನದ ಹಾವಳಿ...
ನಡುವೆ ಉರಿ ಉರಿ ವಿರಹದ ಮಹಾನದಿ...
#ನನ್ನೆದೆಯಂಗಳದಲೀಗ_ಅನುಕ್ಷಣ_ಪ್ರಣಯ_ಪೇಯ_ಕುಡಿದ_ಮಯೂರ_ನರ್ತನ...
⇖⇠⇡⇢⇗
ಕಣ್ಣ ಬಿಂಬವ ತುಂಬಿ ನಾಭಿ ತೀರ್ಥವ ಕಲಕಿದ ಸೌಂದರ್ಯ ಲಹರಿಯೇ -
ನಿನ್ನ ಕುಂಟು ನೆನಪೂ ಹಚ್ಚುವ ಉರಿ ಬಯಕೆ ಬೆಂಕಿಯಲ್ಲಿ ಮೈಕಾಯಿಸಿಕೊಳ್ಳುತ್ತಾ ನಿದ್ದೆಗೆಟ್ಟು ದಾಟಿದ ಛಳಿ ರಾತ್ರಿಗಳ ಲೆಕ್ಕವಿಲ್ಲ ನನ್ನಲ್ಲಿ...
#ರತಿಗಣ_ಗಣಿತ...
⇖⇠⇡⇢⇗
ಮೂರ್ತ ನಾನೂ ಅಮೂರ್ತ ನೀನೂ ನೆನಪ ಹೊಳೆಯಾಗಿ, ಕನಸ ಕನವರಿಕೆಯಾಗಿ ಎದೆಗಣ್ಣ ಸಂಧಿಸಿ ಬಯಕೆ ಬಳ್ಳಿಯ ಹಿಳ್ಳುಗಳಲಿ ವಿರಹವ ಕಡೆಯುವ ಖಾಯಂ ಮುಹೂರ್ತ - ಬೆಳದಿಂಗಳಿಗೆ ಪಾರಿಜಾತದ ಘಮಲ ಅಮಲೇರುವ ಮುಸ್ಸಂಜೆ...
#ಇರುಳ_ಬಾಗಿಲ_ನಾಭಿ_ಬೇಗೆ...
⇖⇠⇡⇢⇗
ನೀ ಚಂದ ಅಂದ್ರೆ ಮೂಗು ಮುರೀತಾರೆ...
ನಿನ್ನ ಪಕ್ಕದವಳ್ಯಾರದು ಚಂದ ಇದಾಳಲ್ಲ ಅಂದ್ರಂತೂ ಪರ್ಚೋಕೇ ಬರ್ತಾರೆ...
ಅಲ್ಲಾss ಈ ಕೂಸ್ಗೋ ಎಂಥಾ ಮಳ್ಳು ಹೇಳಿ...
#ರಸಿಕರ_ಕಥೆ_ಕಷ್ಟ_ಕಷ್ಟ...
⇖⇠⇡⇢⇗
ಕೃಷ್ಣತುಳಸಿಗಂಟಿದ ಪ್ರೇಮ ಗಂಧ - ರುಕ್ಮಾಯಿ...
#ಛಾಯಾನುವರ್ತಿ...
⇖⇠⇡⇢⇗
ಏಕಾಂತ ಸಂಗಾತವೊಂದು ಕನಸಲಿತ್ತು...
ಮತ್ತು
ನೂರು ಗದ್ದಲದ ನಡುವೆಯೇ ಆ ಸಂಜೆ ನಿನ್ನ ಸುತ್ತ ಸುಳಿವಾಗ ಎನ್ನೆದೆಯ ಹೆಪ್ಪು ಮೌನ ಒಳಗೇ ಕರಗುತಿತ್ತು...
ಅಲ್ಲಿಗೆ,
ಯಥಾರ್ಥದಲಿ ಕನಸು ಕನಸಲೇ ಇದ್ದೂ ಕನಸಿಗೊಂದು ಬೆಚ್ಚಾನೆ ಸಮಾಧಾನದ ರೆಕ್ಕೆ ಇಷ್ಟಿಷ್ಟೇ ಬಿಚ್ಚಿದಂಗಾಯ್ತು...
"ಸಿಕ್ಕಷ್ಟು ಬಾಚಿಕೋ, ಚಂದ್ರನ ತಬ್ಬಬೇಕೆನಿಸಿದರೆ ಬೆಳದಿಂಗಳ ಕುಡಿ - ಬದುಕು ಬೊಗಸೆಯಲ್ಲಿದೆ" ಎಂಬ ನಿನ್ನ ಎಂದಿನ ಮಾತಲ್ಲಿ ಈಗ ನೀನೇ ಸಿಕ್ಕಂತಿದೆ...
"ಕೈಗೆ ಸಿಗದ ದೂರ ಕನಸಿಗೆ ಯಾವ ಲೆಕ್ಕಕ್ಕೂ ಇಲ್ಲ..."
ಎಷ್ಟು ಸಣ್ಣ ಮಾತು ನೀ ನುಡಿದದ್ದು - ಎಷ್ಟು ದೊಡ್ಡ ಪರಿಣಾಮ ಸ್ನಿಗ್ಧ ನಗೆಯೊಂದು ಎನ್ನೆದೆಯ ಖಾಯಂ ಅತಿಥಿಯಾದದ್ದು...
ನಾ ತಲುಪಲಾಗದೇಹೋಗಬಹುದಾದ ನಿನ್ನ ಹೆಗಲನಾತುಕೊಳ್ಳುವ ವಾಸ್ತವದ ಆ ತೀರಕೆ ಪುಟ್ಟ ಪುಟ್ಟ ಕನಸ ಹಾಯಿಯ ತೇಲಿಸಿ ಈಗಿಲ್ಲಿನ ನನ್ನೆಲ್ಲಾ ಸಂಜೆಗಳ ಕಾಯ್ದುಕೊಳ್ಳಲು ಕಲಿತಿದ್ದೇನೆ...
ಏಕಾಂತವಿನ್ನು ಏಕಾಂಗಿಯಲ್ಲ - ಎದೆಯ ಗೂಡಿನ್ನೆಂದೂ ಖಾಲಿಯಲ್ಲ...
ಮೆಲುನಗುತಲೇ ಎನ್ನಲ್ಲಿ ನೀನೆಟ್ಟ ನೇಹದ ಮಡಿಲ ಆರ್ದ್ರ ನಗು ನಿನ್ನಲ್ಲಿ ಅಕ್ಷಯವಾಗಲಿ...
#ನೀನೆಂಬ_ಆತ್ಮಾನುಭಾವ...
⇖⇠⇡⇢⇗
ಮಳೆಯ ಕುಡಿದ ಮಣ್ಣಂಥವಳೇ -
ಮುಕ್ಕರಿಸೋ ನೆನಹುಗಳನೆಲ್ಲ ಮರೆತಂಗೆ ನಟಿಸುತ್ತ ಕಾಲವೂ ಜೀವಿಸುವುದು ಹೇಗೆ ಸಾಧ್ಯವೇ...?!
ಬೆನ್ನಿಗಂಟಿದ ನಿನ್ನ ಗೀರನು ನೀನೇ ನೇವರಿಸೋ ಸುಖದ ಕನಸನು ದೂರ ನಿಲ್ಲೆಂದು ಗದರುವುದು ಎನಿತು ಸಿಂಧುವೇ...?!
ಒಳಮನೆಯ ಕಲಕುವ ಮೌನ ಸಾಕೆನಿಸಿದಾಗೆಲ್ಲ ನಾನರಸುವ ಹೆಗಲು ನೀನಹುದು - ನನ್ನ ಹಾದಿಯ ನೆಳಲು...
ಮಾತು ಸೋತ ಹೊತ್ತಲ್ಲೂ ಕೂಗುವ ಅನಾಯಾಸದ ಹೆಸರು ನಿಂದೇ ಅಹುದು - ಒಲವಿನಾಲದ ಬಿಳಲು...
ಎದೆಯಲಿ ಇಂಗಿದ ಹೊಳೆ ನೀನು - ನಿರ್ವಚನಕೂ ಆಸರೆಯಾದ ನೀಲ ಬಾನು...
ನಿನ್ನಾ ನೆನಹು ರೆಕ್ಕೆ ಬಿಚ್ಚೆ ಹಿಡಿದ ಹಾಂಗೆ ಜೀವ ಹಕ್ಕಿ ಜಾಡು...
ಬಾನು ಭೂಮಿ ಕೂಡುವಲ್ಲಿ ಕಟ್ಟುವಾಸೆ ನನ್ನಾ ನಿನ್ನಾ ಗೂಡು...
ಕಂಡು ಹೋಗು ಹೀಗೇ ಒಮ್ಮೆ ಜೀವ ಮಧುಬನಿ - ನನ್ನೇ ನಾನು ಹಡೆದ ಹಾಗೆ ನಿನ್ನಾ ಮರುದನಿ...
#ಕನಸ_ಹರಿಗೋಲು_ಗಾಳಿರೆಕ್ಕೆ...
*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)
No comments:
Post a Comment