Tuesday, June 1, 2021

ಗೊಂಚಲು - ಮುನ್ನೂರೆಪ್ಪತ್ಮೂರು.....

ಸರ್ವಂ ಶೃಂಗಾರ‌ಮಯಂ...

ಕೃತಕ ಪ್ರಖರತೆಯ ಬೀದಿ ದೀಪದ ಬೆಳಕಿನ ಅಬ್ಬರದಲಿ ಕಲೆಸಿ ಒಣಗಿ ಕಳೆದು ಹೋದ ಬೆಳುದಿಂಗಳ ಹಾಲು...
ಕಣ್ಣೆತ್ತಿದರೆ ಚಂದಿರನ ಮುಖದ ಕಲೆಯೇ ಎದ್ದೆದ್ದು ಕಾಣುತ್ತದೆ - ಅಷ್ಟಾಗಿಯೂ ಅವ ಪಾರಿಜಾತ‌ದ ಮೈಯ್ಯರಳಿಸಿ ನನ್ನೊಳಗಿನ ವಿರಹದುರಿಗೆ ತುಪ್ಪ ಹೊಯ್ತಾನೆ...
ಬೀದಿ ಕಾಯೋ ನಾಯಿಗಳ ನಿತ್ಯದ ನಡುರಾತ್ರಿ‌ಯ ಸಾಮಾನ್ಯ ಸಾಮೂಹಿಕ ಸಭೆಯೂ ರದ್ದಾದಂತಿದೆ...
ಕತ್ತಲಲ್ಲಿ ಕಂಗಳ ಕೆರಳಿಸೋ ಮೌನವೊಂದು ಹಂಗಂಗೇ ಹೆಂಗೆಂಗೋ ಮುಂದುವರಿಯುತ್ತದೆ...
ಅಂದೆಂದೋ ನಿನ್ನ ಕಣ್ಣ ಚುಂಬಿಸಿದ ಈ ತುಟಿಗಳಿಗೆ ಅಂಟಿದ ಕಾಡಿಗೆ ಹೇಳಿದ ಕರುಳ ಕಥೆಗಳೆಲ್ಲ ನೆನಪಾಗುತ್ತವೆ...
ಮತ್ತು
ನಾನು ಆ ನಿಶ್ಯಬ್ದ‌ದ ಒಡಲೊಳಗೆಲ್ಲಿಂದಲೋ ನಿನ್ನ ಉಸಿರ ಸಂಗೀತ ಹೊಮ್ಮಿ ಬಂದೀತೆಂದು ಕಾಯುತ್ತಾ ಕಮನೀಯ ಕಳವಳದಲಿ ಇರುಳ ದಾಟಲು ಅಣಿಯಾಗಿ ಅಂಡಲೆಯುತ್ತೇನೆ...
____ ತಾರೆಯೊಂದ ಕಣ್ಣಲ್ಲೇ ಮಾತಾಡಿಸಿ ಸಣ್ಣ ಸುದ್ದಿ ಕೊಡು, ನಿನ್ನೊಳಗೂ ಹಿಂಗೇನಾ...?!
💨💨💨

ಅರೆಗಣ್ಣಲ್ಲಿ ಓದುತ್ತಾ ಓದುತ್ತಾ ಹಂಗೇನೇ ನಿದ್ದೆ ಹೋದೆ - ಎದೆಯ ಮೇಲೆ ಮಹಾಗ್ರಂಥದಂತೆ ಅವಳು ಒರಗಿದ್ದಳೂ... 😍

ಎದ್ದು ಕೂತ ಅವಳ ನಿದ್ದೆಗಣ್ಣಲಿನ್ನೂ ನಂದೇ ಬಿಸಿ ಕನಸಿನ ಹಸಿ ನೆರಳು ಹೊರಳುತಿದೆ... 😉🙈

ನಿನ್ನ ಕೋಪದೆದುರೂ ಗಟ್ಟಿಯಾಗಿ ಹೊಡ್ಪಡೆಗೆ ನಿಲ್ಲಬಲ್ಲ ನಾನು ನಿನ್ನ ಕಿರು ಲಜ್ಜೆ‌ಯ ಸುಳಿ ಮಾಟದೆದುರು ಬೇಶರತ್ತಾಗಿ ಸೋಲುತ್ತೇನೆ...

ಸೆರಗಿನ ಮೋಡ ಸರಿದು ಅವಳ ಮೆದು ಎದೆಯ ಗುಂಡು ಚಂದ್ರ ಮೆಲುವಾಗಿ ನಕ್ಕರೆ... 
ಆಹ್!! 
ಆ ಬೆಳುದಿಂಗಳ ಮೊಗೆಮೊಗೆದು ಕುಡಿವ ಕನಸಲಿ ನನ್ನ ಬೊಗಸೆಯಲಿನ ಕತ್ತಲು ಅಸುನೀಗಲಿ...
💨💨💨

ಒಂದೇ ಎರಕದಲ್ಲಿ ಎರಡು ವಿರುದ್ಧ ಅನ್ನುವಂಥಾ ಜೀವಾತ್ಮಗಳ ಸೃಷ್ಟಿಸಿ, ಎರಡರಲ್ಲೂ ಅಂತರ್ಲೀನವಾಗಿ ಹರಿವಂತೆ ಅವೆರಡೂ ಮತ್ತೆ ಒಂದಾಗುವ, ಒಂದೇ ಆಗುತ್ತಾ ಬಾಗುವ, ಸಾಗುವ ಆಕರ್ಷಣ ಭಾವೋತ್ಕರ್ಷದ ಕಿಡಿಯನ್ನು ಇಟ್ಟು ತನ್ನ ತಾನು ವಿಸ್ತರಿಸಿ ಕಾದುಕೊಳ್ಳುವ ಪ್ರಕೃತಿಯ ಲೀಲಾ ವಿನೋದವ ನೋಡಾ...
ನಾನೋ,
ಅದರದೇ ಅಂಶವಾಗಿಯೂ ಅದರ ಮೀರುತ್ತೇನೆಂದು ಹೊರಟು ಅದು ಇಟ್ಟ ಸವಿಯ ಇಟ್ಟಂತೆ ಸವಿಯಲರಿಯದ, ಮೀರಲಾಗದೇ ತೇಲುವಲ್ಲೂ ಅದರಾಳವ ಹೇಗೆಲ್ಲಾ ಹಾಡಬಹುದೋ ಹಾಗೆಲ್ಲಾ ಹಾಡಲೂ ತಿಣುಕುವ ಅತಿದಡ್ಡ ರಸಿಕ ಧೂಳ ಕಣ...
____ಸರ್ವಂ ಶೃಂಗಾರ‌ಮಯಂ...
💨💨💨

"ನನ್ನ ಹೆಗಲಾಗೆ ನಿನ್ನ ಕನಸುಗಳ ತೇರೆಳೆಯುತೇನೆ..."
ಹಾಗಂದದ್ದು ನೀನು...
ಅಯೋಮಯದಲಿ ಕಬೋಜಿಯಾಗಿ ನಿಂದವನ ಬೊಗಸೆಯಲಿ ಮೊಗೆದು ನಿನ್ನುಸಿರೇ ತಾಳಿ ನನ ಕೊರಳಿಗೆ ಅಂದು ತುಂಟ ಕಣ್ಮಿಟುಕಿಸಿ ನಗಿಸೋ ಗೆಳತೀ - 
ಪ್ರೀತಿ ಕೇಳುವವರು ಸಿಗುತಾರೆ - ಪ್ರೀತಿ ಹೇಳುವವರೂ ಸಿಕ್ಕಾರು - ನೀನು ನೀನಾಗಿ, ನಾನು ನಾನಾಗಿ, ಜೊತೆಯಾಗಿ ಸಂಭಾಳಿಸುವ ಬಾರೋ ಎದೆಗೆ ಬಿದ್ದ ಈ ಪ್ರೀತಿಯಾ ಅಂಬೋರು ಮತ್ತೆಲ್ಲಿ ಸಿಕ್ಕಾರೆಯೇ...
ಸೋತೆ ಮತ್ತು ಈ ಸೋಲು ಹಿತವಾಗಿದೆ...
ಹಿಂಗೆಲ್ಲಾ ಆಗಿ,
ಪುಟ್ಟ ಪುಟಾಣಿ ಸೂಜಿ ಮೆಣಸಿನಂತ ಒಲವಿನಂಥದ್ದೊಂದು ತನ್ನ ಎಳೇ ಉಗುರಿನಿಂದ ಎದೆ ಬಾಗಿಲ ಕೆರೆಯಿತು - ಆ ಸಂಜ್ಞೆಯನೇ ಉಸಿರಾಡಿ ಸಣ್ಣ ಕರುಳಿನಾಳದಲ್ಲಿ ಕವಿತೆಯೊಂದು ಗರ್ಭಕಟ್ಟಿ ಮಿಸುಕಾಡಿತು...
______ ಎದೆಗೂಡಲಿ ವೀಣೆ ಅನುರಣನ...
💨💨💨

ನುಡಿಸಿ ಎತ್ತಿಟ್ಟ ವೀಣೆ ದನಿಯ ಧುನಿ ನಿದ್ದೆಯಲೂ ವೈಣಿಕನ ಕಿವಿಯ ಲಾಲಿಯಾದಂತೆ...
ಅಲ್ಲೆಲ್ಲೋ ಆಡ್ತಾ ಇದ್ದ ಮಗುವೊಂದು ಸುಮ್ನೆ ಬಂದು ಎದೆ ಏರಿ ಮಲಗಿ ಗಲಬರಿಸಿ ನಿದ್ದೆ ಹೋದಂತೆ...
ಕೆಲವೊಮ್ಮೆ ಎಲ್ಲೆಲ್ಲಿಂದಲೋ ನಡೆದು ಬಂದು ಬೇಕಂತಲೇ ಎದೆಯ ಕಪಾಟಿನಲಿ ಅವಿತು ಕೂರೋ ಭಾವಗಳಿಗೆ ಹೆಸರೇ ಇರಲ್ಲ ನೋಡು...
ಚಂದ ಕಾರುಣ್ಯ ಅದು ಬದುಕಿನ‌ದು - ಬೆಚ್ಚಗೆ ಮುಚ್ಚಟೆ ಮಾಡಬೇಕಷ್ಟೇ ಅಂಥ ಅನುಭಾವವ...
ನೀನೂ ಹೀಗೇ ಅಲ್ಲವಾ - ಬಂದದ್ದು, ನೆಲೆ ನಿಂತದ್ದು... 
____ ಕವಿಯ ಪದಮಾಲೆ, ನಿನ್ನ ಕಣ್ಣ 'ವೀಣೆ...'
💨💨💨

ಹಂಗೆಲ್ಲಾ ಹನಿಗೂಡಿ ಗೊತ್ತೇ ಇಲ್ಲ ನಂಗೆ...
ಸುಖಾಸುಮ್ನೆ ಹಾಯ್ ಅಂದಷ್ಟೇ ಸರಾಗ ಬಾಯ್ ಅನ್ನಲೂಬೇಕು ಅಂತಿದ್ದೆ...
ಅದೇ ಸರೀ ಅಂತಲೂ ನಂಬಿದ್ದು ಕೂಡಾ ಹೌದು...
ಜಗದ ದಿಟ್ಟಿಯಲಂತೂ ನಾನು ತುಂಬಾನೇ ಭಾವಶೂನ್ಯ ಹುಳ...
ಬಲು ಹುಂಬ ಲೆಕ್ಕಾಚಾರಗಳ ಪ್ರಾಣಿ...
ಅದಕೆ ತಕ್ಕ ಹಾಗೆ,
ಎಂತೆಂಥವನೆಲ್ಲಾ ಬದಿಗೆ ಸರಿಸಿ ನಕ್ಕಿದ್ದೇನೆ ಗೊತ್ತಾ...
ಸಾವಿನ ಮನೆಯಲ್ಲೂ ನಗುವಿಗಾಗಿ ಮಗುವ ಹುಡುಕುವವನು...
ಮನದ ಭಾವಬೀಜಗಳ ಪ್ರಜ್ಞೆ‌ಯ ಸಾರಣಿಗೆಯಲಿ ಗಾಳಿಸಿ ಗಾಳಿಸಿ ಎಲ್ಲಾ ಜೊಳ್ಳು ಅಂತ ಸಾಧಿಸುವವನು...
ಅಂಥದ್ದರಲ್ಲಿ ಎಲ್ಲಿತ್ತು ಈ ಉಮ್ಮಳಿಕೆ...!!!
ನೋಟ ಮಸುಕು ಮಸುಕಾಗಿ ಹೊರಳೋ ಆ ತಿರುವಿನಲ್ಲಿ ನಿಂಗೆ ಟಾಟಾ ಮಾಡಿ ಬೆನ್ನಾಗಿದ್ದಷ್ಟೇ ಗೊತ್ತು ನೋಡು...
ಸದ್ದಿಲ್ಲದೇ, ಅರಿವೂ ಇಲ್ಲದೇ, ಎಂದಿನಂಗೆ ಬುದ್ಧಿ‌ಯ ಅನುಮತಿಗೂ ಕಾಯದೇ ನಿನ್ನ ಹೆಸರಿನ ಹನಿ ಕಣ್ಣಿಂದ ಕೆನ್ನೆಗಿಳಿದದ್ದು ಹೇಗೆ...!!
ಸಹಜ ಸಾಮಾನ್ಯ ಅಂದುಕೊಂಡ ಒಂದು ಬೀಳ್ಕೊಡುಗೆ ಇಷ್ಟು ಭಾರ ಹೇಗಾಯ್ತು...!!
ನೀನು ನಂಗೆ ಅಷ್ಟೊಂದು ಭಾವುಕ ಪರಿಚಯವಾ...
ಈ ಆಪ್ತತೆ ಎಲ್ಲಿಂದ, ಹೇಗೆ ಇದೆಲ್ಲಾ...?!
ನನ್ನಿಂದ ನನ್ನೇ ಯಾರೋ ಹೊತ್ತೊಯ್ದು ಈಗ ಇಲ್ಲೆಲ್ಲಾ ಅಪರಿಚಿತ ಅನ್ಸೋ ಹಾಗೆ...!!
ಕಣ್ಣ ಕಕ್ಷೆ‌ಯ ದೂರಾಭಾರಗಳೇನೂ ಕರುಳಿಗಂಟಲ್ಲ ಗೊತ್ತು...
ಜನ್ಮಾಂತರದ ಹಾಯಿ/ಯೀ ಭಾವದಲ್ಲೂ ಒಂದು ತೆಳುವಾದ ಕೂಗಳತೆಯ ಅಂತರವಾದರೂ ಇದ್ದೇ ಇದೆ ಅಂತಲೂ ಬಲ್ಲೆ...
ಆದರೂ, 
ವೈಣಿಕನೊಂದಿಗೆ ವೀಣೆ ಮುನಿದಂತ ವಿಭ್ರಾಂತ ತಳಮಳ...
ಜೀವದ್ದೋ ಭಾವದ್ದೋ ಕೊನರು ತೀವ್ರ ತಿವಿಯದೇ ಕಣ್ಣೇನೂ ಅಳ್ಳಕದಲಿ ತೇವವಾಗದಲ್ಲ...
ಅಲ್ಲಿಗೆ,
ನೀ ನನ್ನೊಳೇನನ್ನೋ ವಿಹಿತವಾದುದನು ತುಂಬಿದ್ದು ಮತ್ತು ಅಷ್ಟನ್ನೇ ನನ್ನಿಂದ ಸೆಳೆದೊಯ್ದದ್ದಂತೂ ವಿದಿತವಾಯ್ತಲ್ಲ...
ಹೇಯ್ ಕೇಳಿಲ್ಲಿ,
ನಂಗೆ ನಾ ಮತ್ತೆ ಸಿಕ್ಕಲು ನಿನ್ನ ಕರವಸ್ತ್ರವನೊಮ್ಮೆ ಎನ್ನೆದೆಗೊತ್ತಿಕೊಂಡು ನೋಡಲಾ...?
ಸಣ್ಣ ಸುಳಿವು ಸಿಗಬೇಕಿದೆಯಷ್ಟೇ...
ಈ ವಿದಾಯ ನಿನ್ನಲ್ಲೂ ಸಂಕಟವೇನಾ...??

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

No comments:

Post a Comment