Sunday, August 1, 2021

ಗೊಂಚಲು - ಮುನ್ನೂರೆಪ್ಪತ್ತೇಳು.....

ಕಳೆದದ್ದೆಲ್ಲಾ ವಸಂತವೇ.....
(ಅದಾಗಲೇ ನಲ್ವತ್ತು ಕಾಲಿಟ್ಟಿತು...)


ಅದೇ ಹಳೇ ಹಪ್ಪು ಬದುಕು ಮತ್ತು ಹೊಸ ಹಾದಿಯ ಕುರುಡು ಹುಡುಕಾಟ...
ಚಿಗುರುವಾಸೆಯ ಹುಚ್ಚುಚ್ಚು ಬಡಿತ...
ಒಂದೊಂದೇ ಒಂದೊಂದೇ ದಿನಗಳ ದೂಡುತ್ತಾ ಎಷ್ಟು ದೂರ ನಡೆದುಬಿಟ್ಟೆ...
_____ ಗಡಿ ಕಲ್ಲಿಗೆ ಸುಣ್ಣ ಬಳಿಯೋನೇನಾದ್ರೂ ಸಿಗಬೇಕು ಕೈಗೆ...

ನೂರು ಕಥೆಯ ಬರೆಯಬಹುದು - ನಾನು/ನೇ ಕಥೆಯಾದರೆ...
___ತಳ ಕತ್ತಿದ ಪಾತ್ರ...

ಸಂಭ್ರಮಿಸಲು ಈ ಬದುಕಿನಲ್ಲಿ ಏನಿದೆ...? ಬದುಕಿರುವುದಷ್ಟೇ ಉದ್ದೇಶವಾ...?! ಬದುಕಿರುವುದೇ ಸಂಭ್ರಮವಲ್ಲವಾ...?! ಎಂತೆಲ್ಲಾ ಜಿಜ್ಞಾಸೆ ಖಡಕ್ಕಾಗಿ ಕಾಡುವಾಗ ಹೀಗೆ ಹುಟ್ಟನ್ನು ಸಂಭ್ರಮಿಸುವುದಿದೆಯಲ್ಲ ಇದು ಸಾವನ್ನು ಕೆಣಕುವುದಕ್ಕೇ ಅಲ್ಲವಾ...
____ಭಂಡ ಬದುಕನ್ನು ಭಂಡತನದಿಂದಲೇ ಹಾಯಬೇಕು...

ಆ ಕ್ಷಣವ ಹಿಡಿಯಬೇಕು...
ಗಂಗೆಯ ಕುಡಿದ ಜಹ್ನುವಿನಂತೆ ಆ ಪ್ರೀತಿಯ ಹಂಗಂಗೇ ಕುಡಿಯಬೇಕು...
ಎದೆ ಕಡಲಾಗಬಹುದು...
____ ಸಣ್ಣ ಆಶೆ...

ಆ ಕ್ಷಣವ ಸಾಲ ಕೊಡು ಬೇರೆ ಬೇಕಿಲ್ಲ...
ಬದುಕನೇ ಅಡವಿಟ್ಟು‌ಕೋ ಪರವಾಗಿಲ್ಲ...
____ಪ್ರಾರ್ಥನೆ...

ಹೋಳು ಹೋಳಾಗಿ ಚದುರಿ ಬಿದ್ದ ನನ್ನೆದೆಯ ಭಾವಗಳ ಎಲ್ಲಾ ಚೂರುಗಳನು ಗುಡ್ಡೆ ಮಾಡಿ ಎದುರಿಗಿಟ್ಟು ಸಂತೆಯಲಿ ಕೂರುತ್ತೇನೆ - ಅಲ್ಲೊಬ್ಬರು ಇಲ್ಲೊಬ್ಬರು ಕೈಯ್ಯಾಡಿಸಿ ತಮ್ಮಿಷ್ಟದ ತುಂಡನ್ನೇ ಆದರೂ ಆರಿಸಿ ಎತ್ತಿ ಒಯ್ಯಬಹುದೇ ಮತ್ತು ಅಷ್ಟಾದರೂ ಅವರಲ್ಲಿ ಅವರಾಯ್ಕೆಯಂತೆ ನಾ ಪೂರ್ಣವಾಗಬಹುದೇ ಎಂದು ಕಾಯುತ್ತೇನೆ...
___ಬಣ್ಣದ ಬೇಗಡೆ ಹಚ್ಚಿದ ಒಡೆದ ಕನ್ನಡಿ ನಾನು...

ಮುಗಿದ ಅಧ್ಯಾಯವ ನೆನೆದು ಮುಂದಿನ ಪರಿಚ್ಛೇದವ ಊಹಿಸಬಾರದು ಅಂದುಕೊಂಡು ಹೊಸ ಪುಟವ ತೆರೆಯುತ್ತೇನೆ...
ಅದೇ ಹಳೆಯ ಹಪ್ಪು ವಿಷಾದ ಹೊಸ ಚಹರೆಯ ಹೆಸರಲ್ಲಿ ನಗುತ್ತದೆ...
_____ಪಠ್ಯಕ್ಕಿಲ್ಲದ ಪಾಠ ನಾನು...

ಈ ಹೊತ್ತಿಗೆ -
ಒಂದು ಮುಟಿಗೆ ಕಾಡು ಕತ್ತಲು ಅಥವಾ ಒಂದು ಧಾರೆ ಸಂಜೆ ಮಳೆ ಸಿಗಬಹುದೇ ಎದೆಗಣ್ಣ ಸೋಲಿಗೆ...
___ಗುಳೆ ಎದ್ದವನ ಗಿಳಿ ಯಾಚನೆ.‌..

ಒಳಗಣ ಅಳುವಿನ ಕತ್ತಲ ಆಳ ಅರಿಯದ ಜಗತ್ತು ನನ್ನ ನಗೆಯ ಬೆಳಕಿನಾಟದ ಮೇಲೆ ನನ್ನ ಗತಿಯ ಅಳೆಯುತ್ತೆ ಮತ್ತು ಅದನೇ ನಂಬಿ ತನ್ನ ಹಾದೀಲೇ ನನ್ನನೂ ನಡೆಸಲು ಹಟ ಹಿಡಿಯುತ್ತೆ...
ಗೆಲ್ಲಲಾಗದ, ಸೋಲಲೊಪ್ಪದ ಒಪ್ಪವರಿಯದ ಯುದ್ಧ ಇದು...
____ ಎದೆಗೆ ಹದವೆಲ್ಲಿ ಬಿದ್ದೊಡೆ ಹೂಳಿನ ಸುಳಿಯಲ್ಲಿ...

ಕೋಗಿಲೆಯ ಸಲುಹಿದರೂ ಕಾಗೆ ಕ್ಷುದ್ರ ಜೀವಿಯೇ ಜಗದ ಜಾತಕದಲ್ಲಿ - ದನಿಯಲ್ಲಿ ಇಂಪಿಲ್ಲ ನೋಡಿ...
ಸತ್ಯದ್ದಾಗಲೀ, ವಾಸ್ತವದ್ದಾಗಲೀ ಲೆಕ್ಕ ಕೇಳುವವರಾರು - ಅವರಿವರು ಕೇಳಲು ಬಯಸುವಂಥ ದನಿಯಲ್ಲೇ ನುಲಿಯಬೇಕು ನುಡಿಯ ನಾಡಿ...
____ಮಾತು ಕಲಿಯಬೇಕು ನಾನು...

ಎದೆಯ ನೆಲ ಬೀಳು ಬೀಳದಿರಲೆಂದು ಭಾವ ಬಳ್ಳಿಗಳಿಗೆ ನೀರುಣಿಸಿದರೆ ಎಂದೆಂದಿನದೋ ಗಾಯಗಳೆಲ್ಲ ಜೀವದುಂಬಿಕೊಂಡು ಅಂತರಂಗದ ಹಿಳ್ಳು ಹಿಳ್ಳಿನಲೂ ವಿಪರೀತ ನವೆ...
____ ನಗು...

ಕನಸಿಗೂ ಇರುಳಿನದೇ ಬಣ್ಣ - ಕತ್ತಲಷ್ಟೇ ತುಂಬಿದಲ್ಲಿ ಎದೆಯ ಕಣ್ಣ...
ಸಾವು ಎಷ್ಟು ಹಗೂರ - ಹೆಣವಷ್ಟೇ ಮಣ ಭಾರ...
_____ ನಿದ್ದೆ...

ನಿನ್ನೊಳಗೆ ನೀ ಅಡಗೂದ ಕಲಿಯೋ ಶ್ರೀ -
ಎದೆಗೂಡಿನುಡಿ ಖಾಲಿ ಖಾಲಿ ಬಣಗುಡುವಾಗ...
____ ತಣ್ಣಗಿನ ಸಂಜೆಗಳು...

ಬದಲಾಗಬೇಕು - ಬದಲೀ ಉಪಾಯವಿಲ್ಲ...
ನಾನೇನು ಮಾಡಲೀ ಭಡವನಯ್ಯಾ...
____ ಜಗದ ಜಾತ್ರೆಯಲ್ಲಿ ನಾನೊಬ್ಬ ಬಡ ವಿದೂಷಕ...

ನನ್ನಂಥವರಿಗೂ ವಯಸ್ಸಾಗುತ್ತೆ...
ಆದ್ರೆ ಕೆಲವರಷ್ಟೇ ಹಿರಿಯರೆನಿಸುವುದು...
____ ನಿಮ್ಮ ಮಮತೆ...

ಕಳೆದದ್ದೆಲ್ಲಾ ವಸಂತವೇ...
ಎಷ್ಟು ನಕ್ಕ ಮಾತ್ರಕ್ಕೆ ವಿದಾಯವೊಂದು ಹಿತವಾದೀತು...?!
_____ಆಯುಷ್ಯ ರೇಖೆ ಮತ್ತು ಕನಸು...

ಗಾಳಿಗೆ ರೆಕ್ಕೆ ಕಟ್ಟಿ,
ಬಾನಿಗೆ ಏಣಿ ಇಟ್ಟು,
ಎನ್ನ ಹರಹಿಗಿಂತ ಎತ್ತರದ ಕನಸ ಗೋಪುರವ ಎನಗೆಂದೇ ಕಟ್ಟಿಕೊಳುವ ಆನೆಂಬ ಬಡಪಾಯಿ ಶಿಲ್ಪಕಾರನಿಗೆ ಆಗೀಗಲಾದರೂ ಭ್ರಮೆಗಳಿಂದಾಚೆ ಕಾಲೂರಿ ಚೂರು ಪ್ರೀತಿ ಬಿತ್ತಿ ನಗೆಯ ಬೆಳೆವ ಕುಶಲಕಲೆಯ ತಂತ್ರ ಹೃದ್ಯಸ್ಥವಾದರೆ...
ನೀರ ಸಾಂಗತ್ಯ‌ದಿಂದ ಉರುಟು ಕಲ್ಲಮೇಲೂ ಹಸಿರ ಹಾವಸೆಯಾದರೂ ಬೆಳೆಯುತ್ತಲ್ಲ ಹಾಗೆ ಒಣ ಬಿರುಕಿನ ಎದೆಯಲೂ ಸ್ನೇಹ ಬಂಧಗಳ ಸನ್ನಿಧಿ ಸಲಹಿ ಇಷ್ಟು ಹಸಿ ಭಾವಗಳು ಉಸಿರಾಡಿದರೆ...
ಆದರೆ......... ಹಾಗೇನಾದರೂ ಆದರೆ.......
ಹುಟ್ಟಿದು ಸಾವಿನಲ್ಲಾದರೂ ಹಿಡಿ ಹೂವಿನ ತೂಕ ಕಂಡೀತು...
____ ಶುಭಕಾಮನೆ ಶ್ರೀ...

ಭರ್ತಿ ಮೂವತ್ತೊಂಭತ್ತು ಋತುಗಳ ಬೀದಿಯ ಧೂಳು ಮೆತ್ತಿಕೊಂಡು ನಲ್ವತ್ತನ್ನು ಹಾಯಲು ಅಣಿಯಾದ ಪಾದ...
ಮನಸಿಗಿನ್ನು ಕಳಕೊಂಡ ನಾಲ್ಕರ ತೊದಲನ್ನು ಹುಡುಕುವಾಟಕ್ಕೆ ಇನ್ನಷ್ಟು ಹುರುಪು, ಗಲಿಬಿಲಿ...
ಬೆಳಕಲ್ಲಿ ನಿಂತು ಕತ್ತಲಲ್ಲಿ ಅಡಗಿದ ಪಾತ್ರಗಳನು ಕಂಡೇ ಕಂಡೇ ಅಂದು ಒರಲುತ್ತಾ ಹುಡುಕಾಡುವ ಬಾಲಿಶ ಕಣ್ಣಾಮುಚ್ಚಾಲೆ ಆಟದಂತಿದೆ ಈ ಬದುಕು, ಬವಣೆಗಳೆಲ್ಲಾ...
_____ ಹೆಗಲು ಜಡ್ಡುಗಟ್ಟಿದಷ್ಟೂ ನೊಗದ ಭಾರ ಸಹನೀಯ..‌.

ಕಳೆದದ್ದೆಲ್ಲಾ ವಸಂತವೇ ಸರಿ - ಬೇರಿಗಿಷ್ಟು ಜೀವ ಉಳಿದುಬಿಟ್ಟರೆ ಗ್ರೀಷ್ಮಕೆ ಮುರುಟಿದ ಕಾಂಡದಲೂ ಮತ್ತೆ ಹಸಿರು ಅರಳುವುದೂ ನಿಜವೇ ತಾನೆ - ಆವರ್ತನ‌ದಲಿ ಗ್ರೀಷ್ಮ‌ದಾಚೆಯೂ ವಸಂತ ಮತ್ತೆ ತನ್ನ ಪಾಳಿಗಾಗಿ ಕಾಯುತಲಿದ್ದೇ ಇದ್ದಾನೆ ಎಂಬುದೂ ಖಚಿತವೇ ಅಲ್ಲವೇ...
ಮುಗಿದ ಮತ್ತು ಬರುವ ವಸಂತಗಳ ದಾರಿಯಲ್ಲಿ ಎಷ್ಟೆಲ್ಲಾ ಹೂ, ಮುಳ್ಳು, ಹೀಚು, ಕಾಯಿ, ಹಣ್ಣು; ಅನುಭವ, ಅನುಭಾವದ ಮಣ್ಣು...
_____ ನಾಳೆಯೆಂಬುದು ಸುಳ್ಳೆನಿಸಿದರೂ ಭರವಸೆಯೊಂದು ಇಂದಿನ ಹಾದಿಯ ಕಡ್ಮಾರು ದಾಟಲು ಗಟ್ಟಿ ಕಾಲ್ಸಂಕವೇ...

ಅಯ್ಯೋ ನಲ್ವತ್ತು ಮೆಟ್ಟಿಬಿಡ್ತು,
ಅರ್ರೇ ನಲ್ವತ್ತು ಅಷ್ಟೇ ತಾನೇ,
ಎರಡ್ರಲ್ಲಿ ಯಾವ ಭಾವವ ಅಂಟಿಕೊಳ್ಳಲಿ ಅಂತ ಬಂದಾಗ ಕೊನೆಗೆ ಅಂಟಿಕೊಂಡದ್ದು:
ವತ್ಸಾ,
ಬದುಕೂ ಹುಟ್ಟಿನಂತೆಯೇ ಹಬ್ಬವಾಗಬಹುದು...
ಈಗಿನ್ನೂ ಬರೀ ನಲ್ವತ್ತು... ಅಷ್ಟೇ...
ಶುಭದ ಕನಸೊಂದಿರಲಿ - ಅದೇ ಸೋತ ಎದೆ ಬಾಗಿಲಲಿ...
ಶುಭಾಶಯ... 💞

No comments:

Post a Comment