ದೇವನಿಗೂ ಲಾಲಿ ಹಾಡುವ ಮಡಿಲು.....
ನಿನ್ನ ನೋವಿಗೆಂದೂ ಅತ್ತಿಲ್ಲ
ನಿನ್ನ ಸಾವಿನಲ್ಲೂ ಅಳಲಿಲ್ಲ
ಅಳಲರಿಯದೇ ನಗು ಕಳೆದುಕೊಂಡವನ
ಹರಿದ ಕರುಳ ಅಳಲು ನಿನ್ನನೀಗ ತಲುಪುತ್ತಿಲ್ಲ...
ಯಾರ ಹಳಿಯಲೀ
ಎದೆಯಲಿ ದೇವರ ಹೆಣ ಮಲಗಿದಲ್ಲಿ...
____ ಸುಸ್ತು...
&&&
ಕೇಳು -
ಅಷ್ಟುದ್ದ ಹಗಲು ಒಂದೇ ಒಂದಾದರೂ ಸವಿ ನುಡಿಯ ಮಿಡಿಯಬೇಡವೇ; ಈ ಸಂಜೆ ಹಾಗೂ ಅದರಾಚೆಯ ಇರುಳು ಸಹನೀಯವೆನಿಸಲು...
ಹೇಳು -
ಎಷ್ಟು ಸುಟ್ಟು ಹದ ಮಾಡಿದರೆ ಎನ್ನೀ ಎದೆಯ ಹಾಳಿಯ...
ಅಷ್ಟು ಬೆಳೆಯಬಹುದು ಇಲ್ಲಿ ನಿನ್ನಂತೆ ನಗೆಯ ಮೊಗೆಯ...
ಕೊನೆಗೆ -
ನಿನ್ನ ಚಿತೆಯ ಉರಿ ಮೌನಕೆ ತಾಕಿ ಸುಟ್ಟ ಎನ್ನೆದೆಯ ರೆಕ್ಕೆಗಳನು ಸಂತವಿಸುವ ಮಮತೆಯ ಋಣ ಭಾರ ನಿನ್ನ ನೆನಪುಗಳದ್ದೇ...
ನೀ ನೆನಪಾಗಿ ಹೋದದ್ದು ಕರುಳ ಕೊಯ್ವಾಗ, ನಿನ್ನ ನೆನಪು ಕೊರಳ ಹಾಡಾಗಬೇಕು...
ನಿನ್ನವನು ನಾ - ನೀ ಕೊಟ್ಟ ನಗೆಯ ನಿನ್ನಂತೆ, ಮಣ್ಣಂತೆ ಪ್ರೀತಿಯಿಟ್ಟು ಕಾಯಬೇಕು...
____ ಆಯೀ...
&&&
ಮೊನ್ನೆ ಮೊನ್ನೆಯವರೆಗೂ,
ಅಮ್ಮನ ದಿನವೆಂದರೆ ಅವಳ ಕಾಲೆಳೆದು ಕೆಣಕುವ, ಅವಳ ಕಾಡಿ ಅವಳದೇ ವರಸೆಯ ಹುಸಿ ಮುನಿಸಿನ ಜೊತೆ ಆಡುವ, ಅವಳ ಭಯಗಳನ್ನು ಆಡಿಕೊಳ್ಳುವ, ನಗುತ್ತಾ ಅವಳ ನಗಿಸುವ ನನ್ನ ದಿನವಾಗಿತ್ತು...
ಇನ್ನೀಗ,
'ಅಮ್ಮನ ದಿನ' ಅನ್ನುವ ಮಾತು ಬೇರೆಯದೇ ಅರ್ಥ ಧ್ವನಿಸುತ್ತೆ ಮತ್ತು ಮನದ ಸಾಧು ಭಾವವೊಂದು ಸಣ್ಣಗೆ ತಲ್ಲಣಿಸುತ್ತೆ...
ಕವಳದಲ್ಲಿನ ಹದ ತಪ್ಪಿದ ಸುಣ್ಣ ನಾಲಿಗೆಯ ಸುಟ್ಟಂತೆ ನೆನಪೆಲ್ಲ ಏರುಪೇರಾಗಿ ಎದೆಯ ಪೇಳಿ ಮಗುಚಿ ಬೀಳತ್ತೆ...
ಮತ್ತಿದು ನಾನಿಲ್ಲದ ಅವಳ ದಿನ...
____ ಆಯೀssss
&&&
ನೋವುಗಳ ಕಣ್ತಪ್ಪಿಸಿ ನಗಲು ಕಲಿಸಿದವಳೇ -
ಈ ಬದುಕಿನ ಜಾದೂ ನಿನ್ನ ಕಣ್ಣ ನಗೆಯಲ್ಲಿದೆ...
ಈ ಬೇವರ್ಸಿ ಬದುಕನ್ನು ನಡುರಾತ್ರಿ ನಡುರಸ್ತೇಲಿ ನಿಲ್ಲಿಸಿ ನಾ ಕೇಳುವ ಎಲ್ಲ ಎಲ್ಲಾ ಅಸಡ್ಡಾಳ ಪ್ರಶ್ನೆಗಳಿಗೂ ಚಿತ್ತುಕಾಟಿಲ್ಲದ ಒಂದು ಉತ್ತರ - ನೆತ್ತಿ ಕಾಯುವ ಆ ನಿನ್ನಾ ನಗೆಯ ಕಾರುಣ್ಯದಲ್ಲಿದೆ...
ನೀನಿಲ್ಲದ ಊರಲ್ಲೂ ನನ್ನಾ ಹೆಸರಿನ ಉಸಿರಿನ್ನೂ ಇದೆ -
ಕಾರಣ,
ಕಣ್ಣಲ್ಲೇ ನೀ ಕಲಿಸಿದ ಆ ನಗುವ ಬಗೆಯ ಪಾಠ ಇನ್ನೂ ಎದೆಯಲ್ಲಿದೆ...
____ ಜೋಲಿಯಲಿ ಅಳುವ ಮಗುವ ಜಗವಾಳುವ ಅರಸುವಾಗಿಸಿ, ದೇವನಿಗೂ ಲಾಲಿ ಹಾಡುವ ಮಡಿಲೇ...
&&&
ಚಂದ ನಗಬಹುದು ಯಾವ ನೋವೂ ಕಾಣದ ಹಾಗೆ...
ಆದ್ರೆ
ಮರೆಯುವುದು ಹೇಗೇ ಎದೆಯ ನೋವು ಕಾಡದ ಹಾಗೆ...
ಮತ್ತು
ನಡೆಯುವುದು ಹೇಗೆ ಕರುಳ ನೋವು ಎಡವದ ಹಾಗೆ...
___ ಜೀವದ ನೆರಳು ತಪ್ಲಕ್ಕು, ಹಂಗೇಳಿ ಭಾವದ ಬೇರು ಸಾಯ್ತ್ಲೆ ಅಲ್ದಾ....
&&&
ಅವಳ ಬಗ್ಗೆ ನಾ ಬರೆದದ್ದಲ್ಲ,
ನಾ ಬರೆದದ್ದೆಲ್ಲದರಾಚೆ ಅವಳು ಬದುಕಿದ್ದು - ನನ್ನ ಪುಸ್ತಕ...
ನಾ ಓದಿದ್ದಲ್ಲ,
ನನ್ನ ಓದಿನ ಮಿತಿಯನ್ನು ಮೀರಿದ ಅವಳ ನಗು - ಅದು ನನ್ನ ಪುಸ್ತಕ...
ಪುಸ್ತಕದ ದಿನವಂತೆ - ಸಣ್ಣ ಅಪರಾಧೀ ಭಾವದಲ್ಲೇ ಅವಳ ನೆನೆಯುತ್ತೇನೆ, ನಮಿಸುತ್ತೇನೆ ಹಾಗೇ ಇನ್ನಷ್ಟು ಮುದ್ದಿಸುತ್ತೇನೆ...
___ ಆಯೀ ಎಂಬ ಕರುಳ ಗ್ರಂಥ...
___ 23.04.2023
&&&
ಆಯಿ -
ಎಲ್ಲಾ ಸರಿ ಇದ್ದನೋ, ಎಂತಕ್ಕೋ ನೀ ಯಾವಾಗ್ನಂಗೆ ಇದ್ದಂಗಿಲ್ಲೆ ಅಂತಿದ್ದಳು ಫೋನೆತ್ತಿದರೆ ಮಾತಿಗೂ ಮುನ್ನವೇ; ದನಿಯಾಗಿ ಹೊಮ್ಮದ ನನ್ನೆದೆಯ ಕಳ್ಮಳವೊಂದು ಅಲ್ಲೆಲ್ಲೋ ಕೂತ ಅವಳಿಗೆ ಕೇಳುತ್ತಿದ್ದುದಾದರೂ ಹೇಗೆ...!!!
ಈಗಲೂ ಕೇಳುತ್ತಿರಬಹುದಾ...?
ಫೋನಾಯಿಸಿ ಕೇಳೋಣವೆಂದರೆ ವ್ಯಾಪ್ತಿ ಪ್ರದೇಶದ ಹೊರಗಿದ್ದೇನೆ...
ನಾ ತಲೆಗೂದಲು ಕತ್ತರಿಸೋಕೆ ನಾಕು ದಿನ ತಡವಾದರೆ ಈಗ್ಲೂ ಅವಳು ಬೈದಂತೆ ಭಾಸವಾಗತ್ತೆ - ಒಂದೊಂದೇ ಬಿಳಿ ಕೂದಲನ್ನು ಹುಡುಕಿ ಹುಡುಕಿ ಕಿತ್ತು ತಾನು ಮುದಿಯಾದದ್ದನ್ನು ಮರೆಮಾಚಿ ನಗುತ್ತಿದ್ದಳು ಮಹಾ ಸೌಂದರ್ಯ ಪ್ರಜ್ಞೆಯ ಮಳ್ಳು ಹುಡುಗಿ...
ಖರ್ಚು ಮಾಡದೇ ಹುಗ್ಶಿ ಇಡ್ತಿದ್ದ ಹೊಸಾ ಹೊಸಾ ನೋಟುಗಳ ಪುಡಿಗಾಸಿನ ಗಂಟಲ್ಲಿ ಅವಳದದ್ಯಾವ ಕನಸು ಮರಿ ಹಾಕುವುದಿತ್ತೋ - ಕಾವು ಕೊಡಲು ಪುರ್ಸೊತ್ತಿಲ್ಲದವಳಂತೆ ಸುಮ್ಮನೆದ್ದು ಹೊರಟೇ ಹೋದಳು ಕೂಸುಮರಿ...!!
ಅವಳ ಮನಸನ್ನು ಅವಳ ಕರುಳು ನಿರ್ದೇಶಿಸುತ್ತದೆ/ನಿಯಂತ್ರಿಸುತ್ತದೆ...
ಹೊಕ್ಳ ಬಳ್ಳಿ ಕತ್ತರಿಸಿದ್ದು ನನ್ನ ನಾನಾಗಲು ಬಿಡಲಷ್ಟೇ...
ರುದಯದ ಚೂರೊಂದು ಅಲ್ಲೇ ಉಳಿದಿರಬಹುದಾ...?!
ನನ್ನ ಹೆತ್ತು ತನ್ನ ಮರೆತು, ನನ್ನ ಹಾರಲು ಬಿಟ್ಟು ಅವಳು ಬಾನಾದದ್ದಲ್ಲವಾ ಅವಳ ಮಮತೆ ಅಂದರೆ...
____ ನೆನಪಲ್ಲ ಅವಳು ನಿರಂತರ ನೆರಳು - ಉಸಿರ ನಾವೆಗೆ ಕಟ್ಟಿದ ಹಾಯಿ ಅವಳು...
&&&
ಕೇಳ್ತಿದ್ದಾ -
ಇಬ್ಬರೂ ಮಾಡಿದ ದಿನದಿನದ ಜಗಳ (ಕಾಳಜಿ ವ್ಯಕ್ತವಾದದ್ದೇ ಹಾಗಲ್ಲವಾ),
ನಿನ್ನ ದೇವರ ಶಪಿಸಿ ನೀ ಹಾಕಿದ ಕಣ್ಣೀರು (ನನ್ನ ನದರಿನಾಚೆ ನೀ ಹಗುರಾದ ಹಾದಿಯಲ್ಲವಾ),
ನಿನ್ನಿಂದ ಬೈಸಿಕೊಳ್ಳುತ್ತಿದ್ದ ನನ್ನ ಅದದೇ ತಪ್ಪುಗಳು (ಹೊತ್ಹೊತ್ತಿಂಗೆ ಸರೀ ಊಟ ಮಾಡು, ಮೊಬೈಲ್ ನೋಡಿದ್ಸಾಕು ಮನ್ಕ್ಯಾ),
ನಿನ್ನ ಮುದಿ ಮುಡಿಗಂಟು ಬಿಚ್ಚಿ ಓಡುತ್ತಿದ್ದ ನಾನು ಮತ್ತು ಬಡ್ದೇಬಿಡ್ತೆ ಇಂದು ನಿನ್ನ ಅಂತ ಅಟ್ಟಿಸ್ಕ್ಯಂಡು ಬರ್ತಿದ್ದ ನೀನು (ಸ್ವರ್ಗದಲ್ಲೂ ನಗಲು ನಿನಗಿರುವ ನನ್ನೊಡನೆಯ ಏಕೈಕ ನೆನಪು),
ಎಮ್ಮೆ ತುಪ್ಪದ ಮೇಲಿನ ನಿನ್ನ ಪ್ರೀತಿ (ಗಂಟಲ ಬಿಸಿ ತುಪ್ಪ ನನಗೀಗ)
ಇವೇ ಇಂಥವೇ ನೆನಪುಗಳು - ಹೊತ್ತಿಲ್ಲ ಗೊತ್ತಿಲ್ಲ...
ಸಾವಿಗಂಟಿದ ಸಂಭಾಷಣೆಯಲ್ಲೇ ಬದುಕ ಪ್ರೀತಿಯ ರುಚಿ ಕಂಡುಕೊಂಡ ಎರಡು ಹುಂಬ ರುದಯಗಳ ಹಡಾಹುಡಿ ಬಿಡು ಅದೆಲ್ಲ...
'ಆಯೀ ಮಿಸ್ ಯೂ' ಅಂತಂದು ರೂಢಿಯಿಲ್ಲ, ಹಾಗಂದರೇನೆಂದು ನಿನ್ಗೆ ಅರ್ಥವೂ ಆಗಲ್ಲ - ನೆನಪಿಗೊಮ್ಮೆ ಎದೆ ಮುಟ್ಟಿಕೊಂಡು ನಗುತ್ತೇನೆ, ನಿನಗೆ ಪ್ರಿಯವಾಗಿದ್ದ ನಂಗೆ ಒಳಿತಾಗುವ ಭಾವ ಬವಣೆಗಳಲಿ ಈ ಇಂದನ್ನು ಒಪ್ಪವಾಗಿ ಇಟ್ಟುಕೊಳಲು ಹೆಣಗುತ್ತೇನೆ...
ಅಷ್ಟೇ...
ನಿನ್ನ ಕೆನ್ನೆಗೆ ಕೊಟ್ಟ ಕೊನೇಯ ಪಪ್ಪಿ - ತುಟಿಯ ಸುಟ್ಟು ಅಂಟಿಯೇ ಉಳಿದ ಸಾವಿನ ತಂಪು - ಮಸಣ ಮೌನಕ್ಕೆ ಮರಗಟ್ಟಿದ ಬದುಕು ಭಾವ...
____ ಯಮನ ರಾಜ್ಯದಲ್ಲಿ ಮರೆವಿನ ಔಷಧಿ ಇದ್ದಾ - ಅಲ್ಲಾದ್ರೂ ನಿಂಗೆ ಸುಖ ಅನಸ್ತಿದ್ದಾ...!?
&&&
"ಮೌನವ ಕಲಿಸದೇ 'ನಿಂತ' ಮಾತು ಅವಳು..."
ಮಸಣ ಕಟ್ಟೆಯ ಮೇಲೆ ಕಾಲಾಡಿಸುತ್ತಾ ಕೂತ ರೌರವ ನಿಶ್ಯಬ್ದದಂಥಾ ಖಾಲಿತನವೊಂದನು ಎದೆಯ ಪೀಠದಲಿ ಕೂರಿಸಿ ಹೊತ್ತು ತಿರುಗುತ್ತೇನೆ ದಿನ ಸಂಜೆ...
ಎದೆಯ ಭಾಷೆಗೆ ಅಲಂಕಾರಗಳೆಲ್ಲಿ...
ರುದಯದ ಭಾವ ಬೇಗುದಿಯ ವಜನು ಅರಿಯಲು ವಿದಾಯದ/ವಿಯೋಗದ ಕಣ್ಣ ಹನಿಯ ಕುಡಿಯಬೇಕು...
'ಬಿಸಿ ಉಸಿರನು ನುಂಗಿದ ಸಾವು ಎಷ್ಟು ತಣ್ಣಗಿದೆ...'
ಹನಿಯೊಡೆದ ಕಂಗಳಲಿ ನೆನಪುಗಳ ಚಿತ್ರಗಳೆಲ್ಲ ಮಸಿಯಲ್ಲಿ ಮಿಂದು ಕೂತಿವೆ; ಅಂತರಂಗದ ಉಯಿಲು ಕಂಬನಿಯ ಬಣ್ಣವಾಗಿ ಕತ್ತಲೊಂದೇ ಸತ್ಯವೇನೋ ಅಂದಂತೆ...
___ ಸಾವೂ ಪ್ರಾರ್ಥನೆಯಾಗುತ್ತದೆ...
&&&
ಜಗಳ ಮುಗಿದ್ಮೇಲೆ 'ಬೇಕೈತ್ತಾ ಇದು ನಮ್ಗೆ' ಅಂತ ಕೇಳಿದ್ದೆ ಒಂದ್ಸಲ ಆಯೀನ...
ಆಯಿ ಆಗ 'ನೋಡೂ ನೀ ಬೈದ್ರೂ ಮಗ ಬೈದದ್ದು, ಬೈಸ್ಕ್ಯಂಡ್ರೂ ಮಗಂಗೆ ಬೈದದ್ದು', ಹಂಗಾಯಿ ಇಲ್ಲಿ ಸಿಟ್ಟಿಂಗೂ, ನೋವಿಂಗೂ ಆಯುಷ್ಯ ಇಲ್ಲೆ ಅಂದಿತ್ತು...
ಕೆಲವು ಬಾಂಧವ್ಯಗಳು ಹಂಗಿದ್ರೇ ಚಂದವೇನೋ ಅನಸ್ತು, ಎಲ್ಲಾ ಔಪಚಾರಿಕತೆಗಳನ್ನು ಮೀರಿದ ಪಕ್ವ ಸಾನ್ನಿಧ್ಯ...
ಒಪ್ತೇನೆ -
ಆಗೀಗ ಮುದ್ದಾದ ಸಂವಹನಕ್ಕೆ ಮುದ್ದಾಗಿ ಥ್ಯಾಂಕೀಈಈಈ ಅಂದು ತಬ್ಬಿ, ಸ್ವಾರೀಈಈ ಸ್ಮೈಲ್ ಪೀಈಈಶ್ ಅಂದು ಗದ್ದ ಹಿಡಿದು ತುಂಟ ನಗೆಯೊಂದ ಬಿತ್ತಿಕೊಳುವುದು ಪ್ರೀತಿ ಪರಿಪಾಕದ ಮುದ್ಮುದ್ದು ಕ್ಷಣಗಳೂ ಹೌದು...
ಆದಾಗ್ಯೂ -
ಶುದ್ಧಾನುಶುದ್ಧ ಬೇಷರತ್ತಾದ ಪ್ರೀತಿಯಲ್ಲಿ (Pure Unconditional) ಈ 'ಅಗತ್ಯಕ್ಕೆ ಬಳಸಿಕೊಂಡದ್ದು ಅಥವಾ ಸದರವಾಗಿ ಕಂಡದ್ದು (Taken For Granted)' ಅನ್ನೋ ಭಾವಕ್ಕೆ ಅಂಥ ಬೆಲೆಯೇನೂ ಇರ್ತ್ಲೆ ಅನಸ್ತು ನಂಗಂತೂ...
____ ಆಯಿ ಕಲಿಸಿದ ಪ್ರೀತಿ ಪಾಠ...
*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು... :)
ಜಗುಲಿಗೆ ಇಣುಕಿದ ಚಂದಿರ; ಮನಮಂದಿರದಿ ಮೂಡಿಸುವ ಭಾವಗಳೆ ಸುಂದರ... ಕ್ಷಣ ಕ್ಷಣಕೂ ಅದಲುಬದಲಾಗುವ ನನ್ನೊಳಗಿನ ನನ್ನದೇ ಭಾವಗಳು ನನ್ನನೇ ಬೆಚ್ಚಿಬೀಳಿಸುತ್ತವೆ ಹಲವೊಮ್ಮೆ...
Thursday, June 15, 2023
ಗೊಂಚಲು - ನಾಕು ನೂರಾ ಒಂಭತ್ತು.....
Subscribe to:
Post Comments (Atom)
No comments:
Post a Comment