Thursday, June 15, 2023

ಗೊಂಚಲು - ನಾಕ್ನೂರಾ ಹನ್ನೆರಡು.....

'ಮೌನ' ಮಣ್ಣು.....

ವತ್ಸಾ -
ಆಡಿದ ಮಾತಿನ ಹಿಂದಿನ ಔಚಿತ್ಯ‌ವನ್ನು 'ಪ್ರಜ್ಞಾಪೂರ್ವಕವಾಗಿ' ಗ್ರಹಿಸದೇ ನಿರ್ಲಕ್ಷಿಸಿ ಅಥವಾ ಗ್ರಹಿಸದಿರುವಂತೆ ಮುಖ ತಿರುವಿ ನೀಡುವ ಪ್ರತಿಕ್ರಿಯೆ ಮತ್ತು ಕೇಳುವ ಪ್ರಶ್ನೆಗಳಿಗೆ ಸುಶಾಂತ ಮೌನವೇ ನಿನ್ನ ಉತ್ತರವಾಗಲಿ...
___ ಸುಸ್ತು...
&&&

ಕೇಳಿಲ್ಲಿ -
ನದಿ ಸದಾ ಧುಮ್ಮಿಕ್ತಾನೇ ಇರೋಕಾಗಲ್ಲ, ಸಮಾಧಾನದಲ್ಲಿ ಹರಿದರೂ ಅದು ನದಿಯೇ;
ಆದರೆ ಪಾತ್ರ ತುಂಬಿ ಹರಿಯುತ್ತಿರಬೇಕು ಅಷ್ಟೇ...
ಬತ್ತಿದರೆ ನದಿ ಅನ್ಸೊಲ್ಲ...
ಬದುಕು, ಜೀವ, ಭಾವ, ಬಂಧ, ಸಂಬಂಧ ಯಾವುದಾದ್ರೂ ಅಷ್ಟೇ; 
ತೀವ್ರತೆಯ ಏರಿಳಿತಗಳ ಒಪ್ಪಿದ ತುಂಬಿದ ಹರಿವಿರಬೇಕು ಚಂದ ಅನ್ಸೋಕೆ...
ವ್ಯಕ್ತಿತ್ವದ ಬಣ್ಣ ಕಾಣದ ಬರೀ ಹೆಸರು ಸುಖ ಅನ್ಸಲ್ಲ...
___ ಹೇಳ್ಕೊಳ್ಳೋಕೆ ಇದು ನನ್ನ ಹೇಳಿಕೆ...
&&&

ವತ್ಸಾ -
"ಸತ್ತ ಭಾವಗಳ ಹೂತ ನೆಲದಲ್ಲೇ ಭರವಸೆಯ ಬೀಜ ಬಿತ್ತಬೇಕು..."
ಆಗ, 
ಬಯಲ ಭಯಕ್ಕೆ ಭದ್ರತೆಯ ಭ್ರಮೆಯಲ್ಲಿ ನಾನೇ ಅಲ್ಲವಾ ಸುತ್ತ ಗೋಡೆಗಳ ಕಟ್ಟಿಕೊಂಡದ್ದು...
ಈಗ, 
ಬೆಳಕಿನ ಕಿಡಿ ಸೋಕಬೇಕೆಂದರೆ ಗೋಡೆಗಳಿಗೆ ಕಿಟಕಿ ಹಾಗೂ ಬಾಗಿಲುಗಳನೂ ನಾನೇ ಕೊರೆಯಬೇಕು...
ಆನು ಆತುಕೊಂಡ ಅಥವಾ ಎನ್ನ ಅಮರಿಕೊಂಡ ಈ ಬದುಕಿನ ಬಾಧ್ಯತೆ ಏನಿದ್ದರೂ ಎನ್ನದೇ ಅಲ್ಲವಾ - ಭಾವದ್ದಿರಲೀ, ಜೀವದ್ದಿರಲಿ...
ಅಲ್ಲಿಗೆ,
"ನಾನುಳಿಯಬೇಕೂ ಅಂದರೆ ನನ್ನ ಭರವಸೆ ನಾನೇ ಆಗಬೇಕು..."
____ ಕನಸು ಗುರಿಯಾದರೆ, ಭರವಸೆ ದಾರಿ, ಗೆಲ್ಲುವ ಪ್ರೀತಿ ಪ್ರಾರ್ಥನೆ...
&&&

'ಬದಲಾವಣೆ ಜಗದ ನಿಯಮ' ಅನ್ನೋದು ಸಾರ್ವಕಾಲಿಕ ಸತ್ಯ ಅಂತಾದಾಗ, ವರ್ತಮಾನದ ಕಣ್ಣಲ್ಲಿ ಭೂತವ ನೋಡೋದು, ಭವಿಷ್ಯವ ಕನಸುವುದು ಎಷ್ಟು ಹಾಸ್ಯಾಸ್ಪದ ಅನ್ಸಲ್ವಾ...
ಹಂಗಿದ್ದಾಗ ಈ ಘಳಿಗೆಯ ಗಾಳಿ ಗುಂಜನದಂಥಾ ಅಳು, ನಗು, ಖಾಲಿತನಗಳಿಗಷ್ಟೇ ನನ್ನ ಬಾಧ್ಯತೆ ಅಲ್ಲವಾ...
____ ಜೀವಿಸಿಬಿಡಬೇಕು ಜೀವ ಹೋಪಂಗೆ ಈ ಇಡೀ ಕ್ಷಣದ ತುಂಡು ತುಂಡು ಭಾವಗಳ ನನ್ನೊಳಗಿನ ನನ್ನನು, ನಿನ್ನೊಳಗಿನ ನನ್ನನೂ...
&&&

ನಗಬೇಕು ನಗುವಂತೆ 
ಎದುರು ನೆರೆದಿಹ ಸಂತೆ... 
ನಗಬೇಕು ಮಗುವಂತೆ
ಎದೆಯಲೇ ಅಳಿವಂತೆ ಎದೆಯ ಚಿಂತೆ...
ನಾನಳಿದು ನಗಬೇಕು
ನಾನುಳಿವ ನಗು ಬೇಕು
ನಗುವನೇ ಹಾಸಬೇಕು
ನನ್ಹೆಸರ ಅಂತೆ ಕಂತೆ...
___ ನಗುವೆಂಬ ನಲ್ಮೆ ನೆಲೆ - ಆತ್ಮದಾ ಶಕ್ತಿ ಸೆಲೆ...
&&&

'ಮೌನ' ಹೂವಿನಂತ ಕಮ್ಮನೆ ಪ್ರತಿಕ್ರಿಯೆ - ಪರಕ್ಕೂ, ವಿರೋಧಕ್ಕೂ...
'ಮೌನ' ಸಾವಿನಂತ ತಣ್ಣನೆ ಪ್ರತಿರೋಧ - ಇಹಕ್ಕೂ, ಪರಕ್ಕೂ...
____ 'ಮೌನ' ಮಣ್ಣು...
&&&

ಇಲ್ಲಿ ನಡೆದ ಹಾದಿಯ ಅಲ್ಲಿ ನಿಂತು ಕಾಣಬೇಕು...
ಇಲ್ಲಿನಾ ಗದ್ದಲಕೆ ಅಲ್ಲಿನ ಮೌನ ಮದ್ದಾಗುವುದ ತಿಳಿಯಬೇಕು...
___ ಎತ್ತರವೆಂಬೋ ಭಯ ಮತ್ತು ಒಳಗಣ್ಣಿನ ಬೆರಗು...
&&&

ಪರಿಚಿತವೋ, ಅಪರಿಚಿತವೋ ಅನವರತ ಹಾಯಲೇಬೇಕಾದ ಈ ಹಾದಿಯ ನಿತ್ಯದ ಅಂಬಲಿ - ಚಿಟಿಕೆ ಬೇವು, ಚಮಚ ಬೆಲ್ಲ ಅಥವಾ ಅದಲೀ ಬದಲೀ...
ಬೇವಿಗೆ ಮುಖ ಹಿಂಡಿ, ಬೆಲ್ಲವ ಚಪ್ಪರಿಸಿ, ಮಗು ನಗೆಯ ನಕ್ಕು ಆರದಂತೆ ಕಾಯಬೇಕು ಬದುಕ ಕಾವಲಿ...
ನಿನ್ನೆ - ಬೀಜ ಬೇರು, ಇಂದು - ಹೊಸತು ಚಿಗುರು, ನಾಳೆ - ತೊನೆಯುವ ಫಲ; ಹೊಸತೇ ಹರುಷಕೆ ಹೊಸ ಹೊಸ ಕನಸು, ನೆನಹಿನ ನೆಪ ತುಂಬಿ ಬರಲಿ...
ಹಬ್ಬ ನಗೆಯ ಮಗುವಾಗಲಿ - ಹಬ್ಬ ಆತ್ಮದಾ ನಗುವಾಗಲಿ...
___ ಯುಗಾದಿ...
----22.03=2023
&&&

ಹಿತ್ತಲ ಬಾಗಿಲ ಸೆರಗಿನ ಬೆಳಕಿನ ನದರಿನಾಚೆ ಅಯಾಚಿತವಾಗಿ ಉದುರಿದ
ನಿನ್ನ ಒಂದು ಕಣ್ಣ ಹನಿ,
ನೂರು ಭಾವಗಳು ಒಡ್ಡೊಡ್ಡಾಗಿ ಹೆಪ್ಪುಗಟ್ಟಿದ
ಒಂದು ಶೀತಲ ಕವಿತೆ...
____ ಯಾರ ಓದಿಗೂ ಸಿಗದೇ ಉ(ಅ)ಳಿದವೋ ಎಷ್ಟೆಲ್ಲಾ ಕವಿತೆಗಳು...
----21.03.2023
&&&

ಕತ್ತಲ ಕರುಳನು ಬಗೆದರೆ ಕಣ್ಣ ಹನಿಗಳ ಸಂಸಾರ ಬೆಳಕ ಬೀದಿಗೆ ಬಿದ್ದು ಊರ ನಾಲಿಗೆ ತುಂಬಾ ಅಡಾಪಡಾ ಸುದ್ದಿಗಳ ಸುಗ್ರಾಸ ಭೋಜನ...
____ ಮುಖವಾಡವ ಪ್ರೀತಿಸಲು ಇರುವ ನೂರು ಕಾರಣಗಳಲ್ಲಿ ಒಂದು...
&&&

ಬೆತ್ತಲನ್ನು ಪರಿಚಯಿಸಿದ ಬೆಳಕನ್ನು ಬಯಲಲ್ಲಿ ನಿಂತು ನಗೆಯ ಬಾಗಿನ ಕೊಟ್ಟು ಪರಿಚಯಿಸಿಕೊಳ್ಳಲು ಹೊರಟ ಅನಾಮಧೇಯ ಫಕೀರ ನಾನು...
___ ಕತ್ತಲು ನನ್ನ ಅಗದೀ ಸರಳ ಪರಿಚಯ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು... :)

1 comment: