ಸ್ಮಶಾನ ಭಸ್ಮ.....
07.02.1948 - 07.07.2022 |
ನೀನಿರಬೇಕಿತ್ತು - ನನ್ನಂತೆ ನಾ ನಡೆಯಲು ಕಿವಿ ಹಿಂಡುವ ಕಾಳಜಿ ಕಳೆದೋಗಬಾರದಿತ್ತು...
ನೀನಿರಬೇಕಿತ್ತು - ನನ್ನ ನಗೆಯ ನಂಗೆ ಎತ್ತಿ ಕೊಡುವ ಮಡಿಲಿಗೆ ಮುಪ್ಪು ಬರಲೇಬಾರದಿತ್ತು...
ನೀನಿರಬೇಕಿತ್ತು - ನಮ್ಮ ಮುಗಿಯದ ಸಲುಗೆಯ ಜಗಳ ಮುಗಿಯಲೇಬಾರದಿತ್ತು...
ನೀನಿರಬೇಕಿತ್ತು - ನನಗೆ ಅನಾಥ ಭಾವ ಕಾಡದಂತೆ ಕಾಯುವ ನಿನ್ನ ಜವಾಬ್ದಾರಿಯ ನೀ ಮರೆಯಬಾರದಿತ್ತು...
ನೀನಿರಬೇಕಿತ್ತು - ನನ್ನ ಸ್ವಾರ್ಥಗಳಿಗೆ ನಿನ್ನೆದೆಯ/ಕಣ್ಣಂಕೆಯ ಪ್ರೀತಿಯ ನಿಯಂತ್ರಣ ನಿಲ್ಲಬಾರದಿತ್ತು...
ನೀನಿರಬೇಕಿತ್ತು - ನನ್ನ ಬದುಕಿನ ಬಾಕಿಗಳೆಲ್ಲ ಚುಕ್ತಾ ಆಗುವವರೆಗಾದರೂ ಜೊತೆಗಿರುವ ಸಾವಧಾನ ನಿನಗಿರಬೇಕಿತ್ತು...
ಆದರೆ,
ಈ ಬದುಕಿಗಿರುವ ಒಂದೇ ಒಂದು ಉದ್ದೇಶವೂ ಒಂದಾಣೆ ಬೆಲೆಯಿಲ್ಲದಂತೆ ಅಳಿದುಹೋಯಿತು...
ನಿಜಕೆಂದರೆ ಆ ರಾತ್ರಿ ನನ್ನ ಸಾವಾಯಿತು...
___ ಎದೆಗಣ್ಣು ಬತ್ತಿದ ಕಾಲಕ್ಕೆ ವರುಷ ಒಂದಾಯಿತು...
ದಿನಾಂಕಗಳ ಸಾರಾಸಗಟಾಗಿ ಮರೆವ ನಾನು ಮರೆಯಲಾಗದೇ ಹೆಣಗುತಿರುವ ಈ ತೇದಿ...
ಮುಗಿಲು ಮುರಿದು ಬಿದ್ದ ಆ ರಾತ್ರಿ - ಅಳಲರಿಯದವನ ಕಣ್ಣ ತೊಳೆಯಲು ಭರ್ತಿ ಮಳೆಯಿತ್ತು...
ಮಗನೆಂದು ಕರೆವ ಕೊರಳು ವ್ಯಾಪ್ತಿ ಪ್ರದೇಶದ ಹೊರ ಹೋಗಿಯಾಯಿತು...
____ ಕರುಳ ಕಣ್ಣು ಬತ್ತಿದ ಕಾಲಕ್ಕೆ ವರುಷ ಒಂದಾಯಿತು...
ಕೆಂಡ ಹಬ್ಬಲಿಗೆ ದಂಡೆಯ ಮೋಟು ಮುಡಿಗೆ ಮುಡಿದು ಮೆಲ್ಲ ನಗುತ್ತಿದ್ದ ನಿನ್ನ ಆ ನಗೆಯ ಹಗುರ ನೆನಪಾಗುವಾಗ, ಪಟಕೆ ಸಿಂಗರಿಸುವ ತುಳಸೀ ಪತ್ರದ ಮಾಲೆಯ ಭಾರಕೆ ನನ್ನ ಮೈ ನಡುಗಿದರೆ ನಿನ್ನ ಯಾವ ದೇವರ ಹಳಿಯಲಿ...
ನಿನ್ನ ಸೌಂದರ್ಯ ಪ್ರಜ್ಞೆಯ ಆಡಿಕೊಂಡು ನಕ್ಕು ನಗಿಸಿದ ನೆನಪೆಲ್ಲ ಈಗ ಕನ್ನಡಿಯ ಮುಂದಿನ ಹಳಹಳಿಕೆಯಾಗಿ ಕಾಡುವಾಗ, ಅಲ್ಲಲ್ಲಿ ಇಣುಕೋ ಬಿಳಿಗೂದಲ ಕಿತ್ತೆಸೆದು ಮಳ್ಳ ನಗೆಯ ಮೆಲ್ಲದಂತೆ ನನ್ನ ನಾ ಹೇಗೆ ತಡೆಯಲಿ...
ಈಗ ನಭದ ನಕ್ಷತ್ರ ಮಾಲೆಯ ನಕ್ಷೆಯಲಿ ನೀನೂ ಒಂದು ನಕ್ಷತ್ರವೇ ಅಂತೆ - ಅಂತೆ, ಎಷ್ಟು ಚಂದ ಸಮಾಧಾನದ ಕಥೆ...
____ ನೆನಪ ಹೊಳೆಯ ರಭಸದಲಿ ಕನಸ ಕಣ್ಣು ಬತ್ತಿದ ಕಾಲಕ್ಕೆ ವರುಷ ಒಂದಾಯಿತು...
&&&
ಅವ್ಳು ಇನ್ನಷ್ಟು ಕಾಲ ಇರಕಾಯ್ತೂ ಅನ್ನೋ ಆಶೆಯ ಜೊತೆ ಜೊತೆಗೆ ಹೋಗಿ ಸುಖಕ್ಕೆ ಬಿತ್ತು ಅನ್ನೋ ಸತ್ಯ ಕಟುವಾಗಿ ಕಾಡ್ತು...
ನಾನಿಲ್ಲಿ ಅಳಿದುಳಿದ ಪ್ರತ್ಯಕ್ಷ ಸಾಕ್ಷಿ - ಅವಳ ಸಾವು ಕಾಡುವ ಹೊತ್ತಿಗೆ, ಅವಳ ಪುಣ್ಯ ಕಾಯುವ ಹೊತ್ತಿಗೆ...
____ ಎದೆ ತುಂಬಾ ಸ್ಮಶಾನ ಭಸ್ಮ...
ಆಯಿ ಎಂಬ ಅಂತಃಕರಣದ ಆಲಂಬನಕೆ ತರ್ಪಣ ಬಿಡುವಾಗ ರಾಕ್ಷಸನ ಎದೆಯಲ್ಲೂ ಸಣ್ಣ ಅಳುವಿನುಮ್ಮಳಿಕೆ...
ನನಗೀಗ ನನ್ನಲ್ಲಿ ಹಿಡಿತವಿಲ್ಲ - ಕಾರಣ ಅವಳೀಗ ಬೆನ್ನಿಗಿಲ್ಲ...
___ ಶ್ರಾದ್ಧ...
ಒಂದು ಸಾವಿನ ಸುತ್ತ ಅದಕಂಟಿದ ಎಷ್ಟೆಲ್ಲಾ ಜೀವ ತಂತುಗಳು ಕಡಿದುಹೋಗುತ್ತವಲ್ಲ...!!!
ಜೊತೆಗೆ ನೆನಪ ಉಪ್ಪು ಸವರಿದ ಗಾಯದ ಉರಿಯೊಂದು ದಿನಗಳನೆಣಿಸುತ್ತಾ ಉಳಿದೇ ಹೋಗುತ್ತದಲ್ಲ...
____ ಭಾವ, ಬಂಧ, ಬದುಕು...
&&&
ಭಯವಾಗುತ್ತದೆ -
ಒಂದೇ ಒಂದು ಫಾಲ್ತು ಉದ್ದೇಶವೂ ಇಲ್ಲದ ಬದುಕು...
ಇಷ್ಟಿಷ್ಟೇ ಕಳೆದು ಹೋಗುತಿರುವ ಜೀವಾಭಾವದ ತೀವ್ರತೆಯ ಸೆಳಕು...
ತುಸು ಹೆಚ್ಚೇ ಭಯ ಕಾಡುತ್ತದೆ -
ಕಸುವಿಲ್ಲದ ಬಿಸಿ ಹಸಿವಿನ ನನ್ನ ನಾನು ನೋಡಿಕೊಂಡಷ್ಟೂ...
ನನ್ನೊಳಗಿನ ಪೊಳ್ಳನು ನಾ ಕಂಡುಕೊಂಡಷ್ಟೂ...
ಭಯವಷ್ಟೇ ಉಳಿಯುತ್ತದೆ -
ಖಾಲಿ ಖಾಲಿ ಕಣ್ಣ ಗೋಳ ಉರಿಯುವಾಗ...
ಅನಾಥ ಕೂಸಿನ ಧುನಿಯ ದನಿಯ ಸೋಲಿನ ನಿತ್ರಾಣಕೆ ಪದ ಕುಸಿಯುವಾಗ...
..........ಭಯವಾಗುತ್ತದೆ........
🙏🙏ಸದ್ಗತಿ
ReplyDelete