Wednesday, July 19, 2023

ಗೊಂಚಲು - ನಾಕ್ನೂರಾ ಹದ್ನೈದು.....

ಘೋರಿ ಮೇಲಿನ ತುಳಸೀ ಗಿಡ.....

ಈ ಬದುಕೊಂದು ಉತ್ಕಟ ವಿಫಲ ಪ್ರೇಮ...
&&&

ಬೆನ್ನಾದ ನಿನ್ನ ಹಾದಿಯೆಡೆಗೆ ತದೇಕ ಕಣ್ಣ ದೀಪ...
ನೆನಪ ತೈಲ ಧಾರೆ - ಎದೆ ಧಗಧಗಿಸೋ ಅಗ್ನಿ ಕುಂಡ...
___ ಕನಸೇ ಕ್ಷಣವೊಂದಕಾದರೂ ಮಧುರ ಕಾವ್ಯವಾಗು - ಸಾವು ನಗೆಯ ಮೀಯಲೀ...
&&&

ನಾ ಕರೆವ ಹಾದಿಯಲಿ ನೂರು ಕಾರಣ ಕೂ(ನೀ)ಡಿ ನೀ ಸುಳಿಯದೇ ಹೋದರೆ ಸೋಲು ನಂದೇ ಇರಬಹುದು...
ನೀ ಕೂಡುವಷ್ಟು ನಾ ಕಾಡಿಲ್ಲದಿರಬಹುದು ಅಥವಾ ನಾ ಕಾಡಿದ್ದು ನೀ ಕೂಡಲಾಗದಷ್ಟಿರಬಹುದು...
___ ಬಿಡು ನೆನಪಿಡಬೇಕಾದ ಸೋಲು ನಂದೇ ಇರಬಹುದು...
&&&

ನಕ್ಕು ನಕ್ಕು ಸುಸ್ತಾಗಿ ಕಣ್ಣು ನೀರಾಯ್ತು...
ನೋವ ಹುಣ್ಣು ಹಣ್ಣಾಗಿ ಒಳಗೇ ಒಡೆದೋಯ್ತು...
___ ಜೊತೆಗಿರು...
&&&

ಬರೆಸಿಕೊಂಡ ಒಂದು ಕಥೆಯ ಬೆನ್ನಿಗೆ ಬರೆಯಲಾರದ ನೂರು ವ್ಯಥೆಗಳ ಹುರುಳಿದೆ...
___ ನಗು...

ನೆರಳು ಮುನ್ನೆಲೆಗೆ ಬಂದಿದೆ ಎಂದರೆ ಬೆಳಕು ನಿನ್ನ ಹಿಂಬಾಲಿಸುತ್ತಿದೆ  ಅಂತಲೇ ಅರ್ಥ...
____ ಸುಖ - ದುಃಖ....
&&&

ಹಾರಲಾರದ ಎತ್ತರಕೆ
ಹಾಯಲಾಗದ ಆಳಕೆ
ಕಣ್ಣ ಶರದ ಸೇತುವೆ...
___ ಎದೆಗಡಲಲಿ ಭರ್ತಿ ಉಬ್ಬರ...

ಕೇಳಸ್ಕೊಳ್ಳೋನು ಮೂಗ
ಹೇಳ್ತಾ ಹೋಗೋನು ಕಿವುಡ
ನಡುವೆ ನಿರಂತರ ಕುರುಡು ಸಂವಾದ
ಕಣ್ಣೀರಿಂದೂ ಪನ್ನೀರಿಂದೂ ಬಣ್ಣ ಒಂದೇ...
____ (ನನ್ನ) ಬದುಕು - ಪ್ರೇಮ - ಆಧ್ಯಾತ್ಮ...
&&&

ತುಂಬಾ ತುಂಬಾ ಖಯಾಲಿಯಿಂದ ಮಾತಾಡ್ತೇನೆ - ಮೊದಮೊದಲು ಚಂದ ಅನ್ಸಿದ್ರೂ ಬರ್ತಾ ಬರ್ತಾ ಇವನಿಗೆ ಕೇಳಿಸಿಕೊಳ್ಳುವ ವ್ಯವಧಾನವೇ ಇಲ್ಲ ಎಂಬುದು ಅರಿವಿನಂತೆ/ಅರಿವಾಗಿ ಕಾಡುತ್ತೆ ಮತ್ತು ನಿಮ್ಮ ಅರಿವು ನನ್ನ ತಾಕುವಾಗ ಮಾತು ತಡವರಿಸತ್ತೆ ಅಥವಾ ನಿಷ್ಠುರವಾಗತ್ತೆ...
ನಾಲಿಗೆಗಿಂತ ಕಿವಿ ಚುರುಕಿರಬೇಕಿತ್ತು...

ಪ್ರಜ್ಞೆಯ ನಾಡಿ ಹಿಡಿದು ಮನಸಿನ ಮುಖ ನೋಡುತ್ತೇನೆ - ಪ್ರತಿ ಕ್ರಿಯೆ ಪ್ರಕ್ರಿಯೆ ಪ್ರತಿಕ್ರಿಯೆಗಳ ಹಿಂದಿನ ವಾಸ್ತವದ ಬಿಸಿಗೆ ಭಾವಗಳ ಬೇರು ಘಾಸಿಗೊಳ್ಳುತ್ತದೆ ಮತ್ತು ನಿಮ್ಮ ಮನಸು ನೋಯಿಸಿದ ಪಾಪಕ್ಕೆ ನಡುವಿನ ಮಾತು ಇಷ್ಟಿಷ್ಟೇ ಸಾಯುತ್ತದೆ...
ಮಾತು ರುಚಿಸಲು ಮನಸಿಗೇ ಜೈ ಅನ್ನಬೇಕಿರುತ್ತೆ...

ಮೌನದ ಭಯಕ್ಕೆ ಚೂರೂ ಕಸರುಳಿಯದಂತೆ ಬಯಲಾಗುತ್ತೇನೇ - ವಾಚಾಳಿಯ ಪರಿಚಯ 'ಸುಲಭ' ಮತ್ತು ಇದಿಷ್ಟೇ ಅನ್ನುವ ಮಟ್ಟಿಗೆ ಬೆರಗಳಿದ ಮೇಲೆ ಬೆಳಕೂ ರೇಜಿಗೆಯೇ... 
ಬೇಲಿ ಹಾವು ಮತ್ತು ಬಯಲ ಖಾಲಿ...
____ ನಾ ಕಂಡಂತೆ ನನ್ನೆಡೆಗಿನ ನಿಮ್ಮಾ ತೀವ್ರತೆ ಅಳಿಯಲು ನನ್ನೊಳಗಿನ ಇಂಥ ನಾನೇ ಕಾರಣ... 
(ನೀವು ಕಂಡಂತೆ ನನ್ನಲ್ಲಿ ಇಂಥವು ಇನ್ನೆಷ್ಟಿವೆಯೋ)
&&&

ಹೆಣಕ್ಕೆ ಹೊತ್ತಿಸಿದ ಬೆಂಕಿಯನ್ನು ನನ್ನ ಕಣ್ಣೀರು ನಂದಿಸುವುದಿಲ್ಲ...
ಹೆಣದ ಬೆಂಕಿ ನನ್ನ ಕಣ್ಣೀರನ್ನು ನಿಂದಿಸುವುದೂ ಇಲ್ಲ...
ಆದರೂ,
ಆ ಕ್ಷಣ ಎದೆ ಉರಿಬಿದ್ದು ಕಣ್ಣು ಝರಿಯಾದರೆ ಅಷ್ಟು ಮಟ್ಟಿಗೆ ಬದುಕು ಪ್ರೀತಿಯಾಗಿ ಫಲಿಸೀತು - ನನ್ನೊಳಗೆ ನಾ ಸಾಯದೇ ಉಳಿದೇನು...
____ ಘೋರಿ ಮೇಲಿನ ತುಳಸೀ ಗಿಡ...
&&&

ಸಾವು ಗೋಡೆ ಕಟ್ಟಿ 'ಗೆದ್ದೆ' ಅಂದರೆ, 
ಬದುಕಿನ ಚಿತ್ರ ಬರೆದು 'ಅವಕಾಶ' ಅಂದೆ...
'ನಾ ನಂಬಿದ್ದಲ್ಲವಾ ನನ್ನ ಗೆಲುವು...'
ಬಯಲಿಗೆ ಹೂಡಿದ ಬಾಣ ಶೂನ್ಯವ ಸೇರಿ ಮುಕ್ತ...
___ ನನಗೆ ನಾನು ನನ್ನ ಪರಿಚಯಿಸಿಕೊಂಡಂತೆ ನನ್ನ ಬದುಕು...
*** ಅರ್ಥ ಗಿರ್ಥ ಕೇಳಬೇಡಿ...
&&&

ಮಾನವಂತೆ, ಧ್ಯಾನವಂತೆ, ಯಾವುದೋ ಗಳಿಕೆ, ಇನ್ಯಾವುದೋ ಸಾಧನೆ ಎಂತೆಲ್ಲ ಉದ್ಧರಿಸಿ; ಬದುಕಿಗೆ ಒಂದು ಗುರಿ ಇರ್ಬೇಕು, ಗುರಿ ಇರೋದು ಬಾಳಿನ ಬೆಳವಣಿಗೆಗೆ ಬಹಳಾ ಮುಖ್ಯ ಅಂತೆಲ್ಲಾ ಮತ್ತೆ ಮತ್ತೆ ಹೇಳ್ತಿರ್ತೇವೆ...
ಆದರೆ,
ಪ್ರತಿ ಹುಟ್ಟೂ ಸಾವನ್ನೇ ತನ್ನ ಅಂತಿಮ ನೆಲೆಯಾಗಿ ಒಪ್ಪಿಕೊಂಡೇ ಜನ್ಮ ತಳೆದಿರುವಾಗ, ಇವೆಲ್ಲಾ ಉಪಚಾರಗಳ, ಪ್ರಭಾವಳಿಗಳ ಹಡಾಹುಡಿಗಳೆಲ್ಲಾ ಬದುಕಿನ ಹಾದಿಯ ಮಗ್ಗಲುಗಳ ಹೂ ಮುಳ್ಳುಗಳಷ್ಟೇ ಅನ್ನೋದನ್ನ ಗ್ರಹಿಸೋಕೆ ಮರೆತಿರ್ತೇವೆ...
ನಾವಾಡೋ ಈ ಗುರಿಗಳೆಲ್ಲಾ ನಿಜದಲ್ಲಿ ಗುರಿಗಳಲ್ಲ, ನಮಗೆ ನಾವೇ ಒಪ್ಪ ಅಂದುಕೊಂಡು ಬೀಗಲು ನಾವೇ ನಮ್ಮ ಮುಡಿಗೆ ಸಿಕ್ಕಿಸಿಕೊಂಡ ಗರಿಗಳಷ್ಟೇ ಅನ್ನಿಸಲ್ಲವಾ...
ಈ ಗುರಿ ಮತ್ತು ಗರಿಗಳ ನಡುವಿನ ವ್ಯತ್ಯಾಸ ಅರಿವಾದರೆ ಹುಟ್ಟು ಸಾವಿನ ಮಡುವಿನ ಹಾದಿಯಲ್ಲಿ ನಾವೊಂದಿಷ್ಟು ವಿನೀತರಾಗಿರಬಹುದೇನೋಪಾ...
ನಿಲ್ದಾಣಗಳೆಲ್ಲಾ ನಲ್ದಾಣಗಳಾಗಬಹುದೇನೋ ಅಲ್ವಾ...
____ ಬಿಟ್ಟಿ ಬೋಧನೆ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು... :)

No comments:

Post a Comment